ಕನ್ನಡದ ಚಾನಲ್ ಒಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಎಂಬ ಮನುಷ್ಯರ ವಿಕೃತಿಗಳ ಪ್ರದರ್ಶನದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂತೋಷ್ ವರ್ತೂರು ಎಂಬಾತನು ಕುತ್ತಿಗೆಯಲ್ಲಿ ಹಾಕಿದ್ದ ನಾಯಿ ಸರಪಳಿ ಮಾದರಿಯ ಚಿನ್ನದ ಚೈನ್ ನಲ್ಲಿ ಹುಲಿ ಉಗುರು ಇತ್ತು ಎಂಬ ಕಾರಣದಿಂದ ಅರಣ್ಯಾಧಿಕಾರಿಗಳಿಂದ ಬಂಧಿತನಾಗಿದ್ದಾನೆ.
ಜಗತ್ತಿನ ಟಿ.ವಿ. ಕಾರ್ಯಕ್ರಮಗಳಲ್ಲಿ ಅತ್ಯಂತ ಅವಿವೇಕದ ಹಾಗೂ ಅಜ್ಞಾನದ ಕಾರ್ಯಕ್ರಮ ಎಂದು ನಾನು ನಿರ್ಧರಿಸಿರುವ ಕಾರಣದಿಂದಾಗಿ ನನ್ನ ಮನೆಯಲ್ಲಿ ಟಿ.ವಿ. ಇದ್ದ ಕಾಲದಲ್ಲಿ ಈ ಕಾರ್ಯಕ್ರಮವನ್ನು ನೋಡಬಾರದೆಂದು ಪತ್ನಿ ಮತ್ತು ಮಕ್ಕಳ ಮೇಲೆ ನಿರ್ಬಂಧ ಹೇರಿದ್ದೆ. ಈಗ ಐದು ವರ್ಷಗಳಿಂದ ಟಿ.ವಿಯನ್ನೇ ನಾನು ಮನೆಯಿಂದ ಹೊರಗಿಟ್ಟಿದ್ದೀನಿ. ಪತ್ರಿಕೆಯಲ್ಲಿ ಸಂತೋಷನ ಭಾವ ಚಿತ್ರವನ್ನು ಗಮನಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಮಿತ್ರ ಹಾಗೂ ಕಥೆಗಾರ ಜೋಗಿಯವರು ಈ ದಿನ ಒಂದು ಅರ್ಥಪೂರ್ಣ ಲೇಖನ ಬರೆದಿದ್ದಾರೆ. ಈ ದೇಶದ ಸೆಲೆಬ್ರಿಟಿಗಳು ಎನಿಸಿಕೊಳ್ಳುವ ಕ್ರೀಡೆ ಮತ್ತು ಸಿನಿಮಾ ತಾರೆಯರು ಇಂತಹ ಭ್ರಮೆಗಳಿಂದ ಹೊರಬರಬೇಕು. ಇವರೆಲ್ಲಾ ಹುಲಿ ಉಗುರು ಧರಿಸುವ ಹುಚ್ಚಿನಿಂದಾಗಿ ಅರಣ್ಯದ ಪ್ರಾಣಿಗಳು ಹತ್ಯೆಯಾಗುತ್ತಿವೆ ಎಂಬ ಅವರ ಮಾತು ನೂರಕ್ಕೆ ನೂರು ಸತ್ಯ.
ದಶಕದ ಹಿಂದೆ ಹಿಂದಿ ನಟ ಸಲ್ಮಾನ್ ಖಾನ್ ರಾಜಸ್ತಾನದ ಜೋಧಪುರ ಬಳಿಯ ಅರಣ್ಯದಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಿ ಇನ್ನೂ ಸಹ ಮೊಕದ್ದೊಮೆಯನ್ನು ಎದುರಿಸುತ್ತಿದ್ದಾನೆ.
ಇವರೆಲ್ಲರಿಗಿಂದ ಭಿನ್ನವಾಗಿ ಬದುಕುತ್ತಿರುವ ಭಾರತೀಯ ಕ್ರಿಕೇಟ್ ರಂಗದ ಧ್ರುವತಾರೆ ಎನಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರ ನಡೆ ಈ ಅವಿವೇಕಿಗಳಿಗೆ ಮಾದರಿಯಾಗಬೇಕಿದೆ. ತನ್ನ ಸೌಮ್ಯ ಸ್ವಭಾವ ಮತ್ತು ನುಡಿಯಿಂದ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿರುವ ರಾಹುಲ್ ದ್ರಾವೀಡ್ ಭಾರತದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ, ನಾಯಕನಾಗಿ ಮಿಂಚಿ ಈಗ ಭಾರತ ತಂಡದ ಕೋಚ್ ಆಗಿದ್ದಾರೆ.
ರಾಹುಲ್ ವಿದೇಶ ಪ್ರವಾಸದಿಂದ ಹಿಂತಿರುಗಿ ಬಂದ ನಂತರ ಅತ್ಯಂತ ಗುಪ್ತವಾಗಿ ಯಾವುದೇ ಮಾಧ್ಯಮಗಳಿಗೆ ಸುಳಿವು ನೀಡದೆ ಬನ್ನೇರುಘಟ್ಟ, ಬಂಡಿಪುರ ಮತ್ತು ನಾಗರಹೊಳೆ ಅರಣ್ಯಕ್ಕೆ ತಮ್ಮ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಬಂದು ಎರಡು ದಿನ ಉಳಿದುಕೊಳ್ಳುವ ಹವ್ಯಾಸ ಇರಿಸಿಕೊಂಡಿದ್ದಾರೆ.
ಪ್ರತಿ ವರ್ಷ ಅವರು ತಪ್ಪದೆ ಅರಣ್ಯಕ್ಕೆ ಹೋಗುತ್ತಾರೆ. ಟೆಂಟ್ ನಲ್ಲಿ ಉಳಿದುಕೊಳ್ಳುತ್ತಾರೆ. ಬೆಳಗಿನ ಜಾವ ಅರಣ್ಯ ಇಲಾಖೆಯ ಜೀಪ್ ನಲ್ಲಿ ಸಫಾರಿ ಶುಲ್ಕವನ್ನು ಪಾವತಿಸಿ ಅರಣ್ಯವನ್ನು ಸುತ್ತು ಹಾಕುತ್ತಾರೆ. ಪ್ರವಾಸದಲ್ಲಿ ಕಂಡು ಬರುವ ಪ್ರಾಣಿಗಳ ಬಗ್ಗೆ ತಮ್ಮ ಮಕ್ಕಳಿಗೆ ವಿವರಿಸುತ್ತಾರೆ. ಹತ್ತು ವರ್ಷದ ಹಿಂದೆ ನನ್ನ ಪುತ್ರ ಅನನ್ಯಕುಮಾರ್ ನಾಗರಹೊಳೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ತೆಗೆದ ಚಿತ್ರವಿದು.
ರಾಹುಲ್ ಎಂದಿಗೂ ಹುಲಿ ಉಗುರು ಧರಿಸಿಲ್ಲ, ಹುಲಿ ಚರ್ಮವನ್ನು ತನ್ನ ಮನೆಯ ಕುರ್ಚಿಗೆ ಹಾಕಿಕೊಂಡಿಲ್ಲ ಮತ್ತು ಪ್ರಾಣಿಗಳ ಕೊಂಬು ಅಥವಾ ತಲೆ ಬುರುಡೆಯಿಂದ ಮನೆಯ ಗೋಡೆಗಳನ್ನು ಶೃಂಗರಿಸಿಲ್ಲ. ಒಬ್ಬ ಪ್ರಸಿದ್ಧ ಸೆಲಿಬ್ರಿಟಿ ಹೇಗೆ ಬದುಕಬೇಕು ಎಂಬುದಕ್ಕೆ ರಾಹುಲ್ ದ್ರಾವಿಡ್ ಗಿಂತ ಮಾದರಿ ನಮಗೆ ಬೇಕೆ?
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




