ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಎಂ.ಕೃಷ್ಣ ಅವರ ವ್ಯಕ್ತಿತ್ವದ ಬಣ್ಣನೆಯಲ್ಲಿ ಧಾರಾಳವಾಗಿ ಬಳಕೆಯಾದ ವಿಶೇಷಣ -‘ಅಜಾತ ಶತ್ರು’. ಅಜಾತ ಶತ್ರುಗಳು ಎಲ್ಲರಿಗೂ ಇಷ್ಟವಾಗುತ್ತಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಎಸ್.ಎಂ.ಕೃಷ್ಣ ಅವರು ನನಗೆ ಬಹಳ ಇಷ್ಟದ ರಾಜಕಾರಣಿಯಲ್ಲ. ದೆಹಲಿಯಲ್ಲಿದ್ದಾಗ ಒಬ್ಬ ಹಿರಿಯ ಪತ್ರಕರ್ತರು ದೇವೇಗೌಡ ಮತ್ತು ಕೃಷ್ಣ ಇವರಿಬ್ಬರಲ್ಲಿ ನಿನಗೆ ಯಾರು ಇಷ್ಟ? ಎಂದು ಪ್ರಶ್ನಿಸಿದ್ದರು. ನಾನು ತಕ್ಷಣ ದೇವೇಗೌಡರ ಹೆಸರು ಹೇಳಿದ್ದೆ. ‘’ನಿನಗೆ ಒಳ್ಳೆಯ ಟೇಸ್ಟೇ ಇಲ್ಲ’’ ಎನ್ನುವಂತೆ ಅವರು ಮುಖ ಸಿಂಡರಿಸಿದ್ದರು. ಆ ಅಭಿಪ್ರಾಯಕ್ಕೆ ನಾನು ಈಗಲೂ ಬದ್ದ. ಶತ್ರು ಮತ್ತು ಮಿತ್ರರ ನಡುವೆ ವ್ಯತ್ಯಾಸವನ್ನೇ ಕಾಣದವನು ಇಷ್ಟವಾಗಲು ಹೇಗೆ ಸಾಧ್ಯ?
ಅಜಾತ ಶತ್ರುವಿಗಿಂತಲೂ ಹೆಚ್ಚಾಗಿ ಕೃಷ್ಣ ಅವರಲ್ಲಿ ಒಬ್ಬ ‘’ಜಂಟಲ್ ಮ್ಯಾನ್’’ ಇದ್ದ. (ಈ ಜಂಟಲ್ ಮ್ಯಾನ್ ಪದಕ್ಕೆ ಕನ್ನಡದಲ್ಲಿ ಸಮಾನಾರ್ಥ ಶಬ್ದ ಇದ್ದರೆ ಗೊತ್ತಿದ್ದವರು ತಿಳಿಸಬಹುದು). ಈ ಜಂಟಲ್ ಮ್ಯಾನ್ ಗಳೂ ಒಮ್ಮೊಮ್ಮೆ ಇಷ್ಟವಾಗುತ್ತಾರೆ. ಇತ್ತೀಚೆಗೆ ನನಗೂ ಹಾಗಾಗಿತ್ತು. ಎರಡು ವರ್ಷಗಳ ಹಿಂದೆ ನಡೆದಿದ್ದ ಮಾಜಿ ಸಚಿವೆ ಮೋಟಮ್ಮ ಅವರ ಆತ್ಮಕತೆಯ ಬಿಡುಗಡೆ ಸಮಾರಂಭದಲ್ಲಿ ಕೃಷ್ಣ ಅವರ ಜೊತೆ ನಾನೂ ಭಾಗವಹಿಸಿದ್ದೆ. ಪುಸ್ತಕವನ್ನು ಅವರು ಬಿಡುಗಡೆಗೊಳಿಸಬೇಕಾಗಿತ್ತು, ನಾನು ಅದರ ಬಗ್ಗೆ ಮಾತನಾಡಬೇಕಾಗಿತ್ತು. ಹೆಚ್ಚು ಕಡಿಮೆ 20 ವರ್ಷಗಳ ನಂತರ ನಮ್ಮ ಮುಖಾಮುಖಿ. ನನ್ನನ್ನು ಅವರು ಗುರುತಿಸಲಿಕ್ಕಿಲ್ಲ ಎಂದು ನಾನು ತಿಳಿದುಕೊಂಡು ವೇದಿಕೆ ಹತ್ತಿದೆ. ಅವರು ತಕ್ಷಣ ನನ್ನನ್ನು ಗುರುತಿಸಿ ಕೂತಲ್ಲಿಯೇ ಸ್ವಲ್ಪ ಮುಂದಕ್ಕೆ ಬಾಗಿ ‘’ಹಾಯ್ ದಿನೇಶ್, ಹೌ ಆರ್ ಯು? ಎಂದರು. ಅದು ನನಗಾದ ಮೊದಲ ಆಘಾತ. ತಕ್ಷಣ ಅವರ ಬಳಿ ಹೋಗಿ ತಲೆ ಬಗ್ಗಿಸಿ ನಮಸ್ಕಾರ ಎಂದು ಹೇಳಿ ಬಂದು ಕೂತೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೃಷ್ಣ ಅವರು ‘’ ನಾನು ಮುಖ್ಯಮಂತ್ರಿಯಾಗಿದ್ದಾಗ ದಿನೇಶ್ ಅವರು ದೆಹಲಿಯಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದರು. ನಾನು ಅವರನ್ನು ಅನುಸರಿಸುತ್ತಿದ್ದೆ. ( ಕೃಷ್ಣ ಅವರು ಒಮ್ಮೊಮ್ಮೆ ಇಂಗ್ಲೀಷಿನಲ್ಲಿ ಯೋಚಿಸಿ ಕನ್ನಡದಲ್ಲಿ ಮಾತನಾಡುತ್ತಾರೆ. ‘’ಐ ವಾಸ್ ಫಾಲೋವಿಂಗ್ ಹಿಮ್’’ ಎಂದು ಅವರು ಹೇಳಬೇಕಾಗಿತ್ತು). ನಮ್ಮ ಸರ್ಕಾರದ ಬಗ್ಗೆ ಏನಾದರೂ ಒಳ‍್ಳೆಯದು ಬರೆಯಲಿ ಎನ್ನುವುದು ನನ್ನ ಆಸೆಯಾಗಿತ್ತು. ಅವರು ಬರೆಯಲಿಲ್ಲ’’ ಎಂದರು. ಇದನ್ನು ಅವರು ನಗುನಗುತ್ತಲೇ ತಮಾಷೆಯಾಗಿ ಹೇಳಿದರೇ ವಿನ: ಅದು ಚುಚ್ಚು ಮಾತಾಗಿರಲಿಲ್ಲ. ಇದು ನನಗೆ ಇನ್ನೊಂದು ಆಘಾತ.
ಸಭೆಯಿಂದ ನಿರ್ಗಮಿಸುವಾಗಲು ಮತ್ತೆ ನನ್ನ ಕಡೆ ಕೈಬೀಸಿ ‘’ಐ ವಿಲ್ ಕಾಲ್ ಯು, ವಿ ವಿಲ್ ಮೀಟ್’’ ಎಂದರು. ಇಷ್ಟೆಲ್ಲ ತುಂಬಿದ ಸಭೆ ಎದುರೇ ನಡೆದಿತ್ತು. ನಾನು ಒಂದು ರೀತಿ ಆಶ್ಚರ್ಯ, ಆಘಾತ, ಮುಜುಗರದಿಂದ ಮುದ್ದೆಯಾಗಿಬಿಟ್ಟಿದ್ದೆ. ‘’ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದ್ದರು’’ ಎಂದು ಹೇಳಿದರೆ ನನಗೆ ಖುಷಿಯಾಗುತ್ತಿರಲಿಲ್ಲ, ಬರೆದಿಲ್ಲ ಎಂದು ಹೇಳಿದ್ದು ಅವರು ನನಗೆ ಕೊಟ್ಟ ಗೌರವದ ಪದಕ ಆಗಿತ್ತು. ಮೊದಲನೆಯದಾಗಿ ಈ ಹಂತದಲ್ಲಿ ಕೃಷ್ಣ ಅವರಿಗೆ ನನ್ನ ಜೊತೆ ಇಷ್ಟೊಂದು ಸೌಜನ್ಯದಿಂದ ನಡೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಅವರಿಂದ ನನಗೇನು ಆಗಬೇಕಾಗಿರಲಿಲ್ಲ ಎನ್ನುವುದು ಬೇರೆ ಮಾತು, ನನ್ನಿಂದಲೂ ಅವರಿಗೇನೂ ಆಗಬೇಕಾಗಿರಲಿಲ್ಲ.
ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ದೆಹಲಿಯಲ್ಲಿ ಪ್ರಜಾವಾಣಿ ವರದಿಗಾರ. ಆ ಕಾಲದಲ್ಲಿ ಬೆಂಗಳೂರಿನಿಂದ ದೆಹಲಿ ವರೆಗೆ ಕೃಷ್ಣ ಅವರು ಎಲ್ಲ ಪತ್ರಕರ್ತರ ಡಾರ್ಲಿಂಗ್. ಕರ್ನಾಟಕದಲ್ಲಿ ಕೂಡಾ ಕೃಷ್ಣ ಅವರ ವಿರುದ್ದ ನೆಗೆಟಿವ್ ವರದಿಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಆದರೆ ನಾನು ಮಾತ್ರ ವರದಿಗಳು ಮತ್ತು ಅಂಕಣಗಳಲ್ಲಿ ಕೃಷ್ಣ ಸರ್ಕಾರವನ್ನು ಕುಟುಕುತ್ತಲೇ ಇದ್ದೆ. ‘’ಇಂಡಿಯಾ ಟುಡೇ’’ ಪತ್ರಿಕೆ ಕೃಷ್ಣ ಅವರನ್ನು ‘’ದೇಶದ ನಂಬರ್ ಒನ್ ಮುಖ್ಯಮಂತ್ರಿ’’ ಎಂದು ಘೋಷಿಸಿ ಬಿಟ್ಟಿತ್ತು. ಅದರ ನಂತರದ ವಾರ ನನ್ನ ಅಂಕಣದಲ್ಲಿ ನಾನು ಕೃಷ್ಣ ಅವರು ಯಾಕೆ ನಂಬರ್ ಒನ್ ಅಲ್ಲ ಎಂದು ಬರೆದು ಸಣ್ಣಗೆ ಕುಟುಕಿದ್ದೆ. ಕಾವೇರಿ ವಿವಾದದಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವ ಎಡವಟ್ಟುಗಳ ಬಗ್ಗೆಯೂ ನಿರಂತರವಾಗಿ ಬರೆಯುತ್ತಿದ್ದೆ. ಕೊನೆಯ ವರೆಗೂ ಕೃಷ್ಣ ಅವರ ರಾಜಕೀಯ ವೈರಿಯಾಗಿಯೇ ಇದ್ದ ಜಾಫರ್ ಷರೀಪ್ ಕೃಷ್ಣ ಅವರನ್ನು ಜಾತಿವಾದಿ ಎಂದು ಟೀಕಿಸಿ ಅವರ ಕಾಲದಲ್ಲಿ ಆಗಿರುವ ನೇಮಕಾತಿಗಳ ವಿವರ ನೀಡಿದ್ದರು. ಅದನ್ನೂ ವಿವರವಾಗಿ ಬರೆದಿದ್ದೆ.
ಇಂತಹದ್ದೇ ಸಮಯದಲ್ಲಿ ಕೃಷ್ಣ ಅವರು ಒಮ್ಮೆ ಪ್ರಜಾವಾಣಿ ಸಂಪಾದಕರು ಮತ್ತು ಸಹಸಂಪಾದಕರನ್ನು ಬೆಳಿಗ್ಗೆ ತಿಂಡಿಗೆ ಕರೆದಿದ್ದರು. ಅಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಕೃಷ್ಣ ಸರ್ಕಾರದಲ್ಲಿ ಮಾಧ್ಯಮಗಳನ್ನು ಮ್ಯಾನೇಜ್ ಮಾಡುತ್ತಿದ್ದ ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ಪ್ರಜಾವಾಣಿ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ನಂತರ ‘’ ನಿಮ್ಮ ದೆಹಲಿ ವರದಿಗಾರ ದಿನೇಶ್ ಅವರು ಮಾತ್ರ ನಮ್ಮ ಬಗ್ಗೆ ಸ್ವಲ್ಪ ಕ್ರಿಟಿಕಲ್ ಆಗಿದ್ದಾರೆ’’ ಎನ್ನುವ ಅರ್ಥದಲ್ಲಿ ಮಾತಾಡಿದರಂತೆ. ತಕ್ಷಣ ಕೃಷ್ಣ ಮಧ್ಯೆ ಪ್ರವೇಶಿಸಿ ‘’ ಹಾಗೆಲ್ಲ ಹೇಳಬಾರದು, ಅದು ಅವರ ಅಭಿಪ್ರಾಯ, ಅದನ್ನು ನಾವು ಗೌರವಿಸಬೇಕು, ಆಕ್ಷೇಪಿಸಬಾರದು’’ ಎಂದರಂತೆ. (ಇದನ್ನು ಕೆಲವು ವರ್ಷಗಳ ನಂತರ ಅಲ್ಲಿದ್ದ ಸಹಸಂಪಾದಕರು ನನಗೆ ಹೇಳಿದ್ದರು). ನಿಜವಾಗಿ ಆ ಅಧಿಕಾರಿಯ ಮಾತು ಕೃಷ್ಣ ಅವರಿಗೆ ಅನಿರೀಕ್ಷಿತವಾಗಿತ್ತೇ ? ಅದು ಅವರಿಗೆ ಇಷ್ಟ ಆಗಿರಲಿಲ್ಲವೇ? ಇಲ್ಲವೇ ಇದು ಪೂರ್ವ ನಿಯೋಜಿತ ಯೋಜನೆಯೇ? ಗೊತ್ತಿಲ್ಲ. ಅಜಾತ ಶತ್ರುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ( ಇವರಿಗಿಂತ ‘’ ಐ ವಿಲ್ ಟಾಕ್ ಟು ಯುವರ್ ಎಡಿಟರ್’’ ಎಂದಿದ್ದ ದೇವೇಗೌಡರನ್ನು ಅರ್ಥಮಾಡಿಕೊಳ್ಳುವುದು ಸುಲಭ)
ನಾವು ಇಂದು ಗೋದಿ ಮೀಡಿಯಾ ಎಂದು ಮಾಧ್ಯಮಗಳನ್ನು ಹಂಗಿಸುತ್ತಾ ನರೇಂದ್ರ ಮೋದಿಯವರ ಕಡೆ ಬೊಟ್ಟು ಮಾಡುತ್ತಿದ್ದೆವೆಲ್ಲಾ, ಅವರಿಗಿಂತ ಮೊದಲೇ ಕೃಷ್ಣ ಅವರು ಗೋದಿ ಮೀಡಿಯಾಗಳನ್ನು ಹುಟ್ಟುಹಾಕಿದ್ದರು ಎನ್ನುವುದನ್ನು ಮರೆಯಬಾರದು. ಉಳಿದದ್ದು ಬಿಟ್ಟುಬಿಡಿ ಅವರ ವಿಗ್ ಬಗ್ಗೆಯೂ ಪತ್ರಕರ್ತರು ಒಂದು ಬಾಕ್ಸ್ ಐಟಮ್ ಬರೆದದ್ದು ಕಡಿಮೆ. ಸಿದ್ದರಾಮಯ್ಯನವರ ಕೂದಲು ಉದುರಿ, ಇಂತಹದ್ದೊಂದು ವಿಗ್ ಧರಿಸಿದ್ದರೆ ಎಂತಹ ರಂಗುರಂಗಿನ ಸುದ್ದಿಗಳು ಪ್ರಕಟ/ಪ್ರಸಾರವಾಗುತ್ತಿತ್ತು ಎಂಬುದನ್ನು ಊಹಿಸಿಕೊಳ‍್ಳಬಹುದು.
ಕೃಷ್ಣ ಅವರ ಕಾಲದಲ್ಲಿ ‘’ ಜಿ ಕೆಟಗಿರಿ’’ ನಿವೇಶನ ಪಡೆದಿದ್ದ ಪತ್ರಕರ್ತರ ಹೆಸರಿನ ಪಟ್ಟಿಯನ್ನೊಮ್ಮೆ ತೆಗೆದು ನೋಡಿದರೆ ಕೃಷ್ಣ ಅವರ ಸಾವಿನ ನಂತರ ನಡೆಯುತ್ತಿರುವ ಅವರ ಗುಣಗಾನದ ಹಿಂದೆ ಇರುವುದು ಅವರ ಸಾಧನೆಯ ಬಗ್ಗೆ ಪ್ರಾಮಾಣಿಕವಾದ ಮೆಚ್ಚುಗೆಯೇ ಇಲ್ಲವೇ ಋಣ ಸಂದಾಯವೇ ಎನ್ನುವುದು ಅರಿವಾಗಬಹುದು. ಅದು ಹೆಚ್ ಎಸ್ ಆರ್ ಬಡಾವಣೆಯ 60/40 ವಿಸ್ತೀರ್ಣದ ಸೈಟುಗಳು. ಅದೊಂದು ದೊಡ್ಡ ವಿವಾದವಾಗಿ ಕೊನೆಗೆ ಜಿ ಕೆಟಗರಿ ಸೈಟು ನೀಡಿಕೆಯನ್ನೇ ರದ್ದುಗೊಳಿಸಲಾಯಿತು. ಇಂದು ಪತ್ರಿಕೆಗಳಲ್ಲಿ, ಟಿವಿ ಸ್ಟುಡಿಯೋಗಳಲ್ಲಿ ಕೂತು ರಾಜಕಾರಣಿಗಳಿಗೆ ನೈತಿಕ ಪಾಠ ಹೇಳುವ ಅನೇಕ “ಖ್ಯಾತ’’ ಪತ್ರಕರ್ತರ ಹೆಸರು ಜಿ ಕೆಟಗರಿ ಸೈಟು ಪಡೆದವರ ಪಟ್ಟಿಯಲ್ಲಿದೆ. ಆಲ್ ರೈಟ್… ಮುಂದಕ್ಕೆಹೋಗೋಣ.
ಕೃಷ್ಣ ಸರ್ಕಾರ ನೀಡಿದ್ದ ಸೈಟುಗಳನ್ನು ತಿರಸ್ಕರಿಸಿದವರೂ ಇದ್ದಾರೆ. ನನಗೆ ಕೊಟ್ಟರೆ ನಾನು ತಿರಸ್ಕರಿಸುವುದು ಮಾತ್ರವಲ್ಲ ಅದರ ಬಗ್ಗೆ ಬರೆದೂ ಬರೆಯಬಹುದು ಎಂದು ತಿಳಿದುಕೊಂಡರೋ ಏನೋ, ನನಗೆ ಸೈಟು ಆಫರ್ ಮಾಡಿಯೇ ಇರಲಿಲ್ಲ. ಆದರೆ ಬಿಡಿಎನಲ್ಲಿದ್ದ, ನನ್ನ ಅಂಕಣಗಳ ಖಾಯಂ ಓದುಗಾಭಿಮಾನಿ ಅಧಿಕಾರಿಯೊಬ್ಬರು ನನಗೆ ಪೋನ್ ಮಾಡಿ ‘’ ಏನು ಸಾರ್ ಬಿಡಿಎ ಸೈಟುಗಳ ಪತ್ರಕರ್ತರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ, ಸೇರಿಸಲು ಹೇಳಲಾ ?’’ ಎಂದು ಕೇಳಿದರು. ಅದಕ್ಕೆ ನಾನು ‘’ ಯಾವ ಸೈಟೂ ಬೇಡ, ಅಷ್ಟು ದುಡ್ಡೂ ನನ್ನ ಬಳಿ ಇಲ್ಲ’’ ಎಂದಿದ್ದೆ. ತಮಾಷೆಯ ಸಂಗತಿ ಎಂದರೆ ನಾನು ಇಷ್ಟು ಹೇಳಿದ ಒಂದು ವಾರಕ್ಕೆ ತುಮಕೂರಿನ ರಾಜಕಾರಣಿಯೊಬ್ಬರ ಮಗ ಪೋನ್ ಮಾಡಿ. ‘’ ನೀವು ದುಡ್ಡಿಲ್ಲ, ಬಿಡಿಎ ಸೈಟ್ ಬೇಡ ಎಂದು ಹೇಳಿದರಂತೆ. ನಾನು 20 ಲಕ್ಷ ಕೊಡ್ತೇನೆ, ಸೈಟ್ ತಗೊಂಡು ಆಗ್ರಿಮೆಂಟ್ ಮೂಲಕ ನನಗೆ ಮಾರಿ ಬಿಡಿ’’ ಎನ್ನುವ ಸಲಹೆ ಕೊಟ್ಟರು. ಬಿಡಿಎಗೆ ಕಟ್ಟಬೇಕಾಗಿದ್ದದ್ದು ಹತ್ತು ಲಕ್ಷ ರೂಪಾಯಿ.( ಕೆಲವು ಪತ್ರಕರ್ತರು ಈ ಕೆಲಸ ಕೂಡಾ ಮಾಡಿದ್ದಾರೆ). ‘’ಬೇಡ ಮಾರಾಯ, ಅವರು ಕೊಟ್ಟರೂ ನನಗೆ ಬೇಡ ‘’ ಎಂದು ಪೋನಿಟ್ಟಿದ್ದೆ.
ಕೃಷ್ಣ ಅವರ ಕಾಲ ಪತ್ರಕರ್ತರ ಸುವರ್ಣಯುಗ. ಸೈಟು, ಫ್ಲಾಟ್, ಕಾರು, ಚಿನ್ನ, ಪ್ರವಾಸ ಹೀಗೆ ಕೃಷ್ಣ ಅವರು ಆಗಿನ ಪತ್ರಕರ್ತರನ್ನು ಚೆನ್ನಾಗಿ ನೋಡಿಕೊಂಡಿದ್ದರು.
ಹೌದು, ಕೃಷ್ಣ ಅವರು ಎಂದೂ ತಮ್ಮ ಪರವಾಗಿ ಬರೆಯಲು ಕೋರಿಕೊಂಡದ್ದೂ ಇಲ್ಲ, ವಿರುದ್ದವಾಗಿ ಬರೆದಾಗ ಒಳಗೊಳಗೆ ಕೋಪಿಸಿಕೊಂಡಿರಬಹುದು, ಆದರೆ ಅದನ್ನು ಎಂದೂ ಬಹಿರಂಗವಾಗಿ ಪ್ರದರ್ಶಿಸಿದವರಲ್ಲ. ದ್ವೇಷದ ರಾಜಕಾರಣ ಮಾಡಿದವರು ರಾಜಕಾರಣದಲ್ಲಿ ಯಶಸ್ಸು ಕಂಡದ್ದು ಕಡಿಮೆ. ಈ ಅಜಾತ ಶತ್ರು ಟೈಪ್ ರಾಜಕಾರಣಿಗಳು ಯಶಸ್ಸು ಕಂಡದ್ದು ಹೆಚ್ಚು. ಉದಾಹರಣೆಗಾಗಿ ಹೆಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣ.
– ದಿನೇಶ್ ಅಮೀನ್ ಮಟ್ಟು ಹಿರಿಯ ಪತ್ರಕರ್ತರು




