ದೂರುದಾರರಿಗೆ ಪರಿಹಾರ ನೀಡಲು ಆದೇಶ
ಧಾರವಾಡ: ಧಾರವಾಡದ ಕೆ.ಎಚ್.ಬಿ. ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶ ರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂಬರ್ ಆಗಿದ್ದರು. ಅವರು 30×40 ಸೈಜಿನ ಪ್ಲಾ ಟ್ ಗೆ ಕಂತುಗಳ ಮೂಲಕ ಒಟ್ಟು ರೂ.3,16,800/- ತುಂಬಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಭರವಸೆ ಕೊಟ್ಟು ದಿ.07/10/2014 ರಂದು ಕರಾರು ಪತ್ರ ಬರೆದುಕೊಟ್ಟಿದ್ದರು.
ಭೂಮಿ ಅಭಿವೃದ್ಧಿಗೊಳಿಸಿ ನಿಗದಿತ ಅವಧಿಯಲ್ಲಿ ಎದುರುದಾರರು ಪ್ಲಾಟ್ನ್ನು ದೂರುದಾರರಿಗೆ ನೋಂದಣಿ ಮಾಡಿಕೊಡಬೇಕಾಗಿತ್ತು. ಆದರೆ ಫಿರ್ಯಾದಿದಾರರಿಂದ ಎಲ್ಲ ಹಣ ಪಡೆದಿದ್ದರು ಎದುರುದಾರರು ಪ್ಲಾಟ್ನ್ನು ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಎದುರುದಾರ ಈ ರೀತಿಯ ನಡವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:25/11/2022 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ದೂರುದಾರರಿಂದ ರೂ.3,16,800/- ಹಣ ಪಡೆದುಕೊಂಡು ಒಪ್ಪಂದದಂತೆ ಅವರಿಗೆ ಪ್ಲಾಟ್ನ್ನು ನೋಂದಣಿ ಮಾಡಿಕೊಡವುದು ಎದುರುದಾರರ ಕರ್ತವ್ಯವಾಗಿದೆ. 7-8 ವರ್ಷ ಕಳೆದರು ಎದುರುದಾರರು ದೂರುದಾರರಿಗೆ ಪ್ಲಾಟ್ ನೋಂದಣಿ ಮಾಡಿಕೊಟ್ಟಿಲ್ಲ. ಅವರ ಹಣವನ್ನು ಎದುರುದಾರರು ವಾಪಸ್ಸು ಕೊಟ್ಟಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರಿಂದ ಹಣ ಪಡೆದು ವ್ಯವಹರಣೆ ನಡೆಸಿರುವುದರಿಂದ ದೂರುದಾರ ಗ್ರಾಹಕರ ಅರ್ಥವಿವರಣೆಯೊಳಗೆ ಬರುತ್ತಾನೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ದೂರುದಾರರು ಸಂದಾಯ ಮಾಡಿದ ರೂ.3,16,800/- ಹಾಗೂ ಅದರ ಮೇಲೆ ಶೇ.8 ರಂತೆ 31/10/2023ರ ವರೆಗಿನ ಬಡ್ಡಿ ರೂ.1,47,840/- ಸೇರಿ ಒಟ್ಟು ರೂ.4,64,640/- ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶನ ನೀಡಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶ ನೀಡಿದೆ.



