ಸಹಬಾಳ್ವೆಗಾಗಿ ಸಂವಿಧಾನದ ಪರ ವಹಿಸಿ: ಪುರುಷೋತ್ತಮ ಬಿಳಿಮಲೆ

7 months ago

ಮದರ್ ತೆರೇಸಾ ಸಂಸ್ಮರಣೆ

ಸಹಬಾಳ್ವೆಗಾಗಿ ಸಂವಿಧಾನದ ಪರ ವಹಿಸಿ: ಪುರುಷೋತ್ತಮ ಬಿಳಿಮಲೆ

ಸಹಬಾಳ್ವೆಯ ಕಾರಣದಿಂದಲೇ ಭಾರತ ಉಳಿದಿದ್ದು, ರಾಜಕೀಯ ಲಾಭಕ್ಕಾಗಿ ಬಿತ್ತಲಾಗುತ್ತಿರುವ ಮಾನವ ದ್ವೇಷದಿಂದ ಇದು ಸಾಧ್ಯವಿಲ್ಲ. ಗಣೇಶ ಮೆರವಣಿಗೆಯ ವೇಳೆ ದ್ವೇಷ, ದಸರಾಕ್ಕೆ ಸಾಹಿತಿ ಬಾನು ಮುಷ್ತಾಕ್‌ರನ್ನು ಕರೆಸಿದರೆ ದ್ವೇಷ ಮಾಡುವಂತಹ ಪ್ರಕ್ರಿಯೆಗಳು ಸಂವಿಧಾನದ ಗಂಭೀರ ಉಲ್ಲಂಘನೆ. ನ್ಯಾಯಾಂಗ ವ್ಯವಸ್ಥೆಯೂ ಇದನ್ನು ಪರಿಗಣಿಸದೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಹೆಚ್ಚಿಸಿದೆ.

– ಪ್ರೊ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಮಂಗಳೂರು: ಬಹುತ್ವ, ಬಹುಭಾಷೆ, ಬಹು ಸಂಸ್ಕೃತಿಯೊಂದಿಗೆ ಬೆಳದು ಬಂದಿರುವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆಯ ಅಧಿಕಾರಶಾಹಿ ರಾಜಕಾರಣಿಗಳ ಒತ್ತಾಸೆಗೆ ಬಲಿಯಾಗದೆ, ಸಂವಿಧಾನದ ಪರವಾಗಿ ನಿಲ್ಲುವ ಮೂಲಕ ಸಹಬಾಳ್ವೆಯನ್ನು ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು. 

ಮಂಗಳೂರು ಸಂತ ಮದರ್ ತೆರೇಸಾ ವಿಚಾರ ವೇದಿಕೆ ವತಿಯಂದ ಮದರ್ ತೆರೇಸಾರವರ ೨೮ನೇ ಸಂಸ್ಮರಣ  ದಿನದ ಅಂಗವಾಗಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ `ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಮದರ್ ತೆರೇಸಾರ ಮಾನವೀಯತೆ, ಸಾಮಾಜಿಕ ಬದ್ಧತೆ ನಮ್ಮ ಬದುಕಿಗೆ ಅಗತ್ಯವಾಗಿದ್ದು, ಧರ್ಮ, ಸಂಸ್ಕೃತಿ, ಭಾಷೆಗಳ ಹೆಸರಿನಲ್ಲಿ ಬಹುತ್ವದಿಂದ ದೂರಗೊಳಿಸುವ ರಾಜಕೀಯದ ಷಡ್ಯಂತ್ರವನ್ನು ನಾವು ಪ್ರಶ್ನಿಸಬೇಕಾಗಿದೆ. ಇದಕ್ಕಾಗಿ ಭಾರತದ ಇತಿಹಾಸದ ಬಹುತ್ವದ ಬಗ್ಗೆ ದಾಖಲೆಗಳನ್ನು ನೀಡುವ ಪುಸ್ತಕಗಳನ್ನು ಓದಬೇಕು. ಡಾ. ಅಂಬೇಡ್ಕರ್‌ರವರು ತಮ್ಮ ಅಪಾರವಾದ ಜ್ಞಾನ ಸಂಪಾದನೆಯ ಮೂಲಕ ಭಾರತೀಯ ಸಂಸ್ಕೃತಿಯ ವೈವಿಧ್ಯಕ್ಕೆ ಮೊದಲ ವ್ಯಾಕರಣವನ್ನು ಸಂವಿಧಾನದ ಮೂಲಕ ಬರೆದಿದ್ದಾರೆ. ಸಂವಿಧಾನದ ಸಹಬಾಳ್ವೆಗೆ ಬುನಾದಿ ನೀಡಿರುವ ಆರ್ಟಿಕಲ್ ೨೫, ೧೫ ಹಾಗೂ ೫೧ಎ ಬಗ್ಗೆ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು ಎಂದರು.

ಮೌರ್ಯರು, ಗುಪ್ತರು, ಕನಿಷ್ಕರು, ಮೊಗಲರು, ಬ್ರಿಟಿಷರು ಸೇರಿದಂತೆ ಭಾರತವನ್ನು ಆಳಿದವರೆಲ್ಲರೂ, ಬೇರೆ ರಾಷ್ಟ್ರಗಳಿಂದ ವಲಸೆ ಬಂದವರೆಲ್ಲರೂ ಇಲ್ಲಿ ನೆಲೆಸಿ ತಮ್ಮ ಸಂಸ್ಕೃತಿಯೊಂದಿಗೆ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಜತೆಗೂಡಿಸಿಕೊಂಡು ಹೊಸ ಸಂಸ್ಕೃತಿಯನ್ನು ರಚಿಸುವ ಮೂಲಕ ಬಹುತ್ವದ ಬುನಾದಿಯನ್ನು ಹಾಕಿದ್ದಾರೆ. ಅಂತಹ ಉದಾಹರಣೆಗಳು ನಮ್ಮ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆಚರಿಸುವ ಹಬ್ಬ, ಸಂಭ್ರಮಗಳಲ್ಲಿಯೇ ವ್ಯಕ್ತವಾಗುತ್ತವೆ ಎಂದರು.

ಮದರ್ ತೆರೆಸಾ ಅವರು ಕೂಡಾ ಭಾರತಕ್ಕೆ ಆಗಮಿಸಿ ತಮ್ಮ ಕೆಲಸ ಕಾರ್ಯಗಳ ಮೂಲಕ ಬಡವರು, ಶೋಷಿತರು, ರೋಗಿಗಳನ್ನು ತಮ್ಮp ಎದೆಗಪ್ಪಿಕೊಂಡು ಸಹಬಾಳ್ವೆಯ ಪಾಠವನ್ನು ನೀಡಿದ್ದಾರೆ. ಚಾರಿತ್ರಿಕವಾಗಿ ಭಾರತ ರೂಪಿಸಿಕೊಂಡ ಬಂದ ಸಹಬಾಳ್ವೆಯನ್ನು ನಾವು ಅರಿತು ಹೊಸ ತಲೆಮಾರಿಗೆ ತಿಳಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.

೨೦೧೧ರ ಜನಗಣತಿ ಪ್ರಕಾರ ದೇಶದಲ್ಲಿ ೧೯೫೬೯ ಮಾತೃ ಭಾಷೆಗಳು ಗುರಿಸಲಾಗಿದೆ. ಇದರಲ್ಲಿ ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿರುವುದು ೨೨ ಮಾತ್ರ. ೨೦೧೧ರಲ್ಲಿಯೇ ತುಳು ಸೇರಿದಂತೆ ಸಂವಿಧಾನದ ಪರಿಚ್ಛೇದಕ್ಕೆ ಸೇರಲು ೯೯ ಭಾಷೆಗಳು ಕಾಯುತ್ತಿದ್ದರೆ, ಇದೀಗ ೨೦೨೭ರ ಜನಗಣತಿಯ ಮೇರೆಗೆ ಅನಧಿಕೃತ ಲೆಕ್ಕಾಚಾರದ ಮೂಲಕ ೧೩೫ ಮಾತೃಭಾಷೆಗಳು ೮ನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿವೆ ಎನ್ನಲಾಗಿದೆ. ಇಷ್ಟೊಂದು ಭಾಷೆಗಳ ನಡುವೆ ಹಿಂದಿ ಅಥವಾ ಸಂಸ್ಕೃತ ಮಾತ್ರ ಶ್ರೇಷ್ಟ ಭಾಷೆ ಆಗುವುದು ಹೇಗೆ? ಎಂದು ಪ್ರಶ್ನಿಸಿದರು.

೨೦೧೫ರಿಂದ ಕೇಂದ್ರ ಸರಕಾರ ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ೫೪೮ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ೨೦೧೧ರ ಜನಗಣತಿ ಪ್ರಕಾರ ಸಂಸ್ಕೃತ ಭಾಷೆ ಮಾತನಾಡುವವರ ಸಂಖ್ಯೆ ೨೪೧೪೮. ಆದರೆ ೬.೪೦ ಲಕ್ಷಕ್ಕೂ ಅಧಿಕ ಕನ್ನಡ ಭಾಷೆ ಮಾತನಾಡುವವರಿದ್ದು, ಅವರಿಗಾಗಿ ಈ ಅವಧಿಯಲ್ಲಿ ಕೇಂದ್ರ ಖರ್ಚು ಮಾಡಿದ್ದು ೮ ಕೋಟಿ ರೂ. ಮಾತ್ರ. ಇಂತಹ ತಾರತಮ್ಯ ಯಾಕೆ ಎಂಬುದನ್ನು ಪ್ರಶ್ನಿಸುವ ಜವಾಬ್ಧಾರಿ ನಮ್ಮದಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಡಾ. ಕೆ. ಶರೀಫ ಮಾತನಾಡಿ, ಸೌಹಾರ್ದತೆಯ ಕೇಂದ್ರವಾಗಿರುವ ಮಂಗಳೂರಿನಲ್ಲಿ ದ್ವೇಷದ ಬೀಜ ಬಿತ್ತಿ ಅದರ ಫಲ ಉಣ್ಣುತ್ತಿರುವ ನಾವು ಶಾಪಗ್ರಸ್ತ ಸಂತಾನಗಳು. ತೆರೆಸಾ ಅವರ ಸಮಗ್ರ ಬದುಕು- ಜೀವನ ಸಾಧನೆಯ ಕುರಿತಾದ ಸಮಗ್ರ ಪುಸ್ತಕ ಕನ್ನಡದಲ್ಲಿ ಸಿಗುವಂತಾಗಬೇಕು ಎಂದರು.

ಮಹಿಳೆಗೆ ಯಾವುದೇ ಸ್ಥಾನಮಾನ ಸಿಗದ, ಧಾರ್ಮಿಕ ಚೌಕಟ್ಟಿನಿಂದ ಹೊರಗುಳಿಸಿದ್ದ ಅಂತಹ ಸ್ಥಿತಿ ಹಾಗೂ ಅವಧಿಯಲ್ಲಿ ಮದರ್ ತೆರೇಸಾರವರು ೧೮ನೆ ವಯಸ್ಸಿನಲ್ಲಿ ಯುಗೋಸ್ಲೋವಿಯಾದಿಂದ ಭಾರತಕ್ಕೆ ಬಂದು ಬಡವರ, ರೋಗಿಗಳ ಸೇವೆಯ ಮೂಲಕ ವಿಶ್ವಕ್ಕೆ ತಾಯ್ತನದ ಮಹತ್ವ ಸಾರಿದವರು ಎಂದರು.

ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಮುಖಂಡ ದೇವದಾಸ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಮಹಿಳಾ ನಾಯಕಿ ಸುಮತಿ ಎಸ್. ಹೆಗ್ಡೆ, ವೇದಿಕೆಯ ಗೌರವ ಸಲಹೆಗಾರ ರೂಪೇಶ್ ಮಾಡ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಅಲ್ವಾರಿಸ್, ಕೆ. ಕರಿಯ, ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಎರಿಕ್‌ಲೋಬೋ, ಡಾಲ್ಫಿ ಡಿಸೋಜಾ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಅವರು ಸೌಹಾರ್ದ ಗೀತೆಗಳನ್ನು ಹಾಡಿದರು. ಅವಿಭಜಿತ ದ.ಕ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಏಳಿಗಾಗಿ ಶ್ರಮಿಸಿದ, ಡಾ.ಬಾಬು ಜಗ ಜೀವನ್ ರಾಮ್ ಪ್ರಶಸ್ತಿ ಪುರಸ್ಕೃತ ಕರಿಯ ಕೆ. ಅವರನ್ನು ಸನ್ಮಾನಿಸಲಾಯಿತು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜಾ ಸ್ವಾಗತಿಸಿದರು.  ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply