ಇವ ಯಾರ್‍ರೀ ಟ್ರಂಪು? ಶ್ಯಾನೆ ತಲೆನೋವು…!

1 year ago

ನೀವು ಏನೇ ಹೇಳಿ, ನಮ್ಮ ಮೋದಿಜಿಗೆ ಹಿಂಗಾಗಬಾರದಿತ್ತು. ಹೆಂಗಿದ್ದ ಮೋದಿ, ಹೆಂಗಾದ್ರು ನೋಡಿ. ಜಸ್ಟ್‌ ಬಿಕಾಝ್‌ ಆಫ್ ಬ್ಲಡಿ ಪಾಕಿಸ್ತಾನ್‌! ಆದ್ರೆ ಮೋದಿಜಿಗೆ ಈಗ ತಲೆಯೊಳಗಿನ ಮೆದುಳೆಲ್ಲ ಕಚಪಚ ಕಚಪಚ ಕಲಸಿಕೊಂಡು, ಸಾವಯವ ಗೊಬ್ಬರದಂತಾಗಿರೋದು ಪಾಕಿಸ್ತಾನದ ಕಾರಣಕ್ಕಲ್ಲ; ಟ್ರಂಪ್‌ ಎಂಬ ಕುಚಿಕ್ಕು ಗೆಳೆಯನ ಅವಾಂತರಕ್ಕೆ! ಇಂಡಿಯಾ-ಪಾಕಿಸ್ತಾನ ನಡುವೆ ಕದನವಿರಾಮ ಮಾಡಿಸಿದ್ದೇ ನಾನು, ಅದಕ್ಕೋಸ್ಕರ ವ್ಯಾಪಾರ ನಿಲ್ಲಿಸುವ ಬೆದರಿಕೆ ಹಾಕಬೇಕಾಯ್ತು ಎಂದು ಸೀದಾ ಅಮೆರಿಕೆಯ ಕೋರ್ಟಿನಲ್ಲಿ ಅಫಿಡವಿಟ್‌ ಸಲ್ಲಿಸಿದ್ದಾನೆ! ಅಬ್‌ ಕಿ ಬಾರ್ ಟ್ರಂಪ್‌ ಕಿ ಸರ್ಕಾರ್ ಅಂತ ಮೋದಿ ಹೋಗಿ ಮೆಗಾಶೋ ಮಾಡದೆ ಇದ್ದಿದ್ದರೆ ಟ್ರಂಪು ಅಮೆರಿಕಾದಲ್ಲಿ ಗೆಲ್ಲುತ್ತಲೇ ಇರಲಿಲ್ಲ. ಆ ಋಣವಾದರೂ ಬೇಡವಾ ಈ ಬಿಳಿಮನುಷ್ಯನಿಗೆ. ಇಷ್ಟು ದಿನ ಬಾಯಿಮಾತಿನಲ್ಲಿ ಹೇಳುತ್ತಿದ್ದುದನ್ನು ಹೇಗೋ ಮೋದಿಜಿ ತಳ್ಳಿಕೊಂಡು ಬಂದ್ರು. ಆದ್ರೆ ಇದೀಗ ಕೋರ್ಟಿನಲ್ಲಿ ಅಫಿಡವಿಟ್‌ ಸಲ್ಲಿಸಿ, ಘೋಷಿಸಿದ್ದಾನೆಂದರೆ ಪಾಪಾ, ನಮ್ಮ ಮೋದಿಜಿಯ ಕಥೆ ಏನಾಗಬೇಡ!!! ನಮ್ಮ ಮೋದಿಜಿ ಕತೆ ಬಿಡಿ, ಹೇಗೇ ದಬಾಕಿಕೊಂಡರೂ ಅವರ ಇಮೇಜನ್ನು ಎತ್ತಿ ನಿಲ್ಲಿಸಲು ಗೋದಿ ಮೀಡಿಯಾಗಳ ಮೂರುಕಾಸಿನ ಪ್ರೊಫೆಷನಲ್‌ ಟ್ರೋಲ್‌ ಆರ್ಮಿಯಿದೆ. ಆದರೆ ಅಮೆರಿಕೆಯಲ್ಲಿ ಆಗಿರುವ ಟ್ರಂಪಣ್ಣನ ಹೆಣಗಾಟದ ರೋಚಕ ಕಥನವನ್ನು ನೋಡೋಣ ಬನ್ನಿ…

ಏಪ್ರಿಲ್‌ 22ನೇ ತಾರೀಕು ಪಾಕಿಸ್ತಾನದ ಟೆರರಿಸ್ಟುಗಳು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಮ್ಮ 26 ಅಮಾಯಕ ಪ್ರವಾಸಿಗರನ್ನು ಕೊಂದುಹೋದ ನಂತರ, ನಮ್ಮ ಮೋದಿಜಿಯವರ ಮೈಯಲ್ಲೆಲ್ಲ ಸಿಂಧೂರ ಕುದಿಯಲು ಶುರುವಾಗಿತ್ತು. ಹಾಗಾಗಿ ಅವರು, ಸೇನಾ ಮುಖ್ಯಸ್ಥರನ್ನೆಲ್ಲ ಸಭೆ ಸೇರಿಸಿ, ನಾನಂತೂ ಈ ಆಟದಲ್ಲಿ ಇರಲ್ಲ, ನಿಮಗೆ ಹೇಗೆ ತೋಚುತ್ತೋ ಹಾಗೆ ಪ್ರತೀಕಾರ ತಗೊಳಿ ಅಂತ ಪರ್‍ಮೀಷನ್‌ ಕೊಟ್ಟು ಬಿಹಾರದ ಚುನಾವಣಾ ರ್‍ಯಾಲಿಗಳಲ್ಲಿ ಬ್ಯುಸಿಯಾದ್ರು. ಮೇ 7ಕ್ಕೆ ಪಾಕಿಸ್ತಾನ ಮತ್ತು ಪಿಒಕೆಯ ಒಂಬತ್ತು ಕಡೆ ಆಪರೇಷನ್ ಸಿಂಧೂರ ನಡೆಸಿದ ನಮ್ಮ ಸೇನೆ, ಪಾಕಿಸ್ತಾನಕ್ಕೆ ಭರ್ಜರಿ ಬಿಸಿ ಮುಟ್ಟಿಸಿತು. ಮಧ್ಯರಾತ್ರಿಯ ಆ ಆಪರೇಷನ್‌ಗೆ ಚುಮುಚುಮು ಮುಂಜಾನೆಯೇ ಬೆವೆತುಹೋದ ನಮ್ಮ ರಂಗಣ್ಣ, ಸೂಲಿಬೆಲೆಯಂತಹ  ಡಬ್ಬಗಳೆಲ್ಲ, ‘ಇನ್ನು ಯುದ್ಧ ಪಿಕ್ಸು, ಪಾಕಿಸ್ತಾನ ಉಡೀಸು… ಹೊಡಿ ಒಂಬತ್ತು’ ಅಂತ ಗಂಟಲು ಹರಿದುಕೊಳ್ಳಲು ಆರಂಭಿಸಿದ್ದರು. ಅದೇವೇಳೆಗೆ, ಮೋದಿ ಸಾಹೇಬರು ಮೇ 10ಕ್ಕೆ ದಿಢೀರ್‍‌ ಅಂತ ಪಾಕಿಸ್ತಾನದ ಜೊತೆ ರಾಜಿ ಮಾಡ್ಕೊಂಡು ಬಿಡೋದಾ? ನಮ್ಮ ಖಾಲಿ ಡಬ್ಬಗಳೆಲ್ಲ ಕನ್ಫ್ಯೂಸಲ್ಲಿ ಸೈಲೆಂಟಾಗೋದ್ವು.

ಆದ್ರೆ ವಿಚಾರ ಇದಲ್ಲ. ಹೀಗೆ ಕದನ ವಿರಾಮ ಮಾಡ್ಕೊಂಡಿದ್ದನ್ನು ಮೊಟ್ಟಮೊದಲು ಅನೌನ್ಸ್‌ ಮಾಡಿದ್ದು ಟ್ರಂಪು! ಬಹುಶಃ ನಮ್ಮ ಮೋದಿಜಿ `ಎಯ್ಟ್‌ ಪಿಎಂ’ ಎಪಿಸೋಡಿಗೆ ಆನ್‌-ಏರ್ ಬಂದು ಭಾಷಣ ಕುಟ್ಟೋಣ ಅನ್ಕೊಂಡಿದ್ರೇನೊ, ಆದ್ರೆ ಈ ಮಾಜಿ ಡಬ್ಲ್ಯು,ಡಬ್ಲ್ಯು,ಎಫ್‌ ಆಟಗಾರ ಟ್ರಂಪು ಸಂಜೆ ಐದೂವರೆಗೇ ಟ್ವೀಟ್‌ ಮಾಡಿ ಘೋಷಿಸಿಬಿಡೋದಾ!?

ಮೋದಿಜಿಗೆ ಅವತ್ತೇ ತಲೆನೋವು ಶುರುವಾಗಿತ್ತು. ಆದ್ರೂ, ಇದ್ರಲ್ಲಿ ಅಮೆರಿಕಾದ ಪಾತ್ರವಿಲ್ಲ ಅಂತ ಪ್ಯಾರಲಲ್‌ ಸ್ಟೇಟ್‌ಮೆಂಟ್‌ ರಿಲೀಸ್‌ ಮಾಡಿಸಿಕೊಂಡು ಹೇಗೋ ಬಚಾವಾಗಲು ನೋಡಿದರು. ಆದ್ರೆ ಹೋದ್ಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ ಅಂದಂಗೆ ಈ ಪುಣ್ಯಾತ್ಮ ಅಷ್ಟಕ್ಕೆ ಸುಮ್ಮನಾಗಲಿಲ್ಲ. ತನ್ನ `ಟ್ರೋದಿ’ ಮೀಡಿಯಾಗಳನ್ನೆಲ್ಲ ಕರೆದು ಇಂಟರ್‍‌ವ್ಯೂ ಕೊಡುವ ನೆಪದಲ್ಲಿ ‘ನಾನು ವ್ಯಾಪಾರ ವಹಿವಾಟಿನ ಬೆದರಿಕೆ ಹಾಕದೆ ಹೋಗಿದ್ದರೆ ಇಂಡಿಯಾ-ಪಾಕಿಸ್ತಾನ ಕದನವಿರಾಮ ಮಾಡಿಕೊಳ್ತಿರಲಿಲ್ಲ’ ಅಂತ ಒದರಾಡಲು ಶುರು ಮಾಡಿದ.

ಇವಾಗ ನೇರವಾಗಿ ಅಮೆರಿಕಾದ ಒಂದು ಫೆಡೆರಲ್‌ ಕೋರ್ಟ್‌ನಲ್ಲಿ ಅಫಿಡವಿಟ್‌ ಸಮೇತ ಏಷ್ಯಾದ ಆ ಎರಡು ನೆರೆ ರಾಷ್ಟ್ರಗಳ ನಡುವೆ ಕದನ ವಿರಾಮ ಮಾಡಿಸಿದ್ದೇ ನಾನು; ನನ್ನ ದುಬಾರಿ ತೆರಿಗೆ ಟಾರಿಫ್‌ಗಳು ಮತ್ತು ವಿದೇಶಿ ವ್ಯವಹಾರದ ನೀತಿಗಳನ್ನು ಚೌಕಾಶಿಗೆ ಬಳಸಿಕೊಳ್ಳದೆ ಹೋಗಿದ್ದರೆ ಎರಡು ದೇಶಗಳು ಇಷ್ಟೊತ್ತಿಗೆ ಹೊಡೆದಾಡಿಕೊಂಡು ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದರು’ ಎಂದು ವಾದಿಸಿದ್ದಾನೆ.

ಆಕ್ಚುಯಲಿ ಆಗಿದ್ದಿಷ್ಟು…. ಕೆಲ ದಿನಗಳ ಹಿಂದೆ ಟ್ರಂಪು ಯರ್‍ರಾಬಿರ್‍ರಿ ತೆರಿಗೆ ಹಾಕಿ ಬೇರೆ ದೇಶಗಳ ವಿರುದ್ಧ ಸೆಡ್ಡು ಹೊಡೆದಿದ್ದು ನಿಮಗೆ ಗೊತ್ತಿರಬಹುದು. ನಮ್ಮ ಸಂಭಾವಿತ ಸಂಘಿಗಳ ಭಾಷೆಯಲ್ಲಿ ಹೇಳೋದಾದ್ರೆ ಟ್ಯಾಕ್ಸ್‌ ಜಿಹಾದ್ ಮಾಡಲು ಹೊರಟಿದ್ದ. ಚೀನಾ ಆದಿಯಾಗಿ ತಿರುಗಿಬಿದ್ದ ಬೇರೆ ದೇಶಗಳು ಅಮೆರಿಕೆಯ ಸರಕುಗಳ ಮೇಲೂ ಬೇಕಾಬಿಟ್ಟಿ ಟ್ಯಾಕ್ಸ್‌ ಹಾಕುವ ಕೌಂಟರ್-ಜಿಹಾದ್‌ ಶುರು ಮಾಡಿಕೊಂಡವು. ಇದರಿಂದ ಕಂಗಾಲಾಗಿದ್ದು ಅಮೆರಿಕೆಯ ಜನ. ಈ ಟ್ರಂಪನ ಟ್ಯಾಕ್ಸ್‌ ಹುಚ್ಚಾಟದಿಂದ ಅಮೆರಿಕೆಯ ವ್ಯಾಪಾರ, ಆರ್ಥಿಕತೆ, ಉದ್ಯೋಗ ವಲಯಗಳೇ ಕುಸಿದುಬೀಳುವ ಆತಂಕ ಅಲ್ಲಿನ ಜನರನ್ನು ಕಾಡಲು ಶುರುವಾಯ್ತು. ಬೀದಿಗಿಳಿದು ಪ್ರತಿಭಟಿಸಿದರು. ಟ್ರಂಪು ಕ್ಯಾರೇ ಅನ್ನಲಿಲ್ಲ. ಕೊನೆಗೆ ಫೆಡರಲ್‌ ಕೋರ್ಟಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ರೂಪದ ಕೇಸು ಜಡಿದರು. ಟ್ರಂಪ್‌ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು, ಮನಸೋಇಚ್ಛೆ ಟ್ಯಾಕ್ಸ್‌ ಹೇರಿರುವುದರಿಂದ ಅಮೆರಿಕೆಯ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ, ಆತನ ಈ ಕ್ರಮಕ್ಕೆ ತಡೆ ನೀಡಿ ಅನ್ನೋದು ಕೇಸಿನ ಸಾರಾಂಶ.

ವಿಚಾರಣೆ ಶುರುವಾಯ್ತು. ನಾನು ಮಾಡುತ್ತಿರೋದೆಲ್ಲ ಅಮೆರಿಕೆಯ ಒಳಿತಿಗೆ, ಮೇಕ್‌ ಅಮೆರಿಕಾ ಗ್ರೇಟ್‌ ಎಗೇನ್‌ ಅಜೆಂಡಾಕ್ಕೆ ಅಂತ ಟ್ರಂಪನ ಟೀಮು ವಾದ ಮುಂದಿಟ್ಟಿತು. ಆದ್ರೆ, ದಿನೇದಿನೇ ಟ್ರಂಪ್‌ ಟೀಮಿನ ವಾದ ಶಿಥಿಲಗೊಳ್ಳುತ್ತಾ, ತೀರ್ಪು ಆತನ ವಿರುದ್ಧ ಹೊರಬರುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗ ಮೇಧಾವಿ ಟ್ರಂಪ್‌ ಸಾಹೇಬರಿಗೆ ಹೊಳೆದದ್ದೇ ಈ ಇಂಡಿಯಾ-ಪಾಕ್‌ ಕದನವಿರಾಮದ ಅಫಿಡವಿಟ್‌ ಐಡಿಯಾ!

ತನ್ನ ಟ್ಯಾಕ್ಸ್‌ ನೀತಿ ಮತ್ತು ವಿದೇಶಾಂಗ ವ್ಯವಹಾರ ನೀತಿಗಳನ್ನು ಭಾರತ-ಪಾಕ್‌ ಕದನವಿರಾಮಕ್ಕೆ ತಳುಕುಹಾಕಿ ಕೋರ್ಟನ್ನು ಯಾಮಾರಿಸಲು ಯೋಜನೆ ರೂಪಿಸಲಾಯ್ತು. ಅದರಂತೆ ಮೊನ್ನೆ, ಅಮೆರಿಕೆಯ ಕಾಮರ್ಸ್ ಸೆಕ್ರೆಟರಿ ಹೊವಾರ್ಡ್ ಡಬ್ಲ್ಯು ಲುಟ್ನಿಕ್‌ ಅಫಿಡವಿಟ್‌ ಸಮೇತ ಕೋರ್ಟಿನಲ್ಲಿ ಹಾಜರಾಗಿ ಹೀಗೆ ವಾದಿಸಲು ಶುರು ಮಾಡಿದ….

“ಮೈ ಲಾರ್ಡ್‌, ಯಾರ್‍ಯಾರೋ ನಮ್ಮ ಟ್ರಂಪರ ಟ್ಯಾಕ್ಸ್‌ ನೀತಿಗಳನ್ನು, ವಿದೇಶಿ ನೀತಿಗಳನ್ನು ಟೀಕಿಸ್ತಾ ಇದಾರೆ. ಅವರ ಆ ನೀತಿಗಳು ಇರದೇ ಹೋಗಿದ್ದರೆ ಇಷ್ಟೊತ್ತಿಗೆ ಇಂಡಿಯಾ ಪಾಕಿಸ್ತಾನಗಳು ಸುಟ್ಟು ಬೂದಿಯಾಗಬೇಕಿತ್ತು. ನೀವಿಬ್ಬರೂ ನನ್ನ ಮಾತುಕೇಳಿ ಕದನವಿರಾಮ ಮಾಡಿಕೊಳ್ಳದಿದ್ದರೆ ನಿಮ್ಮ ಜೊತೆಗೆ ಅಮೆರಿಕಾ ವ್ಯಾಪಾರ ವಹಿವಾಟನ್ನೆಲ್ಲ ಬಂದ್  ಮಾಡಲಿದೆ, ಮತ್ತು ನಮ್ಮ ದುಬಾರಿ ಟ್ಯಾಕ್ಸ್‌ ಟಾರಿಫನ್ನು ನಿಮ್ಮ ಮೇಲೆ ಮತ್ತಷ್ಟು ಹೆಚ್ಚಿಸಲಿದೆ ಎಂದು ಬೆದರಿಕೆ ಇಟ್ಟರು. ಅದಕ್ಕೆ ಹೆದರಿದ ಎರಡೂ ಅಣ್ವಸ್ತ್ರ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡವು. ಮೈಲಾರ್ಡ್ ಈಗೇನಾದರು ನೀವು, ಟೀಕೆಗಳಿಗೆ ಬೆಲೆಕೊಟ್ಟು ಟ್ರಂಪ್‌ ಅವರ ಟ್ಯಾಕ್ಸ್ ಮತ್ತು ವಿದೇಶಿ ನೀತಿಗಳ ಮೇಲೆ ನಿಯಂತ್ರಣ ಹೇರಲು ಮುಂದಾದ್ರೆ, ಭಾರತ-ಪಾಕಿಸ್ತಾನಗಳು ನಾವಿಟ್ಟ ವ್ಯವಹಾರ ಬೆದರಿಕೆಯ‌ ವ್ಯಾಲಿಡಿಟಿ ಮೇಲೆಯೇ ಸಂಶಯಗೊಳ್ಳುವ ಸಂಭವ ಇದೆ. ಹಾಗೇನಾದರೂ ಆದಲ್ಲಿ, ಅವು ಕದನ ವಿರಾಮ ಉಲ್ಲಂಘಿಸಿ ಯುದ್ಧಕ್ಕೆ ಮುಂದಾಗಬಹುದು. ಅಲ್ಲಿ ಸಂಭವಿಸುವ ಸಾವುನೋವುಗಳಿಗೆ ಆಗ ನೀವೇ ಹೊಣೆಯಾಗಬೇಕಾಗುತ್ತೆ. ಅಷ್ಟೇ ಅಲ್ಲ ಮೈಲಾರ್ಡ್‌, ನಮ್ಮ ಟ್ರಂಪ್‌ ಸಾಹೇಬರ ಟ್ಯಾಕ್ಸ್‌ ನೀತಿಗಳಿಂದಾಗಿಯೇ, ನಮ್ಮ ದೇಶದ ವಿರುದ್ಧ ಸ್ಪರ್ಧೆ ಒಡ್ಡುತ್ತಿದ್ದ ಚೀನಾವನ್ನೂ ನಾವು ಹೆದರಿಸಿ, ಮಾತುಕತೆಗೆ ಬರುವಂತೆ ಮಾಡಲು ಸಾಧ್ಯವಾಗಿದೆ. ಆದ್ರಿಂದ ಯಾವ ಕಾರಣಕ್ಕೂ ಟ್ರಂಪ್‌ ಅವರ ದಿಗ್ವಿಜಯದ ಕಾರ್ಯಗಳಿಗೆ ತಡೆ ನೀಡಬೇಡಿ” ಎಂದು ಆತ ವಾದ ಮಂಡಿಸಿದ್ದ.

ಆದರೆ ಅಮೆರಿಕೆಯ ಆ ಫೆಡರಲ್‌ ಕೋರ್ಟು ಲುಟ್ನಿಕನ ಮುಖಕ್ಕೆ ತುಪಕ್ಕನೆ ಉಗಿದು ಕಳಿಸಿದೆ. “ಟ್ಯಾಕ್ಸ್‌ ಟಾರೀಫುಗಳಿರೋದು ದೇಶದ ಪ್ರಗತಿಗೆ ಮತ್ತು ಆಂತರಿಕ ಆರ್ಥಿಕ ತುರ್ತು ಪರಿಸ್ಥಿತಿಗಳ ನಿರ್ವಹಣೆಗೇ ಹೊರತು, ವಿದೇಶಾಂಗ ವ್ಯವಹಾರಗಳನ್ನು ಕುದುರಿಸುವುದಕ್ಕಲ್ಲ. ಆ ಅಧಿಕಾರವನ್ನು ಟ್ರಂಪ್‌ಗೆ ನಮ್ಮ ಸಂವಿಧಾನ ನೀಡಿಲ್ಲ. ಯಾವುದೋ ಎರಡು ರಾಷ್ಟ್ರಗಳ ನಡುವಿನ ಯುದ್ಧ ನಿಲ್ಲಿಸಲು ನಮ್ಮ ಟ್ಯಾಕ್ಸ್‌ ನೀತಿಗಳು ಕಾರಣವಾದವು ಎಂಬುದನ್ನು ನಂಬಿ, ಅಸಂವಿಧಾನಿಕವಾದ ಅವುಗಳನ್ನು ಮಾನ್ಯ ಮಾಡಲು ಸಾಧ್ಯವೇ ಇಲ್ಲ” ಎಂದು ಖಡಕ್ಕಾಗಿ ಹೇಳಿದೆ. ಆ ಮೂಲಕ ಅಮೆರಿಕೆಯ ವಿಶ್ವಗುರುವಿನ ಮಾನವನ್ನು ನ್ಯಾಯಾಲಯ ಮೂರು ಕಾಸಿಗೆ ಹರಾಜಾಕಿದೆ.

ಈಗ ನೋಡಿ, ಆತ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕದನವಿರಾಮದ ಅಫಿಡವಿಟ್‌ ಸಲ್ಲಿಸಿ, ಈಗ ನಮ್ಮ ಮೋದಿಜಿಯ ಕುತ್ತಿಗೆಗೆ ತಂದಿದ್ದಾನೆ. ಕೋರ್ಟ್ ಏನೊ, ನಿಮ್ಮ ಟ್ಯಾಕ್ಸ್‌ ನೀತಿಗಳನ್ನು ಸಾಂವಿಧಾನಿಕ ಎಂದು ಪರಿಗಣಿಸಲು ಕದನವಿರಾಮದ ಈ ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಅದರರ್ಥ, ಭಾರತ-ಪಾಕ್‌ ಕದನವಿರಾಮದ ಮಧ್ಯಸ್ಥಿಕೆಯಲ್ಲಿ ಟ್ರಂಪ್‌ ಪಾತ್ರವನ್ನು ಅದು ನಿರಾಕರಿಸಿಲ್ಲ. ಆ ಪಾತ್ರವನ್ನು ಟ್ಯಾಕ್ಸ್‌ ಮಾನ್ಯತೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದೆ. ಒಂದಂತೂ ಸತ್ಯ,  ನ್ಯಾಯಾಲಯದಲ್ಲೇ ಟ್ರಂಪು ಅಫಿಡವಿಟ್‌ ಹಾಕಿ ಮಧ್ಯಸ್ಥಿಕೆಯನ್ನು ದೃಢೀಕರಿಸುವ  ಧೈರ್ಯ ತೋರ್‍ತಾನೆ ಅಂದ್ರೆ, ಕದನವಿರಾಮದಲ್ಲಿ ಆತನ ಪಾತ್ರವಿರುವುದು ನಿಜವೇ? ಎಂಬ ಗುಮಾನಿಗೆ ಈಗ ಮತ್ತಷ್ಟು ಬಲಬಂದಿದೆ.

ನನ್ನ ನರನಾಡಿಗಳಲ್ಲಿ ರಕ್ತವಲ್ಲ, ಬಿಸಿ ಸಿಂಧೂರ ಹರಿಯುತ್ತಿದೆ ಅನ್ನೋ ಎಮೋಷನಲ್‌ ಡೈಲಾಗ್ ಉದುರಿಸಿ, ಕದನವಿರಾಮದ ಪ್ರಶ್ನೆಗಳಿಂದ ದೇಶದ ಜನರನ್ನು ಹೇಗೋ ಬೇರೆಡೆ ಸೆಳೆಯುವಲ್ಲಿ ಮೋದೀಜಿ ಯಶಸ್ವಿಯಾಗಿದ್ದರು. ಆದರೆ ಈಗ ಟ್ರಂಪು ಕೋರ್ಟ್ ಕಟಕಟೆಯಲ್ಲೇ ಮಧ್ಯಸ್ಥಿಕೆಯ ಅಫಿಡವಿಟ್‌ ಸಲ್ಲಿಸಿ ಹೊಸ ತಲೆನೋವು ಸೃಷ್ಟಿಸಿದ್ದಾನೆ.

ಮೋದೀಜಿ ಅಲ್ವಾ…. ಹೇಗೋ ಮತ್ತೊಮ್ಮೆ ಜನರನ್ನು ಯಾಮಾರಿಸ್ತಾರೆ ಬಿಡಿ!! ಆದ್ರೂ, ಪಾಪಾ, ಒಬ್ಬ ಮನುಷ್ಯ ಎಷ್ಟು ಅಂತ ಇಂಥಾ ಇಕ್ಕಟ್ಟುಗಳನ್ನು ಎದುರಿಸಬೇಕ್ರಿ!!???

ಥೂತ್ತೇರಿಕೆ… ಯಾರ್‍ರೀ ಈ ಟ್ರಂಪು!!

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply