ಸಾಮಾಜಿಕ ನ್ಯಾಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಪಯಣ

2 years ago

ಕೃತಿ: DR.B.R.AMBEDKAR SYMBOL OF HOPE: HIS VISION OF DEVELOPMENT FOR SC, ST & OBC`S IN INDIA

ಪುಟ : 246
ಬೆಲೆ : ರೂ 450
ಪ್ರಕಾಶನ : ಎನ್ವಿರಾನ್ಮೆಂಟಲ್ ಸೊಸೈಟಿ ಆಫ್ ಇಂಡಿಯ
ಮೊ  : 9844250997
ಲೇಖಕರು : ಡಾ. ಡಿ. ಪರಮೇಶ ನಾಯಕ್

ಮಹಾನಾಯಕ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ಅವರ ಜೀವನದೃಷ್ಟಿಯನ್ನು ಆಧರಿಸಿದ ಮಹತ್ವಪೂರ್ಣ ಪುಸ್ತಕ ಖ್ಯಾತ ಲೇಖಕ ಡಾ.ಡಿ.ಪರಮೇಶ ನಾಯಕ್ ವಿರಚಿತ “ಡಾ. ಬಿ.ಆರ್.ಅಂಬೇಡ್ಕರ್ ಭರವಸೆಯ ಚಿಹ್ನೆ: ಭಾರತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರ ದೂರದೃಷ್ಟಿ” (DR.B.R.AMBEDKAR SYMBOL OF HOPE: HIS VISION OF DEVELOPMENT FOR SC, ST & OBC`S IN INDIA). ಇತ್ತಿಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದ ಶೀರ್ಷಿಕೆಯೇ ತಿಳಿಸುವಂತೆ ಭಾರತದಲ್ಲಿರುವ ಶೇ. 85ಕ್ಕೂ ಹೆಚ್ಚು ಜನಸಂಖ್ಯೆಯು ಎಸ್.ಸಿ, ಎಸ್.ಟಿ, ಒಬಿಸಿಗಳಿಂದಲೇ ಕೂಡಿರುವಂತಹದ್ದು. ಹಾಗಾಗಿ ಇವರ ಏಳಿಗೆಯೇ ದೇಶದ ಏಳಿಗೆ ಎಂಬ ಭರವಸೆಯನ್ನು ಅಂಬೇಡ್ಕರ್ ಅವರು ಹೊಂದಿದ್ದರು ಎಂಬುದರ ಚರ್ಚೆ ಇಲ್ಲಿದೆ. ಈ ಪುಸ್ತಕ 12 ಅಧ್ಯಾಯದಿಂದ ಮೂಡಿಬಂದಿದೆ.

ಈ ಪುಸ್ತಕದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ಉಲ್ಲೇಖಿಸಲಾಗಿದೆ.

ಐತಿಹಾಸಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ಸಂದರ್ಭಗಳನ್ನು, ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ ಆರ್ಥಿಕವಾಗಿ ಹಿಂದುಳಿರುವಿಕೆಯ ಚರ್ಚೆಇದೆ.

ತಾರತಮ್ಯ ವಿರುದ್ಧದ ಹೋರಾಟವನ್ನು ಚರ್ಚಿಸಲಾಗಿದೆ. ಜೀವನದುದ್ದಕ್ಕೂ ತಾರತಮ್ಯ/ ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಂತಹ ಬಾಬಾ ಸಾಹೇಬರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಸಿಗಬೇಕೆಂದು ಅಚಲ ಸಂಕಲ್ಪ ಹೊಂದಿದ್ದರ ಬಗ್ಗೆ ಲೇಖಕರು ಬೆಳಕು ಚಲ್ಲಿದ್ದಾರೆ.

ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜೊತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. “ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿರುವುದನ್ನು ಚರ್ಚಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸುವುದರ ಬಗ್ಗೆ ಹಾಗೂ ಇವುಗಳ ಹಿಂದಿನ ತಾರ್ಕಿಕತೆ ಮತ್ತು ಅನುಷ್ಠಾನದ ನಡುವೆ ನಡೆದಂತಹ ಚರ್ಚೆಗಳಿವೆ. ಇದರಿಂದ ಅಲ್ಪಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತಿರುವುದು ಹಾಗೂ ಕ್ರಮೇಣ ಅಸಮಾನತೆ ಎಂಬುದು ನಿವಾರಣೆಯಾಗುತ್ತದೆ ಎಂಬುದರ ಸ್ಥೂಲ ಚರ್ಚೆ ಇಲ್ಲಿದೆ. ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ.

ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಕೆಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು. ಈಗಾಗಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಸಮಾನತೆ ಎಂಬುದು ಇದೆ. ಆದೇಶಗಳು ಕೂಡ ಅಂಬೇಡ್ಕರ್ ಚಿಂತನೆ ಮತ್ತು ಆಶಯಗಳಿಂದ ಪ್ರೇರಿತರಾಗಿ ಹೋರಾಟಗಳು ನಡೆಯುತ್ತಿರುವುದು ಹಾಗೂ ನಡೆಸುತ್ತಿರುವುದರ ಬಗ್ಗೆ ಲೇಖಕರುಎಲ್ಲಿ ಚರ್ಚಿಸಿರುವುದನ್ನು ಕಾಣುತ್ತೇವೆ.

ಸಾಮಾಜಿಕ ಕಳಂಕ (Social Stigma) ಮತ್ತು ಸ್ಟೀರಿಯೋ ಟೈಪ್ ಅಂತಹ ಸಮಸ್ಯೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅಂಬೇಡ್ಕರ್ ಅವರನ್ನು ಬಹುಜನ ನಾಯಕ ಎಂದು ಕರೆಯುತ್ತಾರೆ. ಅಮಾನವೀಯವಾದ ವರ್ತನೆಗಳು, ಬಹುಜನರ ವಿಶೇಷವಾದ ಭಾಷೆ, ವೇಷಭೂಷಣ, ಸಂಸ್ಕೃತಿ, ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಕೀಳಾಗಿ ಕಂಡು, ಆ ಸಮುದಾಯವನ್ನು ನಿಂದಿಸುವುದರೊಂದಿಗೆ ಮಾನಸಿಕ ಹಿನ್ನಡೆಯನ್ನು ಮೀರಿ ಸಮಾನತೆಗೆ ಅವರ ದಿಟ್ಟ ನಿರ್ಧಾರದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವಾಗಿದ್ದವು. ಆರ್ಥಿಕಾಭಿವೃದ್ಧಿ, ಕೈಗಾರೀಕರಣ, ರಾಜಕೀಯ ಭಾಗವಹಿಸುವಿಕೆ ಮತ್ತು ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು ಎಂಬುದನ್ನು ಇಲ್ಲಿಕಾಣುತ್ತೇವೆ.

ಒಟ್ಟಾರೆಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಉದಾಹರಣೆಯಾಗಿ ನೋಡುವುದಾದರೆ ಶ್ರೀಮತಿ ಇಂದಿರಾಗಾAಧಿ, ಶ್ರೀ ಡಿ.ದೇವರಾಜ ಅರಸು, ಕಾಂಶಿರಾಂ, ಬಂಗಾರಪ್ಪ, ಸಿದ್ದರಾಮಯ್ಯ, ನಿತೀಶ್ಕುಮಾರ್, ಕರುಣಾನಿಧಿ, ಕೇಜ್ರಿವಾಲ್, ಡಾ.ಹೆಚ್.ಸಿ.ಮಹದೇವಪ್ಪ, ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು. ಉಳುವವನೇ ಭೂಮಿಯ ಒಡೆಯ, ಭೂಹೀನರಿಗೆ ಭೂಮಿ ನೀಡುವುದು, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ಮುಂತಾದ ಯೋಜನೆಗಳು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಲ್ಲಿ ಬಂದಂತವುಗಳಾಗಿವೆ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ 2 ಅವಧಿಯ ಸರ್ಕಾರಗಳು ತಂದಂತಹ ಭಾಗ್ಯಗಳು, ಗ್ಯಾರಂಟಿ ಯೋಜನೆಗಳು-ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಒಳಗೊಂಡಿದೆ ಎಂದರೆ ತಪ್ಪಾಗಲಾರದು. ಈ ಯೋಜನೆಗಳು ಮತ್ತುಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಂವಿಧಾನದ ಆಶಯಗಳಂತೆ ಅನುಷ್ಠಾನ ಮಾಡಿರುವುದನ್ನು ಮೌಲ್ಯಯುತವಾಗಿ ಈ ಕೃತಿಯಲ್ಲಿ ಚರ್ಚಿಸಿರುವುದು ಶ್ಲಾಘನೀಯ.

– ಡಾ.ಎ.ಆರ್.ಗೋವಿಂದಸ್ವಾಮಿ, ಹಿರಿಯ ರಂಗಕರ್ಮಿಗಳು

Leave a Reply