ನಿನ್ನೆ ನಮ್ಮನ್ನಗಲಿದ ಹಿರಿಯ ಪತ್ರಕರ್ತ ಎಸ್. ಕೆ. ಶಾಮಸುಂದರ್, ಅವರು ಸಮಕಾಲೀನರಿಗೆ ಅಭಿಮಾನದ ಶ್ಯಾಮಿ ನಮಗೆಲ್ಲಾ ಪ್ರೀತಿಯ ಅಣ್ಣ ಶ್ಯಾಮಣ್ಣ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇಪ್ಪತ್ತು ವರ್ಷಗಳ ಹಿಂದೆ ಪ್ರತಿ ದಿನ ಸಂಜೆ ವೇಳೆಗೆ ಪ್ರೆಸ್ ಕ್ಲಬ್ ಗೆ ಹಾಜರಾಗುತ್ತಿದ್ದರು. ಇತ್ತೀಚೆಗೆ ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದ ಆಕಾಶವಾಣಿ ಶ್ರೀಹರಿ, ಪ್ರಜಾವಾಣಿ ಪೊನ್ನಪ್ಪ, ಲೈಬ್ರರಿ ಡಿಪಾರ್ಟ್ ಮೆಂಟ್ ನ ಲೋಕೇಶ್ (ಲೋಕಣ್ಣ), ಶ್ಯಾಮಣ್ಣನ ಸಹೋದರ ಎಸ್.ಕೆ. ಶಂಕರ್ (ಶಂಕರಣ್ಣ), ಬ್ಯಾಂಕರ್ ಖಾನ್, ಎಕ್ಸೈಸ್ ಡಿಪಾರ್ಟ್ ಮೆಂಟ್ ಡಿಸಿ ಸೋಮಶೇಖರ್, ಚಿತ್ರಲೋಕ ಡಾಟ್ ಕಾಮ್ ಕೆ.ಎಂ. ವೀರೇಶ್ ಇನ್ನೂ ಹಲವು ಹಿರಿಯರು ಕಾರ್ಡ್ಸ್ ಆಡುತ್ತಾ ಗುಂಡೋಪಂಥರಾಗಿರುತ್ತಿದ್ದರು. ಆಗ ಅವರೊಟ್ಟಿಗೆ ನಾನು ಮತ್ತು ಈಗಿನ ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ ಕೂಡಾ ಸೇರುತ್ತಿದ್ದೆವು. ನಾವೇ ಕಿರಿಯರು. ಶ್ಯಾಮಣ್ಣ ಬಾರದ ದಿವಸ ನಾವು ಟೇಬಲ್ ನಲ್ಲಿ ಒಂದಿಷ್ಟು ಹೆಚ್ಚಿಗೆ ಮಾತನಾಡುತ್ತಿದ್ದೆವು. ಅವರಿದ್ದ ದಿನ ಹೆಡ್ ಮೇಷ್ಟ್ರಿದ್ದಂತೆ. ಕಮಕ್ ಕಿಮಕ್ ಅನ್ನೋಹಾಗಿರಲಿಲ್ಲ. ಡ್ರಾಪ್ ಹಾಕಿದ್ರೆ ಅಕ್ಕಪಕ್ಕ ಕಾರ್ಡ್ಸ್ ಕೂಡಾ ನೋಡುವ ಹಾಗಿರಲಿಲ್ಲ. ನೋಡಿದ್ರೆ ಗದರುತ್ತಿದ್ದರು. ದಿನ ಕಳೆದಂತೆ ಸಾರ್ ಹೋಗಿ ಅಣ್ಣ ಆದರು. ಕ್ರಮೇಣ ಶ್ಯಾಮಣ್ಣ ಆದರು. ಖಡಕ್ ಮಾತುಗಳನ್ನಾಡುತ್ತಲೇ ದಿನಕಳೆದಂತೆ ನಮಗೆ ಸಿಹಿನೀರಿನ ಬುಗ್ಗೆಯಂತೆ ಕಂಡರು.
ನಿತ್ಯ ಕ್ಲಬ್ಬಿಗೆ ಬರುತ್ತಿದ್ದವರು ಇದ್ದಕ್ಕಿದ್ದಂತೆ ವರ್ಷಗಟ್ಟಲೆ ಇತ್ತಕಡೆ ತಲೆಯೂ ಹಾಕುತ್ತಿರಲಿಲ್ಲ. ಮತ್ತೆ ಬರುವುದು ಶುರುವಾದರೆ ನಿತ್ಯ ಬರುವುದು ನಡೆದೇ ಇತ್ತು. ಕಳೆದ ಒಂದು ವರ್ಷದಿಂದ ಪ್ರತಿ ನಿತ್ಯ ಕ್ಲಬ್ಬಿಗೆ ಬರುತ್ತಿದ್ದರು. ಒಂದು ನೀಟ್ ಕಾಟನ್ ಪ್ಯಾಂಟ್, ಬ್ರಾಂಡೆಡ್ ಶರ್ಟ್, ಕೋಟು, ಬೆಲ್ಟ್ ಚಪ್ಪಲಿ, ಕೈಯಲ್ಲೊಂದು ವಯರ್ ಬ್ಯಾಗ್, ಬ್ಯಾಗಿನಲ್ಲಿ ಒಂದು ನೀರಿನ ಬಾಟಲಿ, ಒಂದೆರಡು ಸಿಗರೇಟ್ ಪ್ಯಾಕ್, ಲೈಟರ್, ಛತ್ರಿ ಮತ್ತು ಸದಾ ಕೈಯಲ್ಲಿ ಉರಿಯುವ ಎಸ್ಸೇ ಸಿಗರೇಟು.
ಅಣ್ಣಾ ಇದೇನು ಈ ವಯರ್ ಬ್ಯಾಗ್ ನಿಮ್ಮ ಧಿರಿಸಿಗೆ ಮ್ಯಾಚ್ ಆಗ್ತಿಲ್ಲಾ ಅಂದ್ರೆ. ಇದು ಬಾಳ ಯೂಸ್ ಫುಲ್, ಕಂಫರ್ಟಾಗಿದೆ. ನೋಡು ಇದೆಲ್ಲಾ ಇಟ್ಕೋ ಬೋದು… ಮನೆಗೆ ಹೋಗುವಾಗ ದಾರೀಲಿ ಒಂದೆರಡು ಸೌತೆಕಾಯಿ ಹಾಕ್ಕೊಂಡು ಹೋಗಬೋದು. ಮೊನ್ನೆ ತಾನೇ ನನ್ನ ಫ್ರೆಂಡ್ ಒಬ್ಬ್ರು ಕೇಳಿದ್ರು ತರಿಸಿಕೊಟ್ಟೆ ಅಂದವರು. ಆ ವಯರ್ ಬ್ಯಾಗ್ ಅನ್ನು ಒಂದು ಸ್ವಯಂಸೇವಾ ಸಂಸ್ಥೆ ಮಾಡುವುದು. ಅದ್ರ ಲಾಭ ಅಗತ್ಯ ಇರೋ ಕೆಲವು ಹೆಣ್ಣು ಮಕ್ಕಳಿಗೆ ಸಿಗುತ್ತೆ ಅಂತಾನೂ ಹೇಳಿದ್ರು.
ಹೀಗೆ ಸಂಜೆ ನಿತ್ಯ ಕ್ಲಬ್ಬಿಗೆ ಬಂದವರು ಖಾರ ಬಾತ್ ಅಥವಾ ಆದಿನದ ತಿಂಡಿ ಏನಿರುತ್ತೋ ಅದನ್ನೇ ತಿಂದು ಕಾಫಿ ಕುಡಿದು ಒಂದರಿಂದೊಂದು ಸಿಗರೇಟ್ ಸೇದುತ್ತಾ ಏಕಾಂಗಿಯಾಗಿ ತಮ್ಮ ಫೋನ್ ನಲ್ಲಿ ಬ್ಯುಸಿ ಇರುತ್ತಿದ್ದರು. ನನ್ನ ಅವರ ನಡುವೆ ಮಾತು ಆರಂಭವಾಗುತ್ತಿದ್ದದ್ದು ಹೀಗೆ. ಅವರು ಕಂಡ ಕೂಡಲೇ ನಾನು ಶ್ಯಾಮಣ್ಣ ಅನ್ನುವುದು ಅವರು ನಾಗೇಶಾ ಅನ್ನುವುದು. ಅದೇ ಗ್ರೀಟಿಂಗ್. ಏನೂ ಪ್ರೀ ಆಕ್ಯುಪೈ ಇಲ್ಲದೇ ಹೋದರೆ ನನ್ನ ಟೇಬಲ್ ನತ್ತ ಬಂದು ಚೇರು ಎಳೆದುಕೊಂಡು ಕೂತು ಏನಾದರೊಂದು ವಿಷಯ ಹೇಳಿ ನನ್ನ ಆಸಕ್ತಿ ಕುತೂಹಲಗಳನ್ನು ಕೆಣಕುತ್ತಿದ್ದರು.
ತೀರಾ ಇತ್ತೀಚೆಗೆ ಅವರಿಗೆ ಮಂಡಿ ನೋವು ಕಾಣಿಸಿಕೊಂಡಿತ್ತು. ಅದಕ್ಕೆ ಟ್ರೀಟ್ಮೆಂಟ್ ತೆಗೆದುಕೊಂಡಿದ್ದರಾದರೂ ನಾನು ಸೂಚಿಸಿದ ಡಾ. ಶಿವರಾಜಯ್ಯ ನವರ ಬಳಿ ಹೋಗಿ ಬಂದು ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. He is different Nageshaa, I liked him. ಎಂದು ಹೇಳಿದ್ದರು. ಅಂತೆಯೇ ಅವರ ಅಜ್ಜಿ ಒಂದು ಪ್ಯಾರಾಸಿಟಮಲ್ ಕೂಡಾ ತಗೊಳ್ದೆ ಇದ್ದದ್ದು, ಶ್ಯಾಮಣ್ಣಂಗೆ ಮಂಡಿಯಲ್ಲಾಗಿದ್ದ ಸಮಸ್ಯೆ ಅವರಜ್ಜಿಗೂ ಆಗಿದ್ದದ್ದು ಮತ್ತದಕ್ಕೆ ಅವರು ಇಟ್ಟಿದ್ದ ಹೆಸರನ್ನೂ ಹೇಳಿದರು. “ನೋಡ್ರೇ ನನ್ನ ಮಂಡೀಲಿ ಕಸ ಸೇರ್ಕೊಂಡಿದೆ”- ಇದು ಅವರಜ್ಜಿಯ ಮಾತು. ವೈದ್ಯಕೀಯ ಭಾಷೆಯ ಅರ್ಥವೂ ಅದೇ ಆಗಿರುವುದರ ಬಗ್ಗೆ ಮಾತನಾಡುತ್ತಿದ್ದರು.
ಮದುವೆ ಇಲ್ಲದೆ ಒಂಟಿಯೇ ಇದ್ದ ಶ್ಯಾಮಣ್ಣನ ಮನೆ ಅದೆಷ್ಟು ನೀಟ್ ಎಂಬುದು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಎಲ್ಲೂ ಒಂದು ಚೂರು ದೂಳು ಕಸ ನೋಡಲು ಅಸಾಧ್ಯವೆಂಬಂತೆ ಸದಾ ಅಚ್ಚುಕಟ್ಟು. ಮೂಲಂಗಿ ಅವರಿಗಿಷ್ಟ, ಅಂತೆಯೇ ಉಪ್ಪಿಟ್ಟು (ನಮ್ಮ ಕ್ಲಬ್ಬಲ್ಲಿ ಅದಷ್ಟೇ ಸಿಗ್ತಿದ್ದ ಕಾರಣಕ್ಕೆ ಇಷ್ಟವೋ ಏನೋ ಕಾಣೆ).
**
ಡಿಜಿಟಲ್ ಪತ್ರಿಕೋದ್ಯಮದಲ್ಲಿ ಶ್ಯಾಮ್
ಎರಡು ದಶಕದ ಹಿಂದೆ ಕನ್ನಡ ಪತ್ರಿಕೆಗಳಿಂದ ಡಿಜಿಟಲ್ ಮಾಧ್ಯಮದತ್ತ ಮುಖ ಮಾಡಿದ ಮೊದಲಿಗರೆಂದರೆ ಎಸ್.ಕೆ. ಶ್ಯಾಮಸುಂದರ್, ಶ್ರೀಧರ ದೀಕ್ಷಿತ್, ಸತೀಶ್ ಮುಂತಾದವರು. ಶ್ಯಾಮಣ್ಣ ಹತ್ತಾರು ಮಂದಿಯನ್ನು ಬರವಣಿಗೆಯಲ್ಲಿ ತೊಡಗಿಸಿದವರು. ಕಿರಿಯ ಪೀಳಿಗೆಗೆ ಕೈಹಿಡಿದು ಮನ್ನಡೆಸಿದವರು.
ನಾನೂ ಕೂಡಾ ಮೊದಲು ಡಿಜಿಟಲ್ ಪ್ಲಾಟ್ ಫಾರಂಗೆ ಬರೆದದ್ದು ದಟ್ಸ್ ಕನ್ನಡ ಕ್ಕೇ. ಅದೀಗ ಒನ್ ಇಂಡಿಯಾ ಆಗಿದೆ. ಹದಿನಾರು ವರ್ಷದ ಹಿಂದೆ ಅದೊಮ್ಮೆ ಫೋನ್ ಮಾಡಿದ ಶ್ಯಾಮಣ್ಣ, ನಾಗೇಶಾ ಬಿಟಿ ಬದನೆ ಬಗ್ಗೆ ಒಂದು ಲೇಖನ ಕಳಿಸೋ ಅಂದರು. ಅಂದೇ ರಾತ್ರಿ ಕುಳಿತು ಸುಮಾರು ೧೨೦೦ ಪದಗಳಷ್ಟು ಬರೆದು ಕಳುಹಿಸಿದ್ದೆ. ಬೆಳಗ್ಗೆ ಫೋನ್ ಮಾಡಿ “ನಿನಗೆ ಒಂದು ಲೇಖನ ಬರಿಯೋ ಅಂತಾ ಹೇಳಿದ್ದು ಐದು ಬರೆದಿದ್ದೀಯಲ್ಲಾ” ಅಂದರು. ನನಗೆ ಅರ್ಥವಾಗಲಿಲ್ಲ. ಯಾಕಣ್ಣ ಚನ್ನಾಗಿಲ್ವಾ ಅಂದೆ ಪ್ರಜಾವಾಣಿ ಸ್ಪೆಷಲ್ ಪೇಜ್ ಗೆ ಬರೆದಂಗೆ ಬರೆದಿದ್ದೀಯಾ ನೀನು, ೩೦೦ ಪದ ಸಾಕು ಡಿಜಿಟಲ್ ಗೆ ಅಂದು ಎಡಿಟ್ ಮಾಡಿ ಕಳಿಸು ಅಂದರು. ನನಗೆ ೮೦೦ ಪದಗಳಿಗಿಂತಾ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಕಡೆಗೆ ಅವರೇ ಎಡಿಟ್ ಮಾಡಿ ನನ್ನ ಬೈಲೈನ್ ನಲ್ಲಿ ಬಿಟಿ ಬದನೆ ಪಲ್ಯ ತಿನ್ನಲು ಯೋಗ್ಯವೇ ಎಂಬ ಹೆಡ್ ಲೈನ್ ನಲ್ಲಿ ಪ್ರಕಟಿಸಿದ್ದರು.
ಮುಂದಿನ ದಿನಗಳಲ್ಲಿ ಪ್ರಶಾಂತ್ ಹುಲ್ಕೋಡ್ ಒನ್ ಇಂಡಿಯಾದಲ್ಲಿ ಕೃಷಿಗಾಗಿ ಪ್ರತ್ಯೇಕ ಕಾಲಂ ಆರಂಭಿಸಿ ಅದಕ್ಕೆ ನನ್ನನ್ನು ಕಾಲಮಿಸ್ಟ್ ಮಾಡಿದ್ದರು. ಅಲ್ಲಿಂದಾಚೆಗೆ ಒನ್ ಇಂಡಿಯಾದ ಎಲ್ಲಾ ಭಾಷೆಯ ಸೈಟ್ ಗಳಲ್ಲೂ ಕೃಷಿಗಾಗಿ ಒಂದು ಪ್ರತ್ಯೇಕ ಕಲಂ ಆರಂಭವಾಗಿದ್ದು ಇತಿಹಾಸ.
ಇಂಟರ್ನೆಟ್ ಸ್ಪೀಡ್ ಇಲ್ಲದ, ಕನ್ನಡ ಫಾಂಟ್ ಗಳೇ ಇಲ್ಲದ ದಿನಗಳಿಂದಿಡಿದು ಮೊನ್ನೆ ಮೊನ್ನೆಯತನಕ ಡಿಜಿಟಲ್ ಪತ್ರಿಕೋದ್ಯಮದ ಎಲ್ಲಾ ಬೆಳವಣಿಗೆಗಳಿಗೂ ಸಾಕ್ಷಿಯಾದವರು ಶ್ಯಾಮಣ್ಣ.
ಇತ್ತೀಚೆಗೆ ನಾನು, ಪ್ರಶಾಂತ್ ಹುಲ್ಕೋಡ್ ಮತ್ತು ಕೆಲವು ಟೆಕ್ ಗೆಳೆಯರು ಸೇರಿ ಒಂದು ಕೃಷಿ ಎ ಐ ಇಂಜಿನ್ ಅಭಿವೃದ್ಧಿ ಮಾಡಿದೆವು. ಅದನ್ನು ಶ್ಯಾಮಣ್ಣ ನವರಿಗೆ ತೋರಿಸಿ ನಿಮ್ಮ ರಿಯಾಕ್ಷನ್ ಬೇಕೆಂದೆ. ಇಂಜಿನ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಚರ್ಚೆ ಕೊಂಚ ಹೆಚ್ಚಾದ ಕೂಡಲೇ, ರಿಲ್ಯಾಕ್ಸ್ ಗೆ ಒಳ್ಳೆ ವೆದರ್ ಬಿಯರ್ ಕುಡಿ ಎಂದು ಕ್ಲಬ್ಬಿನ ಮೇಲಿಂದ ಏರಿಯಲ್ ವ್ಯೂ ಫೋಟೋ ತೆಗೆದು ನನಗೆ ಕಳುಹಿಸಿ ಹೊರಟವರು, ಮಾರನೆಗೆ ತಮ್ಮ ರಿಯಾಕ್ಷನ್ ಕಳುಹಿಸಿದರು. ರಿಯಾಕ್ಷನ್ ಹೀಗಿದೆ.
“ಫಲವತ್ತಾದ ಡಿಜಿಟಲ್ ಮಣ್ಣಿನಲ್ಲಿ ಅಕ್ಷರ ಬಿತ್ತಿ ಬೆಳೆಯುತ್ತಿರುವ ಕನ್ನಡ ಭೂರಮೆ. ಹೌದು ಕಣಾ ! ಆಲದ ಮರದ ಕೆಳಗಿನ ಕನ್ನಡ ಪಾಠಶಾಲೆ ಇದು !”
“Agriculture is the most useful, noble employment ! And, more so, cultivating crops on Kannada Digital Soil, indeed is fascinating !”
– Shyamsundar S K
ಇದಿನ್ನೂ ನಾನು ವೆಬ್ ಸೈಟ್ ಗೆ ಅಪಲೋಡ್ ಮಾಡಲಾಗಿಲ್ಲ. ಅಷ್ಟರಲ್ಲಿ ಅವರ ಸಾವಿನ ಸುದ್ಧಿ ಬಂದೆರಗಿದೆ. ಹೋಗಿ ಬನ್ನಿ ಶ್ಯಾಮಣ್ಣ. ನಿಮ್ಮೂರಿನ ರಾಘವೇಂದ್ರ ರಾವ್ (ರಘು) ಮೊನ್ನೆ ತಾನೆ ಹೋದರು. ಅವರೂ ನಿಮಗೆ ಕಂಪನಿ ಕೊಡಲೆಂದೇ ಎರಡು ದಿನ ಮುಂಚೆ ಹೋಗಿರಬೇಕು.
ಕನ್ನಡ ಡಿಜಿಟಲ್ ಪತ್ರಿಕೋದ್ಯಮ ಇತಿಹಾಸದ ಬಗ್ಗೆ ನಿಮ್ಮ ವಿಡಿಯೋಗಳನ್ನು ಮಾಡಲು ನಿಮ್ಮ ಅನುಮತಿ ಪಡೆದಾಗ್ಯೂ ಶೂಟ್ ಮಾಡದೆ ನಾನೇ ತಡ ಮಾಡಿದೆನೋ…? ಅಥವಾ ನೀವೇ ಆತುರವಾಗಿ ನಿರ್ಗಮಿಸಿದಿರೋ ತಿಳಿಯುತ್ತಿಲ್ಲ. ಹೋಗಿ ಬನ್ನಿ ಶಾಮಣ್ಣ.
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




