ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ದಾರುಣ: ಶ್ರೀನಿವಾಸ ಪೂಜಾರಿ

4 years ago

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವುದು ಜನಸಾಮಾನ್ಯರ ಹಕ್ಕು: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವುದು ಜನಸಾಮಾನ್ಯರ ಹಕ್ಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು‌ ಅರಸು ಸಂಶೋಧನಾ ಪೀಠಕ್ಕೆ  ಅನುಧಾನ ನೀಡಲಾಗುತ್ತದೆ. ಬಲಾಡ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಅಹವಾಲನ್ನು ಕೊಡುತ್ತವೆ, ಆದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಯಾವ ವ್ಯವಸ್ಥೆಯಲ್ಲಿ ನಾವು ಪ್ರಶ್ನೆ ಮಾಡುವುದಿಲ್ಲವೋ ಅಥವಾ ಸರ್ಕಾರದಿಂದ ಉತ್ತರವನ್ನು ನಾವು ಖಚಿತವಾಗಿ ಪಡೆಯುವುದಿಲ್ಲವೋ ಅಂತಹ ಸಮಸ್ಯೆಗಳು ದೀರ್ಘಕಾಲಕ್ಕೆ ಮುಂದುವರೆಯುತ್ತವೆ ಎಂದರು.

ತಾವು ಅನೇಕ ವಿಚಾರಗಳ ಕುರಿತು ಪ್ರಶ್ನೆ ಮಾಡಿದ್ದೀರಿ, ಅದನ್ನು ಅಧ್ಯಯನ ಮಾಡಿ ಗಮನಿಸುತ್ತೇನೆ. ಅನೇಕ ಸಾರಿ ಬೇರೆಬೇರೆ ಸಮುದಾಯದವರು ವರ್ಗದವರು ಕೂಡ ತಮ್ಮ ಭಾವನೆಗಳನ್ನು ಹೇಳಿಕೊಂಡು ತಮಗೆ ಮೀಸಲಾತಿ ಕೊಡಿ ಎಂದು ಕೇಳಿದ್ದಾರೆ. ಬ್ರಾಹ್ಮಣರು ಕೂಡ ತಮಗೆ ಮೀಸಲಾತಿ ಕೊಡಿ ಎಂದು ಕೇಳಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಘೋಷಣೆ ಮಾಡಿದೆ. ಅದೂ ಸೇರಿದಂತೆ ಪ್ರಜಾಪ್ರಭುತ್ವದಲ್ಲಿ ಯಾರೇ ತಮ್ಮ ಅಹವಾಲುಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಅದನ್ನು ಪರಿಶೀಲಿಸಬೇಕಾದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಿದ್ದರೆ ಅದನ್ನು ಪರಿಶೀಲಿಸಬೇಕಾದ್ದು ಸರ್ಕಾರದ ಜವಾಬ್ದಾರಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕೊಟ್ಟಿರುವ ಮನವಿಗೆ ಸ್ಪಂದಿಸಿ, ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಮಾಡಬೇಕು ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದರು.

ಇನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ದೇವರಾಜ ಅರಸು ಅವರ ಇಲ್ಲದವರಿಗೆ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸ್ಮರಿಸಿಕೊಂಡರು.

ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ಸಮಾಜ ಇನ್ನೂ ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Leave a Reply