ಶಿವಮೊಗ್ಗ ಉರಿಯುತ್ತಿದೆ ಎಂಬ ಸುದ್ದಿ ಕೇಳಿದೆ. ಈಚೆಗೆ ನಾನು ಯಾವುದೇ ನ್ಯೂಸ್ ಚಾನೆಲ್ ನೋಡುವುದಿಲ್ಲ, ಆದಾಗ್ಯೂ ವಾಟ್ಸ್ ಆಪ್ ನಲ್ಲಿ ಇಣುಕುವ ಸುದ್ದಿ ತುಣುಕುಗಳು ಕಣ್ಣಿಗೆ ಬೀಳುತ್ತವೆ. ಅಂಥ ಸುದ್ದಿ ತುಣುಕುಗಳಲ್ಲಿ ಶಿವಮೊಗ್ಗದಲ್ಲಿ ಗಲಭೆ ಎಂಬ ಸುದ್ದಿ. ನನ್ನ ಖಾಸಗಿ ಕಾರಣದ ನಿಮಿತ್ತ ನಾನೂ ಶಿವಮೊಗ್ಗದಲ್ಲಿದ್ದೇನೆ. ಇಡೀ ಊರು ಶಾಂತವಾಗಿ ಕಂಡಿತು. ಜನ ಎಂದಿನಂತೆ ಓಡಾಡುತ್ತಿದ್ದರು. ಅಂಗಡಿ ಮುಗ್ಗಟ್ಟುಗಳು ಯಥಾಸ್ಥಿತಿ. ಜನಜೀವನ ಸಾಮಾನ್ಯವಾಗಿದೆ.
ಈಗ ವಿಷಯಕ್ಕೆ ಬರೋಣ. ನಿನ್ನೆ ಸಂಜೆ ನಡೆದಿರುವ ಸಣ್ಣ ಗಲಾಟೆ (ಅದೂ ಆಗಬಾರದಿತ್ತು) ಯನ್ನು ಶಿವಮೊಗ್ಗ ಹೊತ್ತಿ ಉರಿಯುತ್ತಿದೆ ಎಂದು ಬಣ್ಣಿಸುವುದು ಎಷ್ಟು ಸರಿ?
ನನಗೆ ಒಂದು ವಿಷಯ ಮನಸ್ಸಿಗೆ ಬರುತ್ತಿದೆ. ಯಾರಾದರೂ ವಿ.ಐ.ಪಿ ಗಳು ಸತ್ತಾಗ ತಕ್ಷಣ ಸುದ್ದಿ ಬಿತ್ತರಿಸುವುದಿಲ್ಲ, ಕಾರಣ ಅವರ ಅಭಿಮಾನಿಗಳ ಹುಚ್ಚಾಟದಿಂದ ಗಲಾಟೆಗಳು ಸೃಷ್ಟಿ ಆಗಬಹುದು. ಆದ ಕಾರಣ ಒಂದಿಷ್ಟು ಬಂದೋಬಸ್ತ್ ಮಾಡಿ ಆಮೇಲೆ ಸುದ್ದಿ ಬಿತ್ತರಿಸುತ್ತಾರೆ. ಆಗ ಆಗಬಹುದಾದ ಅನಾಹುತ ಕಡಿಮೆ. ಅಂತೆಯೇ ಪ್ರಾಕೃತಿಕ ವಿಕೋಪಗಳಾದಾಗಲೂ ಸಾವು ನೋವಿನ ಸಂಖ್ಯೆ ಕೊಂಚ ಕಡಿಮೆ ಹೇಳಲಾಗುತ್ತದೆ. ಕಾರಣ ಜನ ಪ್ಯಾನಿಕ್ ಆಗಬಾರದೆಂದು. ಇದಕ್ಕೆಲ್ಲ ಯಾವುದೂ ಕಾನೂನಿಲ್ಲ. ಸಮಾಜದ ಬಗ್ಗೆ ಕಾಳಜಿ ಇರುವ ಜನರೇ, ಅಧಿಕಾರಿಗಳೇ ಮಾಡಿಕೊಂಡಿರುವ ಏರ್ಪಾಟು. ಆದರೆ ಮಾಧ್ಯಮಗಳೇಕೆ ಒಂದು ಗಲಾಟೆಯನ್ನು ಇಷ್ಟೊಂದು ದೊಡ್ಡದಾಗಿ ಬಿಂಬಿಸುತ್ತವೆ. (ಸಾಧ್ಯವಾದಲ್ಲಿ ಯಥಾಸ್ಥಿತಿ ಹೇಳಲಿ, ಇಲ್ಲ ಕೊಂಚ ಕಡಿಮೆಯೇ ಹೇಳಲಿ, ಅಬ್ಬರ, exaggeration ಏಕೆ).
ಈ ಟಿಪ್ಪಣಿ ಬರೆಯುವಾಗ ೧೯೯೦ರ ದಶಕದ ಒಂದು ಘಟನೆ ನೆನಪಾಗುತ್ತಿದೆ. ಹುಬ್ಬಳ್ಳಿ ಈದ್ಗಾ ಮೈದಾನದ ಗಲಾಟೆ. ಅಲ್ಲಿ ಆಗ ಇದ್ದ ಪ್ರಜಾವಾಣಿ ವರದಿಗಾರ ನನ್ನ ಹಿರಿಯ ಸ್ನೇಹಿತ ದಿ.ಶ್ರೀಧರ್ ದೀಕ್ಷಿತ್. ಆಗ ಅವರು ಗಲಭೆ ಸುದ್ದಿ ಮಾಡಿದ್ದ ಸಾರಾಂಶ ಹೀಗಿದೆ. ಗಲಾಟೆ ಇತ್ತು… ಜನರು ಎಂದಿನಂತೆ ತರಕಾರಿ ಕೊಳ್ಳುತ್ತಿದ್ದರು. ಅಂಗಡಿಗಳು ತೆರೆದಿದ್ದವು… ಅಲ್ಲೇ ಪಕ್ಕದಲ್ಲಿ ಕೊಂಚವೇ ಎತ್ತರದಲ್ಲಿದ್ದ ಜೇನುಗೂಡು ಕೂಡಾ ಶಾಂತವಾಗಿತ್ತು. ಹೀಗೆ ಬರೆಯುವ ವರದಿಗಾರನ ಬದ್ಧತೆಗೆ ಏನಂತೀರಿ!
ಇನ್ನೊಂದು ಅತಿರೇಕ. ಜನಪರ ಕಾಳಜಿಯ ಶ್ರೀಪಾಲ್ ಶಿವಮೊಗ್ಗ ಶಾಂತಿಯಿಂದರಲಿ ಎಂದು ಆಶಿಸುವ ಜೀವಪ್ರೇಮಿ. ಅವರು ಮಾಧ್ಯಮ ಲೋಕಕ್ಕೂ ಹೊಸಬರಲ್ಲ. ಅವರು ತಮ್ಮೆಲ್ಲ ಕಾಳಜಿಯಿಂದಲೇ ಮಾಧ್ಯಮಗಳಿಗೆ ಗಲಾಟೆಯ ಬಗ್ಗೆ ಅಬ್ಬರ ಮಾಡಬೇಡಿ ಎಂದು ಪ್ರೀತಿಯಿಂದಲೇ ತಾಕೀತು ಮಾಡಿದ್ದಾರೆ. ಅದು ಅವರ ಹಕ್ಕೊತ್ತಾಯವೂ ಹೌದು. ಇದನ್ನು ಮಾನ್ಯ ಈಶ್ವರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಓದಿ ಅವರನ್ನು ‘ದೇಶದ್ರೋಹಿ’ ಎಂದೂ ಆರೋಪಿಸಿದ್ದಾರೆ, ಅಲ್ಲದೆ ಅರೆಸ್ಟ್ ಮಾಡಿ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಹಾಗಾದರೆ ಶಾಂತಿ ಕಾಪಾಡಿ ಎಂದು ಹೇಳುವುದು ದೇಶದ್ರೋಹವೆ? ನಾವು ಯಾವ ರಾಷ್ಟ್ರದಲ್ಲಿ ಬದುಕಿದ್ದೇವೆ. ಈ ನಾಡಿನ ಪ್ರಜ್ಞಾವಂತರೆಲ್ಲರೂ ಶ್ರೀಪಾಲ್ ಅವರ ಜೊತೆಗಿದ್ದಾರೆ, ಇರುತ್ತಾರೆ.
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




