ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸಂಪರ್ಕದ ಅವಧಿ ನಾಮಫಲಕ ತೋರಿಕೆಗೆ ಸೀಮಿತವೇ?

11 months ago

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸಂಪರ್ಕದ ಅವಧಿಯ ನಾಮಫಲಕ ಕೇವಲ ತೋರಿಕೆಗಾಗಿ ಇದೆ.  ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳನ್ನ ಭೇಟಿ ಮಾಡಲು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ಮಧ್ಯಾಹ್ನ 3:00 ಯಿಂದ 5:00 ವರೆಗೆ ಸಮಯವನ್ನು ನೀಗದಿ ಪಡಿಸಿ ಇದನ್ನು ಸಾರ್ವಜನಿಕ ಸಂಪರ್ಕದ ಅವಧಿ ಎಂದು ನಾಮಫಲಕಗಳನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂದವಾಗಿ ಬಳಸಿ ಹಾಕಿದ್ದಾರೆ.

ಆದರೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ದೊರೆಯುವುದಿಲ್ಲ. ಕಚೇರಿಯಲ್ಲಿದ್ದರೆ ಸಭೆಯಲ್ಲಿದ್ದಾರೆ ಎಂದು ಸಾರ್ವಜನಿಕರನ್ನು ಕಾಯಿಸುತ್ತಾರೆ. ಕೆಲವು ಅಧಿಕಾರಿಗಳು ತಮ್ಮ ಹತ್ತಿರದ ಬಂಧುಗಳು ಮತ್ತು ಆತ್ಮೀಯರು ಬಂದರೆ ಅವರೊಂದಿಗೆ ಹರಟುತ್ತಾ ಸಾರ್ವಜನಿಕರನ್ನ ಕಾಯಿಸುತ್ತಾರೆ.

ಮತ್ತಷ್ಟು ಅಧಿಕಾರಿಗಳು ಈ ಸಮಯದಲ್ಲಿ ವಿಧಾನಸೌಧದಲ್ಲಿ ಇಲ್ಲವೇ ತಮ್ಮ ಇಲಾಖೆಯಲ್ಲಿ ಇರುವಂತಹ ಸಭೆಗಳಿಗೆ ಹೋಗಿದ್ದಾರೆ ಎಂದು ಅವರ ಆಪ್ತರು ಕಾರಣ ಹೇಳುತ್ತಾರೆ. ಒಟ್ಟಾರೆಯಾಗಿ ಸಾರ್ವಜನಿಕರಿಗೆ ನೂರಕ್ಕೆ 50ರಷ್ಟು ಅಧಿಕಾರಿಗಳು ಸಹ ಮೂರು ಗಂಟೆಯಿಂದ 5 ಗಂಟೆ ಅವಧಿಯಲ್ಲಿ ದೊರೆಯುವುದಿಲ್ಲ.

ಬಹಳಷ್ಟು ಇಲಾಖೆಯಲ್ಲಿ ಅಧಿಕಾರಿಗಳು ತುಂಬಾ ದರ್ಪದಿಂದ ಸಾಮಾನ್ಯ ಜನರು ಭೇಟಿ ಮಾಡಲು ಚೀಟಿಯನ್ನ ಕಳಿಸಿದರೆ ಅದನ್ನು ಕಸದ ಡಬ್ಬಕ್ಕೆ ಹಾಕುತ್ತಾರೆ. ಅವರ ಆಪ್ತರು ನಿಮ್ಮ ಅರ್ಜಿ ಇದ್ದರೆ ನಮ್ಮ ಕೈಗೆ ಕೊಡಿ ಸಾಹೇಬರು ಬ್ಯುಸಿ ಇದ್ದಾರೆ ಎಂದು ಸಾರ್ವಜನಿಕರ ಬಗ್ಗೆ ಅಸಡ್ಡೆಯಿಂದ ನಡೆದುಕೊಳ್ಳುತ್ತಾರೆ. ಬಹಳಷ್ಟು ಅಧಿಕಾರಿಗಳಿಗೆ ಬರುವ ಜನರನ್ನ ಚೇರ್ ಗಳಲ್ಲಿ ಮೇಲೆ ಕೂಡಿಸಿ ಮಾತನಾಡಬೇಕು ಎನ್ನುವ ಸೌಜನ್ಯವೂ ಇಲ್ಲ, ಅವರನ್ನು ಬೇಡಲು ಬಂದವರು ಎನ್ನುವ ರೀತಿಯಲ್ಲಿ ರೀತಿಯಲ್ಲಿ ಕಾಣುತ್ತಾರೆ.

ಹಲವಾರು ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಿಗೆ ಸಾರ್ವಜನಿಕರನ್ನು ಭೇಟಿ ಮಾಡುವುದು ಎಂದರೆ ಏನೋ ಒಂದು ರೀತಿಯ ಮುಜುಗರ ಆದಷ್ಟು ಇದನ್ನು ತಪ್ಪಿಸಿಕೊಳ್ಳುತ್ತಾರೆ. ಹಲವಾರು ಗಂಟೆಗಳ ಕಾಲ ಸಾರ್ವಜನಿಕರನ್ನ ಕಾಯಿಸಿ ತಮ್ಮ ಚೇಂಬರಿಂದ ಹೊರಬಂದ ಸಂದರ್ಭದಲ್ಲಿ ಸಾರ್ವಜನಿಕರು ಅರ್ಜಿಗಳನ್ನು ಕೊಡಲು ಬಂದರೆ ಅವರ ಅಂಗರಕ್ಷಕರು ಮತ್ತು ಅವರ ಆಪ್ತರು ಜನರನ್ನು ಪ್ರಾಣಿಗಳಂತೆ ಕಾಣುತ್ತಾರೆ. ಅಧಿಕಾರಿಗಳು ಸಹ ಜನರ ಕಡೆ ತಿರುಗಿ ನೋಡದೆ ಮುಂದೆ ಸಾಗುತ್ತಾರೆ. ಇವರೆಲ್ಲರೂ ದೇವಲೋಕದಿಂದ ಬಂದವರ ರೀತಿಯಲ್ಲಿ ವರ್ತಿಸುತ್ತಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ಭೇಟಿಯ ಅವಧಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆದೇಶ ನೀಡಬೇಕು ಜೊತೆಗೆ ಸಾರ್ವಜನಿಕರ ಸಂಪರ್ಕದ ಸಮಯದಲ್ಲಿ ಯಾವುದೇ ಸಭೆಗಳನ್ನು ಕಚೇರಿಗಳಲ್ಲಿ ನಡೆಸಬೇಡಿ. ಬೆಳಗ್ಗೆ ಹೊತ್ತು ನೀವು ಸಭೆಗಳನ್ನು ಮಾಡಲು ಸಮಯವಿರುತ್ತದೆ. ಬಹಳಷ್ಟು ನಾಗರೀಕರ ಸಮಸ್ಯೆಗಳು ಕೇಳುವವರಿಲ್ಲದೆ ಕಚೇರಿಗಳಲ್ಲಿ ಧೂಳು ಹಿಡಿದು ಕುಳಿತಿದೆ. ಇನ್ನು ಬಹಳಷ್ಟು ಅಧಿಕಾರಿಗಳು ಬಹಳ ಉದಾಸೀನ ಮತ್ತು ಅಸಡ್ಡೆಯಿಂದ ಜನರನ್ನು ನಡೆಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸರಿಯಾದಂತಹ ಕ್ರಮವನ್ನು ಕೈಗೊಳ್ಳದಿದ್ದರೆ ಸಾರ್ವಜನಿಕರ ಸಂಪರ್ಕದ ಅವಧಿಯ ನಾಮಫಲಕಗಳು ಕೇವಲ ಪ್ರದರ್ಶನಕ್ಕೆ ಎಂಬ ಅಭಿಪ್ರಾಯ ಸಾರ್ವಜನಿಕರದಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply