ಬೆಂಗಳೂರು: ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವಕಾಶ ಎಲ್ಲರಿಗೂ ಸಿಕ್ಕುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಕನ್ನಡ-ಕನ್ನಡಿಗ-ಕರ್ನಾಟಕದ’ ಅಭ್ಯುದಯವನ್ನು ತನ್ನ ಧ್ಯೇಯವಾಗಿಸಿ ಕೊಂಡಿರುವ ‘ಕನ್ನಡ ಧ್ರುವ ತಾರೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದ್ದು ಅದರಲ್ಲಿ ಸಾಧಕರು ಅತಿಥಿಗಳಾಗಿ ಬಂದು ತಮ್ಮಅನುಭವಗಳನ್ನು ಹಂಚಿ ಕೊಳ್ಳುತ್ತಾರೆ. ಸಾರ್ವಜನಿಕರ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ಸಾಧಕರು ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗಿರುವ ಈ ಮಹತ್ವದ ಕಾರ್ಯಕ್ರಮವನ್ನು ಖ್ಯಾತ ನಟ ರಮೇಶ್ ಅರವಿಂದ್ ಅವರಿಂದ ಆರಂಭಿಸಲಾಗಿದ್ದು ಇದೇ ತಿಂಗಳ ಅಕ್ಟೋಬರ್ 27ರ ಶುಕ್ರವಾರ ಸಂಜೆ ಐದು ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರರಾದ ಪ್ರೊ.ಮಾಲತಿ ಪಟ್ಟಣ ಶೆಟ್ಟಿಯವರು ಭಾಗವಹಿಸಿ ಸಾರ್ವಜನಿಕರೊಡನೆ ಸಂವಾದ ನಡೆಸಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಧಾರವಾಡದ ನೆಲಕ್ಕೊಂದು ಕಾವ್ಯದ ಸೊಗಡಿದೆ, ಸಂಗೀತದ ಲಯವಿದೆ, ಸಂಸ್ಕೃತಿ ಸಂಪನ್ನತೆ, ಶಿಕ್ಷಣದ ಶಕ್ತಿ ಎಲ್ಲವೂ ಸೇರಿದೆ. ಎಲ್ಲಿಂದ ಬಂದ ಅನೇಕ ಪ್ರಮುಖ ಸಾಧಕರ ಪೈಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು ಪ್ರಮುಖರು. ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 12 ವರ್ಷಗಳ ಕಾಲ ಇಂಗ್ಲೀಷ್ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಮಾಲತಿ ಪಟ್ಟಣಶೆಟ್ಟಿ ಅವರ ಸಾಹಿತ್ಯ ಕೃಷಿಯಲ್ಲಿ ‘ಬಾ ಪರೀಕ್ಷೆಗೆ’, ಗರಿಗೆದರಿ ತಂದೆ ಬದುಕು, ಗುಲಾಬಿ, ದಾಹ ತೀರ, ಮೌನ ಕರಗುವ ಹೊತ್ತು, ಇತ್ತೀಚಿನ ಕವಿತೆಗಳು, ಹೂದಂಡಿ (ಆಯ್ದ ಕವಿತಾ ಸಂಗ್ರಹ) ಮುಂತಾದವು ಕಾವ್ಯ ಸಂಕಲನಗಳು. ಇಂದು ನಿನ್ನಿನ ಕಥೆಗಳು ಮತ್ತು ಸೂರ್ಯ ಮುಳುಗುವುದಿಲ್ಲ ಕಥಾ ಸಂಕಲನಗಳು. ಬಸವರಾಜ ಕಟ್ಟೀಮನಿಯವರ ಬದುಕು ಬರಹ ಕುರಿತಾಗಿ ಮೂಡಿದ್ದು ವಿಮರ್ಶೆ.
ಕಾವ್ಯ 97 (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ), ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ) ಮತ್ತು ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ) ಮುಂತಾದವು ಮಾಲತಿ ಪಟ್ಟಣಶೆಟ್ಟಿ ಅವರ ಸಂಪಾದನೆಗಳು.ಬಸವರಾಜ ಕಟ್ಟೀಮನಿ ಅವರ ‘ಮಾಡಿ ಮಡಿದವರು’ ಕೃತಿಯ ಕುರಿತಾಗಿ ಮಾಲತಿ ಪಟ್ಟಣಶೆಟ್ಟಿ ಅವರ ‘ಸಾರ ಸಂಗ್ರಹ’ವೂ ಪ್ರಕಟಗೊಂಡಿದೆ. ಹೀಗೆ ಒಟ್ಟು 30 ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಾಲತಿಯವರಿಗೆ ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಗೊಯಂಕಾ ಪುರಸ್ಕಾರ, ಅನುಪಮಾ ಪ್ರಶಸ್ತಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪುರಸ್ಕಾರಗಳು ದೊರಕಿವೆ.
ಬಹುಮುಖಿ ವ್ಯಕ್ತಿತ್ವದವರಾದ ಮಾಲತಿ ಪಟ್ಟಣಶೆಟ್ಟಿ ಅವರು ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಸಲಹಾ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಾಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಮಂಗಳಾಮಂಟಪದ ಕಾರ್ಯಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಸದಸ್ಯರಾಗಿ, ಎಲ್.ಐ.ಸಿ.ಯ ಧಾರವಾಡ ಮಹಿಳಾ ಉದ್ಯೋಗಿಗಳ ದೌರ್ಜನ್ಯ ನಿಯಂತ್ರಕ ಸಮಿತಿಯ ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಹೀಗೆ ವಿವಿಧ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಸಾಂಸ್ಕೃತಿಕ ಚಳುವಳಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡವರು. ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರು ಇಂದಿಗೂ ಅದೇ ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ಇಟ್ಟು ಕೊಂಡಿದ್ದಾರೆ.
ಬಹುಮುಖಿ ಪ್ರತಿಭಾವಂತರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ ‘ಕನ್ನಡದ ಧ್ರುವತಾರೆ ‘ ಕಾರ್ಯಕ್ರಮದಲ್ಲಿ ಸಂವಾದದ ಮೂಲಕ ತಮ್ಮ ಮನದಾಳದ ಮಾತುಗಳಿಂದ ಏನನ್ನು ಹೇಳುತ್ತಾರೆ ಎನ್ನುವ ಕುತೂಹಲ ನಿಮ್ಮಷ್ಟೇ ನಮಗೂ ಇದೆ.
ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ಮನವಿ ಮಾಡಿದ್ದಾರೆ.




