ನಾನು ನಕ್ಸಲ್ ಕಥನ ಬರೆಯಲು ಕಾರಣರಾದ ಮಹಾ ಪುರುಷ ಇವರು

3 years ago

Greatman, write, storyofNaxal, jagadishkoppa,

ಇವರು ಕನು ಸನ್ಯಾಲ್. ಭಾರತದಲ್ಲಿ ನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಚಾರು ಮುಜಂದಾರ್ ಜೊತೆ ಕೈ ಜೋಡಿಸಿದ ಪ್ರಥಮ ನಕ್ಸಲೀಯ ಎಂಬ ಬಿರುದಿಗೆ ಪಾತ್ರರಾದವರು. ಇವರು ಕೂಡಾ ಸಿಲುಗುರಿ ಪ್ರದೇಶದವರು. ಸ್ಥಳಿಯ ನ್ಯಾಯಾಲಯದಲ್ಲಿ ಗುಮಾಸ್ತನಾಗಿದ್ದ ಕನು ಸನ್ಯಾಲ್, ಚಾರು ಮುಜುಂದಾರ್ ಚಿಂತನೆಗಳಿಂದ ಪ್ರೇರಿತರಾಗಿ ಹೋರಾಟಕ್ಕೆ ಧುಮುಕಿದರು. ಚಾರು ಮುಜುಂದಾರ್ ಉಗ್ರ ಹೋರಾಟದ ಜೊತೆಗೆ ಹಿಂಸೆ ಕೂಡಾ ಅನಿವಾರ್ಯ ಎಂದು ನಂಬಿದ್ದರು. ಆದರೆ, ಕನು ಸನ್ಯಾಲ್ ಹಿಂಸೆಯ ವಿರೋಧಿಯಾಗಿದ್ದರು.

ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಜುಂದಾರ್ ಅವರನ್ನು ಮನವೊಲಿಸುತ್ತಿದ್ದರು. 1972 ರಲ್ಲಿ ಕೊಲ್ಕತ್ತ ನಗರದಲ್ಲಿ ಪೊಲೀಸರ ಚಿತ್ರಹಿಂಸೆಯಿಂದ ಚಾರು ಮುಜಂದಾರ್ ಮೃತಪಟ್ಟಾಗ ಸಂಘಟನೆಯನ್ನು ಮುನ್ನಡೆಸಿದರು. ತೊಂಬತ್ತರ ದಶಕದಲ್ಲಿ ಹೋರಾಟ ಕೊನೆಗೊಂಡಾಗ, ಸಿಲುಗುರಿಯ ಹಳ್ಳಿಯಲ್ಲಿ ಭತ್ತದ ಗದ್ದೆಯ ಹಳ್ಳಿಯ ನಡುವೆ ನಿವೃತ್ತ ಜೀವನ ನಡೆಸುತ್ತಿದ್ದರು.

ಏಕಾಂಗಿಯಾಗಿದ್ದ ಕನುಸನ್ಯಾಲ್ ಅವರಿಗೆ ಕಣ್ಣಿನ ಚಿಕಿತ್ಸೆ ಮತ್ತು ಇತರೆ ಖರ್ಚಿಗಾಗಿ ಸ್ಥಳೀಯ ಚಹಾ ತೋಟದ ಕಾರ್ಮಿಕರು ತಿಂಗಳಿಗೆ 600 ರೂಪಾಯಿ ವಂತಿಗೆ ಸಂಗ್ರಹಿಸಿ ನೀಡುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಮತ್ತು ಸಂಜೆ ಏಳುಗಂಟೆಗೆ ಎರಡು ಬಾರಿ ಊಟ ಮತ್ತು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ಚಹಾ ಅವರ ದಿನಚರಿಯಾಗಿತ್ತು.

ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಕನು ಸನ್ಯಾಲ್ ಅವರಿಗೆ ಐವತ್ತು ಸಾವಿರ ಚಿಕಿತ್ಸೆಗೆ ಹಣ ಮತ್ತು ತಿಂಗಳಿಗೆ ಮೂರು ಸಾವಿರ ರೂಪಾಯಿ ಹಿರಿಯ ನಾಗರೀಕರ ವೇತನ ನೀಡಲು ನಿರ್ಧರಿಸಿ ಸರ್ಕಾರಿ ಆದೇಶ ಹೊರಡಿಸಿದರು.

ಈ ಆರ್ಥಿಕ ಸಹಾಯವನ್ನು ಕನು ಸನ್ಯಾಲ್ ನಿರಾಕರಿಸಿದರು. ಯಾವ ವ್ಯವಸ್ಥೆಯ ವಿರುದ್ಧ ನಾನು ಐವತ್ತು ವರ್ಷ ಹೋರಾಡಿದೆನೋ, ಅದೇ ವ್ಯವಸ್ಥೆಯಿಂದ ಹಣ ಪಡೆಯುವುದು ಅಪರಾಧ ಎಂದು ಘೋಷಿಸಿದರು. ಅಂತಿಮವಾಗಿ ಯಾರಿಗೂ ಹೊರೆಯಾಗಬಾರದೆಂದು ನಿರ್ಧರಿಸಿ 2010ರಲ್ಲಿ ತಮ್ಮ ಗುಡಿಸಲಿನಂತಹ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಇಂದಿನ ಹೋರಾಟಗಾರರೆಂಬ ನವೋದ್ಯಮಿಗಳ ಜೊತೆ ಕನು ಸನ್ಯಾಲ್ ಅವರ ಬದ್ಧತೆಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply