ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕು: ಬೊಮ್ಮಾಯಿ

2 years ago

ಬೆಂಗಳೂರು: ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಆಗ್ರಹ ತೀವ್ರವಾಗಿದೆ.

ಸಾಮಾಜಿಕ ನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯಿದ್ದರೆ  ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಪರಿಶಿಷ್ಟರಿಗೆ ಒಳ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಮತ್ತು ಮಾದಾರ ಚನ್ನಯ್ಯ ಗುರು ಪೀಠದ ಪೀಠಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಬೊಮ್ಮಾಯಿ, ಶಿಕ್ಷಣ, ಉದ್ಯೋಗದಲ್ಲಿ ತುಳಿತಕ್ಕೆ ಒಳಗಾದವರಿಗೆ ಅವಕಾಶ ನೀಡಿದರೆ, ತಳಸಮುದಾಯ ಸ್ವಾಭಿಮಾನ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಜತೆಗೆ ಸಮುದಾಯದಲ್ಲಿರುವ ಪ್ರತಿಭೆಗಳು ಮೇಲೆದ್ದು ಬರಲಿವೆ. ಸಂಪೂರ್ಣ ಭಾರತದ ಅಭಿವೃದ್ಧಿ ಸಾಕಾರವಾಗಲಿದೆ ಎಂದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಅನುಚ್ಛೇದ 341ರಡಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ವರ್ಗೀಕರಣದ ತತ್ವವನ್ನೂ ಸೇರಿಸಿದ್ದರು. ಮತ್ತೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿಲ್ಲವೆಂಬ ಚಿಂತನೆ ಅನುಸಾರ ನನ್ನ ನೇತೃತ್ವದ ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ ಸಿ ಮೀಸಲು ವರ್ಗೀಕರಣಕ್ಕೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಪೀಠ 6:1 ಬಹುಮತದ ಮೇಲೆ ಎಸ್ ಸಿ ಒಳ ಮೀಸಲು ಕಲ್ಪಿಸುವ ರಾಜ್ಯಗಳ ಅಧಿಕಾರ ಎತ್ತಿ ಹಿಡಿದಿದೆ. ಈಗ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಬೇಕಿದೆ ಎಂದರು.

ಚುನಾವಣೆ ಸಮೀಪ ಇರುವಾಗ ಬೊಮ್ಮಾಯಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ನವರು ಟೀಕಿಸಿದ್ದರು. ಸುಪ್ರೀಂ ಕೋರ್ಟ್ ಆದೇಶ ನನ್ನ ನೇತೃತ್ವದ ಬಿಜೆಪಿ ಸರ್ಕಾರದ ನಿರ್ಣಯವನ್ನು ಪುರಸ್ಕರಿಸಿದೆ. ಎಸ್ ಸಿಗೆ ಒಳ ಮೀಸಲು ಕಲ್ಪಿಸುವುದಾಗಿ ಭರವಸೆ ನೀಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಭರವಸೆ ಈಡೇರಿಸುವ ಬದಲು ಸಂವಿಧಾನದ ವಿಧಿ 341ಕ್ಕೆ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ ಶೋಷಿತ ಸಮುದಾಯಗಳ ಮೂಗಿಗೆ ತುಪ್ಪ ಸವರಿತು ಎಂದರು. 

ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡಿದರೆ ಸಾಲದು. ಅದರಂತೆಯೇ ನಡೆದುಕೊಳ್ಳಬೇಕು. ನೆರೆಯ ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣ ಜಾರಿಗೆ ತರುವುದಾಗಿ ಘೋಷಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತೆ ಕುಂಟು ನೆಪವೊಡ್ಡಿ ಕಾಲಹರಣ ಮಾಡದೆ ಅನುಷ್ಠಾನಕ್ಕೆ ತರಬೇಕು ಎಂದರು.

ಮೀಸಲು ವರ್ಗೀಕರಣಕ್ಕಾಗಿ ಅವಿಭಜಿತ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟದಲ್ಲಿ 10 ಜನ ಪ್ರಾಣತ್ಯಾಗ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ಕಾಂಗ್ರೆಸ್ ನ ಕಣ್ಣೊರೆಸುವ ತಂತ್ರ ಇನ್ನು ಮುಂದೆ ನಡೆಯುವುದಿಲ್ಲ ಎಂದರು.

ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಕಾರಣ ಬೊಮ್ಮಾಯಿ ಅವರಿಗೆ ಸಮುದಾಯದವರು ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು.

Leave a Reply