ನಾನು ಮಾಡಿರುವ ಕೆಲಸವನ್ನು ನರೇಂದ್ರ ಮೋದಿ ಅವರು ಯಾಕೆ ಮಾಡಿಲ್ಲ?
ಬೆಂಗಳೂರು: ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
- ನೇರ ನಿಷ್ಠುರ ಪ್ರಾಮಾಣಿಕ ರಾಜಕೀಯ ನೇತಾರ ಕೆ ಎಚ್ ರಂಗನಾಥ್
- ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್-ಉನ್ ನಿಧನರಾಗಿದ್ದಾರೆಯೇ?
- ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕೋಮು ರಾಷ್ಟ್ರೀಯತೆ: ಭಾರತ ಎತ್ತ ಸಾಗುತ್ತಿದೆ?
- 2029ರ ಮಹಾಚುನಾವಣೆಗೆ ತಟ್ಟಲಿದೆ ‘ಜೆನ್ ಜಿ’ ಭೂಕಂಪ
- ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ-2026
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ “ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ ಎಂದರು.
ಜಾತಿ ವ್ಯವಸ್ಥೆ ಪರಿಣಾಮವಾಗಿ ಶೋಷಣೆಗೆ ಒಳಗಾದವರಿಗೆ, ಅವಕಾಶ ವಂಚಿತರಿಗೆ ಮೀಸಲಾತಿ ಸಿಗಲೇಬೇಕು. ನಾವ್ಯಾರು ದಡ್ಡರಲ್ಲ, ಆದರೆ ಅವಕಾಶ ವಂಚಿತರು. ನಮ್ಮ ಬುದ್ಧಿವಂತಿಕೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಅವಕಾಶವನ್ನು ಮೀಸಲಾತಿ ವ್ಯವಸ್ಥೆ ನೀಡುತ್ತಿದೆ ಎಂದರು.
ಬುದ್ಧನ ಕಾಲದಿಂದಲೂ ಇಲ್ಲಿ ಜಾತಿ ವ್ಯವಸ್ಥೆ ಇದೆ, ಅದರ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿದೆ, ಇದು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೂ ಇನ್ನೂ ಜಾತಿ ಜೀವಂತವಿದೆ ಎನ್ನುವುದು ವಿಪರ್ಯಾಸ ಎಂದರು.
ನನಗೆ ಸಮಾಜ ಅರ್ಥಮಾಡಿಕೊಳ್ಳುವ ವಯಸ್ಸು ಆದಾಗಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಇದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ. ಪಟ್ಟಭದ್ರರು ಬಹಳ ಮುಂದಾಲೋಚನೆ ಮಾಡಿ ಈ ಜಾತಿ ವ್ಯವಸ್ಥೆಯನ್ನು ಮಾಡಿದ್ದಾರೆ. ವರ್ಣ ವ್ಯವಸ್ಥೆ ನಾಶವಾಗಬೇಕು. ಇದಕ್ಕೆ ಎಲ್ಲಾ ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ತುಂಬುವುದೇ ಪರಿಹಾರವಾಗಿದೆ ಎಂದರು.
ಮಂಡಲ್ ಕಮಿಷನ್ ವರದಿ ಜಾರಿಗೆ ಬಂದಾಗ ಮೀಸಲಾತಿ ವಿರೋಧಿಗಳು ಅಮಾಯಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಅವರು ಬೆಂಕಿಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುವಂತೆ ಮಾಡಿದರು. ಒಂದು ವೇಳೆ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿರದೇ ಹೋಗಿದ್ದರೆ ಮಂಡಲ್ ಕಮಿಷನ್ ವರದಿ ಜಾರಿ ಆಗುವುದು ಅನುಮಾನವಿತ್ತು ಎಂದರು.
ಮೀಸಲಾತಿಗಾಗಿ ನಾವು ಹೋರಾಟವನ್ನೇ ಮಾಡಿಲ್ಲ. ನಮ್ಮ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸುಪ್ರೀಂ ಕೋರ್ಟ್ ಕೂಡ ಒಳಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷ, ನಮ್ಮ ಸರ್ಕಾರ ಯಾವಾಗಲೂ ಒಳ ಮೀಸಲಾತಿ ಪರವಾಗಿದೆ. ಮೀಸಲಾತಿಗೆ ಯಾವತ್ತೂ ಕೂಡ ಭಿನ್ನಾಭಿಪ್ರಾಯಗಳು ಬರಬಾರದು ಎಂದು ಕಿವಿಮಾತು ಹೇಳಿದರು.
ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರುದ್ಧವಾಗಿರುವ ಜನರ ಜೊತೆಗೆ ಸೇರಿಕೊಳ್ಳುತ್ತಾರೆ. ಅದು ಆಗಬಾರದು. ಯಾವ ಪಕ್ಷ ಮೀಸಲಾತಿಗೆ ವಿರೋಧ ಇದೆಯೋ ಅವರ ಪರವಾಗಿ ನಿಲ್ಲುವುದು, ಆ ಪಕ್ಷದ ಸಿದ್ಧಾಂತಕ್ಕೆ ಜೈ ಅನ್ನುವುದು. ಇದು ಸ್ವಾರ್ಥ ಅಲ್ಲವೇ? ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು. ಒಳ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಬಂದ ಮೇಲೆ ಎಲ್ಲಾ ಕಡೆಯೂ ಇದಕ್ಕೆ ಚಾಲನೆ ಸಿಕ್ಕಿತು. ನಮ್ಮ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತದೆ ಎಂದು ಅವತ್ತೇ ಹೇಳಿದ್ದೆ. ಅದರಂತೆ, ನಾಗಮೋಹನ್ದಾಸ್ ಕಮಿಟಿ ಮಾಡಿದೆವು. ಅವರು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಜೊತೆಗೆ ಮಾತನಾಡಿ ಒಂದು ವರದಿಯನ್ನು ಕೊಟ್ಟರು. ಅದರ ಪ್ರಕಾರ, 5 ಗುಂಪುಗಳನ್ನು ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಿದೆವು ಎಂದರು.
ಆ 5 ಗುಂಪುಗಳನ್ನು ಮತ್ತೆ 3 ಮಾಡಿದೆವು. 6:6:5 ಸೂತ್ರದಡಿ ವಿಭಜಿಸಿದೆವು. ಅಲೆಮಾರಿಗಳನ್ನು ಭೋವಿ, ಬಂಜಾರ ಸಮುದಾಯಗಳ ಜೊತೆ ಸೇರಿಸಿದೆವು. ಅದು ಸರಿ ಇಲ್ಲ ಎಂದಾಯಿತು. ಈ ಮರು-ವರ್ಗೀಕರಣದ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿಗಳು ದಾಖಲಾದವು. ಆಮೇಲೆ ತಾತ್ಕಾಲಿಕವಾಗಿ 15% ಮಾಡೋಣ ಎಂದಾಯಿತು. ಚರ್ಚೆಗಳು ನಡೆದು 5.25%, 5.25%, 4.50% ಮೀಸಲು ಸೌಲಭ್ಯ ನೀಡಲು ಸಚಿವ ಸಂಪುಟವೂ ಒಪ್ಪಿಕೊಂಡಿತು. ಇಷ್ಟೆಲ್ಲಾ ಆದರೂ ಕೂಡ ಇನ್ನೂ ಗೊಂದಲಗಳಿವೆ. ಏನೇ ಆದರೂ ಒಳ ಮೀಸಲಾತಿ ಜಾರಿ ಆಗಲೇಬೇಕು ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರು ಹೇಳಿದ್ದನ್ನು ಕೇಳುತ್ತೇನೆ ಅಂತಾರೆ. ಒಳಮೀಸಲಾತಿಯಲ್ಲಿ ಇರುವ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡಿ ಜಾರಿ ಮಾಡುವಂತೆ ನಾನು ಅವರ ಬಳಿ ಮಾತನಾಡುತ್ತೇನೆ. ಅಂತಿಮವಾಗಿ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುತ್ತದೆ. ನನ್ನ ಮಾತು ಕೇಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ, ನಾನು ಇಲ್ಲಿಯವರೆಗೂ ಸಾಮಾಜಿಕ ನ್ಯಾಯದ ರಥವನ್ನು ಎಳೆದುಕೊಂಡು ಬಂದಿದ್ದೇನೆ. ಸಾಧ್ಯವಾದರೆ ಅದನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದಿದ್ದಾರೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ ಬಳಕೆ ಮಾಡಬೇಕು ಎಂಬ ಕಾನೂನನ್ನು ಮಾಡಿದ್ದು ನಮ್ಮ ಸರ್ಕಾರ. 2013ಕ್ಕಿಂತ ಮೊದಲು ಈ ವರ್ಗಗಳ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗುವ ಅನುದಾನ ಸರಿಸುಮಾರು 8,000 ಕೋಟಿ ರೂಪಾಯಿ ಇತ್ತು, ನಾನು ಈ ಕಾನೂನು ಜಾರಿ ಮಾಡಿದ ಮೇಲೆ ರೂ.15,000 ಕೋಟಿಯನ್ನು ಮೀರಿತು. ಈ ವರ್ಷ ಎಸ್.ಸಿ.ಪಿ/ಟಿ.ಎಸ್.ಪಿ ಗೆ ರೂ.44,636 ಕೋಟಿ ಇದೆ. ಇದೇ ಕೆಲಸವನ್ನು ಬೇರೆ ಸರ್ಕಾರಗಳು ಯಾಕೆ ಮಾಡಿಲ್ಲ? ಎಂದು ಕೇಳಿದರು.
ಈ ಕಾಯ್ದೆಯ ಭಾಗವಾಗಿದ್ದ 7ಡಿ ಅನ್ನು ರದ್ದು ಮಾಡಿದ್ದು ನಾನು. 4% ಬಡ್ಡಿಗೆ ಕೆಎಸ್ಎಫ್ಸಿ ಯಲ್ಲಿ 10 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಬದ್ಧತೆ ಇದ್ದಾಗ ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ ಎನ್ನುವುದಕ್ಕೆ ಇದು ಉದಾಹರಣೆ ಎಂದರು.
2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರು 24.1% ಇದ್ದಾರೆ. 6.95% ಎಸ್.ಟಿ ಹಾಗೂ 17.15% ಎಸ್.ಸಿ ಸಮುದಾಯದ ಜನರಿದ್ದಾರೆ. ಈಗಿನ ಸರ್ಕಾರದಲ್ಲಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಗೊತ್ತಾ? ನಾಲ್ಕೈದು ಜನರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರು, ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದು ಯಾರು ಗೊತ್ತಾ? ಎಂದು ಕೇಳಿದರು.
ಬಡ್ತಿಯಲ್ಲಿ ಮೀಸಲಾತಿ ಬೇರೆ ಯಾವುದಾದರೂ ರಾಜ್ಯದಲ್ಲಿ ಇದೆಯಾ? ರತ್ನಪ್ರಭಾ ಅವರು ಮುಖ್ಯಕಾರ್ಯದರ್ಶಿಯಾಗಿರುವಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವರದಿ ತರಿಸಿಕೊಂಡು, ವರದಿಯನ್ನು ಕಾನೂನಿನ ರೂಪದಲ್ಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ರು, ಆದರೆ ತೀರ್ಪು ನಮ್ಮ ಪರವಾಗಿ ಬಂತು. ಕರ್ನಾಟಕದಲ್ಲಿ ಮಾತ್ರ ಬಡ್ತಿಯಲ್ಲಿ ಮೀಸಲಾತಿ ಇದೆ. ಇದೆಲ್ಲಾ ಸಾದ್ಯವಾಗಿದ್ದು ಹೇಗೆ? ಮತ್ತು ಯಾರಿಂದ? ಎಂದು ಕೇಳಿದರು.
ನಾನು ಇಷ್ಟೆಲ್ಲಾ ಮಾಡಿದ್ರೂ ಒಳಮೀಸಲಾತಿ ಜಾರಿಗೆ ತರುವ ಮೊದಲು ಇಲ್ಲಿ ಸಭೆಯಲ್ಲೇ ಇರುವ ಹಲವರು ನನ್ನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅದಕ್ಕಾಗಿಯೇ ನಾನು ಅನೇಕ ಬಾರಿ “ಯಾರು ನಿಮ್ಮ ಪರ ಇರುವವರು, ಯಾರು ವಿರೋಧಿಗಳು ಎನ್ನುವುದನ್ನು ಗುರುತಿಸುವ ಕೆಲಸ ಮಾಡಬೇಕು” ಎಂದು ಹೇಳಿದ್ದೇನೆ. ನಾನು ಮಾಡಿರುವ ಕೆಲಸವನ್ನು ನರೇಂದ್ರ ಮೋದಿ ಅವರು ಯಾಕೆ ಮಾಡಿಲ್ಲ? ಎಂದು ಕೇಳಿದರು.
ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಒಳ ಮೀಸಲಾತಿ ಹೋರಾಟ ಮುಂದುವರೆಯಬೇಕು, ಗುರಿ ತಲುಪುವವರೆಗೆ ನಿಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಹೋರಾಟ ನಡೆಸಬೇಕು. ನಿಮ್ಮ ಸುತ್ತ ನಿಮ್ಮ ನಿಮ್ಮೊಳಗೆ ಬೆಂಕಿ ಹಚ್ಚುವ ಜನರಿದ್ದಾರೆ, ಜಾಗೃತೆಯಾಗಿರಿ ಎಂದು ಕಿವಿಮಾತು ಹೇಳಿದರು.




