ದೂರುದಾರರಿಗೆ ಪರಿಹಾರ ನೀಡಲು ಆದೇಶ
ಧಾರವಾಡ: ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.
ಮೂರುವರೆ ವರ್ಷದಲ್ಲಿ ರೂ.7 ಲಕ್ಷ ಬೆಲೆಯ ಪ್ಲಾಟ್ ಕೊಡುವುದಾಗಿ ಅಥವಾ ರೂ.7 ಲಕ್ಷ ಹಣ ವಾಪಸ್ಸು ಕೊಡುವುದಾಗಿ ಎದುರುದಾರರು ಒಪ್ಪಿ ಆ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದರು. ಮೂರುವರೆ ವರ್ಷದ ಅವಧಿ ಮುಗಿದ ನಂತರ ಎದುರುದಾರ ಗೋಲ್ಡನ್ ಲೈಪ್ ಕಂಪನಿಯವರು ದೂರುದಾರರಿಗೆ ಪ್ಲಾಟ್ ಕೊಡಲಿಲ್ಲ. ಒಪ್ಪಂದದಂತೆ ರೂ.7 ಲಕ್ಷ ಹಣವನ್ನು ವಾಪಸ್ಸು ಕೊಡಲಿಲ್ಲ. ಈ ಬಗ್ಗೆ ದೂರುದಾರ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅದಕ್ಕೆ ಸ್ಪಂದಿಸಿಲ್ಲ. ಕಾರಣ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:02/01/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಎದುರುದಾರರು ನೀಡಿರುವ ಸರ್ಟಿಫಿಕೇಟಿನಲ್ಲಿ ಹಣ ವಿನಿಯೋಗಿಸಿದ ಮೂರುವರೆ ವರ್ಷಕ್ಕೆ ರೂ.7 ಲಕ್ಷ ಮೌಲ್ಯದ ಸೈಟು ಅಥವಾ ರೂ.7 ಲಕ್ಷ ಹಣ ಹಿಂದಿರುಗಿಸುವ ಬಗ್ಗೆ ಎದುರುದಾರ ಗೋಲ್ಡನ್ ಲೈಫ್ ಕಂಪನಿಯವರು ಒಪ್ಪಿರುತ್ತಾರೆ. ಆದರೆ ಮೂರುವರೆ ವರ್ಷ ಅವಧಿ ಮುಗಿದ ಮೇಲೆ ಸೈಟು ಅಥವಾ ರೂ.7 ಲಕ್ಷ ಹಣ ಕೊಡಲು ಎದುರುದಾರರು ಒಪ್ಪುತ್ತಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.7 ಲಕ್ಷ ಹಣ ಮತ್ತು ಅದರ ಮೇಲೆ ದಿ:30/12/2020 ರಿಂದ ಶೇ.8 ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ ರೂ. 50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರರಿಗೆ ನಿರ್ದೇಶಿಸಿದೆ.




