ವಿವಾದಗಳ ನಡುವೆ ಚಳವಳಿಗಳ ಸಂಗಾತಿಯಾಗಿ ಬಾನು ಮುಷ್ತಾಕ್

8 months ago

“ಸೇತುವೆಯನ್ನು ಕಟ್ಟುವ, ವೈವಿಧ್ಯತೆಯನ್ನು ಸಂಭ್ರಮಿಸುವ, ಒಡೆದಾಳ್ವಿಕೆಯನ್ನು ಪ್ರತಿರೋಧಿಸುವ ಸಾಹಿತ್ಯವನ್ನು ಪವಿತ್ರ ನೆಲವನ್ನಾಗಿ ಕಾಣಬೇಕು. ಇಂದು ಛಿದ್ರವಾದಂತೆ ಕಾಣುವ ವಿಶ್ವ ಒಂದಾಗಬೇಕು. ಅಲ್ಲಿ ಹುಟ್ಟುವ ಪ್ರತಿ ಕತೆಗೂ ಒಂದು ತೂಕವಿರಬೇಕು. ಪ್ರತಿ ಧ್ವನಿಗೂ ಕೇಳುಗರಿರಬೇಕು. ಪ್ರತಿ ವ್ಯಕ್ತಿಯನ್ನು ಅದು ಒಳಗೊಳ್ಳಬೇಕು”.
                                                – ಬಾನು ಮುಷ್ತಾಕ್

ಪರಂಪರಾಗತ ಮೈಸೂರು ದಸರಾ ನಾಡಹಬ್ಬದ ಉದ್ಘಾಟನೆಯನ್ನು ಈಸಾರಿ ಬುಕ್ಕರ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಲೇಖಕಿ ಬಾನು ಮುಷ್ತಾಕ್ ಅವರು ನೆರವೇರಿಸಲಿದ್ದಾರೆ. ಸರ್ಕಾರದ ಪರವಾಗಿ ಮುಖ್ಯಮಂತ್ರಿ ಅವರಿಂದ ಈ ಪ್ರಕಟಣೆ ಹೊರಬಿದ್ದ ನಂತರ ಅವರು ಮುಸ್ಲಿಂ ಎಂಬ ಕಾರಣಕ್ಕೆ ಕೋಮುವಾದಿ ಬಿಜೆಪಿ ಕಿತಾಪತಿ ಮಾಡಿ ವಿವಾದ ಹುಟ್ಟು ಹಾಕಿದೆ. ಬೆನ್ನಲ್ಲೇ ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಕಸಾಪ ವಿರುದ್ಧದ ಪರ್ಯಾಯ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಆಡದ ಮಾತನ್ನು ಈಗ ಮುನ್ನೆಲೆಗೆ ತಂದು ಅನಗತ್ಯ ಚರ್ಚೆಯನ್ನು ಸಾಮಾಜಿಕ ಜಾಲತಾಣಗಳು ಹುಟ್ಟು ಹಾಕಿವೆ. ಆ ವಿಚಾರದ ಚರ್ಚೆಗೆ ಹೋಗದೆ, ಅವರ ಬದುಕಿನ ಬದ್ಧತೆ, ಹೋರಾಟ, ಚಳವಳಿಗಳ ಸಂಗಾತಿಯಾಗಿ ಗುರ್ತಿಸಿಕೊಂಡಿರುವ ಬಾನು ಅವರ ಕೆಲವು ಗ್ರಹಿಕೆಗಳನ್ನು ಮಾತ್ರ ಈ ಲೇಖನದಲ್ಲಿ ಮಾಡಿದ್ದೇನೆ.

ಬರಹದ ಆರಂಭದಲ್ಲಿ ಬಾನು ಅವರು ಹೇಳಿದ ಮಾತನ್ನು ದಾಖಲಿಸಿದ್ದೇನೆ. ಪ್ರತಿಷ್ಠಿತ ‘ಬುಕ್ಕರ್’ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಸಂದರ್ಭದಲ್ಲಿ ಅವರು ವಿಶ್ವದಲ್ಲಿ ಛಿದ್ರವಾದ ಮನಸ್ಸನ್ನು ಒಂದುಗೂಡಿಸುವ ಅಭೀಷ್ಟೆಯಿಂದ ಹೇಳಿದ ಮನದ ಮಾತಿದು. ಪ್ರಗತಿಪರ ವಿಚಾರಧಾರೆಯ ಅವರು ದೇಶದ ಬಹುತ್ವದ ಬಗ್ಗೆ ಕಾಳಜಿ ಹೊಂದಿದವರು. ಚಳವಳಿಗಳ ಸಂಗಾತಿಯಾದ ಅವರಿಗೆ ವಾಸ್ತವದ ಅರಿವಿದೆ.

ಪರಂಪರೆ ಹಾಗೂ ಇತಿಹಾಸದಲ್ಲಿ ಚಳವಳಿಗಳ ವೈಶಿಷ್ಟತೆ, ಅವುಗಳ ಪ್ರಾಮುಖ್ಯತೆಯ ಕುರುಹುಗಳ ದಾಖಲೆಗಳು ಸಿಕ್ಕುತ್ತವೆ. ಜನಪರ ಚಳವಳಿಯ ಪರಂಪರೆ, ಇತಿಹಾಸದ ಪರಿಚಯ ಇಲ್ಲದಿದ್ದರೆ ತಾತ್ವಿಕತೆಯ ಹೋರಾಟದ ಮನೋಭಾವ ಇದ್ದ ಕಡೆ – ವ್ಯವಸ್ಥೆಯ ಊನಗಳನ್ನು ಸರಿಪಡಿಸುವ ಒತ್ತಾಸೆಯೂ ಇರುತ್ತದೆ. ಬೇಡಿಕೆಗಳನ್ನು ಈಡೇರಿಕೊಳ್ಳಲು ಸಂಘಟಿತರಾಗಿ ತಮ್ಮ ಹೋರಾಡಿದರೆ ಸಾರ್ವಜನಿಕರ ಬೆಂಬಲವು ಸಿಕ್ಕುತ್ತದೆ. ಯಾವ ಉದ್ದೇಶಕ್ಕಾಗಿ ಹೋರಾಟ ನಡೆಯುತ್ತದೆಯೋ ಆ ವ್ಯವಸ್ಥೆಯಲ್ಲಿ ಅವರಿಗಾಗಿರುವ ಅನ್ಯಾಯದ ವಿರುದ್ಧ ದನಿ ಎತ್ತಲು ಚಳವಳಿಗಳ ಅಗತ್ಯ ಇದೆ. ದಮನಿತರು – ಮುಖ್ಯವಾಗಿ ದಲಿತರು, ರೈತರು, ಕಾರ್ಮಿಕರು, ಉದ್ಯೋಗದಲ್ಲಿ ಕಾಯಕ ನಿರತರು ಹೋರಾಟದ ಮುಖ್ಯ ಭಾಗವಾಗುತ್ತಾರೆ.

ಇಂಥ ಹೋರಾಟಗಳ ಸಂಗಾತಿಯಾಗಿ, ಹಲವು ಜನಪರ ಹಾಗೂ ಪ್ರಗತಿಪರ ಸಂಘಟನೆಗಳ ಮೂಲಕ ಜೀವತಂತುವಾದ ಪತ್ರಕರ್ತೆ, ವಕೀಲೆ, ಸಾಮಾಜಿಕ ಕಾರ್ಯಕರ್ತೆ, ಕವಿ, ಕತೆಗಾರ್ತಿ ಬಾನು ಮುಷ್ತಾಕ್ ಅವರ ಕತೆಗಳು ಇಂಗ್ಲಿಷಿಗೆ ಅನುವಾದ ಬೆನ್ನಲ್ಲೆ ಅಂತಾರಾಷ್ಟ್ರೀಯ “ಬುಕ್ಕರ್ ಪ್ರಶಸ್ತಿ” ಬಂದ ಸಂದರ್ಭದಲ್ಲಿ, ಅವರನ್ನು ಹಾಗೂ ಬಾನು ಕಥೆಗಳನ್ನು ಸಮರ್ಥವಾಗಿ ಅನುವಾದಿಸಿ ಈ ಮಹತ್ವದ ಪ್ರಶಸ್ತಿ ಬರಲು ಕಾರಣರಾದ ಪತ್ರಕರ್ತೆ ಹಾಗೂ ಅನುವಾದಕಿ ದೀಪಾ ಭಾಸ್ತಿಯವರನ್ನು ಅಭಿನಂದಿಸುತ್ತೇನೆ. ಬಾನು ಅವರ ಹೋರಾಟದ ಹಾದಿಯ ಕೆಲವು ತುಣುಕುಗಳನ್ನು ನಮ್ಮ ಈ ಬಂಡಾಯ ಸಾಹಿತ್ಯ ಸಂಘಟನೆಯ ಈ ವೇದಿಕೆಯಲ್ಲಿ ಹೇಳಲು ಸಂತೋಷವಾಗುತ್ತದೆ.

ಪ್ರಪ್ರಥಮಬಾರಿಗೆ ಕನ್ನಡಿಗರೊಬ್ಬರಿಗೆ, ವಿಶೇಷವಾಗಿ ಅಲ್ಪಸಂಖ್ಯಾತ ಮಹಿಳೆಗೆ ಪ್ರತಿಷ್ಠಿತ ‘ಬುಕ್ಕರ್ ಪ್ರಶಸ್ತಿ’ ಬಂದದ್ದು ಹೆಮ್ಮೆಯ ಸಂಗತಿ. ಮೇಲೆ ಪ್ರಸ್ತಾಪಿಸಿದ ಹೋರಾಟದ ವಿಚಾರಗಳು ಬಾನು ಅವರ ಬದುಕಿನ ಭಾಗವಾಗಿದ್ದು, ಅವರು ಈ ಪ್ರಶಸ್ತಿ ಪಡೆದ ಕ್ಷಣದಿಂದ BBC, CNN, ND TV ಮೊದಲಾದ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ ಹಲವು ಟಿವಿ ಚಾನಲ್ಲುಗಳಲ್ಲಿ ಸಂದರ್ಶನ ನೀಡಿದರು. ಈ ಮೂಲಕ ಅವರ ಅನುಭವ, ಸಾಮಾಜಿಕ ಹೋರಾಟ ಹಾಗೂ ಕಾಳಜಿ, ತಮ್ಮ ಕತೆಗಳ ಜೀವಂತ ಪಾತ್ರಗಳ ಬಗ್ಗೆ ಮಾತಾಡಿದರು. ಲಂಡನ್ನಿನ ಚಾನಲ್ಲುಗಳಲ್ಲಿ ಅವರು ಪ್ರಸ್ತಾಪ ಮಾಡಿದ ಕೆಲವು ವಿಚಾರಗಳನ್ನು ಕೇಳಿ ರೋಮಾಂಚನವಾಯ್ತು. ಅಲ್ಲೆಲ್ಲ ಅವರು ತಮ್ಮ ಹೋರಾಟದ ನೆಲೆ ಕಂಡುಕೊಂಡ ಹಲವು ಚಳವಳಿಗಳ ಬಗ್ಗೆ ಹೆಚ್ಚು ಮಾತಾಡದಿದ್ದರೂ, ಬಂಡಾಯ ಸಾಹಿತ್ಯ ಸಂಘಟನೆಯ ಬಗ್ಗೆ ಮತ್ತೆಮತ್ತೆ ಪ್ರಸ್ತಾಪಿಸಿದ್ದರು. “ಬಂಡಾಯ ಸಾಹಿತ್ಯ ಸಂಘಟನೆ ನನ್ನ ಬೆಳವಣಿಗೆಗೆ ವೇದಿಕೆ ನೀಡಿತು”, “ಬಂಡಾಯ ನನ್ನ ತವರು” – ಹೀಗೆ ಹೇಳಿ, ಬಂಡಾಯದ ಬಗ್ಗೆ ಮಾಧ್ಯಮದವರಿಗೆ ಹಾಗೂ ವಿಶ್ವದ ಕೇಳುಗರಲ್ಲಿ ಕುತೂಹಲ ಹುಟ್ಟಿಸಿದರು. ಇದು ನನ್ನನ್ನು ಒಳಗೊಂಡು ಎಲ್ಲಾ ಬಂಡಾಯ ಸಂಗಾತಿಗಳಿಗೂ ಹೆಮ್ಮೆ ಹಾಗೂ ಖುಷಿಯ ಕ್ಷಣವಾಯ್ತು.

“ಹಾರ್ಟ್ ಲ್ಯಾಂಪ್” ಕಥಾ ಸಂಕಲನ ತನ್ನ ಚತುರತೆ, ಜೀವಂತಿಕೆ, ಭಾವುಕತೆ, ತೀಕ್ಷ್ಣತೆ ಹಾಗೂ ಸರಳ ಭಾಷೆಯ ಮೂಲಕ ಮನ ಮುಟ್ಟುತ್ತದೆ. ಇದು ಇಂಗ್ಲಿಷ್ ಓದುಗರಿಗೆ ನಿಜವಾಗಿಯೂ ಒಂದು ಹೊಸ ಅನುಭವ” – ಬುಕ್ಕರ್ ಜ್ಯೂರಿ ಹೇಳಿದ ಮಾತು ಅರ್ಥಪೂರ್ಣ.

ಪ್ರಶಸ್ತಿ ಪಡೆದು ಲಂಡನ್ನಿನಿಂದ ನೇರವಾಗಿ ಬೆಂಗಳೂರಿಗೆ ಬಂದ ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗಾಂಧಿ ಭವನದಲ್ಲಿ ಮೊದಲ ಅಭಿನಂದನೆ ಸ್ವೀಕರಿಸಿದಾಗಲೂ ಬಂಡಾಯ ಸಂಘಟನೆ ಹಾಗೂ ಬರಗೂರು ಅವರನ್ನು ಸ್ಮರಿಸಿದರು. “ಬಾನು ಅವರಿಗೆ ‘ಬುಕ್ಕರ್’ ಬಂದ ಸಂತೋಷಕ್ಕೆ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ್ದೆ ಮೊದಲ ಅಭಿನಂದನೆ ಕಾರ್ಯಕ್ರಮ ಆಗಬೇಕು” ಎಂದು ಶ್ರಮಿಸಿದವರು ಅಧ್ಯಕ್ಷ ಶಿವಾನಂದ ತಗಡೂರು ಅವರೆ ಸಭೆಗೆ ಸ್ಪಷ್ಟಪಡಿಸಿದಂತೆ ಬಾನು ಪತ್ರಕರ್ತೆಯೂ ಆಗಿದ್ದು ಕಾರಣ. ಅಂದು ಪತ್ರಕರ್ತ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಅವರು ಬಾನು ಅವರ ಕಥಾ ಲೋಕದ ವಿಸ್ಮಯಗಳನ್ನು, ಮುಸ್ಲಿಂ ಮಹಿಳೆಯರ ತಲ್ಲಣಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದರು. ರಾಜ್ಯದ ಅನೇಕ ಮುದ್ರಣ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲು “ನನ್ನ ಸಾಹಿತ್ಯಕ್ಕೆ ದಿಕ್ಕೂಚಿಯಾಗಿದ್ದು ಬಂಡಾಯ ಚಳವಳಿ” (“ವಿಜಯವಾಣಿ”, ೨೫ ಮೇ ೨೦೨೫) ಎಂದು ಆತ್ಮವಿಶ್ವಾಸದಲ್ಲಿ ಹೇಳಿದರು. ‘ಬಂಡಾಯ ಸಾಹಿತ್ಯ ಸಂಘಟನೆಯ ಮುಂಚೂಣಿಯಲ್ಲಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ಸೈದ್ಧಾಂತಿಕ ಸ್ಪಷ್ಟತೆ ಕಲಿಸಿದರು” ಎಂದು ಸ್ಮರಿಸಿದರು.

ಬಾನು ಮುಷ್ತಾಕ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ೧೯೭೯ರಲ್ಲಿ “ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಘೋಷವಾಕ್ಯದಿಂದ ಆರಂಭವಾದ ಬಂಡಾಯ ಸಂಘಟನೆ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿ ಎಡಪಂಥೀಯ ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿತ್ತು. ಮಾರ್ಕ್ಸ್, ಲೋಹಿಯಾ, ಗಾಂಧಿ, ಅಂಬೇಡ್ಕರ್ ಹಾಗೂ ಪ್ರಗತಿಪರ ವಿಚಾರಧಾರೆ ಬಂಡಾಯದ ಪ್ರಣಾಳಿಕೆಯ ಭಾಗವಾಗಿತ್ತು. ಬಂಡಾಯ-ಪ್ರಗತಿಯ ಸಂಕೇತ, ಶೋಷಿತರ ದನಿಗೆ ಬೆಂಬಲವಾದ, ಹೋರಾಟಪ್ರಜ್ಞೆ ಕೊಟ್ಟ ಸಂಘಟನೆ. ಜನಪರ ದನಿಯೇ ಒಟ್ಟು ಸಮೂಹದ ದನಿಯಾಗಿ-ಬಂಡಾಯ ಬದ್ಧತೆಗೆ ದಾರಿಯಾಯ್ತು. ದಲಿತ ಹಾಗೂ ಅಲ್ಪಸಂಖ್ಯಾತ ಜನಾಂಗದ ಅನೇಕ ಯುವಕ ಯುವತಿಯರು ಸಾಮಾಜಿಕ ಬದಲಾವಣೆಗೆ ಅಕ್ಷರ ಸೃಷ್ಟಿಯ ಸಾಹಿತ್ಯದತ್ತ ಹೊರಳಿದ್ದರು.

ಬಂಡಾಯದಲ್ಲಿ ಸಕ್ರಿಯರಾಗಿದ್ದ ಬಾನು ಅವರೆ ಹೇಳಿಕೊಂಡಂತೆ: “ತಳ ಸಮುದಾಯದ ಸಂವೇದನೆ, ಅಲ್ಪ ಸಂಖ್ಯಾತರ ತಲ್ಲಣಗಳು ಸಾಹಿತ್ಯದಲ್ಲಿ ಇರಲಿಲ್ಲ. ೮೦ರ ದಶಕದಲ್ಲಿ ದಲಿತ, ಬಂಡಾಯ, ಸ್ತ್ರೀವಾದಿ, ಮುಸ್ಲಿಂ ಸಂವೇದನೆ ಸಾಹಿತ್ಯ ಹೆಚ್ಚು ಪ್ರವರ್ಧಮಾನಕ್ಕೆ ಬರತೊಡಗಿತು. ನನ್ನ ಜನಾಂಗದ ಮುಸ್ಲಿಂ ಸಾಹಿತ್ಯ ಸೃಷ್ಟಿಸಬೇಕಾದರೆ ಅದರ ವಿಷಯ, ವಸ್ತು, ನಿರೂಪಣೆ, ಹಿನ್ನೆಲೆ ಯಾವರೀತಿ ಇರಬೇಕೆಂಬ ಸ್ಪಷ್ಟತೆ ಇರಲಿಲ್ಲ. ಬಂಡಾಯ ಚಳವಳಿಗಳ ಸಭೆಗಳಲ್ಲಿ, ಸಾಹಿತ್ಯ ಶಿಬಿರಗಳಲ್ಲಿ, ಬಂಡಾಯ ರಾಜ್ಯ ಸಮ್ಮೇಳನಗಳಲ್ಲಿ ನಾವು ಅನೇಕ ವಿಚಾರ ಕಲಿತೆವು”.

ಹೀಗೆ ಸೈದ್ಧಾಂತಿಕ ಸ್ಪಷ್ಟತೆ ಪಡೆದು ಕತೆ, ಕವಿತೆ, ಲೇಖನ, ಪತ್ರಿಕಾ ವರದಿ (ಹಾಸನ ಜಿಲ್ಲೆಯಿಂದ ‘ಲಂಕೇಶ್ ಪತ್ರಿಕೆ’ – ವರದಿಗಾರ್ತಿ) ಮಾಡುತ್ತಲೆ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾದರು. ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕಿಯಾಗಿ ಕೆಲಸ ಮಾಡಿ, ರಾಜ್ಯ ಸಮ್ಮೇಳನಗಳನ್ನು ಮಾಡಲು ಕೈ ಜೋಡಿಸಿದರು. ಹಾಸನದ ನೆಲದಲ್ಲಿ ಹುಟ್ಟಿದ ದಲಿತ ಚಳವಳಿ, ರೈತ ಚಳವಳಿ, ಬಾಗೂರು – ನವಿಲೆ ನೀರಿನ

ಹೋರಾಟ, ಗೋಕಾಕ್ ಚಳವಳಿ, ಕಾರ್ಮಿಕ ಕೂಲೀಕಾರರ ಚಳವಳಿ, ಬಾಬಾಬುಡನ್ ಗಿರಿ – ದತ್ತ ಪೀಠದ ಚಳವಳಿ, (ಇವರ ಜೊತೆ ಗೌರಿ ಲಂಕೇಶ್ ಪ್ರಧಾನ ಪಾತ್ರ ವಹಿಸಿದ್ದರು) ಲೈಂಗಿಕ ಅಲ್ಪ ಸಂಖ್ಯಾತರ ಹೋರಾಟ, ರಂಗಭೂಮಿ ಚಳವಳಿ, ಸ್ತ್ರೀವಾದಿ ಚಿಂತನಾ ಗೋಷ್ಠಿಗಳಲ್ಲಿ… ಹೀಗೆ ಅವರ ಸಕ್ರಿಯ ಪಾತ್ರ ಇದೆ. ಅವರು ವೃತ್ತಿಯಲ್ಲಿ ವಕೀಲರಾಗಿ ನೂರಾರು ಅಸಹಾಯಕರಿಗೆ, ಮುಸ್ಲಿಂ ಮಹಿಳೆಯರಿಗೆ ಸಹಾಯಹಸ್ತ ಚಾಚಿದ್ದಾರೆ. ಕಾನೂನು ಹೋರಾಟದಲ್ಲಿ ಜಯ ತಂದು ಕೊಟ್ಟಿದ್ದಾರೆ.

ಬಾನು ಅವರು ಬಂಡಾಯದ ಜೊತೆ ಹೇಗೋ ದಲಿತ ಸಂಘರ್ಷ ಸಮಿತಿಯ ಚಂದ್ರಪ್ರಸಾದ್ ತ್ಯಾಗಿ ಅವರ ಜೊತೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಆಳವಾಗಿ ಅಧ್ಯಯನ ಮಾಡಿದ್ದರಿಂದ ದಲಿತ ಜನಾಂಗಕ್ಕೆ ಶಿಕ್ಷಣ, ಸಂಘಟನೆ, ಹೋರಾಟ ಏಕೆ ಮುಖ್ಯವಾಗುತ್ತೆ ಎಂಬ ಅರಿವನ್ನು ಮೂಡಿಸಿದರು. ಅಂಬೇಡ್ಕರ್ ಜಯಂತಿ ದಿನ ಹಾಸನದ ಕೊಳೆಗೇರಿಯಲ್ಲಿ ಕಸ ಗುಡಿಸಿ, ದಲಿತರ ಮನೆಗಳಲ್ಲಿ ಆಹಾರ ಸೇವಿಸಿದ್ದು, ಜ.ಹೊ. ನಾರಾಯಣಸ್ವಾಮಿ ಅವರಂಥ ವಿಚಾರವಾದಿ ಜೊತೆ ಹೋರಾಟದಲ್ಲಿ ಭಾಗಿಯಾದದ್ದು, ಎಂಬತ್ತರ ದಶಕದಲ್ಲಿ ಸುಬ್ಬು ಹೊಲೆಯಾರ ಅಂಥ ಹುಡುಗರಿಗೆ ಅಂಬೇಡ್ಕರ್ ವಿಚಾರಗಳಲ್ಲಿ ಪ್ರೇರಣೆ ಆಗುವಂತೆ ಮಾಡಿದ್ದು ಮಹತ್ವದ್ದು, ಇವರ ದಲಿತಪರ ಕಾಳಜಿ, ತನ್ನ ಮುಸ್ಲಿಂ ಜನಾಂಗದ ಹೆಣ್ಣುಮಕ್ಕಳ ಬವಣೆಗೆ ಪರಿಹಾರ ಸೂಚಿಸುತ್ತಲೆ ತನ್ನ ಜನಾಂಗದ, ಸಮಾಜದ ಹಿರಿಯರನ್ನು ಎದುರು ಹಾಕಿಕೊಂಡ ಘಟನೆಯೂ ನಡೆಯಿತು.

ತಮ್ಮ ಕೃತಿಯೊಂದಕ್ಕೆ ಅಕಾಡೆಮಿಯ ಪ್ರಶಸ್ತಿ ಬಂದ ಸಂದರ್ಭಕ್ಕೆ ಪತ್ರಿಕೆಯೊಂದು ಇವರನ್ನು ಸಂದರ್ಶನ ಮಾಡಿತು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ: ‘ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಲು ಹೋರಾಡುವ ಅಗತ್ಯ ಇಲ್ಲ. ಏಕೆಂದರೆ ಮಹಿಳೆ ಮಸೀದಿಗೆ ಹೋಗಲು ಯಾವುದೇ ಅಡ್ಡಿ ಇಲ್ಲ. ಪುರುಷಶಾಹಿ ವ್ಯವಸ್ಥೆಯಿಂದ ಅವಕಾಶ ಸಿಗುತ್ತಿಲ್ಲ ಅಷ್ಟೆ” ಎಂದು ಬಾನು ಹೇಳಿದ ಮಾತು ತಮ್ಮ ಜನಾಂಗದ ಹಿರಿಯರಿಗೆ, ಮಸೀದಿ ಮುಲ್ಲಾ/ಮೌಲ್ವಿಗಳಿಗೆ ಸಹಿಸಿಕೊಳ್ಳಲಾಗಲಿಲ್ಲ. ಇದು ಮುಸ್ಲಿಂ ಧರ್ಮಕ್ಕೆ ಮಾಡಿದ ಅಪಚಾರ ಎಂದು ಸಭೆ ನಡೆಸಿ, ಬಾನು ಹಾಗೂ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿ, “ಬಾನು ಅವರು ಇನ್ನೆಂದೂ ಬರವಣಿಗೆ ಮಾಡುವುದಿಲ್ಲ, ಮುಸ್ಲಿಂ ಧರ್ಮ ಅವಮಾನ ಮಾಡುವುದಿಲ್ಲ ಎಂದು ಬರೆದುಕೊಟ್ಟು ಕ್ಷಮಾಪಣೆ ಕೇಳಬೇಕು” ಎಂದು ಫತ್ವಾ ಹೊರಡಿಸಿದರು. ಬಾನು ಅವರು ಈ ಒತ್ತಡಕ್ಕೆ ಮಣಿಯಲೇ ಇಲ್ಲ. ಹಲವು ತಿಂಗಳು ಇದೊಂದು ಚರ್ಚೆಯ ವಿಷಯವೆ ಆಯ್ತು. ಆಗ ಅವರ ಇಡೀ ಕುಟುಂಬ ಆತಂಕ, ಭಯದಲ್ಲಿ ಇದ್ದದ್ದು ನಿಜ. ಮುಂದೆ ಸಂಧಾನದ ಸಭೆ ನಡೆಯಿತು. ಬಂಡಾಯ ಸಂಘಟನೆಯ ಮುಖ್ಯರಾದ ಬರಗೂರು ರಾಮಚಂದ್ರಪ್ಪ ಅವರು ಹಾಸನದ ಮುಸ್ಲಿಂ ಹಿರಿಯರು, ಮೌಲ್ವಿಗಳ ಸಮ್ಮುಖದಲ್ಲಿನ ಸಭೆಯಲ್ಲಿ ಭಾಗಿಯಾಗಿ, ‘ಬಾನು ಅವರು ಮುಸ್ಲಿಂ ಜನಾಂಗದ ಹೆಮ್ಮೆ. ಅವರೊಬ್ಬ ಪ್ರಗತಿಪರ ಲೇಖಕಿ, ಪತ್ರಕರ್ತೆ, ವಕೀಲರು. ಅವರಿಗೆ ಸಾಮಾಜಿಕ ಜವಾಬ್ದಾರಿ ಇದೆ. ಇಂಥವರು ನಿಮ್ಮ ಸಮಾಜಕ್ಕೆ ಹೆಮ್ಮೆ, ಬಹಿಷ್ಕಾರ ವಾಪಾಸು ಪಡೆಯಿರಿ” ಎಂದು ತಿಳಿಹೇಳಿ, ಅವರ ಮನವೊಲಿಸಿದ್ದರು.

ಮುಂದೆ ಲೈಂಗಿಕ ಅಲ್ಪಸಂಖ್ಯಾತರಿಗಾದ ಅನ್ಯಾಯದ ಒಂದು ಕಹಿ ಘಟನೆಯಲ್ಲಿ ಬಾನು ಅವರು ಅವರ ಬೆಂಬಲಕ್ಕೆ ನಿಂತಿದ್ದು ಮಾನವೀಯತೆಗೆ ಸಾಕ್ಷಿ. ಅವರು ಆಗಲೇ ವಕೀಲರಾಗಿ ಹೆಸರಾಗಿದ್ದರು. ಒಂದು ರಾತ್ರಿ ಹಾಸನದ ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯ ಕೊಲೆಯಾಗಿತ್ತು. ಅದನ್ನು ಲೈಂಗಿಕ ಅಲ್ಪಸಂಖ್ಯಾತರೆ ಮಾಡಿದ್ದಾರೆಂದು ಹಲವು ಲೈಂಗಿಕ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಅವರಿಗೆ ಚಿತ್ರಹಿಂಸೆ ನೀಡಿದರು. ವಕೀಲರಾದ ಬಾನು ಅವರು ಯಾವುದೇ ಹಣ ಪಡೆಯದೆ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ವಕಾಲತ್ತು ಹಾಕಿ ಕೋರ್ಟಿನಲ್ಲಿ ವಾದ ಮಾಡಿ. ಅವರಿಗೆ ಗೆಲುವು ತಂದುಕೊಟ್ಟು ನೆಮ್ಮದಿಯಿಂದ ಬದುಕುವ ಕಟ್ಟಿಕೊಳ್ಳುವಂತಾ ಕೆಲಸ ಮಾಡಿದರು.

ಜನಪರ ಹೋರಾಟ, ಪ್ರಗತಿಪರ ವಿಚಾರಗಳ ಮೊತ್ತವಾಗಿರುವ ಬಾನು ಮುಷ್ತಾಕ್ ಅವರಣ ಕಾಳಜಿ, ಅವರ ಪ್ರಬಂಧದಂಥ ಗದ್ಯ ಬರಹದ ಉತ್ತಮ ಶೈಲಿ, ವಸ್ತು, ನಿರೂಪಣೆಯಿಂದು ಬಹುಕಾಲ ಮನದಲ್ಲಿ ಅಚ್ಚೊತ್ತುವ ಲೇಖಕಿಯಾಗಿದ್ದಾರೆ.

– ಆರ್ ಜಿ ಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು

One Response

  1. ಬಾನು ಅವರು ಹೋರಾಟಗಾರ ಬರೆಹಗಾರರಾಗಿ ರೂಪುಗೊಂಡ ಬಗೆಯನ್ನು, ಅವರೇ ಯಾಕೆ ಈ ಬಾರಿಯ ದಸರಾ ಶುರುವುಗೊಳಿಸಲು ಸೂಕ್ತ ವ್ಯಕ್ತಿ ಎನ್ನುವ ನೆಲೆಯ ಈ ಬರೆಹ ಚನ್ನಾಗಿದೆ. ಸರಿಯಾಗಿದೆ.

Leave a Reply