“ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರವನ್ನು 1935ರಲ್ಲಿ ನಾಸಿಕ್ ನಲ್ಲಿ ತೆಗೆದುಕೊಂಡೆ. ಆಗಿನಿಂದ ಈ ಹೋರಾಟ ಮುಂದುವರೆಸಿದ್ದೇನೆ. 1935 ಅಕ್ಟೋಬರ್ 13 ರಂದು ಯೆವೋಲಾದಲ್ಲಿ ನಡೆದ ದೊಡ್ಡ ಸಮ್ಮೇಳನದಲ್ಲಿ ಹಿಂದೂ ಧರ್ಮ ತೊರೆಯುವ ನಿರ್ಧಾರ ಕೈಗೊಂಡೆವು. ಆ ಸಮ್ಮೇಳನದಲ್ಲಿ ‘ನನ್ನ ಪ್ರಯತ್ನವಿಲ್ಲದೆ ಹಿಂದೂವಾಗಿ ಹುಟ್ಟಿದೆ, ಆದರೆ ಹಿಂದೂವಾಗಿ ಸಾಯಲಾರೆ’ ಎಂದು ಪ್ರತಿಜ್ಞೆ ಮಾಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಮತಾಂತರವು ನನಗೆ ಅಗಾಧ ತೃಪ್ತಿಯನ್ನೂ, ನೆಮ್ಮದಿಯನ್ನೂ ನೀಡಿದೆ. ನರಕದಿಂದ ನನಗೆ ಮುಕ್ತಿ ದೊರೆತಂತೆ ಅನಿಸುತ್ತಿದೆ. ಮತಾಂತರಗೊಂಡ ನೀವೆಲ್ಲರೂ ಇದನ್ನು ನಿಮ್ಮ ಅನುಭವದಿಂದಲೇ ಅರಿತುಕೊಳ್ಳಬೇಕು. ನನಗೆ ಕುರುಡು ನಂಬಿಕೆಯ ಅನುಯಾಯಿಗಳು ಬೇಡ. ನನಗೆ ಕುರಿಗಳ ಬುದ್ಧಿ ಇಷ್ಟವಿಲ್ಲ. ಬುದ್ಧನಲ್ಲಿ ಶರಣಾಗಬರುವವರು ತಮ್ಮ ಸ್ವಂತ ಅರಿವಿನಿಂದ, ಸ್ವಂತ ತ್ಯಾಗದಿಂದ ಬರಬೇಕು. ಏಕೆಂದರೆ ಪಾಲಿಸಲು ಅತಿ ಕಷ್ಟವಾದ ಧರ್ಮ ಇದು…
ಮನುಷ್ಯನ ಏಳ್ಗೆಗೆ ಧರ್ಮ ಅತ್ಯಂತ ಅಗತ್ಯ… ಬಡವರು ಅನುಭವಿಸಿ ತಾಳಿಕೊಳ್ಳಬೇಕಾದ ಕಷ್ಟಗಳ ಅರಿವಿದೆ ನನಗೆ. ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಕುರಿತು ನಾವು ಹೋರಾಟ ನಡೆಸಬೇಕು. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಬೇಕು. ನನ್ನ ಜೀವಮಾನವಿಡೀ ಅದಕ್ಕಾಗೇ ಹೋರಾಡುತ್ತಿದ್ದೇನೆ. ಅದೆಷ್ಟೇ ಅಲ್ಲ, ಮನುಷ್ಯ ಕುಲವೇ ಆರ್ಥಿಕವಾಗಿ ಸಬಲವಾಗಬೇಕು.
ಮನುಷ್ಯ ಮತ್ತು ಪ್ರಾಣಿಯ ನಡುವೆ ವ್ಯತ್ಯಾಸಗಳಿವೆ. ತನ್ನ ಬದುಕಿಗಾಗಿ ಆಹಾರವೊಂದನ್ನು ಬಿಟ್ಟು ಪ್ರಾಣಿಗೆ ಮತ್ತೇನೂ ಬೇಡ. ಆದರೆ ಮನುಷ್ಯನಿಗೆ ದೇಹ ಮತ್ತು ಸಂವೇದನಾಶೀಲ ಮನಸ್ಸಿದೆ. ಮನಸ್ಸು ದೇಹದ ಜೊತೆಜೊತೆಗೆ ಬೆಳೆಯಬೇಕು. ಮನಸ್ಸು ಶುದ್ಧ ಆಲೋಚನೆಗಳೊಂದಿಗೂ ಕೂಡಿರಬೇಕು. ಕಾಯಿಲೆಗಳಿಂದ ಮುಕ್ತವಾಗಿರಬೇಕಾದರೆ ಹೇಗೆ ದೃಢವಾದ ದೇಹವನ್ನು ಹೊಂದಿರಬೇಕೋ ಹಾಗೆ, ದೇಹವನ್ನು ಆರೋಗ್ಯಯುತವಾಗಿಡಬೇಕಾದರೆ ಶುದ್ಧ ಮನಸ್ಸಿರಬೇಕು. ಇಲ್ಲದಿದ್ದರೆ ಮನುಷ್ಯ ಅಭಿವೃದ್ಧಿ ಹೊಂದುತ್ತಿದ್ದಾನೆಂದು ಹೇಳಲಾಗದು.
ಮನುಷ್ಯನ ಮನಸ್ಸು ಏಕೆ ಕಾಯಿಲೆ ಬೀಳುತ್ತದೆ? ಮಹಾರಾಷ್ಟ್ರದ ಸಂತ ಕವಿ ರಾಮದಾಸ ಹೇಳುತ್ತಾನೆ: ಮನುಷ್ಯನಲ್ಲಿ ಉತ್ಸಾಹವಿಲ್ಲ ಎಂದರೆ ಒಂದೋ ಅವನ ಮನಸ್ಸು ಅಥವಾ ಅವನ ದೇಹಕ್ಕೆ ಕಾಯಿಲೆಯಾಗಿರಬೇಕು.
ಮನುಷ್ಯನ ಉತ್ಸಾಹವನ್ನು ಹೀರಿಬಿಡುವುದು ಯಾವುದು? ಉತ್ಸಾಹವಿಲ್ಲದಿದ್ದರೆ ಜೀವನವೇ ಗುಲಾಮಗಿರಿಯಾಗಿ ಎಳೆದುಕೊಂಡು ಹೋಗಬೇಕಾದ ಭಾರವಾಗುತ್ತದೆ. ಉತ್ಸಾಹವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉತ್ಸಾಹ ಏಕೆ ಕಳೆದುಹೋಗುತ್ತದೆ? ಮನುಷ್ಯನ ಮಟ್ಟಿಗೆ ಹೇಳುವುದಾದದರೆ ತನ್ನನ್ನು ತಾನು ಉಚ್ಛ್ರಾಯ ಸ್ಥಿತಿಗೊಯ್ಯಲು ಅವಕಾಶಗಳಿಲ್ಲದಿರುವುದು ಉತ್ಸಾಹವನ್ನು ಕಳೆದುಹಾಕುತ್ತದೆ. ನಿರಾಶಾದಾಯಕ ಪರಿಸ್ಥಿತಿ ಉತ್ಸಾಹ ಕಳೆಯುತ್ತದೆ. ಅಂಥ ಮನಸ್ಸು ಕಾಯಿಲೆಗೊಳಗಾಗುತ್ತದೆ.
ಸದ್ಯದ ಕಷ್ಟಗಳಿಂದ ಪಾರಾಗಲು ಯಾವುದೇ ಭರವಸೆ ಕಾಣದಿದ್ದರೆ ಆತ ಯಾವಾಗಲೂ ಅಸಂತೋಷಿಯಾಗಿರುತ್ತಾನೆ. ಉತ್ಸಾಹ ಹುಟ್ಟುವುದು ಯಾವಾಗ? ಒಬ್ಬ ಉಸಿರಾಡುವಷ್ಟು ಮುಕ್ತನಾಗಿದ್ದು ತನ್ನ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತಿದ್ದರೆ ಉತ್ಸಾಹ, ಸ್ಫೂರ್ತಿ ಹೊಂದುತ್ತಾನೆ.
ಶಾಲೆಯಲ್ಲಿ ಮಾಸ್ತರರು ‘ಓಹೋ, ಇಲ್ಲೊಬ್ಬ ಹೊಲೆಯ ಹುಡುಗನಿದ್ದಾನೆ. ತನ್ನ ತರಗತಿಯಲ್ಲಿ ಅದು ಹೇಗೆ ಅವನು ಮೊದಲ ಸ್ಥಾನ ಪಡೆಯಲು ಸಾಧ್ಯವಾಯಿತು?’ ಎಂದು ಹೇಳುತ್ತಿದ್ದರೆ, ಮೊದಲ ಸ್ಥಾನ ಯಾವಾಗಲೂ ಬ್ರಾಹ್ಮಣನಿಗೇ ಮೀಸಲಾಗಿರುವುದೆಂದರೆ ಆ ಹೊಲೆಯ ಹುಡುಗ ಹೇಗೆ ಉತ್ಸಾಹ, ಸ್ಫೂರ್ತಿ ಭರವಸೆಯನ್ನು ಹೊಂದುತ್ತಾನೆ? ತನ್ನ ಬದುಕಿನಲ್ಲಿ ಉನ್ನತಿಯನ್ನು ಹೇಗೆ ಸಾಧಿಸುತ್ತಾನೆ?
ದುರದೃಷ್ಟವಶಾತ್ ಅಸಮಾನತೆ ಮತ್ತು ಅನ್ಯಾಯದ ತತ್ವಗಳ ಮೇಲೆ ನಿಂತಿರುವ ಹಿಂದೂ ಧರ್ಮವು ಉತ್ಸಾಹ ತುಂಬಲು ಸಾಧ್ಯವಿಲ್ಲ. ಅಸ್ಪೃಶ್ಯರು ಹಿಂದೂ ಧರ್ಮದ ನೆರಳಿನಲ್ಲಿ ಗುಲಾಮಗಿರಿ ನಡೆಸುವ ತನಕ ಅವರ ಜೀವನ ಉತ್ತಮಪಡಿಸಿಕೊಳ್ಳಲು ಯಾವುದೇ ಭರವಸೆ, ಉತ್ಸಾಹ ಹುಟ್ಟುವುದಿಲ್ಲ. ಹೆಚ್ಚೆಂದರೆ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವತ್ತ ಗಮನ ಕೊಟ್ಟಾರು.”
– ಡಾ. ಬಿ.ಆರ್. ಅಂಬೇಡ್ಕರ್ (ಬೌದ್ಧ ಧರ್ಮ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಿಂದ, ನಾಗಪುರ, 14/10/1956)
ಕೃಪೆ: – ‘ಭೀಮಯಾನ’ (ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು, ಪುಟ: 86-87, 2012)




