ಯಾವುದೇ ಸರ್ಕಾರಗಳು ಬಂದರು ಬಡವರ ಪರವಾಗಿ ಯೋಜನೆಗಳನ್ನು ರೂಪಿಸುವುದು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಒಪ್ಪುವಂತದ್ದೆ. ಇದೇ ರೀತಿಯಲ್ಲಿ ಉಳ್ಳವರು ಯಾವುದೇ ಸೌಲಭ್ಯ, ಸೌಕರ್ಯವಿಲ್ಲದಿದ್ದರೂ ತಮ್ಮ ಬದುಕನ್ನು ನಡೆಸಿಕೊಂಡು ಹೋಗುತ್ತಾರೆ. ಆದರೆ ಎಲ್ಲಾ ಪರಿಸ್ಥಿತಿಯಲ್ಲಿಯೂ ಆತಂಕ ಮತ್ತು ಅತಂತ್ರಕ್ಕೆ ಸಿಲುಕಿಕೊಳ್ಳುವುದು ಮಧ್ಯಮ ವರ್ಗದ ಜನ.
ಬಿ.ಪಿ.ಎಲ್. ಕಾರ್ಡ್ನ್ನು ಎಲ್ಲದಕ್ಕೂ ಮಾನದಂಡ ಮಾಡುವುದರಿಂದ ಬಿ.ಪಿ.ಎಲ್. ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಷರತ್ತುಗಳಿಗೆ ಒಳಪಡದ ಮಧ್ಯಮ ವರ್ಗದವರಿಗೆ ಅನಾರೋಗ್ಯವಾದರೆ ಚಿಕಿತ್ಸೆಗೂ ತೊಂದರೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲೂ ತೊಂದರೆ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಅವಕಾಶವಗಳೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯಗಳಿಗೆ ಎಲ್ಲದಕ್ಕೂ ಬಿ.ಪಿ.ಎಲ್. ಕಾರ್ಡ್ನ್ನು ಮಾನದಂಡ ಮಾಡಬೇಡಿ.
ಬಿ.ಪಿ.ಎಲ್. ಕಾರ್ಡ್ ಹೊಂದಿರದ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸರ್ಕಾರ ಒಂದಷ್ಟು ರಿಯಾಯಿತಿ ದರದಲ್ಲಿ ಪಡಿತರ ನೀಡುವುದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು, ವಸತಿ ಸೌಲಭ್ಯಗಳು ಶಿಕ್ಷಣದಲ್ಲಿನ ಯೋಜನೆಗಳ ಫಲಾನುಭವಿಗಳಾಗಲೂ ಅವಕಾಶವನ್ನು ಮಾಡಿಕೊಡಬೇಕಾಗುತ್ತದೆ. ಬಿ.ಪಿ.ಎಲ್. ಕಾರ್ಡ್ ಹಾಲಿ ಇರುವ ಮಾನದಂಡಗಳ ಬಗ್ಗೆ ಮರುಪರಿಶೀಲನೆ ಅಗತ್ಯವಾಗಿದೆ.
ಯಾರು ಬಡವರು ಎನ್ನುವುದನ್ನು ಸರಿಯಾದ ರೀತಿಯಲ್ಲಿ ಒಂದು ಮಾಹಿತಿಯನ್ನು ನೀಡಲು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಹಿರಿಯ ಸಮಾಜದ ಗಣ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ವೈಜ್ಞಾನಿಕವಾಗಿ ಚಿಂತಿಸಿ ಮಧ್ಯಮ ವರ್ಗದವರಿಗೆ ಯಾವ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡಬಹುದು ಎಂಬುದನ್ನು ಸೂಚಿಸಲು ಹಾಗೂ ಬಿ.ಪಿ.ಎಲ್. ಕುಟುಂಬ ಎನ್ನುವುದಕ್ಕೆ ಮಾನದಂಡ ಏನು ಎನ್ನುವುದನ್ನು ವೈಜ್ಞಾನಿಕ ತಳಹದಿಯ ಮೇಲೆ ನಿಖರವಾದ ವಿಚಾರಗಳೊಂದಿಗೆ ವರದಿಯನ್ನು ಪಡೆದುಕೊಳ್ಳುವುದು ಈ ಸಂದರ್ಭದ ತುರ್ತು ಅಗತ್ಯವಾಗಿದೆ.
ಬಹಳಷ್ಟು ಸಂದರ್ಭಗಳಲ್ಲಿ ಸರ್ಕಾರಗಳ ಮೇಲೆ ಮತ್ತು ರಾಜಕೀಯ ಪಕ್ಷದ ಪ್ರಣಾಳಿಕೆ ಬಗ್ಗೆ ಮಧ್ಯಮ ವರ್ಗದವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
– ಕೆ.ಎಸ್. ನಾಗರಾಜ್, ಬೆಂಗಳೂರು




