ವಿ ಎಸ್ ಕೃಷ್ಣ ಅಯ್ಯರ್ ಆತ್ಮಕ್ಕೆ ಹುಟ್ಟಿದ ದಿನವೇ ನೋವಿನ ಸಂಗತಿ!

1 year ago

ಕೆಲವರ ಹೆಸರು ದೊಡ್ಡ ದೊಡ್ಡ ಮಹಲುಗಳ ಮೇಲಿರುತ್ತದೆ, ಬಂಗಲೆಗಳ ಮೇಲಿರುತ್ತದೆ, ವಾಣಿಜ್ಯ ಮಳಿಗೆಗಳ ಮಾಲಿಕತ್ವದಲ್ಲಿರುತ್ತದೆ. ಆದರೆ ಇವರ ಹೆಸರು ಸರ್ಕಾರಿ ಆಸ್ಪತ್ರೆಗಳ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ನಾಮ ಫಲಕಗಳಲ್ಲಿ ಮಾತ್ರ ಕಾಣುತ್ತದೆ. ಈ ರೀತಿಯಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಆರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ರಾಜಕೀಯ ನಾಯಕರಾಗಿಯೂ ಸಮಾಜ ಸೇವೆಯ ಮೂಲಕವೇ ತಮ್ಮನ್ನ ಹೆಚ್ಚು ಗುರುತಿಸಿಕೊಂಡಿದ್ದ ವಿ ಎಸ್ ಕೃಷ್ಣ ಅಯ್ಯರ್ ರವರ ಹುಟ್ಟುಹಬ್ಬ ಜನವರಿ 6.

17ನೇ ವಯಸ್ಸಿನಲ್ಲಿಯೇ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿ ಅಪಾರವಾದಂತಹ ಕಷ್ಟವನ್ನು ಅನುಭವಿಸಿ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ಗಾಂಧೀಜಿಯವರನ್ನು ಕಂಡ ವ್ಯಕ್ತಿ ಇವರಾಗಿರುತ್ತಾರೆ.

ಬೆಂಗಳೂರು ನಗರದ ವಿಚಾರದಲ್ಲಿ ಯಾರಿಗಾದರೂ ಅಧಿಕೃತವಾಗಿ, ಅಧಿಕಾರಯುತವಾಗಿ ಮಾತನಾಡುವಂತಹ ಶಕ್ತಿ ಇದ್ದಿದ್ದರೆ ಅದು ವಿ ಎಸ್ ಕೃಷ್ಣಯ್ಯ ಅಯ್ಯರ್, ಟಿ ಆರ್ ಶಾಮಣ್ಣ ಮತ್ತು ಜಿ ನಾರಾಯಣ್ ರವರಿಗೆ ಮಾತ್ರ. ಈ ರೀತಿಯಲ್ಲಿ ಇವರು ನಗರದ ಜನರ ಬದುಕಿನ ಬಗ್ಗೆ ಕಾಳಜಿಯನ್ನ ವಹಿಸಿದ್ದರು.

ನಗರ ಪಾಲಿಕೆ ಸದಸ್ಯರಾಗಿ, ಮಹಾಪೌರರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಲೋಕಸಭಾ ಸದಸ್ಯರಾಗಿ, ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿ, ಹೆಗಡೆ ರವರ ಸಂಪುಟದಲ್ಲಿ ಸಚಿವರಾಗಿ ಹಲವಾರು ದಶಕಗಳ ಕಾಲ ರಾಜಕಾರಣದ ಅಧಿಕಾರದ ಭಾಗದಲ್ಲಿದ್ದರು ಕೊಳಕು ಅಂಟಿಸಿಕೊಳ್ಳದೆ ಶುಭ್ರವಾದ ಬಟ್ಟೆಯನ್ನ ಧರಿಸುತ್ತಿದ್ದ ರೀತಿಯಲ್ಲಿಯೇ, ವ್ಯಕ್ತಿತ್ವವನ್ನು ಶುಭ್ರವಾಗಿ ಇಟ್ಟುಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು ವಿ ಎಸ್ ಕೃಷ್ಣ ಅಯ್ಯರ್ ರವರು.

ಒಬ್ಬ ಸಾರ್ವಜನಿಕ ಪ್ರತಿನಿಧಿ ಯಾವ ರೀತಿಯಲ್ಲಿ ಜಾತ್ಯತೀತವಾಗಿ ಪ್ರಾಮಾಣಿಕವಾಗಿ ಸರಳವಾಗಿ ಸೌಜನ್ಯದಿಂದ ಸಜ್ಜನಿಕೆಯಿಂದ ದ್ವೇಷರಹಿತವಾದ ಬದುಕನ್ನು ನಡೆಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದ ವ್ಯಕ್ತಿತ್ವ ವಿ ಎಸ್ ಕೃಷ್ಣ ಅಯರ್ ರವರದು.

ತಮ್ಮ ಬದುಕಿನಲ್ಲಿ ಒಂದು ಕ್ಷಣವೂ ಸಹ ಜಾತಿ ರಾಜಕಾರಣ ಮಾಡಿದವರಲ್ಲ. ಬಡವರು ಮತ್ತು ಶ್ರೀಮಂತರು ಎಂದು ಭೇದವನ್ನು ಎಣಿಸಿದವರಲ್ಲ, ಶತ್ರುತ್ವವನ್ನ ಯಾರೊಂದಿಗೂ ಹೊಂದಿರಲಿಲ್ಲ, ಅಸೂಯೆಯ ರಾಜಕಾರಣ ಮಾಡಲೇ ಇಲ್ಲ, ಅಧಿಕಾರಕ್ಕಾಗಿ ಸ್ನೇಹ ಮತ್ತು ಸಿದ್ಧಾಂತವನ್ನು ಎಂದು ಬಿಟ್ಟು ಕೊಡಲಿಲ್ಲ. ರಾಮಕೃಷ್ಣ ಹೆಗಡೆರವರ ಮೇಲಿನ ಅಭಿಮಾನ ಮತ್ತು ಪ್ರೀತಿಗಾಗಿ ಬದುಕಿನ ಕೊನೆಯ ಕ್ಷಣದ ತನಕ ಅವರೊಂದಿಗೆ ಉಳಿದುಕೊಂಡಿದ್ದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಮಟ್ಟದ ಕಾರ್ಯದರ್ಶಿಯಾಗಿ ಸುಭಾಷ್ ನಗರದ ಮೈದಾನದಲ್ಲಿ ಕಾಂಗ್ರೆಸ್ ವಸ್ತು ಪ್ರದರ್ಶನದ ಕಾರ್ಯದರ್ಶಿಯಾಗಿ ವಸ್ತು ಪ್ರದರ್ಶನದಲ್ಲಿ ಸಂಪನ್ಮೂಲವನ್ನು ಕ್ರೂಢೀಕರಿಸಿ ಪಕ್ಷದ ಕಚೇರಿಗಳನ್ನು ನಿರ್ಮಿಸಿ ಕೊಟ್ಟಿರುತ್ತಾರೆ.

ಮಹಾತ್ಮ ಗಾಂಧೀಜಿರವರ ಆಶಯದಂತೆ ಬದುಕಿದ್ದರು ಅವರ ವಿಚಾರದಲ್ಲಿ ತುಂಬಾ ಶ್ರದ್ಧೆಯನ್ನು ಹೊಂದಿದ್ದರು. ದೇಶದ ವಿಚಾರದಲ್ಲಿ ಬದ್ಧತೆಯನ್ನು ಹೊಂದಿದ್ದರು, ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಇವರ ಪಾಲಿಗೆ ಸಂಭ್ರಮದ ದಿನಗಳಾಗಿತ್ತು.

ಬಡ ಜನರು ಆಸ್ಪತ್ರೆಗಳಲ್ಲಿದ್ದರೆ ಅವರ ಮನೆಗಳಲ್ಲಿ ಸಾವಾದರೆ ಇಲ್ಲವೇ ಸಂಕಷ್ಟದಲ್ಲಿದ್ದರೆ ಅವರು ಯಾರು ಏನು ಎಂದು ಕೇಳದೆ ಅವರ ನೆರವಿಗೆ ನಿಲ್ಲುತ್ತಿದ್ದರು, ತಮ್ಮ ಇತಿಮಿತಿಯಲ್ಲಿ ಸಹಾಯವನ್ನ ಮಾಡುತ್ತಿದ್ದರು. ಸಮಾಜ ಸೇವೆಯ ಮೂಲಕವೇ ಸಾರ್ವಜನಿಕ ಬದುಕು, ರಾಜಕಾರಣದ ಮೂಲ ಆಶಯವೇ ಸಮಾಜ ಸೇವೆ ಎಂದು ನಂಬಿದ್ದರು.

ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಯಾವಾಗಲೂ ಸದೃಢ ಆದಾಗ ಮಾತ್ರ  ಬಡವರ ಮನೆಯವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರೆಯುತ್ತದೆ ಎಂದು ನಂಬಿದ್ದ ಇವರು, ಇವುಗಳ ಅಭಿವೃದ್ಧಿಗಾಗಿ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ.

ಕಿದ್ವಾಯಿ ಆಸ್ಪತ್ರೆ ಹಲವಾರು ನಾಮಫಲಕ ಕಾಣಬಹುದು. ಅವುಗಳಲ್ಲಿ ಧರ್ಮಶಾಲೆಯ ಕಟ್ಟಡದ ನಾಮಪಲಕ ಮತ್ತು ಇತರೆ ಅಭಿವೃದ್ಧಿಯ ನಾಮ ಫಲಕಗಳು ಇವುಗಳಲ್ಲಿ ವಿ ಎಸ್ ಕೃಷ್ಣ ಅಯ್ಯರ್ ಅವರ ಹೆಸರು ಕಾಣಬಹುದಾಗಿದೆ. ಕಾರಣ ಧರ್ಮ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಸ್ಪತ್ರೆಗೆ ದುಡಿದಿದ್ದಾರೆ.

ಬೆಂಗಳೂರು ಸಿಟಿ ಮಾರುಕಟ್ಟೆ ಪ್ರದೇಶದಲ್ಲಿರುವ ವಾಣಿವಿಲಾಸ್ ಶಾಲೆಯ ಅಭಿವೃದ್ಧಿ ಹಳೆ ಪ್ರೌಢಶಾಲೆಯ ಅಭಿವೃದ್ಧಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ. ಇದರ ಸ್ಥಾಪನೆಯ ಹಿಂದೆ ಇವರ ಶ್ರಮ ವಿಕ್ಟೋರಿಯಾ ಆಸ್ಪತ್ರೆಯ ಅಭಿವೃದ್ಧಿ ಹೀಗೆ ಜಯದೇವ ಆಸ್ಪತ್ರೆಯ ವಿಚಾರದಲ್ಲೂ ಸಹ ಇವರು ದುಡಿದಿದ್ದಾರೆ. ಕಾರಣ ಬಡವರು ಬರುವ ಇಂತಹ ಸಂಸ್ಥೆಗಳು ಸುರಕ್ಷಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು ಎಂಬುದು ಇವರ ಮೂಲ ಆಶಯ.

ಆಡಂಬರದ ಬದುಕು ಮಾಡಿದವರಲ್ಲ, ಶಾಸ್ತ್ರ ಪುರಾಣಗಳೆಂದು ಹಿಂದೆ ಹೋದವರಲ್ಲ, ಸಂಪ್ರದಾಯಗಳು ಎಂದು ಆಚರಿಸಿದವರಲ್ಲ. ಮಾನವ ಪ್ರೀತಿಗಾಗಿ ಮಾತ್ರವೇ ಬದುಕಿದರು. ದೇವರಲ್ಲಿ ನಂಬಿಕೆ ಇತ್ತು ಆದರೆ  ಸಂಪ್ರದಾಯಗಳ ಹಿಂದೆ ಬಿದ್ದು ಮಾನವೀಯತೆ ಮರೆಯಲಿಲ್ಲ.

ನಗರದ ಎಲ್ಲ ಬಡಾವಣೆಗಳ ಪರಿಚಯ ಇವರಿಗಿತ್ತು, ಎಲ್ಲಾ ವರ್ಗದವರ ಸಾಮಾಜಿಕ ಆರ್ಥಿಕ ಸ್ಥಿತಿಯ ಅರಿವಿತ್ತು. ಅದಕ್ಕಾಗಿ ಅವಕಾಶ ಸಿಕ್ಕಾಗ ಎಲ್ಲ ವರ್ಗದ ಜನರಿಗೆ ನೆರವನ್ನು ನೀಡಿರುತ್ತಾರೆ. ದಲಿತ ನಾಯಕರಿಗೆ ಇವರೇ ಪ್ರೀತಿಪಾತ್ರರು, ಹಿಂದುಳಿದ ವರ್ಗದವರಿಗೆ ಇವರೇ ಆತ್ಮೀಯರು.

ಬೇಸರದ ಸಂಗತಿ ಎಂದರೆ ಇವರು ಶ್ರಮವನ್ನ ವಹಿಸಿ ಟಿ ಆರ್ ಶಾಮಣ್ಣ ಮತ್ತು ಸಹಕಾರಿ ಕ್ಷೇತ್ರದ ಧುರೀಣ ವೈ ವಿ ಕೇಶಮೂರ್ತಿ ರವರು ಸ್ಥಾಪಿಸಿದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಇವರ ಹುಟ್ಟು ಹಬ್ಬದ ದಿನದಂದು ಮಹಾರಾಷ್ಟ್ರದ ಬ್ಯಾಂಕಿನೊಂದಿಗೆ ವಿಲೀನವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಬ್ಯಾಂಕಿನ ಈ ಪರಿಸ್ಥಿತಿಗೆ ಯಾರು ಕಾರಣ, ಏಕಾಯಿತು ಎನ್ನುವುದಕ್ಕಿಂತ ಇಂತಹ ಮಹನೀಯರು ಕಟ್ಟಿ ಬೆಳೆಸಿದಂತಹ ಸಂಸ್ಥೆ ಉಳಿಯಲಿಲ್ಲವಲ್ಲ ಎನ್ನುವುದಷ್ಟೇ ನೋವು. ದುರಂತವೆಂದರೆ ಜುಲೈ 25 ರಂದು ಇವರು ನಿಧನವಾದ ದಿನವಾಗಿತ್ತು. ಅಂದು ಬ್ಯಾಂಕಿಗೆ ರಿಸರ್ವ್ ಬ್ಯಾಂಕಿನಿಂದ ಅನೇಕ ಶರತ್ತುಗಳನ್ನು ವಿಧಿಸಲಾಯಿತು. ಜನವರಿ ಆರು ಇವರ ಹುಟ್ಟುಹಬ್ಬ ಒಂದು ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ಮುಗಿಸುತ್ತಿದೆ.

ಜಾತ್ಯತೀತತೆ, ಸಾಮಾಜಿಕ ನ್ಯಾಯ ಇವರಿಗೆ ಭಾಷಣದ ಸರಕಾಗಿರಲಿಲ್ಲ. ಬದ್ಧತೆಯ ಸಂಗತಿಯಾಗಿತ್ತು. ಅಬ್ಬರಿಸಿ ಮಾತನಾಡಿ ಪ್ರಚಾರಕ್ಕಾಗಿ ಭಾಷಣ ಮಾಡಿ ಚಪ್ಪಾಳೆಗಾಗಿ ಬದುಕಿನಲ್ಲಿ ಎಂದು ಕಾಯುತ್ತಿರಲಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply