ಕಳಸ ಬಂಡೂರಿ ಯೋಜನೆ ಕಾಮಗಾರಿಯನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು: ಡಿ ಕೆ ಶಿವಕುಮಾರ್

9 months ago

ದೆಹಲಿ: ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಳಸ ಬಂಡೂರಿ ಯೋಜನೆ ಕಾಮಗಾರಿಯನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ವಿ ಸೋಮಣ್ಣ, ಪ್ರಲ್ಹಾದ ಜೋಶಿ ಅವರೊಂದಿಗೆ ಕೇಂದ್ರ ಜಲ ಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆಯ ವಿವರಗಳನ್ನು ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ನೀಡಿದರು.

ಭೇಟಿ ಸಮಯದಲ್ಲಿ ಪ್ರಮುಖವಾಗಿ ಕಳಸಾ ಬಂಡೂರಿ, ಮೇಕೆದಾಟು, ಕೃಷ್ಣಾ ನ್ಯಾಯಾಧಿಕರಣದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದ್ದು, 11 ಸಾವಿರ ಕೋಟಿ ರೂ. ಮೊತ್ತದ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿರುವುದಾಗಿ ಹೇಳಿದರು.

ಕಳಸಾ ಬಂಡೂರಿ ಯೋಜನೆಗೆ ಗೋವಾ ಸರಕಾರ ಅನಗತ್ಯ ತಕಾರಾರು ತೆಗೆಯುತ್ತಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಅಡ್ಡಿ ಇರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದ್ದರೂ ಕೂಡ ಗೋವಾ ರಾಜಕೀಯ ಕಾರಣಕ್ಕಾಗಿ ಇದನ್ನು ವಿವಾದವಾಗಿಸಲು ಪ್ರಯತ್ನಿಸಿದೆ ಎಂದರು.

ಯೋಜನೆಯ ಕುರಿತು ಕರ್ನಾಟಕದ ನಿಲುವಿನ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಕೇಂದ್ರ ಜಲಶಕ್ತಿ ಮಂತ್ರಿ ಸಿಆರ್ ಪಾಟೀಲ್ ಅವರಿಗೆ ಸಮಗ್ರ ವಿವರಣೆ ನೀಡಿದ್ದಾರೆ. ಯೋಜನೆಗೆ ರಾಜ್ಯದಲ್ಲಿ ನಡೆಸಬೇಕಾಗಿರುವ ಕಾಮಗಾರಿಗೆ ಯಾರ ಅನುಮತಿ ಬೇಕಾಗಿಲ್ಲ. ಸುಪ್ರೀಂಕೋರ್ಟ್ ಆದೇಶ ಕೂಡ ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೇಳಿತ್ತು. ಟೆಂಡರ್‌ ಕೂಡ ಕರೆಯಲಾಗಿತ್ತು. ಈ ನಡುವೆ ಗೋವಾ ಸರ್ಕಾರ 2023ರ ಜನವರಿ 9 ರಂದು ಕರ್ನಾಟಕಕ್ಕೆ ಶೋಕಾಸ್‌‍ ನೋಟಿಸ್‌‍ ನೀಡಿತ್ತು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನಮ್ಮ ಸರ್ಕಾರ ನೀಡಿದೆ ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ಶೋಕಾಸ್‌‍ ನೋಟಿಸ್‌‍ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಮಗೆ ನೋಟೀಸ್‌‍ ನೀಡಲು ಗೋವಾ ಯಾರು? ಎಂದು ಪ್ರಶ್ನಿಸಿದ ಅವರು, ತಪ್ಪುಗಳಿದ್ದರೆ ಕೇಂದ್ರ ಸರ್ಕಾರ ಮಾರ್ಗದರ್ಶನ ಮಾಡಬಹುದು ಎಂದರು.

ನೋಟೀಸ್‌‍ ಅನ್ನು ವಿರೋಧಿಸಿ ನಾವು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೇವೆ. ಈಗ ಆ ಪ್ರಕರಣವನ್ನು ಹಿಂಪಡೆದು ಕಳಸಾ ಬಂಡೂರಿ ಅಣೆಕಟ್ಟು ಕೆಲಸವನ್ನು ಪ್ರಾರಂಭ ಮಾಡುತ್ತಿದ್ದೇವೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಅಭಿಪ್ರಾಯವನ್ನು ಕೇಳಲಾಗಿದೆ. ವಾರದೊಳಗೆ ವರದಿ ಬರಲಿದ್ದು, ಅನಂತರ ಕೆಲಸ ಆರಂಭಿಸುವುದಾಗಿ ಹೇಳಿದರು.

ಕೇಂದ್ರ ಸರ್ಕಾರ ಈ ಯೋಜನೆಯನ್ನು ಕುಡಿಯುವ ನೀರಿನ ಯೋಜನೆ ಎಂದು ಆದ್ಯತೆ ಮೇರೆಗೆ ಪರಿಗಣಿಸಿ ಕಾಮಗಾರಿ ಆರಂಭಿಸಲು ಅಗತ್ಯವಿರುವ ಅನುಮತಿ ನೀಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.

ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು 11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಶೇ.25 ರಷ್ಟು ಆರ್ಥಿಕ ಸಹಾಯ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ನದಿ ನೀರಿನ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎಂದರು.

ಆರು ನೀರಾವರಿ ಯೋಜನೆಗಳಾದ ಸೊನ್ನತಿ ಏತ ನೀರಾವರಿ ಯೋಜನೆಗೆ 804.66 ಕೋಟಿ, ಕೃಷ್ಣ ಮೇಲ್ದಂಡೆ ಯೋಜನೆಯ ಇಂಡಿ ಶಾಖಾ ಕಾಲುವೆಗೆ 2,666.70 ಕೋಟಿ, ಮಲಪ್ರಭಾ ಕಾಲುವೆ ಮೂರನೇ ಹಂತಕ್ಕೆ 3000 ಕೋಟಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ನಾಲೆಗೆ 1,444.42 ಕೋಟಿ, ಬೆಣ್ಣೆಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆಗಾಗಿ 1,610 ಕೋಟಿ ಸೇರಿದಂತೆ ಒಟ್ಟು 11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ ಎಂದರು.

ಗೋವಾದವರು ನಮ್ಮ ಭಾಗದಲ್ಲಿ ವಿದ್ಯುತ್ ಮಾರ್ಗ ಹಾಕಲು ನಾವು ತಕರಾರು ತೆಗೆದಿದ್ದೇವೆ ಎಂದು ಹೇಳಿದ್ದಾರೆ. ನೀವು ನಮಗೆ ಸಹಕಾರ ನೀಡುವುದಾದರೆ ನಾವು ನಿಮಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ಒಂದು ವಾರದಲ್ಲಿ ಇದರ ಬಗ್ಗೆ ಕೇಂದ್ರ ಪರಿಸರ ಸಚಿವರು ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಮುಂದಿನ ಸಂಸತ್ ಅಧಿವೇಶನ ನಡೆಯುವುದರ ಒಳಗಾಗಿ ಮತ್ತೆ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದೇನೆ ಎಂದರು.

ಕೃಷ್ಣಾ ನದಿ ನೀರಿನ ವಿಚಾರವಾಗಿ ಸಭೆಯ ದಿನಾಂಕ ನಿಗದಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಭೆ ರದ್ದಾಯಿತು. ಜುಲೈ ತಿಂಗಳಿನಲ್ಲಿಯೇ ಮತ್ತೊಮ್ಮೆ ಸಭೆ ಕರೆಯುವುದಾಗಿ ಜಲಶಕ್ತಿ ಸಚಿವರು ತಿಳಿಸಿದ್ದಾರೆ. ಏಕೆಂದರೆ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದರೂ 10 ವರ್ಷದಿಂದ ನಮ್ಮ ಪಾಲಿನ ನೀರು ಸಿಗದೇ ಕಾಯುತ್ತಿದ್ದೇವೆ. 1.40 ಲಕ್ಷ ಎಕರೆಗೆ ನೀರಾವರಿ ನೀಡಲು ನಾವು ತಯಾರಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ಒಪ್ಪಂದವೂ ಆಗಿದೆ ಎಂದರು.

ಕೃಷ್ಣ ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ದಿಂದ ಗೆಜೆಟ್ ನೋಟಿಫಿಕೇಷನ್ ಮಾತ್ರ ಆಗಬೇಕು. ನಮ್ಮ ನೀರನ್ನು ಬಳಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ಏಕೆ ತಕರಾರು ಹಾಕಬೇಕು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣವನ್ನು ಕರೆದು ಮಾತನಾಡಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ಸಭೆಯನ್ನು ಸಂಸತ್ ಅಧಿವೇಶನದ ಒಳಗಾಗಿ ಕರೆಯುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರ ಸಚಿವರು, ಸಂಸದರಿಗೆ ಈ ವಿಚಾರವಾಗಿ ಒತ್ತಡ ಹೇರಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.

Leave a Reply