ಒಕ್ಕಲಿಗ ಸಮುದಾಯದಿಂದ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ

3 years ago

ಬೆಳಗಾವಿ: ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ. ಪಂಚಮಸಾಲಿ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಬೇಡಿಕೆ ತೀವ್ರಗೊಳ್ಳುತ್ತಿದೆ.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬಿಜೆಪಿಯ ಒಕ್ಕಲಿಗ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ, ಕಾಂಗ್ರೆಸ್ ನವರು ಬೇಡಿಕೆ ಈಡೇರಿಸಲು‌ ಗಡುವು ನೀಡಿದ್ದಾರೆ.

ಇತ್ತೀಚೆಗೆ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರು ಆದಿ ಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿ, ಮೀಸಲಾತಿ ಹೋರಾಟದ ನೇತೃತ್ವ ವಹಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಒಕ್ಕಲಿಗ ಸಮುದಾಯದ ಬಿಜೆಪಿ ಸಚಿವ, ಶಾಸಕರು ಬೇಡಿಕೆ ಮಂಡಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು  ಭೇಟಿ ಮಾಡಿ ಮನವಿ ನೀಡಿದ್ದಾರೆ. ಒಕ್ಕಲಿಗರೊಂದಿಗೆ ಕುಂಚಿಟಗರು ಹಾಗೂ ಬಂಟ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕುಂಚಿಟಿಗರು ಕೇಂದ್ರ ಒಬಿಸಿಯಲ್ಲಿ ಸೇರ್ಪಡೆಯಾಗಿಲ್ಲ. ಮಂಗಳೂರಿನ ಬಂಟರನ್ನು ಕೂಡ ಸೇರಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಸದ್ಯ ಇರುವ ಹಿಂದುಳಿದ ವರ್ಗಗಳ ಮೀಸಲಾತಿ ಶೇ.4% ಹಳ್ಳಿಯಲ್ಲಿರುವ ಒಕ್ಕಲಿಗರಿಗೆ ಸಿಗುತ್ತಿದೆ. ನಗರ ಪ್ರದೇಶದ ಒಕ್ಕಲಿಗರಿಗೆ ಇದರ ಸೌಲಭ್ಯ ಇಲ್ಲ. ಹಾಗಾಗಿ ನಗರ ಪ್ರದೇಶದ ಬಡ ಒಕ್ಕಲಿಗರಿಗೆ ಆರ್ಥಿಕವಾಗಿ ಹಿಂದುಳಿದ ಮೀಸಲಾತಿ‌ ಅನ್ವಯ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸದ್ಯ ಒಕ್ಕಲಿಗ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.12ಕ್ಕೆ ಏರಿಸಲು ನಮ್ಮ ಹಕ್ಕೋತ್ತಾಯ ಇದೆ. ಒಗ್ಗಟ್ಟಿನಿಂದ ನಮ್ಮ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ನಾವೆಲ್ಲ ಕಂಕಣ ಬದ್ಧರಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಪರಿಗಣಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ಜನವರಿ 4ರಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಗಡುವು: ಮತ್ತೊಂದೆಡೆ ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯರು ಕೂಡ ರಾಜ್ಯ ಸರ್ಕಾರಕ್ಕೆ ಒಕ್ಕೂರಲಿನಿಂದ ಮನವಿ ಮಾಡಿದ್ದಾರೆ. ಅಲ್ಲದೇ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಜನವರಿ 23ರಂದು ಅಂತಿಮ ಗಡುವು ಕೊಟ್ಟಿದ್ದಾರೆ.

ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಬೆಳಗಾವಿಯಲ್ಲಿ ನಿನ್ನೆ ಸಭೆ ನಡೆಸಿರುವ ಕಾಂಗ್ರೆಸ್ ಪರಿಷತ್ ಸದಸ್ಯರಾದ  ಎಸ್.ರವಿ, ಗೋವಿಂದ್‍ರಾಜು, ಅನಿಲ್‍ಕುಮಾರ್, ಮಂಜುನಾಥ್ ಬಂಡಾರಿ, ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಒಕ್ಕಲಿಗ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಕಲ್ಪಿಸಲು ಸಮಾಜದ ಮಠಾೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಹಾಗೂ ನಂಜಾವಧೂತ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲು ಹಕ್ಕೋತಾಯ ಮಂಡಿಸುತ್ತೇವೆ. ಇದು ಕಾಂಗ್ರೆಸ್ ಪಕ್ಷವಲ್ಲದೆ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಸಂಘಟನೆಗಳು ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಜನವರಿ 23ರವರೆಗೆ ಅಂತಿಮ ಗಡುವು ನೀಡಿದ್ದಾರೆ.

Leave a Reply