ಒಳ ಮೀಸಲಾತಿ ಹಸಿದವರಿಗೆ ಅವರ ಪಾಲು ಸಿಗಬೇಕು
ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಮತ್ತು ಅವರ ಸಚಿವ ಸಂಪುಟದ ಸಚಿವರೆಲ್ಲರಿಗೂ ನನ್ನ ಸಾಮಾಜಿಕ ಕಳಕಳಿಯ ಬಹಿರಂಗ ಮನವಿ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಾನ್ಯರೇ,
ಸಾಕಪ್ಪ ಸಾಕು ಈ ಒಳ ಮೀಸಲಾತಿ ಹೋರಾಟ ಇನ್ನಷ್ಟು ತಲೆ ನೋವಾಗಿದೆ ಅನ್ನುತ್ತೀರಾ. ಖಂಡಿತಾ ಇಲ್ಲ. ಈ ಹೋರಾಟ ರಚ್ಚೆ ಹಿಡಿದ ಮಗುವಿನ ಕೂಗಾಗಿದೆ. ಅಳುವ ಮಗುವಿನ ಹೊಟ್ಟೆಗೆ ಹಾಲು ಕೊಟ್ಟರೆ ಸುಮ್ಮನಾಗುತ್ತದೆ. ಹಾಗೆಯೇ ಒಳ ಮೀಸಲಾತಿ ಹಸಿದವರಿಗೆ ಅವರ ಪಾಲು ಸಿಗಬೇಕು.
ಆದರೆ 30 ವರ್ಷಗಳಿಂದ ಬೊಗಸೆ ಕಣ್ಣುಗಳಿಂದ ಕಾದು ಕಾದು ನೊಂದವರು ಅಪಾರ. ಅದರ ಕೊರಗಲ್ಲೇ ಜೀವ ಬಿಟ್ಟವರು ಹಲವರು. ಇಂದಿಗೂ ಇಳಿ ವಯಸ್ಸಿನಲ್ಲೂ ಕಾಯುವ ಹೋರಾಟಗಾರರ ಮನೋಭಾವ ಇನ್ನೊಂದೆಡೆ. ಮತ್ತಷ್ಟು ಯುವ ಜನತೆ ನಮಗಷ್ಟು ಅವಕಾಶ ಸಿಕ್ಕಿತು ಎಂಬ ಕಾತುರ. ಅದರ ಮಧ್ಯದಲ್ಲಿ ಇದರ ಒಳಬೇಗುದಿಯಲ್ಲಿ ರಾಜಕೀಯ ಪಗಡೆಯಾಟದಲ್ಲಿರುವವರೂ ಹಿಂಡುಗಟ್ಟಲೆ.
ನನಗನ್ನಿಸುತ್ತದೆ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಅವರು ಇನ್ನು ಮುಂದಾದರೂ ಬಹಿರಂಗವಾಗಿ ಹೇಳಿಕೆ ನೀಡುವ ಬದಲು ಕಾನೂನು ಕ್ರಮದಡಿ ಸರ್ಕಾರ ವಹಿಸಿರುವ ಕೆಲಸವನ್ನು ನಿರ್ವಹಿಸಲು ಮುಂದಾಗಬೇಕು. ಒಂದೊಂದು ದಿನವೂ ಈ ರಾಜ್ಯದಲ್ಲಿ ಅದರ ಕಾವು ಹೆಚ್ಚುತ್ತಿದ್ದಂತೆ ಅದರ ಸಾಮಾಜಿಕ ಸಮಸ್ಯೆಗಳು ರಾಜ್ಯದ ಮೈಸುತ್ತಿಕೊಳ್ಳುತ್ತವೆ. ಇದು ಆಗುವುದು ಬೇಡ.
ಬ್ಯಾಕ್ ಲಾಗ್ ಹುದ್ದೆಗಳ ನಿಲ್ಲಿಸುವುದು ಆಯೋಗದ ವ್ಯಾಪ್ತಿಯಲ್ಲಿ ಇಲ್ಲ. ರಾಜ್ಯ ಸರ್ಕಾರ ಎಲ್ಲಿಲ್ಲದ ಕಾಳಜಿಯನ್ನು ತೋರಿಸುತ್ತಿದೆ. ಹಾರ್ದಿಕ ಅಭಿನಂದನೆಗಳು. ಅದರ ಬದಲು ರಾಜ್ಯ ಸರ್ಕಾರ ಹೈಕೋರ್ಟ್ ಮುಂದಿರುವ ದಾವೆಗೆ ಇತ್ತೀಚಿನ ಬೆಳವಣಿಗೆ ಅಂದ್ರೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಒಳ ಮೀಸಲಾತಿ ಜಾರಿಗೆ ತರಲು ಮುಂದಾಗಿದೆ ಎಂದು ಮನವರಿಕೆ ಮಾಡಿಕೊಡುವ ಮೂಲಕ ಎಲ್ಲರಿಗೂ ಸಮಾನ ಸಾಮಾಜಿಕ ನ್ಯಾಯ ವಿತರಣೆ ತತ್ವಗಳನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಶ್ರೀ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಬೇಕು. ನೀವೂ ಸಹ 2023 ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಘಂಟಾಘೋಷವಾಗಿ ಹೇಳಿದ್ದೀರಿ. ನೀವು ಅದನ್ನು ಮರೆತರೂ ಅದು ನಿಮ್ಮ ಮರೆಯೋದಿಲ್ಲ ಸ್ವಾಮಿ.
ಒಳ ಮೀಸಲಾತಿ ಜಾರಿಗಾಗಿ ಮಾನವ ಸಂಪನ್ಮೂಲ ವ್ಯರ್ಥವಾಗುವುದು ಉತ್ತಮ ಕೆಲಸವಲ್ಲ. ಒಂದು ಸುಖೀ ರಾಜ್ಯದ ಸಾಮಾಜಿಕ ಬದ್ಧತೆಯಲ್ಲ. ಆದುದರಿಂದ ಶ್ರೀ ಸಿದ್ದರಾಮಯ್ಯ ಅವರು ಈ ಕೂಡಲೇ ಅಪರ ಮುಖ್ಯ ಕಾರ್ಯದರ್ಶಿ ಅವರ ಇಲ್ಲ ದಕ್ಷ ಮಾಜಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ಹಂಗಾಮಿ ನಿರ್ವಹಣೆ ಕೋಶ ತೆರೆದು ಅದಕ್ಕೆ ಶಕ್ತಿ ತುಂಬುವ ಚಿಂತನೆ ಮಾಡಬೇಕಿದೆ.
ಈ ಕೋಶ ಯುದ್ಧೋಪಾದಿಯಲ್ಲಿ ಒಳ ಮೀಸಲಾತಿ ವಿಚಾರಣೆ ಆಯೋಗಕ್ಕೆ ಬೇಕಾದ ವಿವಿಧ ಬಗೆಯ ದತ್ತಾಂಶವನ್ನು ದಶ ಮೂಲಗಳಿಂದ ಕ್ರೋಢೀಕರಣ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಇಂದಿಗೂ ಅಷ್ಟೊಂದು ಸೇತು ಬಂಧು ಆಗಿಲ್ಲ ಎಂಬ ಹೋರಾಟಗಾರರ ಅಳಲು. ಇರಲಿ ಅದರ ಮಿತಿಗೆ ಸಾರ್ವಜನಿಕವಾಗಿ ಮರುಗೋಣ.
ಆದುದರಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಈ ಬಗೆಗಿನ ಚರ್ಚೆಗಳನ್ನು ಆರಂಭಿಸಲು ಮುಂದಾಗಬೇಕು. ಒಳ ಮೀಸಲಾತಿ ಹೋರಾಟಗಾರರು ಶ್ರೀ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಟೀಸಿದರೂ ಒಂದೇ, ಕಾಂಗ್ರೆಸ್ ಪಕ್ಷದ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟೀಕಿಸಿದರೂ ಎರಡರ ಉದ್ದೇಶ ಒಂದೇ. ನಿಮ್ಮ ದಾರಿಗೆ ಮುಳ್ಳಾಗುವುದು ಉದ್ದೇಶ ಈಡೇರಿಸಲು.
ಆದುದರಿಂದ ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ ಮತ್ತು ರಾಜ್ಯದ ಸಾಮಾಜಿಕ ನೆಮ್ಮದಿಯ ಹಿತದೃಷ್ಟಿಯಿಂದ ಒಳ ಮೀಸಲಾತಿ ಎಂಬ ಆಸೆ ಬುತ್ತಿಯನ್ನು ಕಾನೂನುಬದ್ಧವಾಗಿ ಬಿಚ್ಚಿಡಿ ಮೊದಲು.
ಇಲ್ಲಿ ಯಾವ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿಸುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ, ಇಂದೊಂದು ಸಾಂವಿಧಾನಿಕ ಹೊಣೆಗಾರಿಕೆಗಳನ್ನು ನಿಭಾಯಿಸಲು ತಾವು ಪಡೆದುಕೊಂಡಿರುವ ಕಾರ್ಯಾಂಗದ ಉತ್ತರದಾಯಿತ್ವದ ವಿಚಾರಗಳಿವೆ. ಒಬ್ಬ ಯಾವುದೇ ಮಂತ್ರಿ ಈ ವಿಚಾರದಲ್ಲಿ ನೇರವಾಗಿ ಇಲ್ಲ ಪರೋಕ್ಷವಾಗಿ ತಪ್ಪು ಮಾಡಿದರೂ ಅದರ ತಲೆಬೇನೆ ನಿಮಗೆ ಬರುತ್ತದೆ. ಆದುದರಿಂದ ಒಳ ಮೀಸಲಾತಿ ಎಂಬ ಕುಣಿದಾಡುವ ಕುದುರುಗೆ ನ್ಯಾಯೋಚಿತವಾಗಿ ಕಾನೂನಿನ ಗೋರಸಾಕಿ ನಿಲ್ಲಿಸಿ.
ಮೊನ್ನೆ ಶನಿವಾರ ತಮ್ಮನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿದಾಗ ಈ ವಿಷಯವನ್ನು ಚರ್ಚಿಸುವುದಕ್ಕಾಗಿ ಬಂದಿದ್ದೆ. ಆದ್ರೆ ನಿಮ್ಮ ಪೂರ್ವನಿರ್ಧಾರಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಗಲಿಲ್ಲ. ಹಾಗಾಗಿ ಈ ಸಾಮಾಜಿಕ ಜಾಲತಾಣ ಮೂಲಕ ನನ್ನ ಮನದಾಳದ ಅನಿಸಿಕೆಯನ್ನು ತಮ್ಮಲ್ಲಿ ಪ್ರೀತಿಯಿಂದ ಮಂಡಿಸಿದ್ದೇನೆ.
ನನ್ನಂತಹವರ ವೈಯಕ್ತಿಕ ಕೋರಿಕೆ ಈಡೇರಿಸಲು ಮುಂದಾಗಬೇಕು ಎಂದು ತಮ್ಮಲ್ಲಿ ವಿನಂತಿ ಮಾಡುತ್ತಿಲ್ಲ. ಇದು ರಾಜ್ಯದ ಶಾಶ್ವತ ಕಂಕುಳು ಕುರು ಆಗಬಾರದು ಎಂಬ ಆಶಯದಿಂದ ಈ ವಿನಂತಿ ಸ್ವಾಮಿ. ನನ್ನ ಬಗ್ಗೆ ಸ್ವಬಂಧುಗಳು, ವಿಬಂಧುಗಳು ಏನೆಂದು ನಿಂದಿಸಿದರೂ ಚಿಂತೆ ಇಲ್ಲ. ಅದು ನಮಗೆ ಆದ್ಯತೆ ಆಗಬಾರದು. ಮೊದಲು ರಾಜ್ಯದ ಸಾಮಾಜಿಕ ನೆಮ್ಮದಿಯ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿ ಆಗಲೇಬೇಕು ಅತಿಶೀಘ್ರವಾಗಿ.
ಗೌರವ ವಂದನೆಗಳೊಂದಿಗೆ ನಿಮ್ಮವ
– ದಾಸನೂರು ಕೂಸಣ್ಣ




