ಪಂಚಮಸಾಲಿ ರಾಜಕೀಯ ನಾಯಕರೆ ಸಾಕು ಮಾಡಿ ನಿಮ್ಮ ನಾಟಕ

1 year ago

‘fbಯವರು ನನ್ನ ಲೇಖನಗಳನ್ನು ನಿಯಂತ್ರಿಸುತ್ತಿದ್ದಾರೆ’ ಎಂಬ ಭಾವನೆ ಬಲವಾಗುತ್ತಿದೆ. ಬರೆಯಲು ಅನೇಕ ವಿಷಯಗಳಿವೆ. ಓದಲು ನೀವಿದ್ದೀರಿ, ಓದಿದ್ದೀರಿ ಎನ್ನುವುದಕ್ಕೆ ನಿಮ್ಮ ಲೈಕ್ ಸಾಕ್ಷಿಯಾಗುತ್ತದೆ. ಇರಲಿ.

‘ಟೈಮ್ಸ್ ಆಫ್ ಇಂಡಿಯಾ’ ದವರು ಡಿಬೇಟ್ ನಲ್ಲಿ ಭಾಗವಹಿಸಬೇಕೆಂದು ಕ್ಯಾಮರಾ ಹಿಡಿದು ಮನೆಗೆ ಬಂದಿದ್ದರು. ನಾನು ಏನು ಮಾತಾಡಬೇಕೆಂದು ತಲೆ ಕೆರೆದುಕೊಳ್ಳುತ್ತ ಟ್ಹಿ.ವಿ. ಆನ್ ಮಾಡಿದೆ. ಬೆಳಗಾವಿಯಲ್ಲಿ ನನ್ನವರ ಮೇಲೆ ಪೋಲಿಸರು ಲಾಠಿ ಬೀಸುತ್ತಿದ್ದ ದೃಶ್ಯಗಳು ಪರದೆಯ ಮೇಲೆ ಮೂಡುತ್ತಿದ್ದವು. ಮನಸ್ಸು ಮುದುಡಲಾರಂಭಿಸಿತು. ಹೊಟ್ಟೆಯಲ್ಲಿ ಬೆಂಕಿ ಬೀಳಲಾರಂಭಿಸಿತು.

ಅಮಾಯಕರಾದ ಜನಸಾಮಾನ್ಯರು ಪೋಲಿಸ್ ಲಾಠಿಗೆ ಯಾವಾಗಲೂ ಮೊದಲ ಬಲಿಯಾಗುತ್ತಾರೆ. ನಾಯಕರ ಮೇಲೆಂದೂ  ಲಾಠಿ ಬೀಳುವುದಿಲ್ಲ.

ಅಲ್ಲಿದ್ದ ನನ್ನ ಬಡ ಲಿಂಗಾಯತ ಪಂಚಮಸಾಲಿ ಸಹೋದರರು ನೋವಿನಿಂದ ಅರಚಾಡುತ್ತಿದ್ದರು. ಒಬ್ಬನ  ತೋಳು ಮುರಿದಿತ್ತು. ಮತ್ತೊಬ್ಬನ ತಲೆ ಸಿಡಿದು ರಕ್ತ ಸೋರುತ್ತಿತ್ತು. ಮುಗದೊಬ್ಬ ಮುರ್ಚೆಹೋಗಿ ರಸ್ತೆಯಲ್ಲಿ ಬಿದ್ದಿದ್ದ. ಅಲ್ಲೊಬ್ಬ ಯುವಕ ಪೋಲಿಸರೊಂದಿಗೆ ವಾಗ್ವಾದ ಮಾಡುತ್ತಿದ್ದ. ದಿಟ್ಟಿಸಿ ನೋಡಿದೆ. ಅವನಾಗಿದ್ದ ಅಥಣಿಯ ಧರೆಪ್ಪ ಠಕ್ಕಣ್ಣನವರ ಎಂಬ ಮುವತ್ತೈದರ ಯುವಕ. ತನ್ನ ಕಾರ್ಯಕರ್ತರ ಮೇಲೆ ಬೀಸುತ್ತಿದ್ದ ಲಾಠಿಗೆ ತನ್ನ ಮೈ ಒಡ್ಡಿದ. ಒಂದು ಹೊಡೆತ ಬಿತ್ತು. ಬಲವಾದ ಏಟಿಗೆ ಸಾಹುಕಾರ ಧರೆಪ್ಪನ ಮೈ ಉಬ್ಬಿತು. ಕಣ್ಣರಳಿಸಿ “ಇನ್ನೊಮ್ಮೆ ಹೊಡಿ” ಎಂದು ಅಬ್ಬರಿಸಿದ. ‘ಪಂಚಮಸಾಲಿ ನಾಯಕನಿರಬಹುದು’ ಎಂದು ಬೆದರಿದ ಪೋಲಿಸ ಪೆದೆ. ಇವನನ್ನು ಬಿಟ್ಟು ಮತ್ತೊಬ್ಬನನ್ನು ಹೊಡೆಯಲು ಅತ್ತ ತಿರುಗಿದ ಅಸಹಾಯಕ ಪೋಲಿಸಪ್ಪ. ಕ್ಷಣಾರ್ಧದಲ್ಲಿ ಮತ್ತೊಂದು ಲಾಠಿಏಟು ಬಿತ್ತು ಧರೆಪ್ಪನ ಮೈಮೇಲೆ. ಅತ್ತ ನೋಡಿದ ದರೆಪ್ಪ. ಸಾಹೇಬನ ಬುಜದ ಮೇಲಿರುವ ಸ್ಟಾರಗಳನ್ನು ನೋಡುತ್ತಿದ್ದಂತೆ ಇವನು ಎಸ್. ಪಿ. ಎಂದರಿತ ಧರೆಪ್ಪ.

ಸರಿಯಾದ ವ್ಯಕ್ತಿಯಂದು ಅಧಿಕಾರಿಯ ಕೈಲಿರುವ ಲಾಠಿ ಕಿತ್ತುಕೊಂಡು “ಈಗ ಹೊಡಿ” ಎಂದು ಮೈ ಒಡ್ಡಿದ. ಎಸ್. ಪಿ. ಪಕ್ಕದಲ್ಲಿದ್ದ ಪೇದೆ ಮತ್ತೊಂದು ಏಟು ಹಾಕಿದ ಧರೆಪ್ಪನಿಗೆ. ಅದಕ್ಕಂಜಲಿಲ್ಲ ಧರೆಪ್ಪ. ‘ಅಂಜುವ ಗಿರಾಕಿ ಯಲ್ಲ ಬಿಡು’ ಎಂದು ಮತ್ತೊಬ್ಬನನ್ನು ಅಟ್ಟಿಸಿಕೊಂಡು ಹೋದ ಸಾಹೇಬ.

ವೇದಿಕೆಯ ಮೇಲಿದ್ದ ಪಂಚಮಸಾಲಿ ನಾಯಕರು ಭರ್ಜರಿ ಭಾಷಣ ಮಾಡುತ್ತಲಿದ್ದರು. ಧರೆಪ್ಪನಂತ  ಸಹೋದರರು ಲಾಠಿ ಏಟು ತಿನ್ನುತ್ತಲಿದ್ದರು. ಅನೇಕರ ಮೈಯಲ್ಲಿರುವ ಎಲವುಗಳು ಪುಡಿಯಾಗುತ್ತಿದ್ದವು. ತಲೆ ಹೋಳಾಗಿ ರಕ್ತ  ಸುರಿಯುತ್ತಿತ್ತ. “ಎಲ್ಲಿಯ ವರೆಗೆ  ಹೋರಾಟ! ಗೆಲ್ಲುವವರೆಗೂ ಹೋರಾಟ!!

ಮೀಸಲು ಸಿಕ್ಕರೇ ನೌಕರಿ ಸಿಕ್ಕೀತು… ಮೀಸಲಾತಿಯ ಆಸೆಯಿಂದ ಬಂದಿದ್ದನೊಬ್ಬ ನಿರುದ್ಯೋಗಿ. ಅವನ ಮೇಲೆ ಬಿತ್ತು ಲಾಠಿ ಏಟು. “ಪೋಲಿಸರ ಮೇಲೆ ಕಲ್ಲೆಸೆತೀಯಾ ಮಗನೆ” ಎನ್ನುತ್ತ ಮತ್ತೊಮ್ಮೆ ಲಾಠಿ ಬೀಸಿದ ಕಾನೂನು ಪಾಲಕ.

“ನಾನು ಗ್ರಾಜುವೇಟು, ನನ್ನಂತಿರುವ ನಿನ್ನ ಮೇಲೇಕೆ ಕಲ್ಲೆಸೆಯಲಿ, ನಾನು ಬಂದಿದ್ದು ಮೀಸಲಾತಿ ಕೇಳಲು” ಎಂದ ನಿರುದ್ಯೋಗಿ.  ಕೇಳಿಸಿಕೊಳ್ಳುವಷ್ಟು ವ್ಯವಧಾನ ಪೊಲೀಲಿಸಪ್ಪನಿಗಿರಲಿಲ್ಲ. ಈಗ ಲಾಠಿ ಬೀಸದಿದ್ದರೆ ನಾಳೆ ಅವನ ಹೆಂಡಿರ ಮಕ್ಕಳು ಉಪವಾಸವಿರಬೇಕಾದೀತು!

“ಮಗನೆ, ಸೊಕ್ಕ ಬಂದದ ಚರ್ಬಿ ತಗಿತೀನ ನಡಿ ಮಗನಾ” ಎನ್ನುತ್ತ ಕೊರಳಪಟ್ಟಿ ಹಿಡಿದು ಜೀಪಿಗೆ ತಳ್ಳುತ್ತಲಿದ್ದ ಪಾಲಕನಂತಿದ್ದ ಪೊಲೀಸಪ್ಪ. ಕೊಸರಾಡಿದ ನಿರುದ್ಯೋಗಿ. ಕುಂಡಿಯ ಮೇಲೆ ಮತ್ತೊಮ್ಮೆ ಬಲವಾಗಿ ಒದ್ದು ಜೀಪಿನಲ್ಲಿ ಅವನನ್ನು ತಳ್ಳಿದ ಪೊಲೀಸಪ್ಪ.

ಪೆಟ್ಟು ತಿಂದ ನಿರುದ್ಯೋಗಿ ಮೇಲೆ ಪೊಲೀಸರು ಹತ್ತು – ಹನ್ನೆರಡು ಸೆಕ್ಷನ್ ಹಾಕಿ ಕೇಸ್ ಜಡಿಯುವರು. ಹೊರಬರಲು ಕೋರ್ಟ್ ಕಚೇರಿ ಅಲಿಯಬೇಕು. ವಕೀಲ ಸಾಹೇಬರಿಗೆ ಫೀಜ್ ಕೊಡಬೇಕು. ಮಧ್ಯದಲ್ಲಿ ಯಾವುದಾದರೊಂದು ಇಂಟರವ್ಯೂ ಬಂದರೆ ಅದಕ್ಕೆ ಹಾಜರಾಗುವಂತಿಲ್ಲ. ಪೊಲೀಸ್ ಕೇಸ್ ಗಳಿದ್ದರೆ ಸರಕಾರಿ ನೌಕರಿ ದೊರೆಯದು. ಹಸಿವು ಕಟ್ಟಿ ಸಾಲಿ ಓದಿಸಿದ ಮಗನೊಬ್ಬನಾಗುವನು ಪರ್ಮನೆಂಟ್ ನಿರುದ್ಯೋಗಿ. ಹತ್ತೆಂಟು ವರ್ಷಗಳ ಕಾಲ ಮುದ್ದತಿನ ಮೇಲೆ ಮುದ್ದತಗಳು. ಕೊನೆಗೊಂದು ದಿನ ಅವನಾಗುವನು ನಿರ್ದೋಷಿ. ಆಗಲೆ ಅವನ ವಯಸ್ಸು ನಾಲ್ವತ್ತು ದಾಟಿರುತ್ತದೆ.

“ಯಾವ ಸರಕಾರಿ ನೌಕರಿಗಾಗಿ ಹೋರಾಡಿದ್ದನೋ ಅದು ಅವನಿಂದ ದೂರ… ಬಲು ದೂರ….  ಸಾಹೇಬನನ್ನಾಗಿ ಮಾಡುವ ಕನಸು ಕಂಡ ಮುದಿ ತಂದೆ – ತಾಯಿ, ಹೆಂಡತಿ-ಮಕ್ಕಳು ಜೀವನ ಪರ್ಯಂತ ಶಪಿಸಿಯಾರು ಇಂದಿನ ಪಂಚಮಸಾಲಿ ಮೋರ್ಚಾವನ್ನು. ಯಾರದೋ ಪ್ರತಿಷ್ಠೆಗಾಗಿ, ಯಾರನ್ನೋ ಗೆಲ್ಲಿಸಲು ಸಾಯಬೇಕೇಕೆ ನನ್ನವರು ಲಿಂಗಾಯತ ಪಂಚಮರು.

ಮುಂದಾಗಬಹುದಾದ ಭಯಾನಕ ಘಟನೆಗಳು ಕಣ್ಮುಂದೆ ಬಂದವು. ಇದಕ್ಕೆಲ್ಲ ಕಾರಣರಾರು? ಇವರು ನಾವು ಚುನಾಯಿಸಿದ ರಾಜಕಾರಣಿಗಳು ಅಲ್ಲವೆ? ಇವರನ್ನು ನಾವು ಚುನಾಯಿಸಿ ಕಳಿಸಿದ್ದು ಶಾಸನ ಮಾಡಲೆಂದು ಅಲ್ಲವೆ? ಶಾಸನ ಸಭೆಗಳಲ್ಲಿ ಶಾಸನಗಳನ್ನು ಮಾಡದೆ, ಈಗಿರುವ ಕಾಯಿದೆಯಲ್ಲಿಯೇ ಮೀಸಲಾತಿ ಕೊಡು ಎಂದರೆ ಕೊಡಲಾದೀತೇ?

ಪ್ರತಿಯೊಂದು ಸಮಸ್ಯೆಗಳಿಗೆ ನಾವೇ ರಸ್ತೆಗಿಳಿದು ಪರಿಹಾರ ದೊರಕಿಸಿಕೊಳ್ಳಬೇಕಾದರೆ ಇವರು ಶಾಸಕರಾಗಿರುವುದು ಏತಕ್ಕಾಗಿ? ಕೇವಲ ಸಂಬಳ, ಭತ್ಯೆ, ಕಾರು, ಬಂಗಲೆ ಪಡೆಯಲಿಕ್ಕಾಗಿಯೆ?  ಇವರನ್ನು ನಾವು ಚುನಾಯಿಸಿ ಕಳಿಸಿದ್ದು ಶಾಸನ ಮಾಡಿ ನಮಗೆ ಬೇಕಾದ ಸೌಕರ್ಯಗಳನ್ನು ಒದಗಿಸಲೆಂದು ಅಲ್ಲವೆ? ಕಾರ್ಯಸಾಧುವಲ್ಲದ ಬೇಡಿಕೆಗಳು ನಮ್ಮದಾಗಿದ್ದಲ್ಲಿ ಅದನ್ನು ನಮಗೆ ಮನದಟ್ಟು ಮಾಡುವುದು ಅವರ ಕರ್ತವ್ಯವಲ್ಲವೆ?

ಈಗಿರುವ ಕಾಯಿದೆಯಲ್ಲಿ 2a ಪಡೆಯುವುದು ಬೆಟ್ಟಕ್ಕೆ ಕಲ್ಲುಹೊತ್ತಂತೆ. ಶಾಸನಗಳು ಬದಲಾಗಬೇಕು. ಶಾಸನಗಳನ್ನು ರಚಿಸುವವರು ಅಭ್ಯಾಸ ಮಾಡಿ ನಿಷ್ಠೆಯಿಂದ ಶಾಸನ ಸಭೆಗಳಲ್ಲಿ ಅವನ್ನು ಮಂಡಿಸಬೇಕು. ಕಾಯಿದೆ ಪಾಸ್ ಮಾಡಬೇಕು. ಇದನ್ನೆಲ್ಲ ಮಾಡದೆ ವಿರೋಧ ಪಕ್ಷದಲ್ಲಿದ್ದಾಗ ಒಂದು ಬಣ್ಣ, ಆಡಳಿತ ಪಕ್ಷದಲ್ಲಿದ್ದಾಗ ಮತ್ತೊಂದು ಬಣ್ಣ ಬಳಿದುಕೊಂಡು ನಮ್ಮವರನ್ನು ಬಲಿಪಶು ಮಾಡಬೇಡಿ. ಪ್ರಜ್ಞಾವಂತ ಪಂಚಮಸಾಲಿ ಸಮಾಜವನ್ನು ಎಷ್ಟ ಬಾರಿ ಯಾಮಾರಿಸುತ್ತೀರಿ?

ನಿನ್ನೆಯ ಬೆಳವಣಿಗೆಯ ಹೊರೆಯನ್ನು ಭಾ. ಜ. ಪ. ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಹೊರಬೇಕು. ಜನರನ್ನು ಬಾವಿಗೆ ತಳ್ಳಿ ಆಳ ನೋಡುವ ಆಟ ಇನ್ನು ಸಾಕು. ತಮ್ಮ ಸ್ವಪ್ರತಿಷ್ಠೆ, ಸ್ವಲಾಭಕ್ಕಾಗಿ ನಮ್ಮ ಅಣ್ಣ ತಮ್ಮಂದಿರ ಮೂಳೆ ಮುರಿಯುವ ಕೆಲಸ ಇನ್ನು ಮುಂದೆ ಬೇಡ. ಇದು ಸಮಾಜ ಕಟ್ಟಿದವರ ಎಚ್ಚರಿಕೆ. ಸಮಾಜವನ್ನು ಕಟ್ಟಿದ್ದು ನಾವು ಹುತ್ತದಲ್ಲಿ ಹಾವು ಸೇರಿಕೊಂಡಂತೆ ಸೇರಿಕೊಂಡಿದ್ದು ನೀವು. ಸಾಕು ಮಾಡಿ ನಿಮ್ಮ ನಾಟಕ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply