ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ನ ಎಟಿಎಂ: ಬಿಜೆಪಿ

3 years ago

#state #govt #Congress #highcommand #atm #bjp

ಬೆಂಗಳೂರು: ಗುತ್ತಿಗೆದಾರರ ಬಿಲ್ ಪಾವತಿಗೆ ಕಮೀಷನ್ ಮತ್ತು ಸರ್ಕಾರಿ ನೌಕರರ ವರ್ಗಾವಣೆಗೆ ಲಂಚ ಆರೋಪ ಬಳಸಿಕೊಂಡ‌ ಬಿಜೆಪಿ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ನ ಎಟಿಎಂ ಎಂದು ಆಪಾದಿಸಿ, ಈ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಟಿಎಂ ಬಳಿ ಹಣ ಡ್ರಾ ಮಾಡಿಕೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರಿಗೆ ನೀಡುತ್ತಿರುವ ಪೋಸ್ಟರ್  ಇದೇ ರೀತಿ ಸಿಎಂ ಮತ್ತು ಡಿಸಿಎಂ ಇರುವ ಎಟಿಎಂ ಪೋಸ್ಟರ್ ಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಮತ್ತೊಂದು ಪೋಸ್ಟರ್ ನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೂಟ್ ಕೇಸ್ ಹಿಡಿದುಕೊಂಡು, ಕರ್ನಾಟಕ ಟು ಗಾಂಧಿ ಫ್ಯಾಮಿಲಿ ಎಂದು ಚಿತ್ರಿಸಲಾಗಿದೆ.

ಲೋಕಾಯುಕ್ತ‌ ತನಿಖೆ: ಈ ಕುರಿತು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಗುತ್ತಿಗೆದಾರರ ಬಿಲ್ ಪಾವತಿ ಹಾಗೂ ಕೃಷಿ ಸಚಿವರ ವಿರುದ್ಧದ ಲಂಚ ಆರೋಪ ಪ್ರಕರಣಗಳನ್ನು ಲೋಕಾಯುಕ್ತರ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಜಲ ಸಂಪನ್ಮೂಲ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಬಿಲ್ ನ್ನು ತಡೆಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಮಿಷನ್ ಕೊಡಲು ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೇ ಹೇಳಿದ್ದಾರೆ. ಹಾಗೆಯೇ ಕೆಲಸ ಆರಂಭವಾಗದಿದ್ದರೆ ಶೇ.10 ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪವೂ ಇದೆ ಎಂದು ಟೀಕಿಸಿದರು.

ಸುಮಾರು ಆರು ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ತಡೆಯುವ ಮೂಲಕ ಗುತ್ತಿಗೆದಾರರಿಗೆ ಹಿಂಸೆ ನೀಡುವ ಉದ್ದೇಶ ಇವರದ್ದಾಗಿದೆ. ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ವ್ಯಾಕ್ಯೂಮ್ ಮಿಷನ್ ಹಾಕಿ ಹಣ ಹೀರುವ ಪ್ರವೃತ್ತಿ ‌ತಲೆದೋರಿದೆ ಎಂದು ಆಪಾದಿಸಿದರು.

ಕೃಷಿ ಸಚಿವರು ಅಧಿಕಾರಿಗಳಿಂದ ಲಂಚ ಕೇಳಿರುವ ಬಗ್ಗೆ ರಾಜ್ಯಪಾಲರಿಗೆ ದೂರಿನ ಪತ್ರ ರವಾನೆಯಾಗಿದೆ. ಈ ಪತ್ರ ನಕಲಿ ಎಂದು ಮುಖ್ಯಮಂತ್ರಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೊಲೆ ಸುಲಿಗೆಯೂ ಹೆಚ್ಚಾಗಿದೆ. ಈ ಸರ್ಕಾರದಲ್ಲಿ ಹಲವು ಶ್ಯಾಡೋ ಸಿಎಂಗಳಿದ್ದಾರೆ. ಎರಡು ತಿಂಗಳಲ್ಲೇ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ದೂರಿದರು.

ಉಪ‌ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ವಿರುದ್ಧದ ಆರೋಪ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ತಕ್ಷಣವೇಇವರಿಬ್ಬರ ರಾಜೀನಾಮೆ ಪಡೆದು ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಬಿಜೆಪಿ ನಾಯಕರ ನಿಯೋಗ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಲಿದೆ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಮಂತ್ರಿ ಗೋಪಾಲಯ್ಯ, ಗುತ್ತಿಗೆದಾರರಿಗೆ ಬಿಲ್ ತಡೆಹಿಡಿದಿರುವ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಗುತ್ತಿಗೆದಾರರಿಗೆ ನ್ಯಾಯ ಕೊಡಿಸಬೇಕುಎಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿಯ ಹಲವು ನಾಯಕರು ಹಾಜರಿದ್ದರು.

ಬಿಕ್ಕಟ್ಟು ಸೃಷ್ಟಿ ಯತ್ನ: ಈ ಆರೋಪಗಳಿಗೆ ಉತ್ತರ ನೀಡಿರುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಅಶೋಕ್ ಹಾಗೂ ಅಶ್ವಥ್ ನಾರಾಯಣ ಅವರು ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾ ಶೇ.10ರಿಂದ 15% ಕಮಿಷನ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದರು.

ಮಾಜಿ‌ ಸಚಿವ ಅಶ್ವತ್ ನಾರಾಯಣ ಅವರೇ ನಿಮ್ಮ ತಮ್ಮ ಸೇರಿದಂತೆ ನಿಮ್ಮ ನೆಂಟರು ಬಿಬಿಎಂಪಿ ಹಾಗೂ ಬಿಡಿಎ ನಲ್ಲಿ ಎಷ್ಟು ಕೋಟಿ ಮೊತ್ತದ ಗುತ್ತಿಗೆ ತೆಗೆದುಕೊಂಡಿದ್ದಾರೆ. ಅಶೋಕ್ ಅವರೇ ನಿಮ್ಮ ಬೇನಾಮಿ ಹೆಸರಿನಲ್ಲಿ ನಾಲ್ಕೈದು ಜನ ಎಷ್ಟು ಮೊತ್ತದ ಗುತ್ತಿಗೆ ಪಡೆದಿದ್ದೀರಿ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ನಾಲ್ಕು ತಂಡ ರಚನೆ ಮಾಡಿದ್ದು ಒಂದೊಂದೇ ಪ್ರಕರಣ ಬಯಲಿಗೆ ಬರಲಿದೆ. ಕಳೆದ 10 ತಿಂಗಳಲ್ಲಿ, ಸುಮಾರು 118 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಈ ಪೈಕಿ 64 ಕಾಮಗಾರಿಗಳಿಗೆ ಹಣವೇ ಇಲ್ಲ. ಆದರೂ ಬಿಲ್ ಆಗಿವೆ. ದೊಮ್ಮಲೂರು 3ನೇ ಮುಖ್ಯರಸ್ತೆ ಇರುವುದೇ 1.3 ಕಿಮೀ. ಆದರೆ 3.9 ಕಿ. ಮೀ ಗೆ ಬಿಲ್ ಮಾಡಿದ್ದಾರೆ. 15 ಅಂಡರ್ ಪಾಸ್ ಇಲ್ಲ. ಆದರೂ ಬಿಲ್ ಮಾಡಲಾಗಿದೆ. 2 ಫ್ಲೈ ಓವರ್ ನಿರ್ಮಾಣ ಮಾಡಿದ್ದೇವೆ ಎಂದು ಬಿಲ್ ಮಾಡಿದ್ದಾರೆ. ಫ್ಲೈ ಓವರ್ ಗಳೇ ಇಲ್ಲ. ಎಲ್ಲಿ ನಿರ್ಮಾಣ ಆಗಿದೆ ಅಂತಾ ಹೇಳಿಲ್ಲ. ಇವುಗಳನ್ನು ಪರಿಶೀಲನೆ ಮಾಡುವುದು ಬೇಡವೇ? ಹಾಗೆ ಸುಮ್ಮನೆ ಬಿಲ್ ಪಾವತಿ ಮಾಡಬೇಕೆ ಎಂದರು.

ಇಂತಹ ಅಕ್ರಮಗಳ ಬಗ್ಗೆ ನಾವು ಆರಂಭಿಸಿರುವ ತನಿಖೆ ಮುಗಿದರೆ ಸುಮಾರು ಎಂಟು ಮಾಜಿ ಸಚಿವರು ಜೈಲು ಸೇರಲಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಬೊಮ್ಮಾಯಿ ಕೂಡ ಸಿಲುಕುತ್ತಾರೆ ಎಂದು ಭವಿಷ್ಯ ನುಡಿದರು.

Leave a Reply