ಕನ್ನಡ ಅನುಷ್ಠಾನದಲ್ಲಿ ಬೇರೆ ಜಿಲ್ಲೆಗಳಿಗಿಂತ ಹಾಸನ ಜಿಲ್ಲೆ ಮುಂದೆ: ಡಾ.ಪುರುಷೋತ್ತಮ ಬಿಳಿಮಲೆ

11 months ago

ಹಾಸನ: ಹಾಸನ ಜಿಲ್ಲೆ ಕನ್ನಡ ಅನುಷ್ಠಾನದಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಹಾಸನ ಕನ್ನಡಿಗರ ಜೀವ ಕೇಂದ್ರ. ಹೊಯ್ಸಳರು ಆಳ್ವಿಕೆ ಮಾಡಿದ ನಾಡಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಸ್ಥಳಗಳು ಜಿಲ್ಲೆಯಲ್ಲಿವೆ ಎಂದರು.

ಕನ್ನಡದ ಹೃದಯಭಾಗದಲ್ಲಿ ಹಾಸನವಿರುವುದರಿಂದ ಕನ್ನಡದ ಸಾಕಷ್ಟು ಅಭಿವೃದ್ದಿ ಕೆಲಸಗಳು ಇಲ್ಲಿ ಆಗುತ್ತಿವೆ. ಹಲವು ವರ್ಷಗಳಿಂದ ಕನ್ನಡ ಅನುಷ್ಠಾನ ಪರಿಶೀಲನೆಗೋಸ್ಕರ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.

ಈಗಾಗಲೇ ರಾಜ್ಯದ 9 ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕನ್ನಡ ಅಭಿವೃದ್ಧಿ ಅನುಷ್ಠಾನ ಹೇಗೆ ಆಗಿದೆ ಎಂಬುದನ್ನು ಪರಿಶೀಲಿಸಿದ್ದೇನೆ. ಮುಂದಿನ ಭಾಗವಾಗಿ ಹಾಸನ ಜಿಲ್ಲೆಗೆ ಆಗಮಿಸಿದ್ದೇನೆ ಎಂದರು.

ಯಾವುದೇ ಭಾಷೆಯಾಗಲಿ, ಅದು ಎಷ್ಟೇ ಶ್ರೇಷ್ಠ ಭಾಷೆಯಾಗಿದ್ದರೂ ಆ ಭಾಷೆ ಬಳಕೆಯಾಗದೆ ಹೋದರೆ ಉಳಿಯುವುದಿಲ್ಲ. ಹಾಗಾಗಿ ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ನಾವು ಬಳಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಅಧಿಕಾರಿಗಳು ಕೊಟ್ಟ ವರದಿಯ ಮೇರೆಗೆ ಕನ್ನಡ ಅನುಷ್ಠಾನ ಎಲ್ಲೆಡೆ ಯಶಸ್ವಿಯಾಗಿದೆ. ಒಂದು ವೇಳೆ ಎಲ್ಲಿಯಾದರೂ ಅನುಷ್ಠಾನವಾಗಿಲ್ಲವೆಂದರೆ ಅದನ್ನು ಗಮನಿಸಿ ಅನುಷ್ಠಾನ ಮಾಡಲು ಕ್ರಮ ವಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದರು.

ನಾಮಫಲಕಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಗ್ರಾಮಗಳ ಹೆಸರನ್ನು ಹಾಕುವುದರ ಮೂಲಕ ಸುಮಾರು 71,000 ಕನ್ನಡ ಪದಗಳು ಉಳಿಯುತ್ತವೆ ಹಾಗೂ ಬಳಕೆ ಮಾಡಿದಂತೆ ಆಗುತ್ತದೆ ಎಂದರು.

ರಾಜ್ಯದಲ್ಲಿ ಮಾತೃಭಾಷೆ ಕನ್ನಡದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಸುಮಾರು 1,32,000 ವಿದ್ಯಾರ್ಥಿಗಳು ಪಿ.ಯು.ಸಿಯಲ್ಲಿ ಸುಮಾರು 60 ರಿಂದ 62 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದುಬೇಸರದ ಸಂಗತಿ ಆಗಿದೆ. ಇಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಕಾರಣಗಳೇನೆಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದೇನೆ ಎಂದರು.

ಜಿಲ್ಲಾ ತರಬೇತಿ ಕೇಂದ್ರವನ್ನ ವಿಸ್ತೃತಗೊಳಿಸಿ, ಎಲ್ಲಾ ವಿಭಾಗದ ಅಧಿಕಾರಿಗಳಿಗೆ ಕನ್ನಡದಲ್ಲಿ ಹೆಚ್ಚಿನ ಬಳಕೆಗೆ ತರಬೇತಿ ನೀಡಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸರಳ ಕನ್ನಡ ಕಲಿಕೆಗೆ ಹೊಸ ಪಠ್ಯಕ್ರಮವನ್ನು ರೂಪಿಸಿದೆ. ಅದು ವಾರಕ್ಕೆ ಮೂರು ದಿವಸ ತಿಂಗಳಿಗೆ 12 ಗಂಟೆ, ಮೂರು ತಿಂಗಳಿಗೆ 36 ಗಂಟೆ ಹೀಗೆ 36 ಗಂಟೆಗಳಲ್ಲಿ ಕನ್ನಡವನ್ನು ಹೇಳಿಕೊಡುವಂತಹ ಕ್ರಮವಾಗಿದೆ ಎಂದರು.

ಹಾಸನ ಪ್ರಸ್ತುತ ಮಹಾನಗರ ಪಾಲಿಕೆ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯ ಹೆಸರುಗಳು ಅಳಿದು ಹೋಗಬಾರದು. ಕನ್ನಡದ ಹೆಸರುಗಳು ಇರುವಂತೆ ಎಚ್ಚರ ವಹಿಸಬೇಕು ಎಂದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಬೇರೆ ಭಾಷೆಯ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ಕುರಿತು ಕರ್ನಾಟಕದಲ್ಲಿ ಮಾಡುವಂತಹ ಭಾಷಾ ಪರೀಕ್ಷೆಯ ಪಠ್ಯಕ್ರಮದ ಕುರಿತು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವರದಿಯನ್ನು ನೀಡಲು ತಿಳಿಸಿದ್ದೇವೆ ಎಂದರು.

ಸರ್ಕಾರದಿಂದ 1800ಕ್ಕೂ ಹೆಚ್ಚು ಆದೇಶಗಳನ್ನು ಕನ್ನಡ ಪರವಾಗಿ ಹೊರಡಿಸಿದೆ. ಅಧಿಕಾರಿಗಳು ಕನ್ನಡವನ್ನು ಪ್ರೀತಿಸಿ ಆದೇಶಗಳು ಜಾರಿಗೆ ಬರುವಂತೆ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಕಲಿಯದ ಇತರ ಭಾಷಿಕರು ಕನ್ನಡವನ್ನು ಕಲಿಯುವ ಆಸಕ್ತಿ ತೋರಿಸಿದರೆ ಕನ್ನಡ ಕಲಿಕಾ ಕೇಂದ್ರವನ್ನು ಆರಂಭಿಸುತ್ತೇವೆ ಎಂದರು.

ರಾಜ್ಯದಲ್ಲಿ ಅನ್ಯ ಭಾಷಿಕರು ಕನ್ನಡವನ್ನು ಕಲಿಯಲು ಅನುಕೂಲವಾಗಲು 100 ಕನ್ನಡ ಕಲಿಕಾ ಕೇಂದ್ರಗಳನ್ನ ಆರಂಭಿಸಬೇಕೆಂಬುದು ಪ್ರಾಧಿಕಾರದ ಉದ್ದೇಶವಾಗಿದೆ. 100 ಕ್ಕಿಂತ ಹೆಚ್ಚು ಕೇಂದ್ರಗಳು ಆದರೂ ಸಹ ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.

ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಕನ್ನಡ ಭವನ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಾಸನದಲ್ಲಿ ಕನ್ನಡ ಭವನ ಆಗುವಂತೆ ಪ್ರಯತ್ನ ಮಾಡುತ್ತೇವೆ. ಸಚಿವರು ಹಾಗೂ ಅಧಿಕಾರಿಗಳ ಮುಂದೆ ಈ ಬೇಡಿಕೆಯನ್ನು ಇಡುತ್ತೇವೆ ಎಂದರು.

ಹಿಂದಿನ ಕಾಲದಲ್ಲಿ ಅನೇಕರು ಶಾಲೆಗಳನ್ನು ನಿರ್ಮಿಸುವುದಕ್ಕಾಗಿಯೆ ಜಮೀನನ್ನು ದಾನ ನೀಡಿದ್ದಾರೆ. ಅವುಗಳಲ್ಲಿ ಕೆಲವು ಸ್ಥಳಗಳಿಗೆ ದಾಖಲಾತಿಗಳಿವೆ. ಮತ್ತೆ ಕೆಲವು ಸ್ಥಳಗಳಿಗೆ ದಾಖಲಾತಿಗಳಿಲ್ಲ. ಕೆಲವು ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ಬಂದಿರುವಂತಹ ಶಾಲಾ ಜಾಗವನ್ನು ಕೆಲವರು ದಾಖಲಾತಿಗಳನ್ನು ತಂದು ವಶಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ  ಹಕ್ಕುಪತ್ರವನ್ನು ನೀಡುವಂತಹ ಕೆಲಸಗಳನ್ನು ಮಾಡಬೇಕು ಎಂದರು.

ಸರ್ಕಾರ ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕಡ್ಡಾಯವಾಗಿ ಕನ್ನಡ ಇರಬೇಕು ಎಂದು ಆದೇಶ ಹೊರಡಿಸಿರುವುದು ಆಶಾದಾಯಕ ಎಂದರು.

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚುಗಾರಿಗೆ ಕನ್ನಡ ಪದಗಳನ್ನು ಸರಿಯಾಗಿ ಜೋಡಿಸಲು ಬರುವುದಿಲ್ಲ ಎನ್ನುವಂತಹ ಸಮಸ್ಯೆಗಳು ಕೇಳಿ ಬರುತ್ತಿವೆ. ಆ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸುತ್ತೇವೆ ಎಂದರು.

ಸುದ್ದಿಗೋಷ್ಠಿ ಯಲ್ಲಿ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ಗುರುರಾಜ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ ಹಾಜರಿದ್ದರು.

Leave a Reply