ಬೆಂಗಳೂರು: ಪರಿಶಿಷ್ಟ ಜಾತಿಯ ವಿವಿಧ ಸಮುದಾಯದ ಒಳ ಮೀಸಲಾತಿ ವಿಷಯ ಇದೀಗ ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಟಾಪಟಿಗೆ ಕಾರಣವಾಗಿದೆ. ಇತ್ತೀಚೆಗೆ ಕೇಂದ್ರ ಮಂತ್ರಿ ನಾರಾಯಣ ಸ್ವಾಮಿ ಲೋಕಸಭೆಗೆ ನೀಡಿದ ಉತ್ತರದಲ್ಲಿ ರಾಜ್ಯದ ಹಿಂದಿನ ಸರ್ಕಾರ ಕೈಗೊಂಡಿದ್ದ ಒಳ ಮೀಸಲಾತಿ ಸಮರ್ಪಕವಾಗಿಲ್ಲ. ಅಲ್ಲದೆ ಇದಕ್ಕೆ ಅನುಮೋದನೆ ನೀಡುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದ್ದರು.
ಇದರ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆಯ ರಾಜಕಾರಣ ಬಯಲಾಗಿದೆ. ಸುಳ್ಳು ಹೇಳಿ ಜನರನ್ನು ವಂಚಿಸುವುದೇ ಈ ಪಕ್ಷದ ಕಾಯಕ ಎಂದು ಟೀಕಿಸಿದ್ದರು. ಇದಕ್ಕೆ ಇದೀಗ ಬಿಜೆಪಿ ರಾಜ್ಯ ನಾಯಕರ ತಂಡ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ಬದ್ಧತೆಯನ್ನು ಪ್ರಶ್ನಿಸುವ ಮುನ್ನ ‘ಸ್ವಯಂ ಘೋಷಿತ’ ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು ಒಳ ಮೀಸಲು ಜಾರಿ ನಿರ್ಧಾರ ಕೈಗೊಳ್ಳಲಿ ಎಂದು ಸವಾಲು ಹಾಕಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮೊದಲ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಬೇಕಾಗಿತ್ತು. ಆದರೆ, ಈ ವಿಷಯವನ್ನೇ ಚರ್ಚೆಗೆ ಪ್ರಸ್ತಾಪಿಸಿಲ್ಲ ಎಂದು ಟೀಕಿಸಿದರು.
ತಮಿಳುನಾಡಿನಲ್ಲಿ ಎಸ್.ಸಿ. ಮೀಸಲು ವರ್ಗೀಕರಣ ಜಾರಿಯಲ್ಲಿದೆ. ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡುವುದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸುವ ಮುನ್ನ ಅವಿಭಜಿತ ಆಂಧ್ರಪ್ರದೇಶದಲ್ಲೂ ಜಾರಿಯಲ್ಲಿತ್ತು. ಸಿಎಂ ಸಿದ್ದರಾಮಯ್ಯ ಅವರಿಗೆ ಎದೆಗಾರಿಕೆ, ಮೀಸಲು ವರ್ಗೀಕರಣದ ಬಗ್ಗೆ ಬದ್ಧತೆಯಿದ್ದರೆ ವಿಶೇಷ ಅಧಿವೇಶನ ಕರೆದು ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪಂಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2015ರಲ್ಲಿ ನೀಡಿದ ಅಭಿಪ್ರಾಯದಂತೆ ಕೇಂದ್ರ ಸರ್ಕಾರ ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರ ಭಾಗವಾಗಿ ಎಲ್ಲ ರಾಜ್ಯಗಳ ಅಭಿಪ್ರಾಯಗಳನ್ನು ತರಿಸಿಕೊಂಡು ದಾಖಲಿಸುತ್ತಿದೆ. ಮಹಾಘಟಬಂಧನ್ ಸದಸ್ಯರು ಒಳಮೀಸಲಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ, ಪಶ್ಚಿಮ ಬಂಗಾಳ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಒಳ ಮೀಸಲು ವಿರೋಧಿ ನಿಲುವು ತಳೆದಿದ್ದು, ಸಿಎಂ ಸಿದ್ದರಾಮಯ್ಯ ಅವರು ಮೊದಲಿಗೆ ರಾಜ್ಯಗಳ ಮುಖ್ಯಮಂತ್ರಿಗಳ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ರಾಜಕೀಯ ನಾಯಕ, ಸ್ವತಃ ವಕೀಲರು ಆಗಿರುವ ಸಿದ್ದರಾಮಯ್ಯ ಅವರಿಗೆ ಸಂಸತ್ ಹಾಗೂ ವಿಧಾನಸಭೆ ಕಾರ್ಯಕಲಾಪಗಳ ನಡವಳಿಕೆ ಅರಿವು, ಅನುಭವವಿದೆ ಎಂದುಕೊಂಡಿದ್ದೆ. ಸಂಸತ್ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ರಹಿತ ಗುರುತಿನ ಪ್ರಶ್ನೆಗೆ ನಾನು ನೀಡಿದ ಉತ್ತರವನ್ನು ಬಳಸಿಕೊಂಡು ಬಿಜೆಪಿ ಬೂಟಾಟಿಕೆ ಬಯಲು ಎಂದು ಟೀಕಿಸಿರುವುದು ಅಚ್ಚರಿ ಹಾಗೂ ಹಾಸ್ಯಾಸ್ಪದವಾದುದು. ಎಸ್ ಸಿ ಒಳ ಮೀಸಲು ವಿಚಾರವಾಗಿ ಸಂವಿಧಾನ ಏನು ಹೇಳುತ್ತದೆ ಎನ್ನುವುದು ಆ ಪ್ರಶ್ನೆಯಾಗಿತ್ತು. ಸದ್ಯದ ಸ್ಥಿತಿ ಪ್ರಕಾರ ಸಂವಿಧಾನದ ಪರಿಚ್ಛೇದ 341ರಲ್ಲಿ ಎಸ್ ಸಿ ಒಳ ಮೀಸಲು ಪ್ರಸ್ತಾಪವಿಲ್ಲ ಎಂದು ವಾಸ್ತವಿಕ ಅಂಶವನ್ನು ಉತ್ತರವಾಗಿ ತಿಳಿಸಿರುವೆ. ಸಂವಿಧಾನವನ್ನು ತಿರುಚಿ ಉತ್ತರಿಸಲಾಗದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಗೋವಿಂದ ಕಾರಜೋಳ, ಪರಿಶಿಷ್ಟ ಜಾತಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಪರಿಶಿಷ್ಟ ಜಾತಿ ಶೇ 15 ರಿಂದ 17, ಎಸ್ಟಿಗೆ 3ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿತ್ತು. ನ್ಯಾ ಸದಾಶಿವ ಆಯೋಗದ ವರದಿ ಮೊದಲು ಅಧಿವೇಶನದಲ್ಲೇ ಅನುಮೋದಿಸುವುದಾಗಿ ಕಾಂಗ್ರೆಸ್ ತಿಳಿಸಿತು. ಆದರೆ, ಮೊದಲ ಅಧಿವೇಶನ ಮುಗಿದರೂ ಅದನ್ನು ಮಂಡಿಸಿಲ್ಲ ಎಂದು ಆಪಾದಿಸಿದರು.




