ಬಡವರಿಗೆ ಬದುಕು ಕೊಟ್ಟ ದೇವರಾಜ ಅರಸು ಮತ್ತು ಯುವಕರಲ್ಲಿ ಭರವಸೆ ಮೂಡಿಸಿದ ರಾಜೀವ್ ಗಾಂಧಿ ರವರ ಜನ್ಮದಿನ.
ಕರ್ನಾಟಕ ರಾಜ್ಯದಲ್ಲಿ ಬಡವರಿಗೆ ಬದುಕನ್ನು ಕಟ್ಟಿಕೊಟ್ಟದ್ದು ಜೊತೆಗೆ ಅನೇಕ ನಾಯಕರನ್ನು ಗುರುತಿಸಿ ಅವರಿಗೆ ರಾಜಕೀಯವಾದ ಅವಕಾಶಗಳನ್ನ ಕಲ್ಪಿಸಿಕೊಟ್ಟವರು ದೇವರಾಜ ಅರಸು. ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದವರು ಮತ್ತು ಸಮಾಜದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅವಕಾಶಗಳೇ ದೊರೆಯದಂತೆ ವಂಚಿತರಾಗಿದ್ದವರು ಇಂತಹ ಜನರನ್ನ ಗುರುತಿಸಿ ಅವರಲ್ಲಿ ರಾಜಕೀಯ ಶಕ್ತಿಯನ್ನು ತುಂಬಿ ಕರ್ನಾಟಕದಲ್ಲಿ ಹಲವಾರು ಮಂದಿ ಮಂತ್ರಿಗಳಾಗಿ, ಶಾಸಕರಾಗಿ, ತಮ್ಮ ಬದುಕನ್ನ ಸಾರ್ವಜನಿಕ ಜೀವನದಲ್ಲಿ ಕಟ್ಟಿಕೊಳ್ಳಲು ಅವಕಾಶವನ್ನ ಕಲ್ಪಿಸಿ ಕೊಟ್ಟವರು ದೇವರಾಜ ಅರಸು. ಜೊತೆಗೆ ಶೋಷಿತರು ಮತ್ತು ಧಮನಿತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅವರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮಾನವೀಯತೆಯ ನೆಲೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಶಾಸಕರನ್ನು ಮತ್ತು ತನ್ನ ಅಭಿಮಾನಿಗಳನ್ನು ಕಾಣುತ್ತಿದ್ದ ಇವರು ಸಹಾಯ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಹಿಡಿತವಿಲ್ಲದೆ ಮನಸ್ಸು ತುಂಬಿ ಬಡವರಿಗೆ ನೆರವನ್ನ ನೀಡಿದ್ದಾರೆ.
ಸಾಮಾಜಿಕ ನ್ಯಾಯ ಕೇವಲ ಭಾಷಣದ ವಿಚಾರವಲ್ಲ, ಅದಕ್ಕೆ ಬದ್ಧತೆ ಬೇಕು. ಮತ್ತು ಸಿದ್ಧತೆಯೂ ಬೇಕು, ಜೊತೆಗೆ ಎದೆಗಾರಿಕೆಯೂ ಬೇಕು, ಎನ್ನುವುದನ್ನು ಹಾವನೂರು ವರದಿಯನ್ನು ಅನುಷ್ಠಾನ ಮಾಡುವುದರ ಮೂಲಕ ತೋರಿಸಿಕೊಟ್ಟರು. ಉಳುವವನಿಗೆ ಭೂಮಿ ಎಂಬ ಕಾನೂನನ್ನ ಭಾರತ ದೇಶದ ಯಾವ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದಿದ್ದರೂ ಇವರು ಅದನ್ನು ಜಾರಿಗೆ ತಂದು ಹಲವಾರು ಲಕ್ಷ ಭೂಮಿ ರಹಿತರಿಗೆ ಭೂಮಿಯ ಮಾಲೀಕರನ್ನಾಗಿ ಮಾಡಿದಂತಹ ಕೀರ್ತಿ ಯಾರು ಸಹ ಮರೆಯುವಂತಿಲ್ಲ. ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ನಮ್ಮ ರಾಜ್ಯದ ಪ್ರತಿಷ್ಠೆಯನ್ನು ಹೆಚ್ಚಿಸಿದವರು ಇವರು.
ಮಲ ಹೋರುವ ರಾಕ್ಷಸಿ ಪದ್ಧತಿಯನ್ನು ಅನಾಗರಿಕ ವ್ಯವಸ್ಥೆಯನ್ನು ರದ್ದು ಮಾಡಿ ಆ ಜನರ ಶೋಷಣೆಗೆ ಅಂತ್ಯವನ್ನು ಹಾಡಿದವರು. ಜೀತ ಪದ್ಧತಿಯನ್ನು ರದ್ದುಗೊಳಿಸಿದರು, ಬಡವರ ಸಾಲಕ್ಕೆ ಮುಕ್ತಿಯನ್ನು ನೀಡಿದರು.
ದೇವರನ್ನು ನಂಬುತ್ತಿದ್ದರು,ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು, ಜೊತೆ ಜೊತೆಗೆ ಮೂಡನಂಬಿಕೆಗಳ ವಿರುದ್ಧ ನಿಲ್ಲುತ್ತಿದ್ದರು, ಪ್ರಗತಿಪರವಾದಂತಹ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದರು, ತಮ್ಮ ಆಡಳಿತದಲ್ಲಿ ಪ್ರಗತಿಪರ ವಾದಂತಹ ಆಡಳಿತಕ್ಕೆ ಹೆಚ್ಚಿನ ಗಮನವನ್ನು ನೀಡಿದರು, ಕುವೆಂಪುರವರ ಸಾಹಿತ್ಯದ ಪ್ರೇಮಿಯಾಗಿದ್ದ ಇವರು ಅಪಾರ ಪ್ರಮಾಣದಲ್ಲಿ ಸಾಹಿತ್ಯದ ಓದುಗರಾಗಿದ್ದರು ಅನೇಕ ವಿಚಾರಗಳನ್ನು ಬಲ್ಲವರಾಗಿದ್ದರು.
ಹಿಂದುಳಿದ ವರ್ಗದವರಿಗೆ ಕರ್ನಾಟಕದಲ್ಲಿ ಸದಾಕಾಲ ನೆನಪಾಗುವುದು ಅರಸುರವರ ಹೆಸರು .ಕಾರಣ ಇವರ ದೂರದೃಷ್ಟಿತ್ವ ಮತ್ತು ಪ್ರೀತಿಯ ಕಾರಣದಿಂದಾಗಿ ಅನೇಕರು ಸಾರ್ವಜನಿಕ ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ಕಾರಣದಿಂದ ಪ್ರತಿದಿನವೂ ನಾಯಕರುಗಳು ಇವರನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ .ತಮ್ಮ ಪಾಲಿನ ಗೌರವವನ್ನು ಅರ್ಪಿಸುತ್ತಲೇ ಇರುತ್ತಾರೆ.
ಸುದೀರ್ಘವಾದ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಯಾಗಿ ಜೊತೆಗೆ ಕರ್ನಾಟಕ ರಾಜ್ಯ ಇರುವ ತನಕ ಮರೆಯದ ರೀತಿಯಲ್ಲಿ ಕ್ರಾಂತಿಕಾರಿಯಾದ ಕಾರ್ಯಕ್ರಮಗಳನ್ನ ನೀಡಿ ಅವುಗಳನ್ನ ಅನುಷ್ಠಾನ ಮಾಡಿ ಆ ಕಾರಣದಿಂದ ಅನೇಕ ರೀತಿಯ ಸಂಕಷ್ಟಗಳಿಗೂ ಎದುರಾಗಿ ಆದರೂ ,ಸಹ ಇವುಗಳನ್ನ ಲೆಕ್ಕಿಸದೆ ರಾಜಕಾರಣದ ಬದುಕನ್ನ ನಡೆಸಿದಂತಹ ಅರಸುರವರ ದಿಟ್ಟತನ ಸಾಮಾನ್ಯವಲ್ಲ.
ಅರಸುರವರು ಬಡವರಿಗೆ ಬದುಕನ್ನು ಕಟ್ಟಿಕೊಟ್ಟ ರೀತಿಯಲ್ಲಿ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರು ಯುವಕರಲ್ಲಿ ಭರವಸೆಯನ್ನು ತುಂಬಿದರು. 1984 ರಲ್ಲಿ ಈ ದೇಶದ ಪ್ರಧಾನಿಯಾಗಿ ಯುವ ಜನರ ಬದುಕಿನಲ್ಲಿ ಬದಲಾವಣೆಗಾಗಿ ಯೋಜನೆಗಳನ್ನು ರೂಪಿಸಿದರು.
ಮತದಾನದ ಹಕ್ಕನ್ನು 21ರಿಂದ 18 ವರ್ಷಕ್ಕೆ ಇಳಿಸಿ ಪ್ರಜಾಪ್ರಭುತ್ವದ ನಿರ್ಣಯ ಮಾಡುವ ಸಂದರ್ಭದಲ್ಲಿ ಯುವ ಜನರು ಪಾಲ್ಗೊಳ್ಳುವಂತೆ ಮಾಡಿದರು.
ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನ ಅರಿತು ಸಂವಿಧಾನದ 73 ಮತ್ತು 74ನೇ ಕಾಲಂಗಳಿಗೆ ತಿದ್ದುಪಡಿಯನ್ನು ತಂದು ಕಾಲಕಾಲಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನ ತಪ್ಪದೆ ನಡೆಸುವಂತೆ ಕಾನೂನನ್ನು ಮಾಡಿದರು.
ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಗಮನವನ್ನು ನೀಡಿ ಸೂಪರ್ ಕಂಪ್ಯೂಟರ್ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಯುವ ಜನರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿದರು.
ವೈಜ್ಞಾನಿಕ ಮತ್ತು ಸಂಶೋಧನೆ ಸಂಸ್ಥೆಗಳಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಿ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರವು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಎಲ್ಲ ರೀತಿಯ ನೆರವನ್ನ ಒದಗಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ನೇಹ ಮತ್ತು ಸಂಬಂಧವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ನಮ್ಮ ವಿದೇಶಾಂಗ ನೀತಿಯಾದಂತಹ ಅಲಿಪ್ತ ನೀತಿಯನ್ನ ಎತ್ತಿ ಹಿಡಿದರು.
ಟೆಲಿಫೋನ್ ಕ್ರಾಂತಿಯ ಮೂಲಕ ದೇಶದಲ್ಲಿ ಎಲ್ಲರ ಕೈಗೂ ಮೊಬೈಲ್ ದೊರೆಯುವಂತೆ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ
ದ್ವೇಷವಿಲ್ಲದ ಮತ್ತು ಅಸೂಯ ಇಲ್ಲದಂತಹ ರಾಜಕಾರಣವನ್ನ ನಡೆಸಬೇಕು ಎಂಬುದನ್ನ ತೋರಿಸಿಕೊಟ್ಟು, ವಿರೋಧ ಪಕ್ಷದಲ್ಲಿದ್ದ ನಾಯಕರುಗಳನ್ನು ಗೌರವಿಸುವುದರ ಜೊತೆಗೆ ಅವರ ಅನೇಕ ವಿಚಾರಗಳ ಕಡೆಗೆ ಗಮನವನ್ನು ಹರಿಸಿ ಮಾನವೀಯತೆಯನ್ನ ಮೆರೆದಿರುತ್ತಾರೆ. ಜೊತೆಗೆ ಸಂಸ್ಕಾರವಂತಿಕೆಯ ಸಂಸ್ಕೃತಿಯನ್ನು ರಾಜಕಾರಣದಲ್ಲಿ ಪ್ರದರ್ಶಿಸಿರುತ್ತಾರೆ.
ರಾಜೀವ್ ಗಾಂಧಿ ರವರು ತಮ್ಮ ಪ್ರಧಾನಮಂತ್ರಿಯ ಅವಧಿಯಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಾಂಧವ್ಯಕ್ಕೆ ಹೆಚ್ಚಿನ ಗಮನವನ್ನು ನೀಡಿದರು ಯಾವುದಾದರು ರಾಜ್ಯದಲ್ಲಿ ಅದು ಯಾವುದೇ ಪಕ್ಷದ ಸರ್ಕಾರವಿರಲಿ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಅಂತಹ ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೂ ಪರಿಚಯಿಸಲು ದೊಡ್ಡತನವನ್ನು ಮೆರೆದಿರುತ್ತಾರೆ.
ಆಗಸ್ಟ್ 20 ಕರ್ನಾಟಕ ರಾಜ್ಯದ ಜನರಿಗೆ ವಿಶೇಷವಾಗಿ ಬಡವರು ಶೋಷಿತರು ಧ್ವನಿ ಇಲ್ಲದವರು ಇವರಿಗೆ ಬದುಕನ್ನ ಕಲ್ಪಿಸಿಕೊಟ್ಟ ಅರಸುರವರ ಜಯಂತಿ, ಸಾಮಾಜಿಕ ನ್ಯಾಯದ ಹರಿಕಾರರ ದಿನವಾದರೆ, ಯುವ ಜನರಲ್ಲಿ ಭರವಸೆಯನ್ನ ತುಂಬಿ ಯುವ ಜನರ ಕನಸುಗಳನ್ನು ನನಸು ಮಾಡಲು ಪ್ರಾಮಾಣಿಕವಾದಂತಹ ಕಾರ್ಯಕ್ರಮಗಳನ್ನ ರೂಪಿಸಿದ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರ ಜನ್ಮದಿನವೂ ಹೌದು.
– ಕೆ ಎಸ್ ನಾಗರಾಜ್, ಬೆಂಗಳೂರು




