ಧ್ವನಿ ಇಲ್ಲದವರ ಬದುಕಿಗೆ ಅಕ್ಷರದ ಮೊಳೆ ಜೋಡಿಸಿ ಬದುಕು ಕಟ್ಟಿಕೊಟ್ಟ ಜಾಣಗೆರೆ ವೆಂಕಟರಾಮಯ್ಯ

6 hours ago

ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜನಪರ ಹೋರಾಟಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜಾಣಗೆರೆ ವೆಂಕಟರಾಮಯ್ಯ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ; ಕನ್ನಡದ ಸಮಕಾಲೀನ ಚರಿತ್ರೆಯಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುವ ಒಂದು ಚಳವಳಿಯ ನಾಯಕ. ಪತ್ರಕರ್ತ, ಮುದ್ರಕ, ಸಂಪಾದಕ, ಚಿತ್ರಸಾಹಿತಿ, ಕಥೆಗಾರ, ಕಾದಂಬರಿಕಾರ, ವೈಚಾರಿಕ ಲೇಖಕ, ಸಾಂಸ್ಕೃತಿಕ ಚಿಂತಕ, ಸಮಾಜಮುಖಿ ಚಿಂತಕ ಹಾಗೂ ಕನ್ನಡಪರ ಹೋರಾಟಗಾರ—ಹೀಗೆ ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಪರಿಚಯಿಸಬಹುದು.

‘ಮೈತುಂಬ ಬಡತನ, ಕೈತುಂಬ ಕನ್ನಡ’ ಎಂಬ ಮಾತಿಗೆ ಅರ್ಥ ನೀಡಿದವರು ಜಾಣಗೆರೆ. ಶ್ರಮದಿಂದ ಬದುಕು ಕಟ್ಟಿಕೊಂಡು, ಕನ್ನಡದ ಮೇಲಿನ ಅಪಾರ ಅಭಿಮಾನ ಮತ್ತು ಸಾಮಾಜಿಕ ಕಾಳಜಿಯಿಂದ ತಮ್ಮದೇ ಆದ ಕನ್ನಡ ಲೋಕವನ್ನು ನಿರ್ಮಿಸಿಕೊಂಡ ಸಮಕಾಲೀನ ಕಟ್ಟಾಳು ಅವರು. ಜಾತಿ, ಮತ ಮತ್ತು ವರ್ಗಗಳ ಎಲ್ಲೆಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ಜಾತ್ಯತೀತ ಮನೋಭಾವ ಅವರದು. ಶ್ರಮಿಕರು, ಶೋಷಿತರು, ದಲಿತರು, ಕೃಷಿಕರು, ಅಲೆಮಾರಿ-ಬುಡಕಟ್ಟು ಸಮುದಾಯಗಳು ಹಾಗೂ ಅವಕಾಶವಂಚಿತರ ಪರವಾಗಿ ಧ್ವನಿಯಾಗಿ ನಿಂತವರು. ಸಂವಿಧಾನದ ಆಶಯಗಳನ್ನು ಗೌರವಿಸಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿರಂತರವಾಗಿ ಬರೆಯುತ್ತಾ, ಹೋರಾಡುತ್ತಾ ಬಂದವರು.

ಜಾಣಗೆರೆ ವೆಂಕಟರಾಮಯ್ಯ ಅವರನ್ನು ನಾನು ಹಲವು ದಶಕಗಳಿಂದ ಬಲ್ಲೆ. ಅವರೊಂದಿಗೆ ಬೆಸೆದುಕೊಂಡಿರುವ ನನ್ನ ನೆನಪುಗಳು ಕೇವಲ ವೈಯಕ್ತಿಕ ಸಂಬಂಧಗಳ ನೆನಪುಗಳಲ್ಲ; ಕನ್ನಡಪರ ಹೋರಾಟದ ದಿನಗಳ ನೆನಪುಗಳೂ ಹೌದು.

ನಾನು ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಓದುತ್ತಿದ್ದ ದಿನಗಳಲ್ಲಿ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಆ ಸಂದರ್ಭದಲ್ಲಿ ವಾಟಾಳ್ ನಾಗರಾಜ್, ಜಿ. ನಾರಾಯಣಕುಮಾರ್, ಶಿವರಾಮೇಗೌಡ, ನಾರಾಯಣಗೌಡ, ಸಾರಾ ಗೋವಿಂದು, ಅರಗಿಣಿ ವೆಂಕಟೇಶ್ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರೊಂದಿಗೆ ವಿದ್ಯಾರ್ಥಿ ಸಮುದಾಯವೂ ಹೋರಾಟಗಳಲ್ಲಿ ಭಾಗವಹಿಸುತ್ತಿತ್ತು. ಜಾಣಗೆರೆ ವೆಂಕಟರಾಮಯ್ಯ ಅವರ ಹೋರಾಟದ ಮನೋಭಾವ ಮತ್ತು ಬರಹಗಳು ನಮ್ಮಂತಹ ಯುವಕರಿಗೆ ಪ್ರೇರಣೆಯಾಗಿದ್ದವು. ಅವರ ಪ್ರೇರಣೆಯಿಂದಲೇ ವಿದ್ಯಾರ್ಥಿ ದೆಸೆಯಲ್ಲಿದ್ದ ನಾನು ಕನ್ನಡ ಸೇನೆಯ ಅಧ್ಯಕ್ಷನಾಗಿ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡೆ.

ಜಾಣಗೆರೆ ಅವರ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯವೆಂದರೆ ಮುದ್ರಣ ಕ್ಷೇತ್ರದ ಮೂಲಕ ಅವರು ಮಾಡಿದ ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆ. ಅವರು ಅಕ್ಷರಗಳನ್ನು ಮುದ್ರಿಸಿದವರು ಮಾತ್ರವಲ್ಲ; ಅನೇಕ ಬರಹಗಾರರ ಕನಸುಗಳಿಗೆ ಅಕ್ಷರರೂಪ ನೀಡಿದವರು. ಅನೇಕರ ಮೊದಲ ಕೃತಿಗಳಿಗೆ ‘ಮೊಳೆ’ ಜೋಡಿಸಿ, ಅಕ್ಷರಗಳನ್ನು ಪುಸ್ತಕದ ರೂಪಕ್ಕೆ ತಂದವರು. ಅದಕ್ಕಿಂತಲೂ ಮುಖ್ಯವಾಗಿ, ಆ ಬರಹಗಾರರೊಂದಿಗೆ ಸ್ನೇಹದ ಬೆಸುಗೆ ಬೆಸೆದುಕೊಂಡವರು.

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಮೊದಲ ಕಾದಂಬರಿ ‘ಸೂತ್ರ’ ದೌಲತ್ ಪ್ರಿಂಟರ್ಸ್‌ ನಲ್ಲಿ ಕಂಪೋಸಿಗ್ ಆಗುತ್ತಿದ್ದ ಸಂದರ್ಭದಲ್ಲಿ ಜಾಣಗೆರೆ ಅವರ ಪಾತ್ರವಿತ್ತು ಎಂಬುದು ಗಮನಾರ್ಹ. ವಕೀಲರಾದ ಬೇಕಾ ಮೂರ್ತಿಶ್ವರಯ್ಯ ಅವರ ಮೊದಲ ಕೃತಿಯೂ ಜಾಣಗೆರೆ ಪ್ರೆಸ್‌ನಲ್ಲಿ ಕಂಪೋಸಿಂಗ್ ಆಗಿದೆ. ದಲಿತ ಪತ್ರಕರ್ತ ಡಿ.ಎಸ್.ವೀರಯ್ಯ ಅವರ ಪತ್ರಿಕೆಗೆ ವೇದಿಕೆ ಕಲ್ಪಿಸಿದವರೂ ಜಾಣಗೆರೆ. ಹೀಗೆ ಅನೇಕ ವಿದ್ವಾಂಸರು, ಲೇಖಕರು, ಪತ್ರಕರ್ತರು, ಕವಿಗಳು ಮತ್ತು ಸಾಂಸ್ಕೃತಿಕ ಚಿಂತಕರ ಮೊದಲ ಹೆಜ್ಜೆಗಳಿಗೆ ಜಾಣಗೆರೆ ಅವರ ಮುದ್ರಣಾಲಯ, ಸ್ನೇಹ ಮತ್ತು ಸಹಕಾರ ಬೆಂಬಲವಾಗಿ ನಿಂತಿವೆ.

ಕುಂ.ವೀರಭದ್ರಪ್ಪ, ಶೂದ್ರ ಶ್ರೀನಿವಾಸ್, ಮಹಾಬಲೇಶ್ವರ ಕಾಟ್ರಹಳ್ಳಿ, ಎಂ.ಎನ್.ವಿ.ಪಂಡಿತಾರಾಧ್ಯ, ಡಿ.ಎಸ್.ವೀರಯ್ಯ, ಕೊಂಡಜ್ಜಿ ವೆಂಕಟೇಶ್, ಪ್ರೊ.ಹೀಚಿ ಬೋರಲಿಂಗಯ್ಯ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ರಾಮಚಂದ್ರೇಗೌಡ, ಎಂ.ಡಿ.ನಂಜುಂಡಸ್ವಾಮಿ, ಬಿ.ಜಿ.ಸತ್ಯಮೂರ್ತಿ, ನಿಡಸಾಲೆ ಪುಟ್ಟಸ್ವಾಮಿ, ಎ.ಆರ್.ಗೋವಿಂದಸ್ವಾಮಿ, ಎ.ಆರ್.ಗೋಪಾಲನಾಯಕ್ ಸೇರಿದಂತೆ ಹೀಗೆ ನೂರಾರು ಹೆಸರುಗಳನ್ನು ಹೇಳಬಹುದು. ಇವರಲ್ಲಿ ಅನೇಕರ ಬರವಣಿಗೆಯ ಆರಂಭದ ದಿನಗಳಲ್ಲಿ ಜಾಣಗೆರೆ ಅವರ ಮುದ್ರಣಾಲಯ, ಸ್ನೇಹ ಮತ್ತು ಸಹಕಾರ ಯಾವುದೋ ಒಂದು ರೂಪದಲ್ಲಿ ಬೆಂಬಲವಾಗಿ ನಿಂತಿವೆ.

“ಅಕ್ಷರಗಳನ್ನು ಜೋಡಿಸಿ ಪುಸ್ತಕಗಳನ್ನು ಮುದ್ರಿಸಿದ್ದಷ್ಟೇ ಅಲ್ಲ; ಮನುಷ್ಯರನ್ನು ಜೋಡಿಸಿ ಸಂಬಂಧಗಳ ಸೇತುವೆ ಕಟ್ಟಿದವರು ಜಾಣಗೆರೆ” ಎನ್ನುವುದು ಅವರ ವ್ಯಕ್ತಿತ್ವಕ್ಕೆ ಅತ್ಯಂತ ಸೂಕ್ತವಾದ ಮಾತು.

ಮೂಲತಃ ತುಮಕೂರು ಜಿಲ್ಲೆಯ ಜಾಣಗೆರೆಯವರಾದ ಅವರು ಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಪಟ್ಟು ದುಡಿಯುತ್ತಾ ಬೆಂಗಳೂರಿಗೆ ಬಂದವರು. ಸಾಹಿತ್ಯದ ಮೇಲಿನ ಅಪಾರ ಆಸಕ್ತಿ, ಏನಾದರೂ ಸಾಧಿಸಬೇಕೆಂಬ ಛಲ ಮತ್ತು ಸಮಾಜದ ಮೇಲಿನ ಕಾಳಜಿಯಿಂದ ತಮ್ಮ ಬದುಕನ್ನು ರೂಪಿಸಿಕೊಂಡರು. ಸಾಹಿತ್ಯಾಸಕ್ತಿಯಿಂದ ಆರಂಭವಾದ ಅವರ ಪಯಣ ಮುಂದೆ ಪತ್ರಿಕೋದ್ಯಮ, ಮುದ್ರಣ, ಕನ್ನಡಪರ ಹೋರಾಟ, ಸಾಂಸ್ಕೃತಿಕ ಚಿಂತನೆ ಮತ್ತು ಸಮಾಜಮುಖಿ ಕಾರ್ಯಗಳ ವಿಶಾಲ ಕ್ಷೇತ್ರಕ್ಕೆ ವಿಸ್ತರಿಸಿತು.

ಜಾಣಗೆರೆ ಜನಪ್ರೇಮಿ ಲೇಖಕರು. ಜೀವನಚರಿತ್ರೆ, ಕಥೆ, ಕಾದಂಬರಿ, ವೈಚಾರಿಕ ಬರಹ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದಾರೆ. ನಾಲ್ಕು ದಶಕಗಳಿಗೂ ಮೀರಿದ ಅವರ ಸೃಜನಶೀಲ ಪಯಣದಲ್ಲಿ ನಲವತ್ತಕ್ಕೂ ಹೆಚ್ಚು ಜನಪರ ಕೃತಿಗಳು ಮೂಡಿಬಂದಿವೆ ಎಂಬುದು ಅವರ ಸಾಹಿತ್ಯಿಕ ಸಾಧನೆಯ ವಿಸ್ತಾರವನ್ನು ತೋರಿಸುತ್ತದೆ.

ಅವರ ಬರಹದ ವಿಶೇಷತೆ ಎಂದರೆ ಅದು ಕೇವಲ ಸಾಹಿತ್ಯಕ್ಕಾಗಿ ಇರುವ ಸಾಹಿತ್ಯವಲ್ಲ. ಅದರೊಳಗೆ ಮನುಷ್ಯನ ಬದುಕಿದೆ, ಸಮಾಜದ ನೋವಿದೆ, ಹೋರಾಟದ ಕಿಚ್ಚಿದೆ, ಕನ್ನಡದ ಕಾಳಜಿಯಿದೆ, ಶೋಷಿತರ ಧ್ವನಿಯಿದೆ ಮತ್ತು ಸಮಾನತೆಯ ಕನಸಿದೆ. ಕನ್ನಡಪರ ಹಾಗೂ ಭಾಷಾಪರ ಹೋರಾಟಗಳ ಪರವಾಗಿ, ಸಾಂಸ್ಕೃತಿಕವಾಗಿ ಹಿಂದುಳಿದ ಜನರ ಪರವಾಗಿ, ಕೃಷಿಕರು, ದಲಿತರು, ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಪರವಾಗಿ, ಸಂವಿಧಾನದ ಆಶಯಗಳ ಪರವಾಗಿ ಅವರು ನಿರಂತರವಾಗಿ ಧ್ವನಿ ಎತ್ತಿದ್ದಾರೆ.

“ಅವರು ಪತ್ರಕರ್ತರಾಗಿ ಸುದ್ದಿಯನ್ನು ದಾಖಲಿಸಿದರು; ಮುದ್ರಕರಾಗಿ ಅಕ್ಷರಗಳನ್ನು ಉಳಿಸಿದರು; ಲೇಖಕರಾಗಿ ಚಿಂತನೆಗಳನ್ನು ಬೆಳೆಸಿದರು; ಸಮಾಜಮುಖಿಯಾಗಿ ಬದುಕುಗಳನ್ನು ಕಟ್ಟಿಕೊಟ್ಟರು.”

ಅವರ ಮುದ್ರಣಾಲಯ ಕೇವಲ ಮುದ್ರಣದ ಸ್ಥಳವಾಗಿರಲಿಲ್ಲ. ಅದು ಅನೇಕ ಬರಹಗಾರರಿಗೆ ಆಶ್ರಯವಾಗಿತ್ತು, ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿತ್ತು ಮತ್ತು ಚಿಂತಕರಿಗೆ ಸಂವಾದದ ತಾಣವಾಗಿತ್ತು. ತಮ್ಮ ಬಳಿಗೆ ಬಂದವರಿಗೆ ಸಾಧ್ಯವಾದಷ್ಟು ನೆರವು ನೀಡುವುದು ಅವರ ಸಹಜ ಸ್ವಭಾವ. ತಮ್ಮ ಹೆಸರನ್ನು ಬೆಳೆಸಿಕೊಳ್ಳುವುದಕ್ಕಿಂತ, ತಮ್ಮ ಸುತ್ತಮುತ್ತಲಿನವರ ಹೆಸರು ಬೆಳೆಯುವುದರಲ್ಲಿ ಸಂತೋಷ ಕಂಡವರು.

ಜಾಣಗೆರೆ ಅವರು ಸಜ್ಜನ, ಸುಸಂಸ್ಕೃತ, ನಿಗರ್ವಿ, ಸ್ನೇಹಜೀವಿ, ಪರಿಸರ ಕಾಳಜಿಯುಳ್ಳ, ಸಮಸಂಸ್ಕೃತಿಯ ಕಾವಲುಗಾರ, ಬಂಡಾಯದ ಒಡೆಯ ಮತ್ತು ಮನುಷ್ಯಮುಖಿ ವ್ಯಕ್ತಿ. ಈ ಎಲ್ಲ ಗುಣಗಳು ಅವರ ವ್ಯಕ್ತಿತ್ವವನ್ನು ವಿಶಿಷ್ಟವಾಗಿಸುತ್ತವೆ. ಅವರ ಬದುಕನ್ನು ಕೇವಲ ಮುದ್ರಿಸಿದ ಪುಸ್ತಕಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಅವರು ಬೆಳೆಸಿದ ಬರಹಗಾರರು, ಕಲಾವಿದರು, ಪತ್ರಕರ್ತರು, ಚಿಂತಕರು ಮತ್ತು ಸಮಾಜಮುಖಿ ಮನಸ್ಸುಗಳ ಸಂಖ್ಯೆಯಲ್ಲಿಯೇ ಅವರ ನಿಜವಾದ ಸಾಧನೆಯ ಅಳತೆ ಇದೆ.

“ಅವರ ಬದುಕು ಮುದ್ರಣದ ಕಪ್ಪು ಮಸಿಯ ಕಥೆಯಲ್ಲ; ಅನೇಕ ಪ್ರತಿಭೆಗಳ ಬದುಕಿಗೆ ಬೆಳಕು ನೀಡಿದ ಅಕ್ಷರಗಳ ಇತಿಹಾಸ.”
“ಅನೇಕರ ಮೊದಲ ಕೃತಿಗೆ ಮೊಳೆ ಜೋಡಿಸಿದವರು; ಅನೇಕರ ಮೊದಲ ಹೆಜ್ಜೆಗೆ ಬೆಂಬಲವಾದವರು; ಅನೇಕರ ಕನಸಿಗೆ ಅಕ್ಷರರೂಪ ನೀಡಿದವರು—ಅವರೇ ಜಾಣಗೆರೆ ವೆಂಕಟರಾಮಯ್ಯ.” ಅಲೆಮಾರಿ ಬುಡಕಟ್ಟು ಭಾಷೆಗಳಿಗೂ ಧ್ವನಿಯಾದವರು.

ಎಪ್ಪತ್ತೈದರ ಹರೆಯದಲ್ಲಿಯೂ ಯುವಕರ ಉತ್ಸಾಹದೊಂದಿಗೆ ಕನ್ನಡ, ಸಾಹಿತ್ಯ ಮತ್ತು ಸಮಾಜದ ಬಗ್ಗೆ ಚಿಂತಿಸುವ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಇನ್ನೂ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಮತ್ತಷ್ಟು ಸೃಜನಶೀಲ ಶಕ್ತಿ ದೊರೆಯಲಿ. ಅವರ ಅಕ್ಷರದ ಪಯಣ ಇನ್ನೂ ಹಲವು ವರ್ಷಗಳ ಕಾಲ ಮುಂದುವರಿಯಲಿ. ಅವರಿಂದ ಇನ್ನಷ್ಟು ಕೃತಿಗಳು, ಇನ್ನಷ್ಟು ಹೋರಾಟಗಳು ಮತ್ತು ಇನ್ನಷ್ಟು ಸಮಾಜಮುಖಿ ಕಾರ್ಯಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.

ಒಬ್ಬ ಆತ್ಮೀಯ ತಮ್ಮನಾಗಿ, ಅವರ ಅಭಿಮಾನಿಯಾಗಿ ಮತ್ತು ಅವರ ಹೋರಾಟದ ದಿನಗಳ ಸಾಕ್ಷಿಯಾಗಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಜಾಣಗೆರೆ ಅವರ ಅಕ್ಷರದ ಬೆಳಕು ಇನ್ನಷ್ಟು ಬದುಕುಗಳಿಗೆ ದಾರಿ ತೋರಿಸಲಿ. ಅವರ ಕನ್ನಡಪರ ಹೋರಾಟದ ಕಿಚ್ಚು ಮುಂದಿನ ಪೀಳಿಗೆಗಳಲ್ಲೂ ಬೆಳಗಲಿ.

– ಡಾ. ಎ. ಆರ್. ಗೋವಿಂದಸ್ವಾಮಿ, ಮಾಜಿ ಅಧ್ಯಕ್ಷ,  ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ

Leave a Reply