ಕೊಳಗೇರಿ ಪ್ರದೇಶದ ನಿವಾಸಿಗಳಿಗೆ 42,345 ಮನೆಗಳ ಹಸ್ತಾಂತರ: ಜಮೀರ್ ಅಹಮದ್

3 months ago

ಬೆಂಗಳೂರು: ವಸತಿ ಇಲಾಖೆ ವತಿಯಿಂದ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ ಪ್ರದೇಶದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ 42,345 ಮನೆಗಳನ್ನು ನಿರ್ಮಿಸಿದ್ದು ನಾಳೆ ಅವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನಾಳೆ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆಗಳಿಂದ ಜನರನ್ನು ಕರೆತರಲು ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ 1,80,253 ಮನೆಗಳನ್ನು ಮಂಜೂರು ಮಾಡಿದ್ದರು. ಒಂದು ಮನೆ ಕಟ್ಟಲು ₹7 ಲಕ್ಷ ಖರ್ಚಾಗುತ್ತದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 1.50 ಲಕ್ಷ ಸಬ್ಸಿಡಿ ನೀಡುತ್ತಾರೆ. ಆದರೆ, ಅದರ ಮೇಲೂ ಶೇ 18 ರಷ್ಟು ಜಿಎಸ್‌ಟಿ ಹಾಕಿದ್ದಾರೆ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಹಾಯಧನ ಹೊರತುಪಡಿಸಿ ಫಲಾನುಭವಿಗಳು 4.50 ಲಕ್ಷ ಭರಿಸಬೇಕು. ಆದರೆ, ಫಲಾನುಭವುಗಳಿಂದ 1 ಲಕ್ಷ ಮಾತ್ರ ಪಡೆದು, ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಿ ಮನೆಗಳನ್ನು ನಿರ್ಮಿಸಿದೆ ಎಂದರು.

2024ರಲ್ಲಿ ಮೊದಲ ಹಂತದಲ್ಲಿ 36,779 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮೂರನೇ ಹಂತದಲ್ಲಿ 30 ಸಾವಿರ ಮನೆಗಳನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು. ಅಲ್ಲದೆ, ರಾಜೀವ್ ಗಾಂಧಿ ಆಶ್ರಯ ಯೋಜನೆ ಅಡಿ 47,860 ಮನೆಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು ಎಂದರು.

ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ 1,300 ಮನೆಗಳ ಪೈಕಿ 1008 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಯಾದಗಿರಿ, ತುಮಕೂರು, ಬೀದರ್, ಬಳ್ಳಾರಿ, ಚಿತ್ರದುರ್ಗ ಸೇರಿ ವಿವಿಧೆಡೆ ನಿರ್ಮಿಸಿರುವ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.

ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ಕೊಡುವುದು ಬಾಕಿ ಇದೆ. ಜ. 24ರ ಕಾರ್ಯಕ್ರಮದಲ್ಲಿ ರಾಯಚೂರು, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 20,345 ನಿವಾಸಿಗಳಿಗೆ ಹಕ್ಕಪತ್ರ ನೀಡಲಾಗುವುದು. ಹಕ್ಕುಪತ್ರ ವಿತರಣೆಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ ಎಂದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿದ ನಂತರ ಮನೆಗಳ ಹಂಚಿಕೆ ಮಾಡಬೇಕು ಎಂಬ ಉದ್ದೇಶ ಇತ್ತು. ಹೀಗಾಗಿ ಮನೆಗಳ ಹಂಚಿಕೆ ವಿಳಂಬವಾಗಿದೆ. ಇಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಆಸ್ಪತ್ರೆ, ಗ್ರಂಥಾಲಯ, ಸಮುದಾಯನ ಭವನ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

Leave a Reply