ಗೆಳೆಯ ಕೋಟಿಗಾನಹಳ್ಳಿ ರಾಮಯ್ಯನವರನ್ನು ನೋಡಲು ನಮ್ಮೂರಿನ ಆಸ್ಪತ್ರೆಗೆ ಹೋಗಿದ್ದೆವು. ವೇಣು ಹೆಣ್ಣೂರು, ಮಂಜು ಅಮೃತಹಳ್ಳಿ, ಜಗದೀಶ್ ಜಾಲ, ತಾಯ್ ಲೋಕೇಶ್, ಹುಲಿಯ ನನ್ನೊಂದಿಗೆ ಬಂದಿದ್ದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ರಾಮಯ್ಯನವರನ್ನು ಆ ಸ್ಥಿತಿಯಲ್ಲಿ ನೋಡಲು ತುಂಬಾ ವೇದನೆಯಾಯಿತು. ಹಾಸಿಗೆ ಮೇಲೆ ಕುಂತ ರಾಮಯ್ಯ ನನ್ನನ್ನೂ ಹಾಸಿಗೆಯ ಮೇಲೆ ಕೂರಿಸಿಕೊಂಡು ಬಹಳ ಕಾಲ ನನ್ನ ಕೈ ಹಿಡಿದೇ ಇದ್ದರು. ನಮ್ಮ ಅರ್ಧ ದಶಕದ (1974 – 2024) ಸ್ನೇಹ, ಪ್ರೀತಿ, ಜಗಳ, ಕೋಲಾರದ ದಲಿತ ಚಳುವಳಿಯ ನೆನಪುಗಳು, ಬರಹಗಳು, ‘ಲಂಕೇಶ್ ಪತ್ರಿಕೆ’ಯ ಸಂಬಂಧಗಳು ಮುಂತಾಗಿ ಅನೇಕ ನೆನಪುಗಳು ಒತ್ತರಿಸಿ ಬಂದವು. ಕಣ್ಣು ತುಂಬಿ ಬಂತು…
ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ “ಮೈಕ್ ಹಾಕಿದ್ದಕ್ಕೆ ಜಗಳ”, “ಒಂದು ಕಣ್ಣಿಗೆ ಸಣ್ಣ ಗಾಯವಾಗಿದೆಯಷ್ಟೇ” “ಅದೊಂದು ಆಕಸ್ಮಿಕ ಘಟನೆ” ಮುಂತಾಗಿ ಬರೆದದ್ದನ್ನೆಲ್ಲಾ ಓದಿ, ನಾನೂ ಕೂಡ “ಇದೊಂದು ಆಕಸ್ಮಿಕ ಜಗಳ” ಎಂದೇ ಸಹಜವಾಗಿ ಯೋಚಿಸಿಕೊಂಡು ಹೋಗಿದ್ದೆ. ರಾಮಯ್ಯನವರಿಗೆ ಒಂದು ಕಣ್ಣು ತೆಗೆಯಲಿಕ್ಕೇ ಆಗುತ್ತಿಲ್ಲ! ತೀರ ಊದಿದೆ! ಎದೆಗೆ ಬಿದ್ದ ಬಲವಾದ ಏಟುಗಳಿಂದಾಗಿ “internal bleeding ಆಗುತ್ತಿದೆ” ಎಂದು ವೈದ್ಯರು ಹೇಳುತಿದ್ದಾರೆ!! ರಾಮಯ್ಯ ಮಾನಸಿಕವಾಗಿಯೂ ತೀರಾ ನೊಂದಂತೆ ಕಾಣುತಿದ್ದಾರೆ “ನಾವು ಐವತ್ತು ವರ್ಷ ಚಳುವಳಿ ಕಟ್ಟಿದ್ದಕ್ಕೆ ನಮಗಿದು ಶಿಕ್ಷೆ ದ್ವಾರಿ.. ನಾವೆಲ್ಲ ಇಷ್ಟು ವರ್ಷ ಇಂತಹ ಪರಿಸರದಲ್ಲಿ ಬದುಕಿರುವುದೇ ಆಶ್ಚರ್ಯ..” ಎಂದು ರಾಮಯ್ಯ ನೋವಿನಿಂದ ನಕ್ಕಾಗ ಅಪಾರ ಸಂಕಟವಾಯಿತು. “ಮೇಘವರ್ಷನ ಕಾಲು fracture ಆಗಿದೆ ದ್ವಾರಿ.. ಡಾ.ನರೇಂದ್ರ ಬಳಿ ಹೋಗಿದಾನೆ..” ಎಂದು ಹೇಳುತ್ತಾ ಕಣ್ಣೀರು ಕಾಣಬಾರದೆಂದೇನೋ ಕಿಟಕಿ ಕಡೆ ಮುಖ ಮಾಡಿದರು.

ಎಲ್ಲರೂ ಮೇಲ್ನೋಟಕ್ಕೆ ಕಂಡುಕೊಂಡಂತೆ ಇದು ಮೈಕ್ ಹಾಕಿದ್ದಕ್ಕೆ ಆದ ಆಕಸ್ಮಿಕ ಜಗಳವಲ್ಲ. ಆದಿಮ ಕಟ್ಟಿದ ಮೇಲೆ ನಿಧಾನವಾಗಿ ಜನಕ್ಕೆ ಬೆಟ್ಟದ ಮೇಲೆ ಕಣ್ಣು ಬಿತ್ತು, ಬೆಟ್ಟದ ಮೇಲಿನ ರೈತರ ಎಲ್ಲಾ ಜಮೀನನ್ನು ರಿಯಲ್ ಎಸ್ಟೇಟ್ ಮಾಫಿಯಾಗಳು, ರೆಸಾರ್ಟ್ ವ್ಯಾಪಾರಿಗಳು ಆಕ್ರಮಿಸಿಕೊಳ್ಳತೊಡಗಿದರು. ಮೊದಲಿನಿಂದಲೂ ಬೆಟ್ಟದ ಪರಿಸರವನ್ನು, ಅಲ್ಲಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಬೇಕೆಂಬ ಅಪ್ಪಟ ಕಾಳಜಿ ರಾಮಯ್ಯನವರದು. ಸಹಜವಾಗಿಯೇ ರಾಮಯ್ಯ ರಿಯಲ್ ಎಸ್ಟೇಟ್ ನವರಿಗೆ ಪ್ರತಿರೋಧ ತೋರತೊಡಗಿದರು. ಈ ಕಾರಣಕ್ಕೆ ರಿಯಲ್ ಎಸ್ಟೇಟ್ ಮತ್ತು ರೆಸಾರ್ಟ್ ನವರಿಗೆ ರಾಮಯ್ಯ ದೊಡ್ಡ ‘ವಿಲನ್’ ಆಗಿ ಕಾಣತೊಡಗಿದರು! ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ರಾಮಯ್ಯ ದೊಡ್ಡ ತೊಡಕಾದರು, ಈ ಸಂಘರ್ಷ ದಿನದಿನಕ್ಕೂ ಹೆಚ್ಚಾಯಿತು. ಅದು ಮೈಕ್ ನೆಪದಲ್ಲಿ ರಾಮಯ್ಯನವರನ್ನು ಸದೆಬಡೆಯಲು ಕಾರಣವಾಯಿತು. ಈಗ ರಾಮಯ್ಯನವರ ಮೇಲೆ ಹಲ್ಲೆ ಮಾಡಿದವರು ರಿಯಲ್ ಎಸ್ಟೇಟ್ ಮಾಫಿಯಾಗಳ ಸ್ಥಳೀಯ ಸಹಾಯಕರು ಅಥವಾ ಬ್ರೋಕರ್ ಗಳು.
ಇಷ್ಟೆಲ್ಲಾ ಆದ ಮೇಲೂ ರಾಮಯ್ಯ ನೈತಿಕವಾಗಿ ಗಟ್ಟಿಯಾಗಿದ್ದಾರೆ. ನನಗೆ ಈ ಹಿನ್ನೆಲೆಯನ್ನು ಹೇಳಿದ ನಂತರ “ಮೇಲುಕೋಟೆಯಲ್ಲಿ ಹದಿನೈದು ನಾಟಕ ಬರೆದೆ.. ಇಲ್ಲಿ ಬಂದು ಐದು ನಾಟಕ ಬರೆಯಲು ಪ್ರಾರಂಬಿಸುತ್ತಿದ್ದೆ.. ಅಷ್ಟರಲ್ಲಿ ಹೀಗಾಯಿತು..” ಎನ್ನುತ್ತಾ ಮಕ್ಕಳ ನಾಟಕ ತರಬೇತಿ ಮುಂತಾಗಿ ಎಂದಿನಂತೆ ಮಾತಿಗೆ ಹೊರಳಿದರು.
ಇಂತದ್ದಕ್ಕೆಲ್ಲ ರಾಮಯ್ಯ ಸೋಲುವುದಿಲ್ಲ ಎಂಬುದು ಐದು ದಶಕಗಳಿಂದ ರಾಮಯ್ಯ ನವರ ಒಡನಾಡಿಯಾಗಿ ನನಗೆ ಗೊತ್ತು. ಆದರೆ ನಾವೆಲ್ಲ ರಾಮಯ್ಯನವರೊಂದಿಗೆ ಅಷ್ಟೇ ಗಟ್ಟಿಯಾಗಿ ನಿಲ್ಲಬೇಕಷ್ಟೆ…
- ಸಿ.ಎಸ್.ದ್ವಾರಕಾನಾಥ್, ಹಿರಿಯ ವಕೀಲರು




