ಸುಗ್ನಾ, ಫೂಲೊ, ಗಾಂಗೂ, ಮೈಸಾ, ಚಂಪೂ, ಜಮುನಿ, ಸಾಂವರೀ…ಉಡುಪಿಯಲ್ಲೂ ಇದ್ದಾರಲ್ಲ!

2 years ago

ಉಡುಪಿಯಲ್ಲೇ ಇದ್ದಾರಲ್ಲ, ಜಮುನಿ, ಸಾಂವರೀ….!

ನನ್ನ ’ಅಕಾರಣ’ ಗೆಳೆಯ ಸಂವರ್ತನ ಈ ಪುಸ್ತಕ ನಿನ್ನೆ ತಲುಪಿತು. ಎರಡು ಕಾರಣಗಳಿಗಾಗಿ, ಈ ಸಂಕಲನದ ಬಗ್ಗೆ ಕುತೂಹಲ, ಕಾತರ ಇತ್ತು. ಮೊದಲನೆಯದು, ಸಂಕಲನದ ಅನುವಾದಕರ ಮಾತುಗಳು ನನಗೆ ಪ್ರಕಟಣೆಗೆ ಮುನ್ನವೇ ಓದಲು ಸಿಕ್ಕಿತ್ತು, ಎರಡನೆಯದಾಗಿ, ಇದು ದೂರದ ಇಂಗ್ಲಂಡಿನ ಪುಟ್ಟ, ಪ್ರಶಾಂತ ಪಟ್ಟಣ ಅಬರಿಸ್ಟ್‌ವಿತ್‌ನಲ್ಲಿ ಬೆಚ್ಚಗೆ ಸಿದ್ಧಗೊಂಡ ಅನುವಾದ. ಚಾರ್ಲ್ಸ್ ವಾಲೇಸ್ ಫೆಲೋಷಿಪ್ಪಿನಡಿ ಮೊತ್ತಮೊದಲ ಬಾರಿಗೆ ಇಂಗ್ಲಿಷ್‌ನಿಂದ ಹೊರತಾದ ಭಾಷೆಯೊಂದರ ಅನುವಾದಕ್ಕೆದೊರೆತ ಅವಕಾಶವಂತೆ ಇದು.

ಆದರೆ ಪ್ರಕಾಶಕಿ, ಅಹರ್ನಿಶಿಯ ಅಕ್ಷತಾ ಅವರ “ಕಟ್ಟಪ್ಪಣೆಯ” ಕಾರಣಕ್ಕೆ ಪುಸ್ತಕ ಒಂದು ವಾರ ವಿಳಂಬವಾಗಿ ನನಗೆ ತಲುಪಿತು!!

ಸಂವರ್ತ, ತನ್ನ ಒಂದು ಅಪ್ರಕಟಿತ ಪ್ರವಾಸಕಥನ ಮತ್ತು ತನ್ನ ಅನುವಾದಕ್ಕೆ ಮೂಲಗಳ ಆಯ್ಕೆಯ ಕಾರಣಕ್ಕೆ ನಿಸ್ಸಂದೇಹವಾಗಿ ಮತ್ತೆ ಮತ್ತೆ ಕನ್ನಡದಲ್ಲಿ ಗಮನಿಸುತ್ತಿರಬೇಕಾದ ಬರೆಹಗಾರರಲ್ಲಿ ಒಬ್ಬರು ಎಂಬುದು ನನ್ನ ಖಚಿತ ಅಭಿಪ್ರಾಯ. ಕನ್ನಡದಲ್ಲಿ ಬೇರೆ ಭಾರತೀಯ ಭಾಷೆಗಳ ಸಮಕಾಲೀನ ಬೆಳವಣಿಗೆಗಳ ಚಿತ್ರ ಹೊಂದಿರುವವರ ಸಂಖ್ಯೆ ಕಡಿಮೆ. ತನ್ನ ವೃತ್ತಿ, ಅಕಾಡೆಮಿಕ್ ತೆರವುಗಳ (ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್) ಕಾರಣದಿಂದಾಗಿ ಸಂವರ್ತ ಅದನ್ನು ಗಳಿಸಿಕೊಂಡದ್ದಲ್ಲದೇ ಸದ್ಬಳಕೆ ಮಾಡಿಕೊಂಡ ಕಾರಣಕ್ಕೆ, ನಾಗರಾಜ ಮಂಜುಳೆ ಬಳಿಕ ಈಗ ಜಸಿಂತಾ ಕೆರ್ಕೆಟ್ಟಾ ಕನ್ನಡದಲ್ಲಿ ದಕ್ಕುವಂತಾಗಿದೆ.

ಸಂಕಲನದ ಮೊದಲ ಓದಿನ ಬಳಿಕ ನನಗೆ ಅನ್ನಿಸಿದ್ದು, ಇಲ್ಲಿ ಕಾಣಿಸಿಕೊಳ್ಳುವ ಸುಗ್ನಾ, ಫೂಲೊ, ಗಾಂಗೂ, ಮೈಸಾ, ಚಂಪೂ, ಜಮುನಿ, ಸಾಂವರೀ…ಉಡುಪಿಯಲ್ಲೂ ಇದ್ದಾರಲ್ಲ! ಜಾರ್ಖಂಡ್‌ನ ಆ ಅಪರೂಪದ ಆದಿವಾಸಿ ಸಮುದಾಯದ ಮೇಲಾಗಿರುವ ವಿಕಾಸದ ಆಘಾತ ನಮ್ಮ ಉಡುಪಿಯ ವಿಕಾಸದ್ದೂ ಕಥೆಯೇ ಅಲ್ಲವೇ? ಸಣ್ಣ ಮೀನು ದೊಡ್ಡ ಮೀನನ್ನು, ದೊಡ್ಡ ಮೀನು ಅದಕ್ಕಿಂತ ದೊಡ್ಡ ಮೀನನ್ನು ಮತ್ತು ದೊಡ್ಡ ಮೀನನ್ನು ತಿಮಿಂಗಿಲ ನುಂಗಿ ಬದುಕುವುದೇ ವಿಕಾಸದ ಕಥೆ ಅಲ್ಲವೇ?

ಅಲ್ಲಿನ ಸಾರಂಡದ ಕಾಡಿನ ಬದಲು ನಮ್ಮ ಕರಾವಳಿಯ ಕಡಲು, ಡೋಂಬಾರಿ ಬೆಟ್ಟದ ಜಾಗದಲ್ಲಿ ನಮ್ಮ ಪಶ್ಚಿಮಘಟ್ಟಗಳಲ್ಲಿ, ಜಾರ್ಖಂಡ್‌ನಲ್ಲಿ ನಡೆದಿರುವ, ಯಥಾವತ್ ಅದೇ “ಯಾರೂ ಕೇಳದ, ಯಾರಿಗೂ ಬೇಡದ ವಿಕಾಸವನ್ನು” ಹೇರಲಾಗುತ್ತಿದೆ ಅಲ್ಲವೆ? ಅಲ್ಲಿ ತಮ್ಮ ಮೇಲೆ “ಯಾಜಮಾನ್ಯ” ಸಾಧನೆಯ ಪ್ರಯತ್ನಗಳು ನಡೆದಿವೆ ಎಂಬ ಅರಿವಾದರೂ ಹುಟ್ಟಿದೆ… ನಮ್ಮಲ್ಲಿ ಗಿಲೋಟಿನ್ನಿಗೆ ಕತ್ತು ಒಡ್ಡುವ ಸಂಭ್ರಮ ಕಾಣಿಸುತ್ತಿದೆಯಲ್ಲಾ!! ಕರಾವಳಿಗೆ 50 ವರ್ಷ ಹಿಂದೆ ಇಂತಹ ಎಚ್ಚರಗಳಿದ್ದ ದಾಖಲೆಗಳಿವೆ. ವಿಕಾಸ ಹಂತಹಂತವಾಗಿ ನಡೆಯುತ್ತಾ ಹೋದಂತೆ ಸಮಾಜದ, ಸಮುದಾಯಗಳ ಚರ್ಮ ದಪ್ಪವಾಗುತ್ತಾ ಸಾಗುವುದು ಸಹಜ ಪ್ರಕ್ರಿಯೆಯೆ? ಹೀಗೆ ಬೇರೆಯವರಿಂದ ನುಂಗಿಸಿಕೊಂಡು ದಪ್ಪ ಚರ್ಮದ ಝಾಂಬೀಗಳಾಗಿ ನಾವೂ ನಮಗಿಂತ ಕಡಿಮೆ ವಿಕಾಸಗೊಂಡವರನ್ನು ನುಂಗುತ್ತಾ ಹೋಗುವುದೇ ನಾಗರೀಕತೆಯೆ?

ನನಗೀಗ ಕೇಳಲಿರುವುದು ಇಷ್ಟೇ…. ನಮ್ಮಲ್ಲೂ ಪ್ರೇಮ, ಕಾಮ, ಅಂದ, ಚೆಂದಗಳ, ಮರ, ಗಿಡ ಹೂ ಬಳ್ಳಿಗಳ ಕವಿತೆಗಳ ಜಾಗದಲ್ಲಿ ಹೀಗೆ “ನುಂಗಿಸಿಕೊಂಡವರ” ವಿಕಾಸದ ನೋವು ಕಾವ್ಯವಾಗಿ ಹೊರಹೊಮ್ಮುವುದು ಯಾವಕಾಲಕ್ಕೆ?!!

ಮತ್ತೆ ಸಂವರ್ತನ ಬಳಿ ಕೇಳಬೇಕಾಗಿರುವುದು, ಈ ಅನುವಾದ ಈ ರೂಪ ಪಡೆಯುವಲ್ಲಿ ಅಬರಿಸ್ಟ್‌ವಿತ್‌‌ನ ಪಾತ್ರ ಎಷ್ಟು? ಎಂದು. ಅದಕ್ಕೆ ಕಾರಣ, ಅಲ್ಲಿದ್ದಷ್ಟೂ ಕಾಲ, ಆತ ಆಗಾಗ ವಾಟ್ಸಾಪ್ ಮೂಲಕ ಕಳುಹಿಸುತ್ತಿದ್ದ “ಅತಿ ಪ್ರಶಾಂತ” ಪಿಕ್ಚರ್ ಪೋಸ್ಟ್‌ಕಾರ್ಡುಗಳು. ಈ ಕವನಗಳ ಮೂಲದಲ್ಲಿರುವ ಬಿರುಬೆಂಕಿಯನ್ನು ಅಬರಿಸ್ಟ್‌ವಿತ್‌‌ ಎಷ್ಟು ತಣ್ಣಗಾಗಿಸಿರಬಹುದು ಎಂಬ ಕೆಟ್ಟ ಕುತೂಹಲ ನನಗಿದೆ!

ಥ್ಯಾಂಕ್ಸ್ Samvartha ‘Sahil’ , ಎಂದಿನಂತೆ ಬಹಳದಿನಗಳ ಕಾಲ ಕಾಡಬಲ್ಲ ಓದು ಒದಗಿಸಿದ್ದಕ್ಕಾಗಿ; ಈ ಕೆಲಸ ಮುಂದುವರಿಯಲಿ. ಹಾಗೇ ಪುಸ್ತಕ ಪ್ರಕಟಿಸಿದ ಅಹರ್ನಿಶಿಗೂ (Akshatha Humchadakatte) ಥ್ಯಾಂಕ್ಸ್!

[ಚಿತ್ರ: ಸಂವರ್ತನ ಹೆತ್ತವರು ಈ ಪುಸ್ತಕವನ್ನು ಇತ್ತೀಚೆಗೆ ಅನೌಪಚಾರಿಕವಾಗಿ ಬಿಡುಗಡೆ ಮಾಡಿದ್ದು. ಸಂವರ್ತ ಖಾಸಗಿಯಾಗಿ ಕಳುಹಿಸಿದ ಈ ಚಿತ್ರವನ್ನು, ಅನುಮತಿ ಇಲ್ಲದೆ ಇಲ್ಲಿ ಬಳಸಿಕೊಂಡಿರುವೆ.]

  • ರಾಜಾರಾಮ್ ತಲ್ಲೂರ್

Leave a Reply