ನಗರ ಪಾಲಿಕೆ ಸದಸ್ಯರಾಗಿ ವಿಧಾನ ಪರಿಷತ್ತಿನ ಸದಸ್ಯರಾಗಿ ಉಪಸಭಾಪತಿಯಾಗಿ ಲೋಕಸಭಾ ಸದಸ್ಯರಾಗಿ ಬೆಂಗಳೂರು ನಗರದ ಜನತೆಗೆ ಐದು ದಶಕಗಳ ಕಾಲ ನಿರಂತರವಾದಂತಹ ಪ್ರಾಮಾಣಿಕವಾದ ಜಾತ್ಯತೀತವಾದ ನಿಲುವಿನೊಂದಿಗೆ ಸೇವೆಯನ್ನು ಮಾಡಿದಂತಹ ಶ್ರೀ ವಿ ಎಸ್ ಕೃಷ್ಣ ಅಯ್ಯರ್ ರವರ ನೂರ ಒಂದನೇ ಜನ್ಮ ಜಯಂತಿ ಆಗಿರುತ್ತದೆ.
ಇವರು 1923 ಜನವರಿ 6ರಂದು ಹುಟ್ಟಿರುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ವಾಸವನ್ನ ಅನುಭವಿಸಿರುತ್ತಾರೆ.
ವಿ ಎಸ್ ಕೃಷ್ಣ ಅಯ್ಯರ್ ಅವರನ್ನ ಎಂದು ಸಹ ಒಬ್ಬ ರಾಜಕಾರಣಿ ಎಂದು ಗುರುತಿಸುವುದಕ್ಕಿಂತ ರಾಜಕೀಯ ಕ್ಷೇತ್ರದಲ್ಲಿರುವ ಒಬ್ಬ ಸಜ್ಜನ ಶುದ್ಧ ಮನಸ್ಸಿನ ಸಮಾಜಮುಖಿ ಸಾಮಾಜಿಕ ಕಳಕಳಿಯ ನಾಯಕರು ಎಂದು ಹೇಳಿದರೆ ಹೆಚ್ಚು ಅರ್ಥವಿರುತ್ತದೆ. ಕಾರಣವಾದರೂ ಇಷ್ಟೆ, ಇವರು ತಮ್ಮ ಬದುಕಿನ ಉದ್ದಕ್ಕೂ ಬಡವರು ದಲಿತರು ಹಿಂದುಳಿದ ವರ್ಗದವರು ಮತ್ತು ಅಸಹಾಯಕರ ನೆರವಿಗಾಗಿ ಸದಾ ಮಿಡಿಯುತ್ತಿದ್ದರು. ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ಆಧುನೀಕರಣ ಹಾಗೂ ಅಭಿವೃದ್ಧಿ ಈ ವಿಚಾರದಲ್ಲಿ ಇವರಷ್ಟು ಕಾಳಜಿ ಕಳಕಳಿ ಶ್ರದ್ದೆಯನ್ನ ತೋರಿಸುತ್ತಿದ್ದಂತಹ ಮತ್ತೊಬ್ಬ ರಾಜಕಾರಣಿಯನ್ನು ನಾವು ನೋಡಲು ಸಾಧ್ಯವೇ ಇಲ್ಲ. ಇವರು ಸದಾ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯ ಮೂಲಕ ಬಡವರ ಮನೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತವಾದಂತಹ ಯೋಗ್ಯವಾದಂತಹ ಆರೋಗ್ಯ ಸೌಲಭ್ಯಗಳು ಮಾತ್ರ ಸಮಾಜಕ್ಕೆ ಅನುಕೂಲವಾಗುತ್ತದೆ ಎಂಬ ನಿಲುವನ್ನ ಸದಾ ಕಾಲ ಪ್ರತಿಪಾದಿಸುತ್ತಿದ್ದರು.
ಸಾಮಾಜಿಕ ನ್ಯಾಯ ಇವರ ಪಾಲಿಗೆ ಕೇವಲ ಭಾಷಣದ ಅಥವಾ ಕೋರಿಕೆಯ ವಿಷಯವಾಗಿರಲಿಲ್ಲ. ಇದು ಇವರ ಬಾಳಿನಲ್ಲಿ ಸಂಗತಿಯಾಗಿತ್ತು. ಇವರ ಮನೆಯಲ್ಲಿ ಯಾವುದೇ ಜಾತಿಯ ಅಥವಾ ಯಾವುದೇ ಧರ್ಮದ ವ್ಯಕ್ತಿಗಳು ಬಂದು ತಿಂಡಿಯನ್ನು ತಿಂದು ಕಾಫಿ ಕುಡಿದು ಇವರ ಆಥಿತ್ಯವನ್ನು ಪಡೆಯಬಹುದಾಗಿತ್ತು. ಅದೇ ರೀತಿಯಲ್ಲಿ ಇವರು ಯಾರ ಮನೆಯಲ್ಲಿ ಬೇಕಾದರೂ ಕಾಫಿಯನ್ನು ಕುಡಿದು ಅವರು ಕೊಟ್ಟಂತಹ ಒಂದಷ್ಟು ತಿಂಡಿಯನ್ನ ತಿಂದು ತಮ್ಮ ಪ್ರೀತಿ ತೋರಿಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಮನೆಗೆ ದಲಿತರನ್ನು ಕರೆಸಿಕೊಳ್ಳುವುದು, ದಲಿತರ ಮನೆಯಲ್ಲಿ ಊಟ ಮಾಡುವುದು ಒಂದು ದೊಡ್ಡ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವ ಈ ಸಂದರ್ಭದಲ್ಲಿ ಕೃಷ್ಣ ಅಯ್ಯರ್ ಅವರ ನಡವಳಿಕೆ ಬದುಕಿನ ರೀತಿ ಎಲ್ಲರಿಗೂ ಆದರ್ಶಪ್ರಾಯವಾದದ್ದು. ಅನೇಕ ದಲಿತ ಸಂಘಟನೆಗಳ ಅಧ್ಯಕ್ಷರಾಗಿ ಇವರು ಸೇವೆಯನ್ನು ಸಲ್ಲಿಸಿರುತ್ತಾರೆ.
1962ರಲ್ಲಿ ಮಹಾಪೌರರಾಗಿ ಬೆಂಗಳೂರು ನಗರದ ಜನರಿಗೆ ಕಾವೇರಿ ಮೊದಲನೇ ಹಂತದ ಯೋಜನೆಯನ್ನು ತಂದುಕೊಡುವಲ್ಲಿ ಇವರ ಶ್ರಮವಿದೆ. ನಗರ ಪಾಲಿಕೆಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿದವರು. ಯಾವುದೇ ರೀತಿಯ ದೊಡ್ಡಸ್ತಿಕೆ ಇಲ್ಲದೆ ಬೆಳಿಗ್ಗೆ ಬೆಳಿಗ್ಗೆ 5:30 ರಿಂದ ಹಿಡಿದು ರಾತ್ರಿ ತನಕ ತಮ್ಮ ಬದುಕಿನ ಎಲ್ಲಾ ದಿನಗಳಲ್ಲಿ ಸಾರ್ವಜನಿಕರ ಭೇಟಿಗೆ ತಮ್ಮ ಮನೆಯನ್ನು ಸದಾ ತೆರದಿರುತ್ತಿದ್ದರು. ಇವರನ್ನು ಭೇಟಿ ಮಾಡಲು ಅಥವಾ ಇವರಿಂದ ಸಹಾಯ ಪಡೆಯಲು ಯಾವುದೇ ಮಧ್ಯವರ್ತಿಯ ಅವಶ್ಯಕತೆ ಇರಲಿಲ್ಲ.
1981ರಲ್ಲಿ ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿ 1983ರಲ್ಲಿ ಶ್ರೀರಾಮಕೃಷ್ಣ ಹೆಗಡೆಯರವರ ಸಂಪುಟದಲ್ಲಿ ನಗರ ಅಭಿವೃದ್ಧಿ ಸಚಿವರಾಗಿ ಸೇವೆಯನ್ನು ಸಲ್ಲಿಸಿದವರು. 1984ರಲ್ಲಿ ಲೋಕಸಭಾ ಸದಸ್ಯರಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿ ಬೆಂಗಳೂರು ನಗರಕ್ಕೆ ವರ್ತುಲ ರಸ್ತೆ ಮತ್ತು ಇತರೆ ರೈಲ್ವೆ ಯೋಜನೆಗಳಿಗಾಗಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದರು.
ಬೆಂಗಳೂರಿ ನಗರದ ಜನತೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಿದಾಗ ಬೆಳಿಗ್ಗೆ 5:00 ಗಂಟೆಗೆ ಅನೇಕ ಬಡಾವಣೆಗಳಿಗೆ ಭೇಟಿಕೊಟ್ಟು ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತಿದ್ದರು. ಜೊತೆಗೆ ಇವರು ತಮ್ಮ ಕೈಯಾರೆ ಪ್ರತಿದಿನ ನಾಗರೀಕರಿಗೆ ವಿವಿಧ ಕಾರಣಗಳಿಗಾಗಿ ಪತ್ರಗಳನ್ನು ಬರೆದುಕೊಡುತ್ತಿದ್ದರು. ಇವರ ನೆನಪಿನ ಶಕ್ತಿ ಅಪಾರವಾಗಿತ್ತು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದರ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಸಂಪೂರ್ಣವಾದ ಪ್ರದೇಶವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಮತದಾರರನ್ನು ಭೇಟಿ ಮಾಡಿ ಅವರ ಬೆಂಬಲವನ್ನು ಕೋರಿದ ಏಕೈಕ ರಾಜಕಾರಣಿ ಇವರಾಗಿರುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಮತ್ತೆ ಪಾದಯಾತ್ರೆ ಮೂಲಕ ಜನಗಳಿಗೆ ಧನ್ಯವಾದವನ್ನು ಹೇಳಿದಂತಹ ಅಪರೂಪದ ಜನಪ್ರತಿನಿಧಿ ಇವರಗಿದ್ದಾರೆ.
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾರ್ಯದಲ್ಲಿ ಇವರ ಪ್ರಮುಖ ಪಾತ್ರವಿದೆ. ಅದೇ ರೀತಿಯಲ್ಲಿ ಬೆಂಗಳೂರು ನಗರದ ನಾಗರಿಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ಇವರ ಶ್ರಮವಿದೆ.
ಇವರು ಮಹಾತ್ಮ ಗಾಂಧೀಜಿ ಅವರ ಆಶಯಗಳಂತೆ ತಮ್ಮ ಬದುಕಿನ ಉದ್ದಕ್ಕೂ ಸರಳವಾಗಿ ಎಲ್ಲರನ್ನೂ ಪ್ರೀತಿಸುತ್ತಾ ಅಜಾತಶತ್ರುವಾಗಿ ಬದುಕನ್ನು ನಡೆಸಿರುತ್ತಾರೆ. ಎಂದಿಗೂ ಸಹ ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣವನ್ನು ಅನುಸರಿಸಲಿಲ್ಲ. ಹೆಗಡೆ ಅವರ ಅನುಯಾಯಿಯಾಗಿ ಅವರ ಕಷ್ಟಕಾಲದಲ್ಲಿ ನಿಂತಂತಹ ಕೆಲವೇ ಕೆಲವು ನಾಯಕರಲ್ಲಿ ಇವರು ಪ್ರಮುಖರಾಗಿದ್ದಾರೆ.
ಕಾರ್ಯಕರ್ತರನ್ನು ಗೌರವಿಸುವ ಮತ್ತು ಪ್ರೀತಿಸುವ ವಿಚಾರದಲ್ಲಿ ಇವರು ಅನೇಕರಿಗೆ ಅನುಕರಣೀಯರು. ಒಬ್ಬ ಸಾಮಾನ್ಯ ಕಾರ್ಯಕರ್ತರ ಮನೆಯಲ್ಲಿ ತೊಂದರೆಗಳಾದರೆ ಅಲ್ಲಿ ವಿ.ಎಸ್.ಕೃಷ್ಣ ಅಯ್ಯರ್ ಅವರು ಹಾಜರಿರುತ್ತಿದ್ದರು. ಕಾರ್ಯಕರ್ತರ ಮನೆಯಲ್ಲಿ ಸಣ್ಣ ಕಾರ್ಯಕ್ರಮವಾದರೂ ಉಪಸ್ಥಿತರಿದ್ದು ಅವರಲ್ಲಿ ಸಂತೋಷವನ್ನುಂಟು ಮಾಡುತ್ತಿದ್ದರು. ಯಾವುದೇ ಒಬ್ಬ ಕಾರ್ಯಕರ್ತ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಆ ಸಂದರ್ಭದಲ್ಲಿ ಇವರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಅವರಿಗೆ ಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಟ್ಟು ಅವರಿಗೆ ಭರವಸೆಯ ಮಾತುಗಳನ್ನಾಡಿ ನೆರವಿಗೆ ನಿಲ್ಲುತ್ತಿದ್ದರು. ಯಾವುದೇ ಒಂದು ಕಾರ್ಯಕ್ರಮಕ್ಕೆ ಒಂದು ವೇಳೆ ತಾವು ಬರಲಾಗದಿದ್ದರೆ ಪತ್ರವನ್ನು ಬರೆದು ಶುಭವನ್ನ ಕೋರುತ್ತಿದ್ದರು. ಯಾವುದಾದರೂ ಒಬ್ಬ ರಾಜಕಾರಣಿ ಕಾರ್ಯಕರ್ತರಿಗೆ ಹಬ್ಬದ ದಿನಗಳಲ್ಲಿ ದೂರವಾಣಿ ಕರೆ ಮಾಡಿ ಶುಭವನ್ನು ಕೋರುವುದು ಮತ್ತು ಪತ್ರವನ್ನು ಬರೆದು ಕೆಲಸವನ್ನು ಮಾಡಿದ್ದರೆ ಅದು ವಿಎಸ್ ಕೃಷ್ಣ ಅಯ್ಯರ್ ರವರಿಂದ ಮಾತ್ರ ನಿರೀಕ್ಷಿಸಬಹುದಾಗಿತ್ತು.
ಐದು ದಶಕಗಳ ಕಾಲ ನಗರಕ್ಕೆ ಮತ್ತು ರಾಜ್ಯಕ್ಕೆ ಸೇವೆಯನ್ನು ಸಲ್ಲಿಸಿದ ಇವರ ಶತಮಾನೋತ್ಸವದ ಕಾರ್ಯಕ್ರಮ ಯಾವುದೇ ರೀತಿಯ ಯೋಜನೆಗಳಿಲ್ಲದೆ ಸುದ್ದಿಯು ಆಗದೆ ಮುಗಿದು ಹೋದದ್ದು ಒಂದು ಬೇಸರದ ಸಂಗತಿ. ಸರ್ಕಾರಕ್ಕಾಗಲಿ ಬಿಬಿಎಂಪಿಗಾಗಲಿ ಕನಿಷ್ಠ ವಿಧಾನ ಪರಿಷತ್ತಿಗಾಗಲಿ ಇವರ ಶತಮಾನೋತ್ಸವದ ಕಾರ್ಯಕ್ರಮದ ಆಚರಣೆಯ ನೆನಪು ಬಾರಲಿಲ್ಲ.
ಯಾವ ರಾಜಕಾರಣಿಗಳಿಗೆ ಅವರ ಸಾವಿನ ನಂತರವೂ ಚುನಾವಣೆಗಳಲ್ಲಿ ಮತಗಳನ್ನು ತಂದುಕೊಡಬಲ್ಲದಂತಹ ಶಕ್ತಿ ಇರುತ್ತದೆ ಅಥವಾ ಅವರ ಕುಟುಂಬದ ಸದಸ್ಯರ ಸಹಾಯದಿಂದ ಚುನಾವಣೆಯಲ್ಲಿ ಮತವನ್ನು ಗಳಿಸಬಹುದು ಅಂತವರ ಶತಮಾನೋತ್ಸವ ಕಾರ್ಯಕ್ರಮಗಳು ಸರ್ಕಾರದ ವತಿಯಿಂದ ಚೆನ್ನಾಗಿ ನಡೆಯುತ್ತವೆ. ಈ ಕಾರಣದಿಂದ ವಿ ಎಸ್ ಕೃಷ್ಣ ಅಯ್ಯರ್ ರವರ ಶತಮಾನೋತ್ಸವವನ್ನು ಕಡೆಗಣಿಸಿರಬಹುದು. ಇವರ ಹೆಸರಿನಿಂದ ಮತವು ಬರುವುದಿಲ್ಲ ಮತ್ತು ಬಳಸಿಕೊಳ್ಳಲು ಇವರ ಕುಟುಂಬದವರು ಯಾರು ಇಲ್ಲ ಎಂಬ ಕಾರಣವಿರಬಹುದೋ ಏನೋ? ಏನೇ ಆಗಲಿ ಇಂದಿಗೂ ಸಹ ಸಾವಿರಾರು ಕಾರ್ಯಕರ್ತರು ಸಾವಿರಾರು ನಾಗರಿಕರು ಇವರ ಸರಳತೆ ಸ್ಪಂದಿಸುವ ಗುಣ ಪ್ರಾಮಾಣಿಕವಾದ ಬದುಕು ಇವುಗಳ ಬಗ್ಗೆ ಮತ್ತೆ ಮತ್ತೆ ನೆನಪು ಮಾಡಿಕೊಂಡು ಗೌರವವನ್ನು ಸಲ್ಲಿಸುತ್ತಿದ್ದಾರೆ ಕಾರ್ಯಕರ್ತರ ಪಾಲಿಗೆ ಇವರು ಸದಾ ಕಾಲ ಶಕ್ತಿಯಾಗಿದ್ದಾರೆ.
-ಕೆ.ಎಸ್.ನಾಗರಾಜ್, ಬೆಂಗಳೂರು




