ಯೂನಿವರ್ಸಿಟಿಗಳು ಹಳ್ಳಹಿಡಿಯುತ್ತಿರುವ ಹೊತ್ತಿನಲ್ಲಿ…

2 years ago

ಕೆ.ಪಿ.ಶ್ರೀಪಾಲ್‌ – ಶಿವಮೊಗ್ಗದ ಪ್ರಗತಿಪರ ಚಳವಳಿಗಳ ಸಂಗಾತಿ ಇವರು. ಇತ್ತೀಚೆಗೆ ಸರ್ಕಾರ ನೇಮಕಗೊಳಿಸಿ ಪ್ರಕಟಿಸಿದ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಪಟ್ಟಿಯಲ್ಲಿ ಇವರು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕಳೆದ ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಶಿವಮೊಗ್ಗದಲ್ಲಿ ಶ್ರೀಪಾಲ್‌ ಅವರ ನಡೆ – ನುಡಿ, ಸಾಮಾಜಿಕ ಚಟುವಟಿಕೆ ಮತ್ತು ಚಿಂತನೆಗಳನ್ನು ಹತ್ತಿರದಿಂದ ನೋಡಿದವರಿಗೆ ಈ ನೇಮಕ ಸಂತಸ ತಂದಿದೆ. ಯೂನಿವರ್ಸಿಟಿಗಳು ಹಳ್ಳಹಿಡಿಯುತ್ತಿರುವ ಹೊತ್ತಿನಲ್ಲಿ ಇಂತಹ ಕೆಲವು ಜಾತ್ಯತೀತ ಚಿಂತನೆಯ ಹಾಗೂ ಬದ್ಧತೆ ಇರುವ ವ್ಯಕ್ತಿಗಳಿಗೆ ಸರ್ಕಾರಗಳು ನೀಡುವ ಚಿಕ್ಕ ಅವಕಾಶಗಳು ಮತ್ತು ಇಂತಹ ಗುರುತಿಸುವಿಕೆಗಳು ಸಮಾಜಕ್ಕೆ ಒಳ್ಳೆಯದು ಮಾಡುವ ಜೊತೆಗೆ ಸರ್ಕಾರದ ಗೌರವ ಘನತೆಯನ್ನೂ ಹೆಚ್ಚಿಸುತ್ತವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೂನಿವರ್ಸಿಟಿ ಕುಲಪತಿಗಳ ಹುದ್ದೆಗಳನ್ನು ಹೇಗೆ ಮಾರಿಕೊಳ್ಳಲಾಗಿತ್ತು ಎಂಬುದಕ್ಕೆ ಸ್ವತಃ ಬಿಜೆಪಿಯವರೇ ಅಸಮಧಾನಗೊಂಡಿದ್ದರು. ಆದರೆ ಕುವೆಂಪು ಯೂನಿವರ್ಸಿಟಿಗೆ ಶರತ್‌ ಅನಂತಮೂರ್ತಿ ಅವರನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಯೂ ಆರ್‌ ಅನಂತಮೂರ್ತಿ ಅವರ ಮಗ, ವಿದೇಶದಲ್ಲಿ ಓದಿಕೊಂಡು ಹೆಸರು ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಮುತುವರ್ಜಿ ವಹಿಸಿ ಉಪಕುಲಪತಿಯಾಗಿ ನೇಮಕವಾಗುವಂತೆ ನೋಡಿಕೊಂಡರು. ಈಗ ಮೊನ್ನೆ ವಿಶ್ವವಿದ್ಯಾಲಯಗಳಿಗೆ ಆಗಿರುವ ಅನೇಕ ಸಿಂಡಿಕೇಟ್‌ ಸದಸ್ಯರು ಖಂಡಿತವಾಗಿಯೂ ಕರ್ನಾಟಕದ ಯೂನಿವರ್ಸಿಟಿಗಳಲ್ಲಿ ಹೊಸತನ ತುಂಬುವಂತರೇ ಆಗಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಮಾನ್ಯ ಸಿದ್ದರಾಮಯ್ಯ ಮತ್ತು ಅವರ ಆಪ್ತ ಕಾರ್ಯದರ್ಶಿಗಳ ಕಚೇರಿಗೆ ಮೆಚ್ಚುಗೆ ಸೂಚಿಸದಿರಲು ಸಾಧ್ಯವಿಲ್ಲ.

ನ್ಯಾಯವಾದಿ ಕೆ ಪಿ ಶ್ರೀಪಾಲ್‌ ಅವರೊಂದಿಗೆ ನಮ್ಮ ಒಡನಾಟ ಶುರುವಾಗಿದ್ದು ಸುಮಾರು 2002-03ರ ಸುಮಾರಿಗೆ. ನಾವು ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರೆ ಅವರು ಹೊರಾಟಗಾರ ದಿ.ಈಸೂರು ಲೋಕೇಶ್‌ ಅವರು ಸ್ಥಾಪಿಸಿದ್ದ ಸಿವಿಲ್‌ ಲಿಬರ್ಟೀಸ್‌ ಫೋರಂ (CLF) ಎಂಬ ಸಂಘಟನೆಯ ಕಾರ್ಯಕರ್ತರಾಗಿ ಸಕ್ರಿಯವಾಗಿದ್ದರು.

ಶಿವಮೊಗ್ಗದ ಪ್ರಗತಿಪರ ಚಳವಳಿಗೆ ದೊಡ್ಡ ಇತಿಹಾಸವೇ ಇದೆ. ನಾವಿನ್ನೂ ಪಿ ಯು ಸಿ ಓದುತ್ತಿದ್ದಾಗ ಸಂಘಪರಿವಾರದ ಪಡೆಯೊಂದು ಎನ್‌ ಮಂಜುನಾಥ್‌ ಅವರ ಸಂಪಾದಕತ್ವದ ʼಕ್ರಾಂತಿದೀಪʼ ಎಂಬ ಸೆಕ್ಯುಲರ್‌  ಪತ್ರಿಕೆಯ ಕಚೇರಿ ಮೇಲೆ ಭೀಕರ ದಾಳಿ ನಡೆಸಿತ್ತು. ಇಂದು ಶಿವಮೊಗ್ಗದಲ್ಲಿ ಶಾಸಕರಾಗಿರುವವರೇ ಅಂದು ಆ ದಾಳಿಯ ನೇತೃತ್ವ ವಹಿಸಿಕೊಂಡಿದ್ದವರು. ಆ ಸಂದರ್ಭದಲ್ಲಿ ದೊಡ್ಡ ಹೋರಾಟವನ್ನು ಸಂಘಟಿಸಿ ಸಂಘಪರಿವಾರಕ್ಕೆ ನೈತಿಕ ಹಾಗೂ ರಾಜಕೀಯ ಹಿನ್ನಡೆ ಉಂಟು ಮಾಡಿದ್ದು ಶಿವಮೊಗ್ಗದ ಪ್ರಗತಿಪರ ಸಂಘಟನೆಗಳು ಮತ್ತು ಹೋರಾಟಗಾರರು. ನಂತರ 2006ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ಎಬಿವಿಪಿ ನೇತೃತ್ವದಲ್ಲಿ ಇಡೀ ಸಂಘಪರಿವಾರದ ಪಡೆ ಸಾಹಿತ್ಯ ಸಮ್ಮೇಳನದ ಮೇಲೆಯೇ ಮುಗಿಬಿದ್ದಿತ್ತು. ಕಲ್ಕುಳಿ ವಿಠಲ ಹೆಗಡೆ, ಗೌರಿ ಲಂಕೇಶ್‌, ಕೆ ಟಿ ಗಂಗಾಧರ್‌ ಮೊದಲಾದವರು ಭಾಷಣಕ್ಕೆ ಕುಳಿತಿದ್ದ ವೇದಿಕೆಯ ಮೇಲೆ ಎಗರಿ ಹಲ್ಲೆ ನಡೆಸಲು ಹತ್ತಿಪ್ಪತ್ತು ಪುಂಡರು ನುಗ್ಗು ನುಗ್ಗುತ್ತಿದ್ದಂತೆ ಒಬ್ಬೊಬ್ಬರನ್ನೇ ಎಳೆದುಕೊಂಡು ಪಾಠ ಕಲಿಸಿದವರು ವೇದಿಕೆಯ ಮೇಲೆ ಮತ್ತು ಕೆಳಗಿದ್ದ ಪ್ರಗತಿಪರರು ಹಾಗೂ ಪೊಲೀಸರು. ಆ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ನಮ್ಮ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದರು. ನಾವು ಸುಮಾರು 15 ಮಂದಿ ವಿದ್ಯಾರ್ಥಿಗಳು  ಆ ಕೇಸ್‌  ನಲ್ಲಿ ಆರು ವರ್ಷಗಳ ಕಾಲ ಕೋರ್ಟಿಗೆ ಅಲೆದಾಡಬೇಕಾಯ್ತು.  ಆ ಪ್ರಕರಣದ ವಿಚಾರಣೆ ನಡೆದು 2012ರಲ್ಲಿ ನಾವು ಖುಲಾಸೆಗೊಂಡೆವು. ಆಗ ನಾವೆಲ್ಲಾ ವಿದ್ಯಾರ್ಥಿಗಳು, ಕಾರ್ಯಕರ್ತರು. ದುಡಿಮೆ ಇರಲಿಲ್ಲ. ವರ್ಷಗಟ್ಟಲೆ ನಮ್ಮ ಕೇಸುಗಳನ್ನು ನಯಾಪೈಸೆ ಶುಲ್ಕ ಪಡೆಯದೇ ನಡೆಸಿ ನಮಗೆ ನ್ಯಾಯ ದೊರಕಿಸಿಕೊಟ್ಟವರೆಲ್ಲಾ  ಕೆ ಪಿ ಶ್ರೀಪಾಲ್‌, ಅನಿಲ್‌ ಕುಮಾರ್‌ ಮೊದಲಾದವರೇ.

ನಾವು ಯಾವುದೇ ಹೋರಾಟ ನಡೆಸಲಿ, ಪೊಲೀಸ್‌ ಸ್ಟೇಶನ್‌ ಹತ್ತಲಿ ಏನೇ ಆಗಲಿ, ‘ಓ ನಮ್‌ ಜೊತೆ ಶ್ರೀಪಾಲ್‌ ಇದಾರೆ, ಅನಿಲ್‌ ಇದಾರೆ’ ಅನ್ನುವ ಧೈರ್ಯ ನಮಗೆ. ಒಮ್ಮೆ ನಮ್ಮ ವಿದ್ಯಾರ್ಥಿ ಸಂಘಟನೆಯ ಐವರು ಕಾರ್ಯಕರ್ತರು ಒಂದು ಹಾಸ್ಟೆಲ್‌ ನಲ್ಲಿನ ಸಮಸ್ಯೆಗಳ ಕುರಿತು ವಿಚಾರಿಸುತ್ತಿದ್ದಂತೆ ಅವರನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಜೈಲಿಗೂ ಹಾಕಿಬಿಟ್ಟರು. ಆಗ ನಮಗೆ ಆಸರೆಯಾಗಿದ್ದು ಇದೇ ಶ್ರೀಪಾಲ್‌ ಮತ್ತು ವಕೀಲರ ತಂಡ. ನಮಗೆ ಜಾಮೀನು ಕೊಟ್ಟಿದ್ದು ಪ್ರೊ. ಎಚ್‌ ರಾಚಪ್ಪನವರು. ಪುಷ್ಪಲತಾ ಎಂಬ ಹೆಣ್ಣುಮಗಳ ಆತ್ಮಹತ್ಯೆಯ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ 60 ವಿದ್ಯಾರ್ಥಿಗಳ ಮೇಲೆ ಹಾಕಲಾಗಿದ್ದ ಸುಳ್ಳುಕೇಸುಗಳ ಸಂದರ್ಭದಲ್ಲಿಯೂ ಇವರುಗಳೇ ನಮಗೆ ನೆರವು ನೀಡಿದ್ದು.

ನಮ್ಮಂತಹ ಹೋರಾಟಗಾರರ ಕೇಸುಗಳನ್ನು ನಡೆಸಿದರೆ ಈ ವಕೀಲರುಗಳಿಗೆ ಎಂತ ಬದನೆಕಾಯಿಯೂ ಸಿಗುತ್ತಿರಲಿಲ್ಲ. ಬದಲಿಗೆ ನಮ್ಮ ಜೊತೆಗೆ ಇವರನ್ನೂ ʼನಕ್ಸಲ್‌ ಬೆಂಬಲಿಗರುʼ ಎಂಬ ಹಣೆಪಟ್ಟಿ ಕಟ್ಟಲಾಗಿತ್ತಷ್ಟೆ!

ಶಿವಮೊಗ್ಗ ಕೇಂದ್ರವನ್ನಾಗಿಸಿಕೊಂಡು ನಡೆದ ಕುದುರೆಮುಖ ಗಣಿಗಾರಿಕೆ ವಿರೋಧಿ ಚಳವಳಿ,  ಬಾಬಾಬುಡನ್‌ ಗಿರಿ ಕೋಮು ಸೌಹಾರ್ದದ ಚಳವಳಿ,  ಇತ್ತೀಚೆಗೆ ನಡೆದ ಎಂ ಪಿ ಎಂ ನೆಡುತೋಪು ವಿರೋಧಿ ಚಳವಳಿ ಹೀಗೆ ಯಾವುದೇ ಚಳವಳಿ ಇರಲಿ ಶಿವಮೊಗ್ಗದ ಪ್ರಗತಿಪರರು ತಮ್ಮ ದನಿ ಎತ್ತಿ ಸಮಾಜದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗೆ ಇಂತಹ ಕೆಲಸಗಳಲ್ಲಿ ಯಾವತ್ತೂ ಮುಂಚೂಣಿ ಪಾತ್ರ ವಹಿಸಿಕೊಂಡು ಬಂದವರಲ್ಲಿ ನಮ್ಮ ಕೆ ಪಿ ಶ್ರಿಪಾಲ್‌ ಕೂಡಾ ಒಬ್ಬರು ಎನ್ನಲು ಹೆಮ್ಮೆಯಾಗುತ್ತದೆ.

ಮೊನ್ನೆ ಕೆ ಪಿ ಶ್ರೀಪಾಲ್‌ ಸಿಂಡಿಕೇಟ್‌ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಒಂದು ತಮಾಷೆಯೂ ನಡೆದುಹೋಗಿದೆ. ʼಅರೆ ನಮ್ಮ ಕಾಂಗ್ರೆಸ್‌ ಪಕ್ಷದ ಸರ್ಕಾರ ಇರುವಾಗ ಕಾಂಗ್ರೆಸ್‌ ಕಾರ್ಯಕರ್ತರನ್ನು ನೇಮಕ ಮಾಡದೇ ಈ ಪ್ರಗತಿಪರರನ್ನು ಅದು ಹೇಗೆ ನೇಮಕ ಮಾಡಲು ಆಗತ್ತೆ? ಇದು ಎಷ್ಟೋ ವರ್ಷಗಳಿಂದ ಪಕ್ಷಕ್ಕೆ ಮಣ್ಣುಹೊತ್ತಿರುವ ಕಾರ್ಯಕರ್ತರಿಗೆ ಮಾಡಿದ ಅನ್ಯಾಯʼ ಎಂದು ಅಳುಮೋರೆ ಮಾಡಿಕೊಂಡ ಕೆಲವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರಂತೆ. ತಮ್ಮದೇ ಪಕ್ಷ ಇರುವಾಗ ತಮ್ಮ ಕಾರ್ಯಕರ್ತರನ್ನು ಬಿಟ್ಟು ಬೇರೆ ಯಾರಿಗೂ ಯಾವುದೇ ಹುದ್ದೆ ಕೊಡಬಾರದು ಎಂಬ ತಿಳುವಳಿಕೆ ಇವರದ್ದು ಇರಲಿ. ಆಕಾಂಕ್ಷಿಗಳಾಗಿದ್ದವರ ಅಸಮಧಾನ, ನೋವು ಅರ್ಥವಾಗುತ್ತದೆ. ಹಾಗಂತ ಸರ್ಕಾರ ನೇಮಕ ಮಾಡಿದವರೆನ್ನೆಲ್ಲಾ ಬಂದು,  ʼನೀವು ಕಾಂಗ್ರೆಸ್‌ ಪಕ್ಷದಿಂದ ನೇಮಕವಾಗಿದ್ದೀರಿ, ಈಗಲೇ ಕಾಂಗ್ರೆಸ್‌ ಸೇರಿಕೊಳ್ಳಬೇಕು, ನಾಳೆಯೇ ಕಚೇರಿ ಬಂದು ಪಕ್ಷದ ಸದಸ್ಯತ್ವ ತೆಗೆದುಕೊಳ್ಳಬೇಕುʼ ಎಂದು ಹುಕುಂ ಹೊರಡಿಸಿಬಿಟ್ಟರೆ ಹೇಗಿರುತ್ತದೆ ಹೇಳಿ. ಅಂತದೂ ಒಂದು ಆಗಿಹೋಯ್ತಂತೆ. ಅದಕ್ಕೆ ಶ್ರೀಪಾಲ್‌ ಅವರು ಅಲ್ಲೇ ಸರಿಯಾಗಿ ಉತ್ತರವನ್ನೂ ಕೊಟ್ಟಿದ್ದಾರೆ. ಇರಲಿ.

ಕರ್ನಾಟಕದಲ್ಲಿ ಅದು ಚುನಾವಣೆ ಸಮಯವಿರಲಿ, ಕೋಮು ವೈಷಮ್ಯ ಉಂಟಾಗುವ ಸಂಭವ ಇರಲಿ, ಯಾವುದೇ ಜನವಿರೋಧಿ ನಡೆಗಳ ವಿಷಯದಲ್ಲಿರಲಿ, ಪಠ್ಯಪುಸ್ತಕಗಳ ತಿದ್ದುಪಡಿ ಮಾಡಿ ವಿಷವಿಕ್ಕುವಂತ ಸಂದರ್ಭಗಳಿರಲಿ ಕಾಂಗ್ರೆಸ್‌ ನಾಯಕಮಣಿಗಳಿಗಿಂತಲೂ ನೂರು ಹೆಜ್ಜೆ ಮುಂದಿದ್ದು ಈ ಸಮಾಜವನ್ನು ದುಷ್ಟರಿಂದ, ದುಷ್ಟ ಚಿಂತನೆಗಳಿಂದ ಉಳಿಸಬೇಕು ಎಂದು ಕಂಕಣಬದ್ಧರಾಗಿ ದುಡಿಯುವುದು ಈ ನೆಲದ ಪ್ರಗತಿಪರ ಚಳವಳಿಗಳು ಮತ್ತು ಪ್ರಗತಿಪರರು, ದಲಿತ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು ಇತ್ಯಾದಿ. ಕಾಂಗ್ರೆಸ್‌ ನಾಯಕರು ಇನ್ನೂ ನಿದ್ದೆಯಿಂದ ಎದ್ದೇ ಇರದಿದ್ದಾಗಲೂ ಬೀದಿಗೆ ಇಳಿದು ಎಂತೆಂತಹ ರಿಸ್ಕುಗಳನ್ನೂ ತೆಗೆದುಕೊಳ್ಳುವುದೂ ಇವರೇ. ಹಾಗಂತ ಇವರೆಲ್ಲಾ ನಾಳೆ ಕಾಂಗ್ರೆಸ್‌ ಬಂದಾಗ  ನಮಗೆ ಅಧಿಕಾರ ಸಿಕ್ಕಿಬಿಡುತ್ತದೆ, ನಾವು ಕೋಟಿ ಕೋಟಿ ಸಂಪಾದಿಸಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕಿಕೊಂಡು ಪ್ರಗತಿಪರ ಚಳವಳಿಗಳಲ್ಲಿ ತೊಡಗಿಕೊಂಡವರಲ್ಲ. ಬದಲಿಗೆ ಒಂದು ದುಷ್ಟ ಸಿದ್ಧಾಂತವನ್ನು ಎದುರಿಸಲು ಈಗ ಇರುವವರ ಪೈಕಿ ಕಾಂಗ್ರೆಸ್‌ ಪರವಾಗಿಲ್ಲ, ಕನಿಷ್ಟ ಸಂವಿಧಾನಕ್ಕೆ ಬದ್ಧತೆ ತೋರುತ್ತದೆ ಎಂಬ ದೃಷ್ಟಿಯಿಂದ ಕಾಂಗ್ರೆಸ್‌ ಗೆ ಬೆಂಬಲವಾಗಿಯೋ ಪೂರಕವಾಗಿಯೇ ಕೆಲಸ ಮಾಡುವ ದೊಡ್ಡ ಜನವರ್ಗ ಈ ನಾಡಿನಲ್ಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರಲ್ಲಿ ಅನೇಕರು ಯಾವ ಹುದ್ದೆಗಾಗಿಯೂ ಅರ್ಜಿಯನ್ನೂ ಹಾಕಿರುವುದಿಲ್ಲ. ಅಥವಾ ತಮಗೆ ಇಂತಹ ಹುದ್ದೆ ಬೇಕು ಎಂದು ನಿರೀಕ್ಷೆಯನ್ನೂ ಇಟ್ಟುಕೊಂಡಿರುವುದಿಲ್ಲ. ಆದರೆ ಸರ್ಕಾರದ ಭಾಗವಾಗಿರುವ ಒಂದಷ್ಟು ಪ್ರಜ್ಞಾವಂತ ಮತ್ತು ಸೂಕ್ಷ್ಮ ಮನಸ್ಸಿನ ಅಧಿಕಾರಿಗಳು ಯಾವ ಜಾಗಕ್ಕೆ ಯಾರು ಹೋದರೆ ಆ ಹುದ್ದೆಗೆ ನ್ಯಾಯ ಸಲ್ಲುತ್ತದೆ ಎಂದು ವಿಚಾರ ಮಾಡಿ ಕೆಲವು ಅತ್ಯುತ್ತಮ ಆಯ್ಕೆಗಳನ್ನು ನೇಮಕಗಳನ್ನು ಮಾಡುತ್ತಾರೆ. ಇಂದು ಸಿಂಡಿಕೇಟ್‌ ಗೆ  ಮತ್ತು ಇದಕ್ಕೆ ಹಿಂದೆ ಕೆಲವು ಅಕಾಡೆಮಿಗಳಿಗೆ ಆಗಿರುವ ಹಲವಾರು ನೇಮಕಾತಿಗಳು ನಡೆದಿರುವುದು ಇದೇ ನಿಟ್ಟಿನಲ್ಲಿ. ಇದು ಎಲ್ಲೋ ಕೆಲವು ಕಾಂಗ್ರೆಸ್‌ ಕಾರ್ಯಕರ್ತರಿಗೆ ʼಅನ್ಯಾಯʼ ಅನಿಸಿದರೂ ಈ ನಡೆ ಸರ್ಕಾರದ ಮತ್ತು ಕಾಂಗ್ರೆಸ್‌ ಪಕ್ಷದ ಘನತೆಯನ್ನೇ ಹೆಚ್ಚಿಸುತ್ತದೆ ಎಂಬ ಸಾಮಾನ್ಯ ಜ್ಞಾನವಿರಬೇಕು.

ಬಿಜೆಪಿ ಅಧಿಕಾರದಲ್ಲಿದ್ದಾಗ ಆರೆಸ್ಸೆಸ್‌ ನಾಯಕರು ಪಿ.ವಿ.ಕೃಷ್ಣಭಟ್‌ ಎಂಬ ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಕುವೆಂಪು ವಿವಿಯ ಸಿಂಡಿಕೇಟ್‌ ಸದಸ್ಯರನ್ನಾಗಿಸಿದ್ದರು. ನಂತರವೂ ಅಂತವರನ್ನೇ ಹುಡುಕಿ ಹುಡುಕಿ ವಿಶ್ವವಿದ್ಯಾಲಯಗಳಿಗೆ ನೇಮಕ ಮಾಡುತ್ತದೆ. ಇದೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಫೇಕ್‌ ಜಾತಿ ಸರ್ಟಿಫೀಕೇಟ್‌ ಮೇಲೆ ಕೆಲಸ ಮಾಡುತ್ತಿರುವ, ಕೋರ್ಟಿನಲ್ಲಿ ಪ್ರಕರಣವೂ ಚಾಲ್ತಿಯಲ್ಲಿರುವ ಅಯೋಗ್ಯನೊಬ್ಬ ಕೇವಲ ಸಂಘಪರಿವಾರದ ಐಡಿಯಾಲಜಿಗೆ ಪೂರಕವಾಗಿ ಕೆಲಸ ಮಾಡುತ್ತಾನೆ, ರೋಗಿತ್‌ ಚಕ್ರತೀರ್ಥನೊಂದಿಗೆ ಕೂಡಿ ಕೆಲಸ ಮಾಡುತ್ತಿದ್ದಾನೆ  ಎಂಬ ಏಕೈಕ ಕಾರಣಕ್ಕೆ ಆರೆಸ್ಸೆಸ್‌  ವಿಶ್ವವಿದ್ಯಾಲಯವೊಂದರ ಸಿಂಡಿಕೇಟ್‌ ಸದಸ್ಯತ್ವ ನೀಡಿತ್ತು. ಅಂದರೆ ದುಷ್ಟ ಐಡಿಯಾಲಜಿ ಹೊಂದಿರುವವರು ತಮ್ಮ ಸರ್ಕಾರ ಬಂದಾಗ ತಮ್ಮ ಪಾರ್ಟಿ ಕಾರ್ಯಕರ್ತರಿಗೇ ಸ್ಥಾನಮಾನಗಳು ಸಿಗಬೇಕೆಂದು ಯೋಚಿಸದೇ ತಮ್ಮ ಐಡಿಯಾಲಜಿಗಳು ಯೂನಿವರ್ಸಿಟಿಗಳಲ್ಲಿ ಹರಡಲು ಯಾರನ್ನು ನೇಮಕ ಮಾಡಬೇಕೋ ಅವರನ್ನು ಹಾಕಿಸುವಲ್ಲಿ ಸಫಲರಾಗಿದ್ದರು. ಮುಂದೆಯೂ ಆಗುತ್ತಾರೆ.

ಹಾಗಾದರೆ ಸಂವಿಧಾನದ ಹೆಸರು ಹೇಳಿಕೊಂಡು, ಜಾತ್ಯತೀತ ತತ್ವದ ಹೆಸರು ಹೇಳಿಕೊಂಡು, ʼಸಾಮಾಜಿಕ ನ್ಯಾಯದʼ ಘೋಷಣೆಯೊಂದಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಕೂಡಾ ಸಂವಿಧಾನದ ಧ್ಯೇಯಗಳಿಗಾಗಿ ಕೆಲಸ ಮಾಡುವವರ ನೇಮಕಗಳು, ನಾಮನಿರ್ದೇಶನಗಳು ಆಗಲೇಬೇಕಲ್ಲವೆ? ಕೋಮುವಾದಿಗಳ ಸೋಲಿಗಾಗಿ ತನ್ಮೂಲಕ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಇಡೀ ನಾಡಿನ ಜನಚಳವಳಿಗಳು, ಪ್ರಗತಿಪರ, ದಲಿತ, ಎಡಪಂಥೀಯ ಸಂಘಟನೆಗಳು ತಿಂಗಳುಗಟ್ಟಲೆ ಕೆಲಸ ಮಾಡಿದ್ದಾಗ ಅಧಿಕಾರದ ಹುದ್ದೆಗಳನ್ನು ಕೇವಲ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬಿಟ್ಟುಕೊಡಬೇಕು ಎಂಬುದು ಯಾವ ನ್ಯಾಯ? ಸ್ವಲ್ಪ ವಿವೇಕವಿದ್ದವರಿಗೂ ಅರ್ಥವಾಗುವ ವಿಷಯ ಇದು. 

ಈ ವಿಷಯ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವತ್ತೋ ಅರ್ಥವಾಗಿದೆ. ಸಮಾಜವನ್ನು ಕಾಂಗ್ರೆಸ್‌ ಮತ್ತು ಎಲ್ಲಾ ಮಾನವತೆ ಪರ ಪ್ರಗತಿಪರ ಶಕ್ತಿಗಳು ಜೊತೆಗೂಡಿ ನಡೆಸಬೇಕಾದ ಜವಾಬ್ದಾರಿ ಇದೆ ಎಂಬುದು ಅವರ ಚಿಂತನೆ ಕೂಡಾ ಹೌದು. ಅವರ ಕಚೇರಿ ಈ ವಿಷಯದಲ್ಲಿ ಬದ್ಧತೆ ಹೊಂದಿರುವುದನ್ನು ನಾವೆಲ್ಲ ಕಂಡಿದ್ದೇವೆ. ಇಂತಹ ವಿಷಯಗಳಲ್ಲಿ ಅತ್ಯಂತ ಬದ್ಧತೆ ಹೊಂದಿರುವ ಅಧಿಕಾರಿ ಡಾ. ನೆಲ್ಲಕುಂಟೆ ವೆಂಕಟೇಶಯ್ಯ   ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಗಳಾಗಿ ಸಿದ್ದರಾಮಯ್ಯನವರು ನೇಮಿಸಿಕೊಂಡಾಗಲೇ ಇಡೀ ನಾಡಿನ ಪ್ರಜ್ಞಾವಂತ ವಲಯ ಸಿದ್ದರಾಮಯ್ಯ ಅವರ ಕುರಿತು ಹೆಮ್ಮೆಪಟ್ಟುಕೊಂಡಿದೆ. ಇನ್ನು ಇಂತಹ ವಿಷಯದಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌  ಗಾಂಧಿಯವರು ಸಹ ಮಾದರಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಸದಸ್ಯರೇ ಅಲ್ಲದಿದ್ದ ಜಿಗ್ನೇಶ್‌ ಮೇವಾನಿಯವರ ಗೆಲುವಿಗೆ ತಮ್ಮ ಪಕ್ಷದ ಗೆಲ್ಲುವಂತಹ ಅಭ್ಯರ್ಥಿಯನ್ನೇ ಕಣದಿಂದ ಕೆಳಕ್ಕೆ ಇಳಿಸಿ ಗೆಲ್ಲಲು ಅವಕಾಶ ಮಾಡಿದ್ದರು. ಜಿಗ್ನೇಶ್‌ ಅವರನ್ನು ಗೆಲ್ಲಿಸಿದ್ದರು. ಇದಕ್ಕೂ ಹಿಂದೆ UPA -1ರ ಅವಧಿಯಲ್ಲಿ ಸೋನಿಯಾ ಗಾಂಧಿಯವರೇ ಪ್ರಗತಿಪರ ಚಿಂತಕರನ್ನು, ಬುದ್ದೀಜೀವಿಗಳನ್ನು ಒಳಗೊಂಡ ರಾಷ್ಟ್ರೀಯ ಸಲಹಾ ಸಮಿತಿಯನ್ನು ಅಧಿಕೃತವಾಗಿ ರಚಿಸಿಕೊಂಡು ಅವರುಗಳ ಸಲಹೆಗಳ ಮೇರೆಗೆ MGNAREGA, RTE, RTI, ಆಹಾರ ಭದ್ರತೆ ಕಾಯ್ದೆಯಂತಹ ಅತ್ಯಗತ್ಯ ಸುಧಾರಣೆಯ ಕಾರ್ಯಕ್ರಗಳನ್ನು ಮಾಡಿದ್ದರಲ್ಲವೇ? ಅಂದು ಆ ಸಮಿತಿಯಲ್ಲಿ ಅರುಣಾ ರಾಯ್‌, ಜೀನ್‌ ಡ್ರೀಜ್‌ ಅವರಂತಹ ಉತ್ಸದ್ದಿ ಪ್ರಗತಿಪರರ ಪಾತ್ರ ನಿರ್ಣಾಯಕವಾಗಿತ್ತು. ಇಂತಹ ಪ್ರಬುದ್ಧತೆ ಮತ್ತು ಬದ್ಧತೆಗಳು ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡರಲ್ಲೂ ಅಂತರ್ಗತವಾಗಬೇಕಿದೆ.

ಮೊನ್ನೆ, ಕೆ ಪಿ ಶ್ರೀಪಾಲ್‌ ನೇಮಕದ ಹಿನ್ನೆಲೆಯಲ್ಲಿ ಇಂತಹ ಒಂದು ಅಪಸ್ವರದ ಚರ್ಚೆ ಹುಟ್ಟಿಕೊಂಡಿದ್ದೇ ತಡ ಅದೇ ಕಾಂಗ್ರೆಸ್‌ ನಲ್ಲಿ ಯುವ ಮುಖಂಡರ ಒಂದು ಪಡೆಯೇ ಕೆ್ಪಿ ಶ್ರೀಪಾಲ್‌ ಅವರ ಬೆನ್ನಿಗೆ ನಿಂತಿದೆ. ಅದೇ ಪ್ರಗತಿಪರ ಚಳವಳಿಗಳ ಹಿನ್ನೆಲೆಯಿಂದಲೇ ಬಂದು ಇಂದು ಕಾಂಗ್ರೆಸ್‌ ಪಕ್ಷದ ಮುಖಂಡರಾಗಿರುವ ನಮ್ಮ ರಂಗನಾಥ್‌, ನಾಗರಾಜ್‌ ಕಂಕಾರಿ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಹಿಂದುಳಿದ ವರ್ಗಗಳ ಪಾಲಿನ ನೆಚ್ಚಿನ ನಾಯಕ ಶ್ರೀಕಾಂತ್‌ ಎಲ್ಲಾ ಜೊತೆಗೂಡಿ “ಚಳವಳಿಯ ಸಂಗಾತಿಗೆ ಅಭಿವಂದನೆ”‌ ಎಂಬ ದೊಡ್ಡ ಬ್ಯಾನರ್‌ ಹಾಕಿ ನೂರಾರು ಜನರನ್ನು ಸೇರಿಸಿ ಅಭಿನಂದನೆ ಕಾರ್ಯಕ್ರಮವನ್ನೂ ನಡೆಸಿದ್ದಾರೆ ಎಂಬಲ್ಲಿಗೆ ಎಲ್ಲವೂ ಸುಖಾಂತ್ಯವಾಗಿದೆ.

ಕೆಪಿಎಸ್‌ ತಮಗೆ ದೊರೆತ ಹುದ್ದೆ ಒಂದು ಕಿರೀಟ ಎಂದು ಭಾವಿಸುವ ಪೈಕಿಯಲ್ಲ, ಅದೊಂದು ಸಾಂವಿಧಾನಿಕ ಜವಾಬ್ದಾರಿ ಎಂದುಕೊಂಡು ತಮ್ಮ ಹುದ್ದೆಗೆ ನ್ಯಾಯ ಸಲ್ಲಿಸುತ್ತಾರೆ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ.

ಹಿರಿಯ ಮಿತ್ರರಾದ ಕೆ.ಪಿ.ಶ್ರೀಪಾಲ್‌ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು. ಈ ಸಿಂಡಿಕೇಟ್‌ ಸದಸ್ಯತ್ವದ ಕೆಲ ವರ್ಷಗಳ ಆಚೆಗೂ ಮುಂದಿನ ಹಲವಾರು ದಶಕಗಳ ಕಾಲ ದನಿ ಇಲ್ಲದವರಿಗೆ ದನಿಯಾಗಿ, ಶಾಂತಿ ಸೌಹಾರ್ದದ ಪ್ರತಿನಿಧಿಯಾಗಿ ಒಬ್ಬ ರಾಜಿರಹಿತ ಹೋರಾಟಗಾರರಾಗಿ ನೀವೊಬ್ಬ ಸಮಾಜದ ಆಸ್ತಿಯಾಗಿ ನಮ್ಮೊಂದಿಗೆ ಸದಾ ಇರುತ್ತೀರಿ ಎಂಬ ನಂಬುಗೆಯಿದೆ.

– ಹರ್ಷಕುಮಾರ್‌ ಕುಗ್ವೆ, ಸಾಮಾಜಿಕ ಹೋರಾಟಗಾರರು

Leave a Reply