ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ ಪೋಷಕರ ಒತ್ತಾಯ

3 years ago

#SantoshPatil #suicide #case #parents #demands #CID #investigation

ಬೆಳಗಾವಿ: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ರಾಜಕೀಯ ಬದುಕಿಗೆ ಮುಳುವಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿದ ಮೃತ ಸಂತೋಷ್ ಪಾಟೀಲ್ ಅವರ ತಾಯಿ ಮತ್ತು ಪತ್ನಿ ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ‌ಇದನ್ನು ಸಿ‌ಐಡಿ ಅಥವಾ ಸಿಬಿಐ ತನಿಖೆಗೆ ವಹಿಸಿ ಎಂದು ಮನವಿ ಸಲ್ಲಿಸಿದರು.

ತನಿಖೆ ನಡೆಸಿದ ಪೊಲೀಸರು ಸತ್ಯವನ್ನು ಮುಚ್ಚಿಟ್ಟು ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿದ್ದಾರೆ. ಅದು ಬಂದ ತಕ್ಷಣ ಈಶ್ವರಪ್ಪ ಸಿಹಿ ತಿಂದರು. ಅವರ ಮನೆಯಲ್ಲಿ ಈ ರೀತಿಯಾಗಿದ್ದರೆ ಸಿಹಿ ತಿನ್ನುತ್ತಿದ್ದರೆ? ನಾನು ಹುಲಿಯಂತಹ ಮಗನನ್ನು ಕಳೆದುಕೊಂಡಿದ್ದೇನೆ. ಜೀವನ ಪರ್ಯಂತ ಪುತ್ರ ಶೋಕದಲ್ಲಿ ಕೊರಗಬೇಕಿದೆ ಎಂದು ಶೋಕಿಸಿದರು.

ಯಡಿಯೂರಪ್ಪ ಅವರನ್ನು ನನ್ನ ಮಗ ಅಪ್ಪಾಜಿ ಎನ್ನುತ್ತಿದ್ದ. ಅವರು ಆತ ಮಾಡಿದ್ದ ಕಾಮಗಾರಿಗಳಿಗೆ ಸಹಿ ಹಾಕಿದ್ದರೆ ಆತ ಜೀವ ಕಳೆದುಕೊಳ್ಳುತ್ತಿರಲಿಲ್ಲ ಎಂದ ಅವರು, ಸರ್ಕಾರ ತಮಗೆ ಈವರೆಗೂ ಬಾಕಿ ನೀಡಿಲ್ಲ. ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದು ಕೂಡ ಈಡೇರಲಿಲ್ಲ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಈ ಬಗ್ಗೆ ಕಾನೂನು ತಜ್ಞರು ಹಾಗೂ ಪೊಲೀಸರ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಪಾಟೀಲ್ ಅವರ ತಾಯಿ, ನನ್ನ ಮಗ ಸಚಿವ ಈಶ್ವರಪ್ಪ ಅವರ ವಿಶ್ವಾಸದ ಮೇಲೆ ಕೆಲಸ ಮಾಡಿದ್ದ. ಆತ ಮಾಡಿದ ಕೆಲಸಕ್ಕೆ ಬಿಲ್ ಪಾವತಿ ಮಾಡಲಿಲ್ಲ. ಒಂದು ವೇಳೆ ಹಣ ಕೊಟ್ಟಿದ್ದರೆ ನನ್ನ ಮಗ ಉಳಿಯುತ್ತಿದ್ದ. ಇವರು ನನ್ನ ಮಗನನ್ನು ಉಳಿಸಬೇಕಿತ್ತು ಎಂದು ಅಳಲು ತೋಡಿಕೊಂಡರು.

Leave a Reply