ಧಾರವಾಡ: ಧಾರವಾಡ ಜಿಲ್ಲೆಯಲ್ಲಿರುವ ವಿವಿಧ ನಗರಗಳಲ್ಲಿನ ಘೋಷಿತ ಮತ್ತು ಅಘೋಷಿತ ಕೊಳಗೇರಿ ಪ್ರದೇಶಗಳಿಗೆ ಕಳೆದ ಎರಡು ದಿನಗಳಿಂದ ಮಂಡಳಿಯ ಅಧಿಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ, ಅಲ್ಲಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತ್ತು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.
ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 138 ಘೋಷಿತ ಕೊಳಚೆ ಪ್ರದೇಶಗಳಿವೆ. ಜಿಲ್ಲೆಯ ನಗರಗಳಲ್ಲಿ ಪ್ರದಾನಮಂತ್ರಿ ಆವಾಸ್ ಯೋಜನೆಯಡಿ ಸುಮಾರು 7,692 ಮನೆಗಳು ಮಂಜೂರಾಗಿವೆ. ಅದರಲ್ಲಿ ಈಗಾಗಲೇ 2,296 ಮನೆಗಳು ಪೂರ್ಣಗೊಂಡಿವೆ. ಉಳಿದ 3,157 ಮನೆಗಳು ಪ್ರಗತಿಯ ಹಂತದಲ್ಲಿವೆ. 2239 ಮನೆಗಳನ್ನು ಪ್ರಾರಂಭಿಸಬೇಕಾಗಿದೆ. ಈ ವರ್ಷದ ಅಂತ್ಯದೊಳಗೆ ಎಲ್ಲಾ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿ ಒಟ್ಟು 48 ಕೊಳಗೇರಿ ಪ್ರದೇಶಗಳು ಹಾಗೂ ಖಾಸಗಿ ಮಾಲೀಕತ್ವದಲ್ಲಿ 90 ಕೊಳಗೇರಿ ಪ್ರದೇಶಗಳಿವೆ. ಒಟ್ಟು 138 ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಅಂದಾಜು 32,387 ಕುಟುಂಬಗಳು ವಾಸಿಸುತ್ತಿದ್ದು, 1,61,446 ಜನಸಂಖ್ಯೆಯನ್ನು ಹೊಂದಿದೆ. ಮತ್ತು ಈ 138 ಕೊಳಗೇರಿ ಪ್ರದೇಶಗಳ ಒಟ್ಟು ಕ್ಷೇತ್ರ 623 ಎಕರೆ 20 ಗುಂಟೆ ಭೂಮಿ ಇದೆ ಎಂದರು.
ಈಗಾಗಲೇ ಧಾರವಾಡ ಜಿಲ್ಲೆಯ 138 ಕೊಳಗೇರಿ ಪ್ರದೇಶಗಳಲ್ಲಿ ಹುಡೋ, ವಾಂಬೆ, ವಿಶೇಷ ಘಟಕ ಯೋಜನೆ, ಐಹೆಚ್‍ಎಸ್‍ಡಿಪಿ. ರಾಜೀವ ಆವಾಸ್ ಯೋಜನೆಗಳಡಿ ಒಟ್ಟು 7,667 ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ರೂ.1,378.25 ಲಕ್ಷಗಳು ವೆಚ್ಚ ಮಾಡಲಾಗಿದೆ ಎಂದರು.
48 ಕೊಳಗೇರಿ ಪ್ರದೇಶಗಳ ಪೈಕಿ 39 ಕೊಳಗೇರಿ ಪ್ರದೇಶಗಳ ಒಟ್ಟು ಕ್ಷೇತ್ರ 245 ಎ – 22 ಗುಂ ಇದ್ದು, ಒಟ್ಟು 11,953 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದು, ಹಕ್ಕು ಪತ್ರ ವಿತರಣೆ ಹಾಗೂ ಹಕ್ಕು ಪತ್ರ ನೋಂದಣಿ ಕಾರ್ಯವು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ 4,687 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಹಾಗೂ 1,744 ಹಕ್ಕು ಪತ್ರಗಳನ್ನು ನೋಂದಣಿ ಮಾಡಲಾಗಿದೆ ಎಂದರು.
ಬರುವ ಎಪ್ರೀಲ್ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಕೊಳಗೇರಿ ನಿವಾಸಿಗಳಾದ ಸಾವಿರಕ್ಕೂ ಹೆಚ್ಚು ಜನರಿಗೆ ಮಾನ್ಯ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಮತ್ತು ನವಲಗುಂದ ಮತಕ್ಷೇತ್ರದ ಶಾಸಕರಾದ ಎನ್.ಎಚ್.ಕೋನರೆಡ್ಡಿಯವರು ನವಲಗುಂದ ಮತ್ತು ಅಣ್ಣಿಗೇರಿ ಪಟ್ಟಣದಲ್ಲಿ ಕೊಳಗೇರಿ ನಿವಾಸಿಗಳಿಗೆ ರಾಜ್ಯಕ್ಕೆ ಮಾದರಿ ಆಗುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ. ಈ ಮಾದರಿಗಳನ್ನು ರಾಜ್ಯದ ಇತರ ನಗರಗಳ ಕೊಳಗೇರಿಗಳಲ್ಲಿ ನಿರ್ಮಿಸುವ ಮನೆಗಳಿಗೆ ಬಳಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಈಗಾಗಲೇ ಜಿಲ್ಲೆಯ ಘೋಷಿತ ಕೊಳಗೇರಿಗಳಲ್ಲಿನ ನಿವಾಸಿಗಳಿಗೆ ನಿಯಮಾನುಸಾರ ಹಕ್ಕು ಪತ್ರಗಳನ್ನು ವಿತರಿಸಬೇಕು. ಘೋಷಿತ ಮತ್ತು ಅಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಬಾಕಿ ಇರುವ ಸರ್ವೆ ಕಾರ್ಯವನ್ನು ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೆ ಕಾಲಮಿತಿಯಲ್ಲಿ ಮುಕ್ತಾಯಗೊಳಿಸಬೇಕು. ನಿವಾಸಿಗಳಿಗೆ ಹಕ್ಕು ಪತ್ರ ಕೊಡುವುದನ್ನು ಕಾನೂನು ಪ್ರಕಾರ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯರಾದ ವಿನಾಯಕ ಜಿ., ರಾಮಕೃಷ್ಣ ರೊಳ್ಳಿ, ಮಹಮ್ಮದ ರಷಿದ್, ಆಯುಕ್ತರಾದ ಡಾ. ಅಶೋಕ ಡಿ.ಆರ್., ಮುಖ್ಯ ಅಭಿಯಂತರ ಎಚ್.ಪಿ.ಸುಧೀರ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಗಾಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರರಾದ ಡಿ.ಎಚ್.ಹೂಗಾರ, ಜೆ.ಬಿ.ಮಜ್ಜಗಿ, ಕೆ.ಆರ್.ಪಾಟೀಲ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ, ನಿಂಗನಗೌಡ ಶಾನಬಾಗ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಪ್ರವೀಣ ಎಸ್.ಎಚ್. ಸಹಾಯಕ ನಿರ್ದೇಶಕ ಮಹಾಂತೇಶ ಪಾಟೀಲ, ಸಿಟಿ ಸರ್ವೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


