ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಗಳಿಂದ ಭಾರತದ ಸಂವಿಧಾನ ರಚಿತವಾಗಿದೆ: ಡಾ.ಅಪ್ಪಗೆರೆ ಸೋಮಶೇಖರ್

11 months ago

ಜಾತ್ಯತೀತ ಹಾಗೂ ಬಹುತ್ವ ಸಂಸ್ಕೃತಿ ಭಾರತದ ಬೆನ್ನೆಲುಬು

ಬುದ್ಧ-ಬಸವ-ಅಂಬೇಡ್ಕರ್ ವಿಚಾರೋತ್ಸವ ಕಾರ್ಯಕ್ರಮ

ಬಳ್ಳಾರಿ: ಜಾತ್ಯತೀತ ಹಾಗೂ ಬಹುತ್ವ ಸಂಸ್ಕೃತಿಯು ಭಾರತದ ಬೆನ್ನೆಲುಬಾಗಿದ್ದು, ಬುದ್ಧ-ಬಸವ ಅವರ ತತ್ವಾದರ್ಶ ಹಾಗೂ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.

ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ “ಬುದ್ಧ, ಬಸವ, ಅಂಬೇಡ್ಕರ್ ವಿಚಾರೋತ್ಸವ” ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಗಣ್ಯರೊಂದಿಗೆ ಪುಪ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್‌ರವರ ತತ್ವಗಳಿಂದ ಭಾರತದ ಸಂವಿಧಾನ ರಚಿತವಾಗಿದೆ. ಸಂವಿಧಾನ ದೇಶದಲ್ಲಿರುವ ಎಲ್ಲ ವರ್ಗದವರಿಗೆ ಅನ್ವಯಿಸುತ್ತದೆ. ವ್ಯಕ್ತಿ ಮತ್ತು ಸಮುದಾಯ ಪ್ರಗತಿ ಹೊಂದಲು ನಮ್ಮಲ್ಲಿರುವ ಕೀಳರಿಮೆ ಮನಸ್ಥಿತಿಯಿಂದ ಹೊರಬರಬೇಕು. ಈ ಮೂವರು ಮಹಾನ್ ವ್ಯಕ್ತಿಗಳ ಆಶಯಗಳು ಭಾರತದ ಸಂವಿಧಾನದ ರೂಪದಲ್ಲಿ ಮೂಡಿ ಬಂದಿವೆ ಎಂದರು.

ಬೌದ್ಧ ಸಾಹಿತಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ, ಬುದ್ಧ ಕಾಲಾತೀತ ಪುರುಷ. ಎಲ್ಲ ಕಾಲಕ್ಕೂ ಸಾಗುವ ಬುದ್ಧನ ವಿಚಾರಗಳು ಅಂದಿನಿಂದ ಇಲ್ಲಿಯವರಗೆಗೂ ಪ್ರಸ್ತುತವಾಗಿವೆ. ಬುದ್ಧನ ಪಂಚಶೀಲವು ಎಲ್ಲ ಜಾತಿ, ಧರ್ಮ, ಜನಾಂಗಕ್ಕೆ ಬೆಳಕನ್ನು ನೀಡುವುದಾಗಿದೆ. ಪ್ರತಿಯೊಂದು ಸಮಸ್ಯೆಗೂ ಬುದ್ಧನಲ್ಲಿ ಪರಿಹಾರವಿದೆ. ಇಂದಿನ ಯುವ ಪೀಳಿಗೆಗೆ ಬುದ್ಧನ ಪರಿಚಯ ಇಲ್ಲದಂತಾಗಿದೆ ಎಂದರು.

ಸಾಹಿತಿ ಹಾಗೂ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಅಮರೇಶ್ ನುಗಡೋಣಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಮನುಷ್ಯ ಜೀವನಕ್ಕೆ ಅವಶ್ಯವಾದ ವಿಚಾರಗಳಾಗಿವೆ. ಬಸವಣ್ಣನ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಕತ್ತಲೆಯಿಂದ ಬೆಳಕಿನಡೆಗೆ ಸಾಗಲು ಇವರ ವಿಚಾರಗಳು ಪ್ರೇರಣೆಯಾಗಿವೆ. ಬಸವಣ್ಣನವರ ವಚನಗಳು ಮತ್ತು ಅವರಲ್ಲಿದ್ದ ಜ್ಞಾನದ ಅರಿವು ಹೊಸತನದೆಡೆಗೆ ಸಾಗುವುದಾಗಿದೆ ಎಂದರು.

ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ಯಾಯಕ್ಕೆ ಒಳಗಾದ ಪ್ರತಿಯೊಂದು ಜಾತಿಗೆ ನ್ಯಾಯ ದೊರಕಿಸಿದವರು ಅಂಬೇಡ್ಕರ್ ಅವರು. ಬುದ್ಧ, ಬಸವ ಅಂಬೇಡ್ಕರ್‌ರವರ ವೈಚಾರಿಕತೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಕುಟುಂಬ, ಸಮಾಜ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ವಿವಿಯಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್.ಡಿ.ವೆಂಕಮ್ಮ ಅವರು ಬುದ್ಧ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ ಸಾಲಿ, ಕಾರ್ಯಕ್ರಮದ ಸಂಚಾಲಕ ಪ್ರೊ.ಎನ್.ಶಾಂತನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ವಿವಿಯ ಕುಲಸಚಿವ ಎಸ್ ಎನ್ ರುದ್ರೇಶ್ ನೇತೃತ್ವದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ರವರ ಭಾವಚಿತ್ರವನ್ನೊಳಗೊಂಡ ತೆರೆದ ವಾಹನ ಹಾಗೂ ಅವರುಗಳ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳನ್ನು ಒಳಗೊಂಡ ಭವ್ಯ ಮೆರವಣಿಗೆಯು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾ.ಸುಷ್ಮಾ ಜೋಗನ್ ಹಾಗೂ ಡಾ.ಶ್ರೀದೇವಿ ಆಲೂರು ನಿರೂಪಿಸಿದರು. ಪ್ರದರ್ಶನ ಕಲೆ ಹಾಗೂ ನಾಟಕ ವಿಭಾಗದ ವತಿಯಿಂದ ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply