ಬಡವರಿಗೆ ತಾಂತ್ರಿಕ, ವೈದ್ಯಕೀಯ ಪದವಿ ಸುಲಭವಾಗಿ ದಕ್ಕುವಂತೆ ಮಾಡಿದ ವೀರಪ್ಪ ಮೊಯ್ಲಿ

1 year ago

ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ತಾಂತ್ರಿಕ ಮತ್ತು ವೈದ್ಯಕೀಯ ಪದವಿಗಳ ಸುಲಭವಾಗಿ ದಕ್ಕುವಂತೆ ಮಾಡಿಕೊಟ್ಟ ನಾಯಕ ವೀರಪ್ಪ ಮೊಯ್ಲಿ.

1994ರ ಮೊದಲು ತಾಂತ್ರಿಕ ಮತ್ತು ಮೆಡಿಕಲ್ ಪದವಿಗಳನ್ನು ಅಂದರೆ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಕೋರ್ಸ್ ಗಳಿಗೆ ಬಡವರು ಮತ್ತು ಮಧ್ಯಮ ವರ್ಗದ ಮನೆಯ ಮಕ್ಕಳು ಪ್ರವೇಶ ಪಡೆದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಕೇವಲ ಇಲ್ಲಿ ಹಣದ ಪ್ರಭಾವ ಹೆಚ್ಚಾಗಿ ನಡೆಯುತ್ತಿತ್ತು. ಕೆಲವೇ ಕೆಲವು ಮಂದಿ ಇಂತಹ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ವೀರಪ್ಪ ಮೊಯ್ಲಿರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ 1992ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ತಾವು ತಮ್ಮ ಬಾಲ್ಯದಲ್ಲಿ ಶಿಕ್ಷಣವನ್ನ ಪಡೆದುಕೊಳ್ಳಲು ಅನುಭವಿಸಿದಂತಹ ನೋವಿನ ಅರಿವಿದ್ದ ಕಾರಣದಿಂದ ಬಡವರು ಮತ್ತು ಮಧ್ಯಮ ವರ್ಗದ ಜನರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಸುಲಭವಾಗಿ ದೊರೆಯುವಂತೆ ಮಾಡುವ ಸಲುವಾಗಿ ಪ್ರಥಮ ಬಾರಿಗೆ ದೇಶದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಅಂದರೆ ಸಿಇಟಿ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರಿಂದಾಗಿ ನಾಡಿನ ಲಕ್ಷಾಂತರ ಮಂದಿ ಸಿಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ತಮ್ಮ ರ್ಯಾಂಕುಗಳಿಗೆ ಅನುಗುಣವಾಗಿ ಬಿಇ ಮತ್ತು ಎಂಬಿಬಿಎಸ್ ಹಾಗೂ ಇತರೆ ಅನೇಕ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶವನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಈ ಕಾರಣದಿಂದಾಗಿ ಕರ್ನಾಟಕ ರಾಜ್ಯದ ಕಡೆಗೆ ಇಡೀ ದೇಶವೇ ತಿರುವಿ ನೋಡುವಂತಾಯಿತು. ಇಂದು ಕೇಂದ್ರ ಸರ್ಕಾರ ನಮ್ಮ ನಾಡಿನ ವೀರಪ್ಪ ಮೊಯ್ಲಿರವರು ಜಾರಿಗೆ ತಂದ ಸಿಇಟಿ ವ್ಯವಸ್ಥೆಯನ್ನು ನೀಟ್ ಎಂಬ ಹೆಸರಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಯೋಜನೆಯನ್ನು ರೂಪಿಸಿದ್ದಾರೆ.

ವೀರಪ್ಪ ಮೊಯ್ಲಿರವರು ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗದವರು ದಲಿತರು ಮತ್ತು ಧ್ವನಿ ಇಲ್ಲದ ಜನರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನ ನೀಡಿರುತ್ತಾರೆ. ಆದರೆ ನಮ್ಮ ಸಮಾಜ ಯಾವ ರೀತಿಯಲ್ಲಿ ಇವರಿಗೆ ಕೃತಜ್ಞರಾಗಿರಬೇಕು ಆ ರೀತಿಯಲ್ಲಿ ಇಲ್ಲದೆ ಇವರ ದೊಡ್ಡ ಸಾಧನೆಯನ್ನು ಸಹ ಮುಕ್ತ ಮನಸ್ಸಿನಿಂದ ಮಾತನಾಡುವಂತಹ ವಿಶಾಲತೆಯನ್ನೇ ಬೆಳೆಸಿಕೊಂಡಿಲ್ಲ.

ದೇಶದ ರಾಜಕೀಯ ಚರಿತ್ರೆಯಲ್ಲಿ ಅತ್ಯಂತ ತೀರಾ ಹಿಂದುಳಿದ ವರ್ಗದ ಸಮಾಜಕ್ಕೆ ಸೇರಿದ ಇವರು ತಮ್ಮ ಶಕ್ತಿ ಮತ್ತು ಸಾಮರ್ಥ್ಯದಿಂದ ನಾಡಿನ ಮುಖ್ಯಮಂತ್ರಿ ಆಗಿ ಕೇಂದ್ರದ ಸಚಿವರಾಗಿ ಸೇವೆಯನ್ನು ಸಲ್ಲಿಸುವಂತಹ ಅವಕಾಶಗಳನ್ನು ಪಡೆದುಕೊಂಡರು.

ಬಾಲ್ಯದಲ್ಲಿ ತಾವು ವಾಸಿಸುತ್ತಿದ್ದ ಮನೆಯ ಮಾಲೀಕ ಇವರನ್ನು ಮನೆಯಿಂದ ಹೊರ ಹಾಕಿದ ಘಟನೆಯನ್ನು ಸವಾಲಾಗಿ ಸ್ವೀಕರಿಸಿ, ವಕೀಲರಾಗಿ ಬಡಜನರ ಪರವಾಗಿ ವಕಾಲತ್ತು ವಹಿಸುತ್ತಾ ಜನಪ್ರಿಯರಾದರು. ದೇವರಾಜ್ ಅರಸುರವರು ಇವರ ನಾಯಕತ್ವದ ಗುಣವನ್ನು ಹೋರಾಟದ ಮನೋಭಾವವನ್ನು ಗುರುತಿಸಿ 1972ರಲ್ಲಿ ಇವರ ಸಮಾಜಕ್ಕೆ ಸೇರಿದ ಬೆರಳೆಣಿಕೆಯಷ್ಟು ಜನರು ಇಲ್ಲದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನಾಗಿಸಿದರು. ಮುಂದೆ ಹಣಕಾಸು ಸಚಿವರು ಆಗಿ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡರು.

ಭಾರತ ದೇಶದ ರಾಜಕಾರಣದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆಯುವ ಮಟ್ಟಿಗೆ ಸಾಹಿತ್ಯ ಕೃಷಿಯನ್ನು ಮಾಡಿರುವಂತಹ ರಾಜಕಾರಣಿಗಳು ಅಪರೂಪ. ಮುಖ್ಯಮಂತ್ರಿಗಳ ಸಾಲಿನಲ್ಲಂತೂ ಇಲ್ಲವೇ ಇಲ್ಲವೆಂದು ಹೇಳಬಹುದು. ಈ ರೀತಿಯಲ್ಲಿ ರಾಜಕಾರಣದ ನಡುವೆ ಗಂಭೀರವಾದಂತಹ ಅಧ್ಯಯನ ಮತ್ತು ಶ್ರದ್ಧೆ ಜೊತೆಗೆ ತಾವು ಹೊಂದಿರುವ ಸಾಹಿತ್ಯದ ಮೇಲಿನ ಪ್ರಭಾವದಿಂದಾಗಿ ಮೂರು ಶ್ರೇಷ್ಠ ಮಹಾ ಕಾವ್ಯಗಳನ್ನು ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದ ಅಪರೂಪದ ಜ್ಞಾನವಂತ ರಾಜಕಾರಣಿಗಳ ಸಾಲಿನಲ್ಲಿ ಇವರು ಗುರುತಿಸಿಕೊಂಡಿದ್ದಾರೆ.

ವೀರಪ್ಪ ಮೊಯ್ಲಿರವರು ಯಾವುದೇ ಸಭೆ ಸಮಾರಂಭಗಳಿಗೆ ಹೋದರೆ ಅದಕ್ಕೆ ಬೇಕಾದಂತಹ ತಯಾರಿಯನ್ನು ಮಾಡಿಕೊಂಡು ಬಂದು ಸಾಂದರ್ಭಿಕವಾಗಿ ಮಾತನಾಡುತ್ತಾರೆ. ಅನಾವಶ್ಯಕವಾದಂತಹ ಮಾತುಗಳು ಇವರ ಭಾಷಣದಲ್ಲಿ ಇರುವುದಿಲ್ಲ. ಸಾಹಿತ್ಯದ ಓದು ಮತ್ತು ಸಾಧನೆ ಇವರಲ್ಲಿ ಸಜ್ಜನಿಕೆಯ ನಡವಳಿಕೆಗೆ ನಾಂದಿಯಾಗಿದೆ.

ಸಿಇಟಿ ವ್ಯವಸ್ಥೆ ಅಲ್ಲದೆ ಇವರು ಶಿಕ್ಷಣ ಕ್ಷೇತ್ರದಲ್ಲಿನ ಅನುದಾನದ ದುರುಪಯೋಗದ ವಿಚಾರದಲ್ಲೂ ಕಠಿಣವಾದಂತಹ ಕ್ರಮಗಳನ್ನು ಕೈಗೊಂಡ ಕಾರಣದಿಂದ ಅನೇಕ ಮೇಲ್ವರ್ಗದ ನಾಯಕರುಗಳ ಸಿಟ್ಟಿಗೆ ಕಾರಣವಾಗಿ ಚುನಾವಣೆಗಳಲ್ಲಿ ಅದರ ಪರಿಣಾಮವನ್ನು ಅನುಭವಿಸಬೇಕಾಯಿತು.

ಚಿಕ್ಕಬಳ್ಳಾಪುರದ ಲೋಕಸಭಾ ಸದಸ್ಯರಾಗಿ ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಹಿಂದೆ ಇವರ ಶ್ರಮವಿದೆ ಮತ್ತು ಬದ್ಧತೆಯೂ ಇದೆ. ಈ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕಾಗಿ ಇವರು ಸತತವಾಗಿ ಶ್ರಮವಹಿಸುತ್ತಲೇ ಬಂದಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕೆಲವು ಇತರೆ ಜಿಲ್ಲೆಗಳ ಜನರಿಗೆ ನೀರಿನ ಸಮಸ್ಯೆಗೆ ಪರಿಹಾರವೂ ದೊರೆಯಲಿದೆ. ಈ ಯೋಜನೆಯ ಕಲ್ಪನೆ ಮತ್ತು ಜಾರಿಯ ಹಿಂದೆ ಇವರ ಬೆವರಿರುವುದನ್ನು ಯಾರೂ ಮರೆಯುವ ಹಾಗಿಲ್ಲ.

ಇಂದು 85ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಇವರಿಗೆ ಭಗವಂತ ಮತ್ತಷ್ಟು ಆರೋಗ್ಯ ಆಯುಷ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲು ಶಕ್ತಿಯನ್ನು ನೀಡಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply