ದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಡಿ.6ರಂದು ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಜೆಡಿಯು (ಜನತಾ ದಳ ಸಂಯುಕ್ತ) ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಕರೆದಿರುವ ಸಭೆಯಿಂದ ದೂರ ಉಳಿಯಲಿದ್ದಾರೆ. ಈ ನಡೆ ವಿಪಕ್ಷಗಳನ್ನು ಒಗ್ಗೂಡಿಸಲು ಉದ್ದೇಶಿಸಿರುವ ಗುಂಪಿನಲ್ಲಿ ನಡೆಯುತ್ತಿರುವ ನಕಾರಾತ್ಮಕ ಬೆಳವಣಿಗೆಯತ್ತ ಕ್ಷಕಿರಣ ಬೀರುತ್ತಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿತೀಶ್ ಅವರನ್ನು ಆಹ್ವಾನಿಸಲು ಕರೆ ಮಾಡಿದ ವೇಳೆ ತಮ್ಮ ನಿರ್ಧಾರವನ್ನು ತಿಳಿಸಿದ್ದು, ತಮ್ಮ ಬದಲಿಗೆ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಮತ್ತು ಹಿರಿಯ ನಾಯಕ ಸಂಜಯ್ ಝಾ ಹಾಜರಾಗಲಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ನಡುವೆ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಅವರನ್ನು ಸಭೆಗೆ ಕಳುಹಿಸುವ ಸಾಧ್ಯತೆ ಕೂಡ ಇದೆ.
ಕಳೆದ ತಿಂಗಳಲ್ಲಿ ಕಾಂಗ್ರೆಸ್ ಜೊತೆ ವಾಗ್ವಾದದಲ್ಲಿ ತೊಡಗಿರುವ ಅಖಿಲೇಶ್ ಯಾದವ್, ಇಂಡಿಯಾ ಬಣ ವಿಭಜನೆಯಾಗುತ್ತದೆ ಎಂಬ ಮಾತನ್ನು ಉಲ್ಲೇಖಿಸುತ್ತಿದ್ದಾರೆ. ಆದರೆ ಮೂಲಗಳ ಪ್ರಕಾರ, ಕಾಂಗ್ರೆಸ್ ಹಿರಿಯ ನಾಯಕರು ಖುದ್ದು ತಮ್ಮನ್ನು ಭೇಟಿಯಾಗಿ ಮೈತ್ರಿಕೂಟಕ್ಕೆ ಆಹ್ವಾನಿಸಬೇಕು ಎಂದು ಅಖಿಲೇಶ್ ಯಾದವ್ ಬಯಸುತ್ತಿದ್ದಾರೆ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಈ ಸಭೆ ಬಗ್ಗೆ ತಿಳಿದಿಲ್ಲ, ನಾನು ಈಗಾಗಲೇ ಉತ್ತರ ಬಂಗಾಳದಲ್ಲಿ ಪೂರ್ವನಿಗದಿತ ಕಾರ್ಯಕ್ರಮವಿದೆ. ಅಲ್ಲಿ ಏಳು ದಿನಗಳ ಕಾರ್ಯಕ್ರಮ ನಿಗದಿಯಾಗಿದೆ. ಮೊದಲೆ ತಿಳಿದಿದ್ದರೆ, ನಾನು ಈ ಕಾರ್ಯಕ್ರಮವನ್ನು ಮುಂದೂಡುತ್ತಿದ್ದೆ? ನಾನು ಖಂಡಿತ ಇಂಡಿಯಾ ಮೈತ್ರಿಕೂಟ ಸಭೆಗೆ ಹೋಗುತ್ತಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ, ನಾನು ಪ್ರವಾಸಕ್ಕೆ ತೆರಳುತ್ತಿದ್ದೇನೆ ಎಂದಿದ್ದರು. ಆದರೆ, ಟಿಎಂಸಿ ಪಕ್ಷ ಇಂಡಿಯಾ ಮೈತ್ರಿಕೂಟ ಸಭೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ವಿಪಕ್ಷಗಳು ಯಾವ ನಡೆ ಇಡುತ್ತವೆ ಎಂಬುದು ಸಭೆಯಲ್ಲಿ ಭಾಗವಹಿಸುವ ಪಕ್ಷಗಳ ಆಸಕ್ತಿಯಿಂದ ಬಹಿರಂಗವಾಗಲಿದೆ.




