ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದಸರೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ಸಚಿವ ಸಿ.ಸಿ.ಪಾಟೀಲ್ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು, ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ದಸರಾ ಮಹೋತ್ಸವದ ಆಚರಣೆಗೆ ಯಾವುದೇ ವಿಘ್ನ ಬಾರದಂತೆ ಚಾಮುಂಡಿ ದೇವಿಗೆ ಈಡುಗಾಯಿ ಹೊಡೆದು ಪ್ರಾರ್ಥಿಸಿದರು.
ಬಳಿಕ ಅ.7ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭಕ್ಕೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಜೊತೆಗೆ, ಅಲ್ಲದೇ ಉದ್ಘಾಟನಾ ಸಮಾರಂಭಕ್ಕೆ 100 ಜನರ ಬದಲು 400 ಜನರಿಗೆ ಅವಕಾಶ ನೀಡಿರುವುದಾಗಿ ಘೋಷಿಸಿದರು.




