ನೀರಾವರಿ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯದಿಂದ ಕೇಂದ್ರಕ್ಕೆ ಮನವಿ

1 year ago

ದೆಹಲಿ: ಕೃಷ್ಣಾ ನ್ಯಾಯಾಧಿಕರಣದ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಬೇಕು, ಕಳಸ ಬಂಡೂರಿ, ಮೇಕೆದಾಟು ಯೋಜನೆಗಳ ಕಾಮಗಾರಿ ಆರಂಭಕ್ಕೆ ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ರಾಜ್ಯದ ನೆನೆಗುದಿಗೆ ಬಿದ್ದಿರುವ ಹಲವು ನೀರಾವರಿ ಯೋಜನೆಗಳಿಗೆ ಅನುಮತಿ ನೀಡುವುದು ಮತ್ತು ಆರ್ಥಿಕ ನೆರವು ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ಕೇಂದ್ರ ಜಲ ಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ನೀಡಿತು.

ಕಿತ್ತೂರು ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಕಳಸ ಬಂಡೂರಿ ಯೋಜನೆ ಕಾಮಗಾರಿಗೆ ಕೇಂದ್ರ ಅರಣ್ಯ ಇಲಾಖೆ ತಕರಾರು ಸಲ್ಲಿಸಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಅಡ್ಡಿ ಮಾಡಬಾರದು ಎಂಬ ನಿಯಮವಿದ್ದರೂ ಕೂಡ ಅದನ್ನು ಉಲ್ಲಂಘಿಸಲಾಗಿದೆ ಎಂದು ಜಲಶಕ್ತಿ ಸಚಿವರ ಗಮನ ಸೆಳೆದ ಸಿದ್ದರಾಮಯ್ಯ, ತಕ್ಷಣ ಈ ಯೋಜನೆ ಕಾಮಗಾರಿ ಕೈಗೊಳ್ಳಲು  ಅಗತ್ಯವಿರುವ ಪರವಾನಗಿಗಳನ್ನು ನೀಡುವಂತೆ ಮನವಿ ಸಲ್ಲಿಸಿದರು.

ಕೃಷ್ಣ ನ್ಯಾಯಾಧಿಕರಣದ ಐತೀರ್ಪು ಪ್ರಕಟಿಸಿ ಹಲವು ವರ್ಷಗಳೆ ಕಳೆದಿವೆ. ತೀರ್ಪು ಇನ್ನೂ ಗೆಜೆಟ್ ನಲ್ಲಿ ಪ್ರಕಟಿಸದ ಪರಿಣಾಮ ಆಲಮಟ್ಟಿ ಅಣೆಕಟ್ಟಿನ ಗೇಟುಗಳ ಎತ್ತರ ಹೆಚ್ಚಳ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದ ಹಲವು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣ ಐತೀರ್ಪನ್ನು ಗೆಜಟ್ಟಿನಲ್ಲಿ ಪ್ರಕಟಿಸಬೇಕು ಎಂದು ಕೋರಿದರು.

ಬಯಲು ಸೀಮೆಯ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶದಿಂದ ರೂಪಿಸಲಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಈ ಹಿಂದೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು. ಹಾಗೆಯೇ ಬಜೆಟ್ಟಿನಲ್ಲಿ 5,000 ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿ ಏಕಾಏಕಿ ಕೈಬಿಟ್ಟಿದೆ ಎಂದು ವಿವರಿಸಿದ ಅವರು, ಇದರಿಂದ ರಾಜ್ಯಕ್ಕೆ ದೊಡ್ಡ ಹಾನಿಯಾಗಿದೆ. ಹೀಗಾಗಿ ತಕ್ಷಣ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

Leave a Reply