ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ: ಎಚ್.ಡಿ.ಕುಮಾರಸ್ವಾಮಿ

3 years ago

#Corruption #happening #CM #Home #Office #Krishna #HDKumaraswamy

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ವೈ.ಎಸ್.ಟಿ. ತೆರಿಗೆ ಪದ್ಧತಿ ಜಾರಿಯಲ್ಲಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮತ್ತೊಂದು ವಿವಾದದ ಬಾಂಬ್ ಸಿಡಿಸಿದ್ದಾರೆ.

ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಆಪಾದಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸರ್ಕಾರದ ಅಧಿಕಾರಿಗಳ ವರ್ಗಾವಣೆಗೆ ಶಾಸಕರ ಶಿಫಾರಸ್ಸು ತಂದರೆ ಸಾಲದು. 30 ಲಕ್ಷ ರೂಪಾಯಿ ಹಣ ತನ್ನಿ ಎಂದು ಹೇಳುತ್ತಿರುವುದಾಗಿ ಆರೋಪಿಸಿದರು.

ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ವವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರ ಇಲಾಖಾವಾರು ವಿಸ್ತರಣೆ ಆಗುತ್ತಿದೆ. ಸಾರಿಗೆ ಹಾಗೂ ಕಂದಾಯ ಇಲಾಖೆಗಳ (ಸಬ್ ರಿಜಿಸ್ಟ್ರಾರ್) ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ದೂರಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್ ಸಿದ್ಧ ಮಾಡಿಕೊಟ್ಟಿರುವ ಪಟ್ಟಿಯ ಕಡತ ಇಲಾಖೆಯ ಆಯುಕ್ತರ ಮುಂದೆ ಸಹಿಗಾಗಿ ಕಾಯುತ್ತಾ ಬಿದ್ದಿದೆ. ಅವರು ಸಹಿ ಹಾಕುತ್ತಾರೋ ಅಥವಾ ಏನು ಮಾಡುತ್ತಾರೋ ಕಾದು ನೋಡಬೇಕಿದೆ ಎಂದರು.

ಕಾಸಿಲ್ಲದೆ ಪೋಸ್ಟ್ ಇಲ್ಲ ಎನ್ನುವುದನ್ನು ಈ ಸರಕಾರ ನೀತಿಯನ್ನಾಗಿ ಮಾಡಿಕೊಂಡಿದೆ. ಸದಾ ಮುಖ್ಯಮಂತ್ರಿ ಹಿಂದೆಮುಂದೆ ಹಾಗೂ ಸಿಎಂ ಕಚೇರಿ ಸುತ್ತಾಮುತ್ತಾ ಸದಾ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, ಬರೀ ಪತ್ರ ಬೇಡ. 30 ಲಕ್ಷ ರೂ. ಕೊಡಬೇಕು ಎಂದು ಹೇಳ್ತಾರಂತೆ ಸಿಎಂ ಕಚೇರಿಯಲ್ಲಿ ಇರುವ ಮಹಾಶಯರು. ಇದು ಈ ಸರಕಾರದ ಹಣೆಬರಹ ಎಂದು ಕಿಡಿ ಕಾರಿದರು.

ಇಂತಹ ಪ್ರವೃತ್ತಿಯಿಂದಾಗಿ, ಐಸಿಯು, ವೆಂಟಿಲೇಟರ್ ನಲ್ಲಿ ಸರ್ಕಾರ ನಡೆಯುವ ದಿನಗಳು ಬರಲಿವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಮುಂದಿನ ಐದು ವರ್ಷಗಳವರೆಗೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ರಾಜ್ಯಪಾಲರ ಭಾಷಣದಲ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಏನೇ ಮಾತಾಡಿದರೂ ವಿಷಯ ಇದ್ದರೆ ಮಾತ್ರ ಮಾತನಾಡುತ್ತೇನೆ, ಇಲ್ಲವಾದರೆ ಮೌನವಾಗಿ ಇರುತ್ತೇನೆ. ರಾಜ್ಯಪಾಲರ ಭಾಷಣದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಬಂದು ಒಂದು ತಿಂಗಳ ಮೇಲಾಯಿತು. ಇದುವರೆಗೆ ಲಂಚಾವತಾರದ ವಿರುದ್ಧ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.

Leave a Reply