ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?

4 hours ago

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಾನು ಮಾಡಬೇಕಿದ್ದ ಕೆಲಸ ಮಾಡಿದೆ. ಅದಾದ ಬಳಿಕ ಪ್ರಮುಖ ಪ್ರತಿಪಕ್ಷಗಳು, ಕಾಕ್ರೋಚ್ ಪಾರ್ಟಿಯ ಹುಡುಗರು ತಮ್ಮ ತಮ್ಮ ಹಾದಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಮತ್ತು ಚುನಾವಣಾ ಆಯೋಗದ (ECI) ಕಡೆಯಿಂದ ಕೆಳಮಟ್ಟದ ಅಧಿಕಾರಿಯೊಬ್ಬರು ಆಯೋಗದ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಕಾಂಗ್ರೆಸ್, ಕಳೆದ ಮೂರು ವರ್ಷಗಳಿಂದ ತಾನು ಎತ್ತುತ್ತಾ ಬರುತ್ತಿರುವ ಪ್ರಶ್ನೆಗಳು ಪ್ರಸ್ತುತವೆಂಬುದನ್ನು ಈ ಬೆಳವಣಿಗೆ ಸಾಬೀತು ಮಾಡಿದೆ. ರಾಹುಲ್ ಗಾಂಧಿ ಅದನ್ನು ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಆಗಿರುವ ತಪ್ಪಿಗೆ CEC ತಲೆದಂಡ ಆಗಬೇಕು ಎಂದವರು ಹೇಳಿದ್ದಾರೆ. ಜೆನ್ Z ಪ್ರತಿನಿಧಿಗಳು CEC ರಾಜೀನಾಮೆಗೆ 48ಗಂಟೆಗಳ ಗಡುವು ನೀಡಿದ್ದಾರೆ.

ಸೀಸರ್ ಪತ್ನಿ ಅನುಮಾನಗಳಿಗೆ ಎಡೆ ಇಲ್ಲದಂತಿರಬೇಕು (Caesar’s wife must be above suspicion) ಎಂಬ ಮಾತಿದೆ. ಚುನಾವಣಾ ಆಯೋಗದ ಮಟ್ಟಿಗೆ ಈಗ ಅಂತಹದೊಂದು ಪಾರದರ್ಶಕತೆ, ನಂಬಿಕೆಗೆ ಅರ್ಹತೆಯನ್ನು ಈ ಹಂತದಲ್ಲಿ ಸಾಬೀತುಪಡಿಸುವುದು ಎಂದರೆ, ಮೂವರು ಕಮಿಷನರ್‌ಗಳ SIR ಸಂಬಂಧಿ ಮೀಟಿಂಗ್ ಮಿನಿಟ್/ಪತ್ರವಿನಿಮಯಗಳ ಸಮಗ್ರ ಕಡತವನ್ನು ಸಾರ್ವಜನಿಕಗೊಳಿಸುವುದು. ದೂದ್ ಕಾದೂದ್-ಪಾನೀ ಕಾ ಪಾನೀ ಹೋಜಾಯೇಗಾ! ಆ ಕಡತಗಳಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ್ದು, ಮತದಾರ ಪ್ರಭುಗಳಿಗೆ ತೋರಿಸದಿರುವಂತಹದು ಏನಿದ್ದೀತು? ಅಲ್ವಾ!

ಒಂದು ವೇಳೆ ಜನರ ಗಮನಕ್ಕೆ ತರುವುದು ಸಾಧ್ಯ ಆಗದಿದ್ದರೆ, ಅವುಗಳನ್ನೆಲ್ಲ, ಅಧಿಕೃತವಾಗಿ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಗಳಿರುವ ಸಂಸತ್ತಿನಲ್ಲಾದರೂ ಮಂಡಿಸಲಿ. ಅದಕ್ಕಾಗಿ ಒಂದೆರಡು ದಿನದ ಸಂಸತ್ ವಿಶೇಷ ಅಧಿವೇಶನ ನಡೆಯಲಿ.

ಕಾನೂನಿನ ಪ್ರಕಾರವೇ ಈಗ ಮುಖ್ಯ ಚುನಾವಣಾ ಕಮಿಷನರ್ ಹುದ್ದೆಯನ್ನು ನ್ಯಾಯಾಂಗದ ಚೌಕಟ್ಟಿನಿಂದ ಹೊರಗಿರಿಸಲಾಗಿದ್ದರೆ, ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟಿನ ಕದ ತಟ್ಟಿ ಏನು ಪ್ರಯೋಜನ?! ಈ ಹಿಂದಿನ ಎಲ್ಲ “ನ್ಯಾಯಾಲಯದ ಕದ ತಟ್ಟಿದ” ಘಟನೆಗಳನ್ನು ಗಮನಿಸಿದರೆ, ಒಂದು ವಿಷಯ ಸ್ಪಷ್ಟ. ಸಾಂದರ್ಭಿಕ ಸಾಕ್ಷ್ಯಗಳೆಲ್ಲ ಇದ್ದೂ, ನಡೆದಿರುವ ಕಳ್ಳತನವನ್ನು ಕಾನೂನಿನ ಭಾಷೆಯಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ಕಳ್ಳತನ ಆಗಿದೆಯೇ ಎಂದರೆ ಹೌದೆಂದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಕಾನೂನಿಗೆ ಅರ್ಥ ಆಗುವಂತೆ ಅದನ್ನು ತಿಳಿಹೇಳುವುದು ಕಷ್ಟ. ಈ ಸಂವಿಧಾನ ಬಾಹಿರ ಕೃತ್ಯಗಳೆಲ್ಲ ಆಗುವುದು ಅದನ್ನೆಲ್ಲ ಅರೆದು ಕುಡಿದವರಿಂದಲೇ!

ಸಂಸತ್ತಿನಲ್ಲಿ CEC ಅವರ ಪದಚ್ಯುತಿ (impeachment) ಪ್ರಕ್ರಿಯೆ ಕೇವಲ ಟೋಕನ್ ನಾಟಕ ಆಗಲಿದೆ. ಆಳುವ ಪಕ್ಷದ ಬಳಿ “ನಂಬರ್”ಗಳಿವೆ. ಹಾಗಾಗಿ ಪದಚ್ಯುತಿ ನಿರ್ಣಯ ಅಲ್ಲಿ ಸ್ವೀಕಾರ ಆಗಲು “ಪವಾಡ” ಸಂಭವಿಸಬೇಕು.ಅಷ್ಟೇ.

ಈ ಎಲ್ಲ ಕಾರಣಗಳಿಗಾಗಿಯೇ ನಾನು ಯಾವಾಗಲೂ ಹಿರಣ್ಯಕಷಿಪು ಪಡೆದ ವರದ ಉದಾಹರಣೆ ನೀಡುವುದು. ಕಪ್ಪು-ಬಿಳಿ ನಡುವಣ ಗ್ರೇ ಏರಿಯಾಗಳಲ್ಲೇ ಇಂತಹ ಕಿತಾಪತಿಗಳನ್ನೆಲ್ಲ ಮಾಡಿ ಇಲ್ಲಿಯ ತನಕ ಅಧಿಕೄತವಾಗಿ ದಕ್ಕಿಸಿಕೊಳ್ಳುತ್ತಾ ಬರಲಾಗಿದೆ.  ಅದು EVM-VVPAT ಇರಬಹುದು,  ಎಲೆಕ್ಟೋರಲ್ ಬಾಂಡ್ ಇರಬಹುದು, ರಾಫೇಲ್ ವ್ಯಾಪಾರ ಇರಬಹುದು, PMCARES ಇರಬಹುದು, ಅದಾನಿ-ಹಿಂಡನ್‌ಬರ್ಗ್ ಆಪಾದನೆಗಳಿರಬಹುದು…. ಎಲ್ಲ ಕಡೆ ನ್ಯಾಯಾಲಯದ ನಿಲುವಿನ “ಮಾನವಸ್ತ್ರ” ಅಡ್ಡ ಹಿಡಿಯಲು ಮಾಧ್ಯಮಗಳಿಗೆ ಗುತ್ತಿಗೆ ನೀಡಿ, ಸನ್ನಿವೇಶವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲಾಗಿದೆ.

ಹಾಗಾಗಿ, ಈ ಬಾರಿಯೂ ಅದೇ ಹಾದಿಯಲ್ಲಿ ಸಾಗಿದರೆ, ಫಲಿತಾಂಶವೂ ಅದೇ ಇರಲಿದೆ ಎಂಬ ಎಚ್ಚರ ಅಗತ್ಯ. ಅಷ್ಟೇ ಅಲ್ಲ. CEC ರಾಜೀನಾಮೆ ಕೇಳಿ ಜೆನ್ Z ಹೋರಾಟಕ್ಕಿಳಿಯುವುದು, ಅವರ ಮೇಲೆ ದೇಶ ಭರವಸೆ ಇಡುವುದು ಯಾಕೋ ಈ ಸನ್ನಿವೇಶಕ್ಕೆ ಈ ಹಂತದಲ್ಲಿ ಅನಗತ್ಯ ಅನ್ನಿಸುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದೆಂಬ ಕರೆ ಕೂಡ ಈ ಹಂತದಲ್ಲಿ  ಆರಂಭದಲ್ಲೇ “ಹೈ ಡೋಸ್.” ಮಾತ್ರವಲ್ಲದೇ, ಈಗ ಅನಗತ್ಯ ಗದ್ದಲ ಎಬ್ಬಿಸಿ L&O ಸ್ಥಿತಿ ಉಂಟಾಗುವುದು, ಜಾರಿಕೊಳ್ಳಬಯಸುವವರಿಗೆ/ಸ್ಪಿನ್ ಡಾಕ್ಟರುಗಳಿಗೆ/ಗುಡ್ಡಕ್ಕೆ ಗುಡ್ಡ ಅಡ್ಡ ಇಡುವವರಿಗೆ ಅನುಕೂಲಕರ ಆಗಿ ಪರಿಣಮಿಸಬಹುದು.

ಪ್ರತಿಪಕ್ಷಗಳು ತಮ್ಮ ಅನುಭವಗಳಿಂದ ಕಲಿತು, ಸಂವಿಧಾನದ ಚೌಕಟ್ಟಿನೊಳಗೇ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುವುದು ಅಗತ್ಯವಿದೆ.

– ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು

Leave a Reply