ಬೆಳಗಾವಿ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕಾ ಹೂಡಿಕೆಯನ್ನು ಆಕರ್ಷಿಸಲು ವಿಶೇಷ ನೀತಿ: ನಿರಾಣಿ

4 years ago

ಬೆಳಗಾವಿ: ಗಡಿ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬೆಳಗಾವಿ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕಾ ಹೂಡಿಕೆಯನ್ನು ಆಕರ್ಷಿಸಲು ವಿಶೇಷ ನೀತಿಯನ್ನು ರೂಪಿಸುವ ಬಗ್ಗೆ ಚಿಂತನೆ ಆರಂಭಿಸಿದೆ.

ಇದರ ಜೊತೆಗೆ ಗೋಲ್ಡನ್‌ ಕ್ಲಾಸ್‌’ ಕೈಗಾರಿಕಾ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ  ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಭಯ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಪ್ರತ್ಯೇಕ ನೀತಿ ರೂಪಿಸುವ ಸಂಬಂಧ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲು  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು

ಮಹಾರಾಷ್ಟ್ರದಲ್ಲೂ ಇದೇ ಮಾದರಿಯಲ್ಲಿ ಗಡಿ ಭಾಗದಲ್ಲಿ ಹೂಡಿಕೆಗೆ ವಿಶೇಷವಾಗಿ ಸ್ಟಾರ್‌ ಕ್ಲಾಸ್‌ ಕೈಗಾರಿಕಾ ಪಾರ್ಕ್‌ ಸ್ಥಾಪಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷ ರಿಯಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರಿಗೆ ವಿಶೇಷ ರಿಯಾಯ್ತಿಗಳನ್ನು ನೀಡಲಾಗುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ನೀತಿಯನ್ನು ಜಾರಿಗೊಳಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.

ಇತ್ತೀಚೆಗೆ 2500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಗೋಲ್ಡ್ ಬ್ಲಾಸ್ ಕೈಗಾರಿಕೆ ಆರಂಭವಾಗಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಗಳು ಸಿಗುತ್ತವೆ ಬೆಳಗಾವಿ ಜಿಲ್ಲೆಯಲ್ಲಿ ಆಟೋಮೊಬೈಲ್‌ ಮತ್ತು ಸೆಮಿಕಂಡಕ್ಟರ್‌ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ರಷ್ಯಾದ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಕಂಪನಿಯೊಂದು ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಮನವೊಲಿಸಲಾಗಿದೆ. ಈ ಕಂಪನಿ ಸುಮಾರು ₹2500 ಕೋಟಿ ಹೂಡಿಕೆ ಮಾಡಲಿದೆ, ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

ಬೆಳಗಾವಿಯಲ್ಲಿ 700 ಎಕರೆ ಭೂಮಿ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿದ್ದು, ಅದನ್ನು ಕೈಗಾರಿಕಾ ಪಾರ್ಕ್‌ ಸ್ಥಾಪನೆಗೆ ಬಳಸಿಕೊಂಡು, ಅವರಿಗೆ ಬೇರೆ ಕಡೆ 1200 ಎಕರೆ ನೀಡುವ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜತೆ ಮಾತುಕತೆ ನಡೆಸಲಾಗುವುದು ಎಂದೂ ಭರವಸೆ ನೀಡಿದರು.

ಅಲ್ಲದೇ, ಬೆಳಗಾವಿ ತಾಲ್ಲೂಕಿನಲ್ಲಿ ಖಾಸಗಿ ಕೈಗಾರಿಕೋದ್ಯಮಗಳು ಆಟೋಮೊಬೈಲ್‌ ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ಬೆಂಬಲ ಸೇವೆ ನೀಡಿ, ಕೈಗಾರಿಕಾ ನೀತಿ 2020–25 ರಡಿ ಸಿಗುವ ರಿಯಾಯಿತಿ ಹಾಗೂ ಉತ್ತೇಜನ ನೀಡಲಾಗುವುದು. ಜಿಲ್ಲೆಯಲ್ಲಿ ಫೌಂಡ್ರಿ, ಮಿಷನ್‌ ಕಾಂಪೊನೆಂಟ್ಸ್‌, ಸಿಮೆಂಟ್‌, ಸಕ್ಕರೆ, ಬೆಲ್ಲ, ಜನರಲ್ ಎಂಜಿನಿಯರಿಂಗ್‌, ಜವಳಿ, ಕೃಷಿ ಆಧಾರಿತ ಮತ್ತು ಇನ್ನಿತರ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ವಿಷಯ ಪ್ರಸ್ತಾಪಿಸಿದ ಅಭಯ ಪಾಟೀಲ, ಕಳೆದ 35 ವರ್ಷಗಳಿಂದ ಒಂದೇ ಒಂದು ಹೊಸ ಉದ್ಯಮಗಳು ಬಂದಿಲ್ಲ. ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡದೇ ಗಡಿ ಭಾಗದ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಗಡಿ ಭಾಗದಲ್ಲಿ ಉದ್ಯಮಗಳ ಸ್ಥಾಪನೆಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲೂ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಪರಿಹಾರ ಹೆಚ್ಚಳ : ಕಾಡಾನೆಗಳ ಹಾವಳಿಯಿಂದ ಮೃತಪಡುತ್ತಿರುವವರಿಗೆ ನೀಡಲಾಗುತ್ತಿರುವ ಪರಿಹಾರವನ್ನು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿಂದು ತಿಳಿಸಿದರು.

ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಹೆಚ್.ಕೆ. ಕುಮಾರಸ್ವಾಮಿಯವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಾಡಾನೆ ಹಾವಳಿಯಿಂದ ಮೃತಪಡುವವರಿಗೆ ಪರಿಹಾರ ದ್ವಿಗುಣಗೊಳಿಸಿ ಡಿ. 15 ರಂದೇ ಆದೇಶ ಹೊರಡಿಸಲಾಗಿದೆ ಎಂದು ಆದೇಶದ ಪ್ರತಿಯನ್ನು ಸದಸ್ಯರಿಗೆ ಕಳುಹಿಸುತ್ತೇನೆ ಎಂದು ಹೇಳಿದರು.

ಕಾಡಾನೆ ಹಾವಳಿ ತಡೆಯಲು ರಚಿಸಲಾಗಿರುವ ಟಾಸ್ಕ್‌ಫೋರ್ಸ್‌ಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಅವರು ಹೇಳಿದರು.

ಸ್ಟಾಂಪ್ ಕಾಯಿದೆ: ಬೀದಿ ಬದಿಯ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿಯಡಿ ಸ್ಟಾಂಪ್ ಶುಲ್ಕ ಮನ್ನಾ ಮಾಡಲು ಅವಕಾಶ ಮಾಡಿಕೊಡಲಾಗಿರುವ ಸ್ಟಾಂಪ್ ಮತ್ತು ನೊಂದಣಿ ಕಾಯಿದೆಗೆ‌ ವಿಧಾನಸಭೆ ಅನುಮೋದನೆ ನೀಡಿದೆ.

ಕಂದಾಯ ಸಚಿವ ಆರ್. ಅಶೋಕ್ ಅವರು, ವಿಧೇಯಕವನ್ನು ಮಂಡಿಸಿ ಅಂಗೀಕರಿಸಬೇಕೆಂದು ಕೋರಿದರು. ಬೀದಿ ಬದಿಯ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿಯಡಿ ಸ್ಟಾಂಪ್ ಶುಲ್ಕ ಮನ್ನಾ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಸದನಕ್ಕೆ ಸಚಿವರು ಮನವರಿಕೆ ಮಾಡಿಕೊಟ್ಟರು. ನಂತರ  ಧ್ವನಿಮತದ ಮೂಲಕ ಈ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

Leave a Reply