ಬೆಂಗಳೂರು ಜನತೆ ಶಾ, ಪೈ ಬರುವ ಮುನ್ನವೇ ಸುಂದರ ಬದುಕನ್ನು ಕಲ್ಪಿಸಿಕೊಂಡಿದ್ದರು

8 months ago

ಸರ್ಕಾರ ಜನಸಾಮಾನ್ಯರ ಮತ್ತು ಬೆಂಗಳೂರಿನ ಮೂಲ ನಿವಾಸಿಗಳ ಜನರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು.

ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ದಿಗ್ಗಜರು ಎಂದು ಕರೆಸಿಕೊಂಡಿರುವ ಕೆಲವು ವ್ಯಕ್ತಿಗಳು ಪದೇಪದೇ ಬೆಂಗಳೂರು ನಗರದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ.

5 ನೂರು ವರ್ಷಗಳ ಹಿಂದೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಿರ್ಮಿಸಿದಂತಹ ಬೆಂಗಳೂರಿನಲ್ಲಿ ಹಲವಾರು ಬಡಾವಣೆಗಳಿದ್ದು ಅಲ್ಲಿ ಎಂತಹ ಮಳೆ ಬಂದರೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೂರಾರು ಕೆರೆಗಳನ್ನ ಕಟ್ಟಿಸಿ ಜನರ ಬದುಕಿಗೆ ಪೂರಕವಾದ ವಿನ್ಯಾಸವನ್ನು ನಿರ್ಮಿಸಿದ್ದರು.

ಕಾಲ ಬದಲಾದಂತೆ ಬೆಂಗಳೂರು ಬೆಳೆಯುತ್ತಾ ಅತ್ಯಂತ ಉತ್ತಮ ಹವಾಮಾನ ಸೌಮ್ಯ ಮತ್ತು ಸಜ್ಜನಿಕೆಯ ಕನ್ನಡಿಗರು ಇವುಗಳ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಪಂಚದ ಎಲ್ಲ ಶ್ರೀಮಂತರು ತಮ್ಮ ವ್ಯಾಪಾರವನ್ನು ಬೆಂಗಳೂರಿಗೆ ವಿಸ್ತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಸಂಖ್ಯೆ ಒಂದುವರೆ ಕೋಟಿ ದಾಟಿದೆ. ಅಷ್ಟೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆಯು ಇದೆ. ಎಲ್ಲ ಸರ್ಕಾರಗಳು ಕಾಲಕಾಲಕ್ಕೆ ಸಮೂಹ ಸಾರಿಗೆ ವ್ಯವಸ್ಥೆಯ ಅನುಕೂಲ ಕಲ್ಪಿಸಿಕೊಟ್ಟಿದೆ. ಮೆಟ್ರೋ ಮಾರ್ಗವು ಪ್ರತಿ ವರ್ಷವೂ ವಿಸ್ತಾರವಾಗುತ್ತಿದೆ. ವರ್ತುಲ ರಸ್ತೆಗಳು. ಒಳ ವರ್ತುಲ ರಸ್ತೆಗಳು, ಸೇತುವೆಗಳು, ಸುರಂಗ ಮಾರ್ಗಗಳು, ಹೀಗೆ ಹಲವಾರು ಪ್ರಕಾರದಲ್ಲಿ ಜನರ ಅವಶ್ಯಕತೆ ಅನುಗುಣವಾಗಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಎಷ್ಟೇ ಅಭಿವೃದ್ಧಿ ಮಾಡಿದರು ಇರುವ ಬೆಂಗಳೂರಿನಲ್ಲಿಯೇ ಮಾಡಬೇಕಾಗಿದೆ.

ಜನಸಂಖ್ಯೆಯ ಹೆಚ್ಚಳದಿಂದ ನೀರಿನ ಮತ್ತು ಒಳಚರಂಡಿಯ  ಪೈಪ್ ಗಳು ಕಾಲಕಾಲಕ್ಕೆ ಇವುಗಳನ್ನು ಬದಲಾಯಿಸುತ್ತ ಇದರ ವಿಸ್ತೀರ್ಣವನ್ನು ದೊಡ್ಡದಾಗಿಸುತ್ತಿದ್ದಾರೆ.

ಪ್ರತಿದಿನವೂ ಲಕ್ಷಾಂತರ ವಾಹನಗಳ ಸಂಚಾರದಿಂದ ಎಂತಹ ರಸ್ತೆಯು ಸಹ ವಾಹನಗಳ ಒತ್ತಡವನ್ನು ತಡೆದುಕೊಳ್ಳಲಾಗುತ್ತಿಲ್ಲ. ಜೊತೆಗೆ ಹಲವಾರು ವರ್ಷಗಳಿಂದ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯೂ ಬರುತ್ತಿದೆ. ಹಲವಾರು ಬಡಾವಣೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ರಸ್ತೆಗಳ ಸಮಸ್ಯೆ ಪದೇಪದೇ ಕಾಡುತ್ತಿದೆ. ಇದರ ನಡುವೆ ದೂರದೃಷ್ಟಿತ್ವದ ಅತ್ಯಂತ ಶ್ರೇಷ್ಠ ಆಡಳಿತಗಾರರಾಗಿದ್ದ ಕೆಂಪೇಗೌಡರು ನಿರ್ಮಿಸಿರುವ ಹಳೆಯ ಬೆಂಗಳೂರಿನಲ್ಲಿ ಇಂದಿಗೂ ಸಹ ಸಮಸ್ಯೆಗಳ ಕಡಿಮೆ ಇದೆ. ಇಲ್ಲಿಯೂ ಸಹ ಅಪಾರ್ಟ್ಮೆಂಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರುಗಳ ಸಂಖ್ಯೆಯು ಹೆಚ್ಚಾಗಿದೆ. ವಾಹನಗಳ ಸಂಚಾರವು ಹೆಚ್ಚಾಗಿದೆ. ಇದರಿಂದ ಇಲ್ಲಿ ರಸ್ತೆಗಳ ಸಮಸ್ಯೆ ಸಾಮಾನ್ಯವಾಗಿ ಬರುತ್ತಿದೆ. ಆದರೆ ಎಂತಹ ಮಳೆ ಬಂದರೂ ಹಳೆಯ ಬೆಂಗಳೂರಿನ ಜನರಿಗೆ ಅದರ ಕಾಟ ಇರುವುದಿಲ್ಲ. ಕೆಂಪೇಗೌಡರು ನಿರ್ಮಿಸಿ ಕೊಟ್ಟ ಕೆರೆಗಳನ್ನ ಕೆಲವರು ನುಂಗಿ ನೀರು ಕುಡಿಯದಿದ್ದರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅಂತಹ ಒತ್ತುವರಿಯಾಗಿರುವ ಕೆರೆಗಳಲ್ಲಿಯೇ ಬಹಳಷ್ಟು ಮಾಹಿತಿ ತಂತ್ರಜ್ಞಾನದ ದೊಡ್ಡ ದೊಡ್ಡ ಕಟ್ಟಗಳು ನಿರ್ಮಾಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ 2013 ರಿಂದ 18 ರ ಅವಧಿಯಲ್ಲಿ ಮತ್ತು 2023ರ ನಂತರ ಬೆಂಗಳೂರು ನಗರದ ವಾಹನಗಳ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ವೈಟ್ ಟಾಪಿಂಗ್, ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಕಾಮಗಾರಿ ಮಾಡಬೇಕಾದರೆ ನೀರಿನ ಕೊಳವೆಗಳು ಮತ್ತು ಚರಂಡಿಯ ಪೈಪ್ ಗಳು ಹಾಗೂ ಮಳೆ ನೀರು ಹರಿಯಲು ವ್ಯವಸ್ಥೆ ಇವುಗಳೆಲ್ಲವನ್ನು ಪುನರ್ ನಿರ್ಮಾಣ ಮಾಡಬೇಕಾಗಿರುತ್ತದೆ. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೂ ಸಹ ಸಹಸ್ರಾರು ಜನ ಕಾರ್ಮಿಕರು ಹಗಲು ರಾತ್ರಿ ಎನ್ನದೆ ನಮ್ಮ ಅನುಕೂಲಕ್ಕಾಗಿ ಅವರುಗಳು ಬೆವರು ಸುರಿಸಿ ರಸ್ತೆಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ. ನೃಪತುಂಗ ರಸ್ತೆ, ಬ್ರಿಗೇಡ್ ರೋಡ್ ರಸ್ತೆಗಳು, ಅರಮನೆ ರಸ್ತೆ, ಕಾಟನ್ ಪೇಟೆ ರಸ್ತೆ, ಗೋಡ್ಸೆ ಶೆಡ್ ರಸ್ತೆ, ಇತ್ತೀಚಿಗೆ ಎನ್ ಆರ್ ಕಾಲೋನಿ ರಸ್ತೆ, ಹೀಗೆ ಅನೇಕ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದೆ ಜೊತೆಗೆ ನೂರಾರು ಕಿಲೋಮೀಟರ್ಗಳ ರಸ್ತೆಯು ವೈಟ್ ಟಾಪಿಂಗ್ ರಸ್ತೆಗಳಾಗಿ ಆಗಿ ನಿರ್ಮಿಸುತ್ತಿದ್ದಾರೆ.

ಸದ್ಯದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ರಸ್ತೆಗಳು ಕಾಮಗಾರಿ ಪೂರ್ಣಗೊಂಡರೆ ನೂರಾರು ರಸ್ತೆಗಳ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಮೆಟ್ರೋ ಕಾಮಗಾರಿ ನಡೆಯುವಂತಹ ಪ್ರದೇಶಗಳಲ್ಲಿ ಒಂದು ಹಂತದ ಕಾಮಗಾರಿ ಮುಗಿದ ನಂತರವಷ್ಟೇ ರಸ್ತೆಗಳನ್ನು ಅಭಿವೃದ್ಧಿಪಡಿಸಬಹುದು. ಮೆಟ್ರೋ ಕಾಮಗಾರಿ ಪೂರ್ಣಗೊಂಡಂತಹ ರಸ್ತೆಗಳು ಸಹ ಅಭಿವೃದ್ಧಿಯಾಗುತ್ತಿದೆ.

ಡಾ. ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿಗಳಾಗಿದ್ದಾಗ ನರ್ಮ್ ಯೋಜನೆಯ ಅಡಿಯಲ್ಲಿ ದೇಶದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಎರಡು ಲಕ್ಷ ಕೋಟಿಗಳನ್ನು ನೀಡಿದ್ದರು. ಅದೇ ರೀತಿಯಲ್ಲಿ ಬೆಂಗಳೂರು ನಗರಕ್ಕೆ 22 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದ್ದರು. ಟೀಕೆ ಮಾಡುವ ಜನ ಕೇಂದ್ರ ಸರ್ಕಾರದಿಂದ ಯಾವ ವಿಶೇಷ ಯೋಜನೆಗಳನ್ನು ಬೆಂಗಳೂರು ನಗರದ ರಸ್ತೆಗಳಿಗೆ ತಂದು ಕೊಟ್ಟಿದ್ದಾರೆ. ಸ್ವಲ್ಪ ಪ್ರಶ್ನಿಸಿಕೊಳ್ಳಿ. ರಾಜ್ಯ ಸರ್ಕಾರವನ್ನು ಟೀಕೆ ಮಾಡುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಹಾಪುರುಷರು ಕೇಂದ್ರ ಸರ್ಕಾರಕ್ಕೂ ಸಹ ಬೆಂಗಳೂರು ನಗರದ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳಿಗಾಗಿ ಅನುದಾನವನ್ನು ಕೊಡಿ ಎಂದು ಒಮ್ಮೆಯಾದರೂ ಪತ್ರವನ್ನು ಬರೆಯುವ ಮನಸ್ಸು ಮಾಡಿದ್ದರೆ ಎಷ್ಟು ಅನುಕೂಲವಾಗುತ್ತಿತ್ತು.

ಕೆಲವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಖಂಡರೇನಿಸಿಕೊಂಡವರು ಪೂರ್ವಗ್ರಹ ಪೀಡಿತವಾಗಿ ಕಾಂಗ್ರೆಸ್ ಸರ್ಕಾರವಿದೆ ಎನ್ನುವ ಒಂದೇ ಕಾರಣಕ್ಕೆ ಮೋದಿಯವರನ್ನ ಮೆಚ್ಚಿಸುವ ಕಾರಣಕ್ಕೆ ರಾಜ್ಯ ಸರ್ಕಾರವನ್ನು ಟೀಕಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಬೆಂಗಳೂರಿನ ಕೆಂಪೇಗೌಡರು ಕಟ್ಟಿದ ಸಮಯದಲ್ಲಿ ನಗರದ ಜನರ ಬದುಕಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಜನರನ್ನ ನಂಬಿ ನಿರ್ಮಾಣ ಮಾಡಿಲ್ಲ. ಬೆಂಗಳೂರು ನಗರದ ಜನತೆ ಇವರುಗಳು ಬರುವ ಮುನ್ನವು ಸುಂದರವಾದ ಬದುಕನ್ನು ಕಲ್ಪಿಸಿಕೊಂಡಿದ್ದರು. ಇವರು ಇಲ್ಲದೇ ಇದ್ದರೂ ಪ್ರಪಂಚವೇನು ಪ್ರಳಯ ಆಗುವುದಿಲ್ಲ. ಮಿಗಿಲಾಗಿ ಇವರ ಕಂಪನಿಗಳಲ್ಲಿ ನಮ್ಮ ಕನ್ನಡಿಗರಿಗೆ ಕೊಟ್ಟಿರುವ ಉದ್ಯೋಗಗಳ ಪ್ರಮಾಣವು ಅಷ್ಟರಲ್ಲೇ ಇದೆ. ಉತ್ತರ ಭಾರತದ ಮತ್ತು ಅನೇಕ ದೇಶಗಳ ಜನರ ಸೌಕರ್ಯ ಸೌಲಭ್ಯಗಳಿಗಾಗಿ ಅವರುಗಳು ಓಡಾಡುವ ಕಾರುಗಳ ಕಾರಣಕ್ಕಾಗಿ ಅವರ ಸುಂದರವಾದ ಬದುಕಿಗಾಗಿ ನಾವು ನಮ್ಮ ರಸ್ತೆಗಳನ್ನ ಅಭಿವೃದ್ಧಿಪಡಿಸಿಕೊಡಬೇಕು. ನಮ್ಮ ಮೂಲ ನಿವಾಸಿಗಳ ಸ್ಥಳಗಳನ್ನ ಸ್ವಾಧೀನಕ್ಕೆ ಪಡಿಸಿಕೊಂಡು ಸೇತುವೆಗಳು ಮತ್ತು ಮೆಟ್ರೋ ಗಳನ್ನು ನಿರ್ಮಿಸಬೇಕು.

ಸರ್ಕಾರಗಳು ಸಹ ಪದೇ ಪದೇ ಇಂತಹ ಜನರ ಮಾತಿಗೆ ಮನ್ನಣೆ ನೀಡುವುದರ ಬದಲಿಗೆ ಬೆಂಗಳೂರು ನಗರದ ಮೂಲ ನಿವಾಸಿಗಳ ಜನಸಾಮಾನ್ಯರ ಮಾತುಗಳಿಗೆ ಮನ್ನಣೆಯನ್ನು ನೀಡಿ. ಎಲ್ಲ ಸರ್ಕಾರದ ಪ್ರಮುಖರು ಬೆಂಗಳೂರು ನಗರದ ಪ್ರದಕ್ಷಿಣೆ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇರುವ ಪ್ರದೇಶಗಳು ಮಾತ್ರವೇ ಎನ್ನುವ ಭಾವನೆಯಿಂದ ಸಂಚಾರ ನಡೆಸುತ್ತೀರಿ. ಬೆಂಗಳೂರಿನ ಮೂಲ ನಿವಾಸಿಗಳು ವಾಸ ಮಾಡುವ ಪರದೇಶಗಳಿಗೂ ಭೇಟಿಕೊಟ್ಟು ಇಲ್ಲಿನ ಜನರ ಮಾತಿಗೂ ಮನ್ನಣೆ ನೀಡಿ. ಹಳೆಯ ಬೆಂಗಳೂರಿನ ಪ್ರದೇಶಗಳು ಸಹ ಅಷ್ಟೇ ಪ್ರಮಾಣದಲ್ಲಿ ಮೂಲಭೂತ ಸೌಕರ್ಯ ಸೌಲಭ್ಯಗಳನ್ನ ಪಡೆದುಕೊಳ್ಳಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ತಮ್ಮ ಕಂಪನಿಯ ನೌಕರರಿಗೆ ವೈಯಕ್ತಿಕ ವಾಹನಗಳನ್ನು ಬಳಸುವ ಬದಲಿಗೆ ನಮ್ಮ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿರುವ ಬಿಎಂಟಿಸಿ ಮತ್ತು ಮೆಟ್ರೋ ಮಾರ್ಗದಲ್ಲಿ ಸಂಚಾರವನ್ನು ಮಾಡಿ ತಮ್ಮ ವಾಹನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಂಡರೆ ರಸ್ತೆಗಳ ಸಮಸ್ಯೆ ಎಷ್ಟೋ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಇದಕ್ಕೆ ನಿಮ್ಮ ಕೊಡುಗೆಯೂ ಸೇರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply