ದ್ವೇಷರಹಿತ ರಾಜಕಾರಣದ ಪ್ರತೀಕ ಜೆ ಹೆಚ್ ಪಟೇಲ್

2 days ago

ಇಂದು ಪರಸ್ಪರ ದ್ವೇಷದ ಮಾತುಗಳು, ಅಸೂಯೆಯ ನಡವಳಿಕೆಗಳು ತುಂಬಿರುವಂತಹ ಕರ್ನಾಟಕದ ರಾಜಕಾರಣದ ಸಂದರ್ಭದಲ್ಲಿ, ದ್ವೇಷ ರಹಿತವಾದ, ಯಾವುದೇ ಅಸೂಯೆ ಇಲ್ಲದ, ಮಾನವೀಯ ನೆಲೆಯಲ್ಲಿ ರಾಜಕಾರಣವನ್ನು ಮಾಡಿದಂತಹ ಜೆ ಎಚ್ ಪಟೇಲ್ ವಿಭಿನ್ನವಾಗಿ ಕಾಣುತ್ತಾರೆ.

ರಾಜಕಾರಣ ಎಂದರೆ ಪರಸ್ಪರ ಬೈದಾಡುವುದು ಮತ್ತು ಲಘುವಾದ ಮಾತುಗಳಲ್ಲಿ ಟೀಕಿಸುವುದು, ವೈಯಕ್ತಿಕ ನೆಲೆಯಲ್ಲಿ ನಿಂದಿಸುವುದು ಇದರಿಂದಲೇ ನಾಯಕತ್ವ ರೂಪಗೊಳ್ಳುತ್ತದೆ ಎನ್ನುವಂತಹ ಭ್ರಮೆಯಲ್ಲಿ ದೇಶದ ರಾಜಕಾರಣ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣದಲ್ಲಿ ದ್ವೇಷರಹಿತವಾಗಿ, ಅಸೂಯೆ ಇಲ್ಲದೆ, ಸೈದ್ಧಾಂತಿಕ ಭಿನ್ನಾಭಿಪ್ರಾಯದ ನಡುವೆಯೂ ಸ್ನೇಹ ಮತ್ತು ವಿಶ್ವಾಸಕ್ಕೆ ಭಂಗ ಬಾರದ ರೀತಿಯಲ್ಲಿ  ಬದುಕಬಹುದು ಎನ್ನುವುದನ್ನು ಜೆ ಹೆಚ್ ಪಟೇಲ್ ತೋರಿಸಿಕೊಟ್ಟಿದ್ದರು.

ಲೋಕಸಭೆಯಲ್ಲಿ 1967ರಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ ಲೋಕಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವವನ್ನು ತೋರಿಸಿಕೊಟ್ಟವರು ಜೆ ಹೆಚ್ ಪಟೇಲ್. ಇವರಿಗೆ ಬೆಂಬಲವಾಗಿ ನಿಂತವರು ಡಾ. ರಾಮ್ ಮನೋಹರ್ ಲೋಹಿಯಾ. ಈ ಕಾರಣದಿಂದಾಗಿ ಇಂದು ದೇಶದಲ್ಲಿ ಲೋಕಸಭೆ, ರಾಜ್ಯಸಭೆಯಲ್ಲಿ ಕನ್ನಡ ಭಾಷೆಯಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಪ್ರತಿನಿಧಿಗಳು ಯಾವುದೇ ಅಂಜಿಕೆ ಮತ್ತು ಹಿಂಜರಿಕೆ ಇಲ್ಲದೆ ಮಾತನಾಡುವಂತಹ ಶಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ.

ತಜ್ಞರನ್ನು ಒಳಗೊಂಡ ಸಮಿತಿಯ ವರದಿಯಂತೆ ಕರ್ನಾಟಕದಲ್ಲಿ ಹೊಸದಾಗಿ 7 ಜಿಲ್ಲೆಗಳನ್ನು ಘೋಷಿಸಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಉಡುಪಿ, ಹಾವೇರಿ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಗದಗ, ಚಾಮರಾಜನಗರ. ಇದರಿಂದ ಆಡಳಿತತ್ಮಕವಾಗಿ ಬಹಳಷ್ಟು ಪ್ರಗತಿಯಾಗಲು ಸಾಧ್ಯವಾಯಿತು. ತದನಂತರ ಚಿಕ್ಕಬಳ್ಳಾಪುರ, ವಿಜಯನಗರ, ರಾಮನಗರ, ಯಾದಗಿರಿ ಜಿಲ್ಲೆಗಳು ಸಹ ರಚನೆಯಾಗಿವೆ. ರಾಮನಗರ ಜಿಲ್ಲೆ ಈಗ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಾಗಿದೆ.

ಸದನದಲ್ಲಿ ಕೇವಲ ಅಬ್ಬರದ, ಆರ್ಭಟದ ಮಾತುಗಳಿಗೆ ಅವಕಾಶ ನೀಡದೆ, ವಿಚಾರಪೂರಿತವಾದ ಮತ್ತು ಸಾಂದರ್ಭಿಕವಾದ ಮಾತುಗಳ ಮೂಲಕ ಸದನದ ಗಾಂಭೀರ್ಯವನ್ನು ಹೆಚ್ಚಿಸಿರುತ್ತಾರೆ. ಜೊತೆಗೆ ಒಬ್ಬ ಸಂಸದೀಯ ಪಟು ಯಾವ ರೀತಿಯಲ್ಲಿ ಸಾಧನದಲ್ಲಿ ವ್ಯಂಗ್ಯ, ಹರಿತವಾದ ಮಾತು, ಇತಿಹಾಸದ ಘಟನೆಗಳನ್ನು ಸಮೀಕರಿಸಿ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪಟೇಲರ ಮಾತಿನಲ್ಲಿ ಹಾಸ್ಯ ಜೊತೆಗೆ ಗಂಭೀರತೆ ಇರುತ್ತಿತ್ತು. ಅವರಷ್ಟು ಪುಸ್ತಕಗಳನ್ನ ಓದಿದಂತಹ ಮುಖ್ಯಮಂತ್ರಿ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಜಗತ್ತಿನ ಎಲ್ಲ ವಿಚಾರಗಳನ್ನು ಮಹತ್ತರ ಬದಲಾವಣೆಗಳನ್ನು ತಿಳಿಸಿದಂತಹ ಇವರು ಸರಳವಾದ ಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಮಹತ್ತರವಾದ ವಿಚಾರಗಳನ್ನು ತಿಳಿಸಿಕೊಡುತ್ತಿದ್ದರು.

ಸಹಾಯ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಪಕ್ಷಪಾತ ಅಥವಾ ಪಕ್ಷದ ವಿಚಾರಗಳಿಗೆ ಸೀಮಿತವಾಗುತ್ತಿರಲಿಲ್ಲ. ಪಕ್ಷಕ್ಕಿಂತ ಸ್ನೇಹ ಮತ್ತು ವಿಶ್ವಾಸ ಮೊದಲ ಆದ್ಯತೆ ಇವರದಾಗಿತ್ತು.

ಬಾಗಲಕೋಟೆ ಮುಳುಗಡೆ ಪ್ರದೇಶದ ಜನರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಜನರ ಪರಿಸ್ಥಿತಿಯನ್ನ ವಿವರಿಸಿ  ಪರಿಹಾರದ ಮೊತ್ತವನ್ನು ಹೆಚ್ಚು ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.

ಕೂಡಲಸಂಗಮದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನೇ ರಚಿಸಿ, ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿ ಬಸವಣ್ಣನವರ ಕಲ್ಯಾಣದ ಕ್ರಾಂತಿಯ ಮಹತ್ವವನ್ನು ಅದ್ಭುತವಾದ ಕಟ್ಟಡಗಳ ಮೂಲಕ ನಾಡಿಗೆ ಅರ್ಪಿಸಿದ್ದಾರೆ. ನೇರವಾದ ಮಾತುಗಾರಿಕೆ, ನಾಟಕೀಯ ನಡವಳಿಕೆಗೆ ಅವಕಾಶವೇ ಇಲ್ಲ, ಇವರಷ್ಟು ಪ್ರಾಮಾಣಿಕವಾಗಿ ತಮ್ಮನ್ನು ತಾವು ಜನರ ಮುಂದೆ ತೆರೆದುಕೊಂಡವರು ಯಾರು ಇಲ್ಲ.

ಪಟೇಲರ ವಿಚಾರದಲ್ಲಿ ಕೆಲವು ಮಾಧ್ಯಮಗಳು ಮತ್ತು ರಾಜಕಾರಣದ ವಿಚಾರಗಳ ಕೊರತೆ ಇರುವವರು ನಕಾರಾತ್ಮಕವಾಗಿ ಅವರ ವ್ಯಕ್ತಿತ್ವವನ್ನು ಬಿಂಬಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ನಿಜಕ್ಕೂ ಪಟೇಲರ ವ್ಯಕ್ತಿತ್ವ ಬಹಳ ದೊಡ್ಡದು. ಅವರ ಹೋರಾಟದ ಹಿನ್ನೆಲೆ ಬಹಳ ಹಿರಿದು. ಉಳುವವನಿಗೆ ಭೂಮಿ ಎಂಬ ಹೋರಾಟದ ಮೂಲಕವೇ ಸಾರ್ವಜನಿಕ ಬದುಕಿಗೆ ಬಂದು, ಲೋಹಿಯಾರವರ ಮಾರ್ಗದರ್ಶನದಲ್ಲಿ ರಾಜಕಾರಣವನ್ನು ಮಾಡುತ್ತ, ಹೋರಾಟದ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಆಸ್ತಿಯನ್ನು ಕಳೆದುಕೊಂಡಂತಹ ವಿಶೇಷವಾದ ವ್ಯಕ್ತಿತ್ವ ಇವರದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನ ಅನುಭವಿಸಿ ತಮ್ಮ ರಾಜಕೀಯ ಬದ್ಧತೆಯನ್ನು ಮೆರೆದಿರುತ್ತಾರೆ.

ಕಾರ್ಯಕರ್ತರಿಗೆ ಯಾವುದಾದರೂ ಒಂದು ಸರಕಾರದಲ್ಲಿ ಸಹಸ್ರಾರು ಮಂದಿಗೆ ಅಧಿಕಾರ ಎನ್ನುವುದು ದೊರೆತಿದ್ದರೆ ಅದು ಜೆ ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಲ್ ಶಂಕರ್ ಪಕ್ಷದ ಅಧ್ಯಕ್ಷರಾಗಿದ್ದ ಆ ದಿನಗಳಲ್ಲಿ.

ಜೆ ಹೆಚ್ ಪಟೇಲ್ ಲೋಕಸಭಾ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ, ವಿದ್ಯುತ್ ಸಚಿವರಾಗಿ ಜೊತೆಗೆ  ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ನಾಡಿನ ರಾಜಕಾರಣದಲ್ಲಿ ಹಲವಾರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರು ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಗತ್ತಿನ ಗಮನವನ್ನು ಸೆಳೆಯವಲ್ಲಿ ಜೆ ಹೆಚ್ ಪಟೇಲ್ ರವರ ಕೊಡುಗೆಯೂ ಇದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ಕುಟುಂಬ ರಾಜಕಾರಣದ ವಿರುದ್ಧವಿದ್ದ ಇವರು, ತಮ್ಮ ಬದುಕಿನ ಅಂತ್ಯದ ತನಕ ತಮ್ಮ ಕುಟುಂಬದ ಸದಸ್ಯರನ್ನ ರಾಜಕಾರಣದ ವ್ಯವಸ್ಥೆಯಿಂದ ದೂರವೇ ಇಟ್ಟಿದ್ದರು. ಮಹಿಮಾ ಪಟೇಲರು ಜೆ ಹೆಚ್ ಪಟೇಲರ ನಿಧನದ ನಂತರವೇ ಶಾಸಕರಾದದ್ದು.ಜೆ ಎಚ್ ಪಟೇಲರನ್ನು ನೆನಪು ಮಾಡಿಕೊಳ್ಳುವುದು ಎಂದರೆ ದ್ವೇಷವಿಲ್ಲದ ರಾಜಕಾರಣವನ್ನು ನೆನಪು ಮಾಡಿಕೊಂಡಂತೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply