ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ, ಅಧಿಕಾರ ಇರಲಿ ಬಿಡಲಿ, ಸೋಲು ಗೆಲುವು ಯಾವುದನ್ನು ಪರಿಗಣಿಸದೆ, ಪಕ್ಷದ ಸಂಘಟನೆ ಮತ್ತು ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುತ್ತಿದ್ದ ಕೆಲವೇ ಕೆಲವು ನಾಯಕರಲ್ಲಿ ದೇವರಾಜ್ ರವರು ಪ್ರಮುಖರಾಗಿದ್ದರು.
1989ರಲ್ಲಿ ಪ್ರಥಮ ಬಾರಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 1999 ರಲ್ಲಿ ಮತ್ತೆ ಚಾಮರಾಜಪೇಟೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
2004ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್ಎಂ ಕೃಷ್ಣರವರಿಗೆ ತಮ್ಮ ಕ್ಷೇತ್ರವನ್ನು ತೆರವು ಮಾಡಿಕೊಟ್ಟು ಉದಾರತೆಯನ್ನು ಮೆರೆದರು. ಅಲ್ಪಾವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕವಾಗಿದ್ದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾವಭವ ಹೊಂದಿದ್ದರು. 2013ರಲ್ಲಿ ಚಿಕ್ಕಪೇಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.
ಎರಡು ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ಒಂದು ಬಾರಿ ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಆರ್ ವಿ ದೇವರಾಜ್ ಎಂದರೆ ಜನಾನುರಾಗಿ ಮತ್ತು ಬಡಜನರ ಅತ್ಯಂತ ಪ್ರೀತಿಯ ನಾಯಕ. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರು ಮತ್ತು ವಿಶೇಷವಾಗಿ ಶೋಷಿತ ಜನಾಂಗದ ಜನರ ಧ್ವನಿಯಾಗಿ, ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವು ನೀಡುತ್ತಿದ್ದ ಕಾರಣದಿಂದ ಇವರು ಇರುವ ಕಡೆ ಸದಾ ಕಾರ್ಯಕರ್ತರು ಮತ್ತು ಅಭಿಮಾನಿಗಳ ಪಡೆ ಇರುತ್ತಿತ್ತು.
ರಾಜ್ಯದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣವುಳ್ಳ ಬೃಹತ್ ಗಾತ್ರದ ಹಾರಗಳನ್ನು ಹಾಕುವಂತಹ ಸಂಸ್ಕೃತಿಯನ್ನು ತೋರಿಸಿಕೊಟ್ಟವರು ಇವರು. ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಅಳವಡಿಸುವಂತಹ ವಿಚಾರದಲ್ಲಿ ಇವರು ಎಲ್ಲರಿಗಿಂತ ಮೊದಲಿಗರಾಗಿದ್ದಾರೆ.
ದೇವರಾಜ್ ಇರುವ ಕಡೆ ಹಾರಗಳು ಇರಬೇಕು, ಪಟಾಕಿಗಳ ಸದ್ದು ಇರಲೇಬೇಕು. ದೇವರಾಜ್ ಕಾರ್ಯಕ್ರಮಗಳಿಗೆ ಬಂದರು ಎಂದರೆ ಅಲ್ಲಿ ಸದ್ದು ಇದ್ದೇ ಇರುತ್ತಿತ್ತು.
ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಇವರು ತಮ್ಮ ಕಾರಿನಲ್ಲಿ ಸದಾ ಕಾಲ ರಾಜಕುಮಾರ್ ಅವರ ಹಳೆಯ ಹಾಡುಗಳನ್ನು ಕೇಳುತ್ತಲೇ ಪ್ರಯಾಣವನ್ನು ಮಾಡುತ್ತಿದ್ದರು ಮತ್ತು ಇವರಿಗೆ ಚಲನಚಿತ್ರದ ನಂಟು ಇತ್ತು.
ಚಲನಚಿತ್ರರಂಗದ ಬೆಳವಣಿಗೆ, ಅಲ್ಲಿನ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದ ಇವರು ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಚಾರಗಳಲ್ಲೂ ಸಾಕಷ್ಟು ತಿಳಿದುಕೊಂಡಿದ್ದರು. ಇಂತಹ ವಿಚಾರದಲ್ಲಿ ಇವರ ಮುಂದೆ ಯಾರಾದರೂ ಸುಳ್ಳು ಹೇಳಿದರೆ ಕೂಡಲೇ ಇವರು ಅವರ ಸುಳ್ಳನ್ನು ಎತ್ತಿ ತೋರಿಸುತ್ತಿದ್ದರು.
ದೇವರಾಜ್ ಹಲವಾರು ಯುವಕರಿಗೆ ಸ್ಪೂರ್ತಿಯಾಗಿದ್ದರು. ಅವರ ಸಂಕಷ್ಟದ ಸಮಯದಲ್ಲಿ ನೆರವಿಗೆ ನಿಲ್ಲುತ್ತಿದ್ದರು. ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ ಚಾಲಕರು ಮತ್ತು ನಿರ್ವಾಹಕರ ನೇಮಕಾತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಾಕಷ್ಟು ಆದ್ಯತೆಯನ್ನು ನೀಡಿದ್ದರು. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಸ್ ನಿಲ್ದಾಣಗಳ ಅಭಿವೃದ್ಧಿ ಮತ್ತು ಹಳ್ಳಿಗಳಿಗೆ ಬಸ್ಗಳ ಸಂಪರ್ಕದ ವಿಚಾರದಲ್ಲಿ ಆಸಕ್ತಿಯಿಂದ ದುಡಿದಿದ್ದರು.
ದೇವಾಲಯಗಳ ನಿರ್ಮಾಣದಲ್ಲಿ ಇವರು ಬಹಳ ಶ್ರದ್ಧೆಯನ್ನು ಹೊಂದಿದ್ದರು. ತಮ್ಮ ಕ್ಷೇತ್ರದಲ್ಲಿ ಮತ್ತು ಬೇರೆ ಬೇರೆ ಭಾಗದಲ್ಲೂ ಸಹ ದೇವಾಲಯಗಳ ನಿರ್ಮಾಣಕ್ಕೆ ಸಾಕಷ್ಟು ನೆರವನ್ನ ನೀಡಿದ್ದರು. ಜೊತೆಗೆ ಅಲ್ಪಸಂಖ್ಯಾತರ ಮಸೀದಿಗಳು ಮತ್ತು ಚರ್ಚ್ ಗಳಿಗೂ ಸಹ ನೆರವನ್ನ ಉದಾರವಾಗಿ ನೀಡಿದವರು.
ಕೆಂಪೇಗೌಡ ನಗರದ ಕೆಂಪಾಂಬುದಿ ಕೆರೆಯ ಸ್ವರೂಪ ಇಂದು ಆಕರ್ಷಣೆಯಿಂದ ತುಂಬಿದ್ದರೆ ಅದಕ್ಕೆ ದೇವರಾಜ್ ಅವರು ಪ್ರಮುಖ ಕಾರಣ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಪ್ರಥಮ ಬಾರಿಗೆ ಕೆರೆಗೆ ಕೊಳಚೆ ನೀರು ಬಾರದಂತೆ ದೊಡ್ಡ ದೊಡ್ಡ ಪೈಪ್ ಗಳನ್ನು ಅಳವಡಿಸಿ ಕೆರೆಯ ನೀರು ಶುದ್ಧವಾಗಿರುವಂತೆ ವ್ಯವಸ್ಥೆಯನ್ನು ಮಾಡಿದರು. ಅಭಿವೃದ್ಧಿಗೆ ಸಾಕಷ್ಟು ಶ್ರಮವನ್ನ ಪಟ್ಟಿರುತ್ತಾರೆ.
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಕಿದ್ವಾಯ್ ಆಸ್ಪತ್ರೆ ಇಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆಸಕ್ತಿವಹಿಸಿದ್ದರು. ಕಲಾಸಿಪಾಳ್ಯ ಬಸ್ ನಿಲ್ದಾಣದ ಬೃಹತ್ ಯೋಜನೆಗೆ ಸದನದಲ್ಲಿ ಇವರು ಮಾತನಾಡಿ ಇದರ ಅನುದಾನವನ್ನ ಹೆಚ್ಚಿಸಿದ್ದರು. ಬೆಂಗಳೂರು ಮೆಡಿಕಲ್ ಕಾಲೇಜಿನ ನೂತನ ಕಟ್ಟಡದ ನಿರ್ಮಾಣಕ್ಕೆ ಇವರು ಶಾಸಕರಾಗಿದ್ದ ಅವಧಿಯಲ್ಲಿ ಅನುಮೋದನೆಯನ್ನು ತಂದಿದ್ದರು.
ಚಿಕ್ಕಪೇಟೆ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ಸೌಲಭ್ಯಗಳ ಕಡೆ ಗಮನವನ್ನು ನೀಡಿ ಅಲ್ಲಿಯೂ ಸಹ ತಮ್ಮ ಶಾಸಕರ ಕರ್ತವ್ಯವನ್ನು ನಿರ್ವಹಿಸಿದ್ದರು. ದೇವರಾಜ್ ರವರು ನೇರವಾದ ಮಾತುಗಾರಿಕೆ ಮತ್ತೊಂದು ವಿಶೇಷ ಗುಣವಾಗಿತ್ತು.
ಕಳೆದ ಕೆಲವು ದಿನಗಳಿಂದ ಆರೋಗ್ಯ ಸರಿ ಇಲ್ಲದಿದ್ದರೂ ವಿಶ್ರಾಂತಿಯನ್ನ ಪಡೆಯದೆ ಸದಾ ಕಾರ್ಯಕರ್ತರ ಜೊತೆಯಲ್ಲಿ ಇರಬೇಕೆನ್ನುವ ಕಾರಣಕ್ಕೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಲಿಲ್ಲ. ಜನರ ನಡುವೆ ಇರುವುದನ್ನು ಇವರು ಸದಾ ಇಷ್ಟಪಡುತ್ತಿದ್ದ ಇವರು ಪ್ರಯಾಣ ಮಾಡಬೇಕಾದರೂ ಕಾರ್ಯಕರ್ತರ ಜೊತೆಯಲ್ಲಿಯೇ ಪ್ರಯಾಣವನ್ನು ಮಾಡುತ್ತಿದ್ದರು.
ಸದಾ ಕಾಲ ಲವಲವಿಕೆಯಿಂದ ಮತ್ತು ಕ್ರಿಯಾಶೀಲವಾಗಿ ಇರುತ್ತಿದ್ದ ದೇವರಾಜ್ ರವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವೇ ಸರಿ. ಏಕೆಂದರೆ ಇವರಷ್ಟು ಪಕ್ಷ ನಿಷ್ಠೆ ಮತ್ತು ಸಂಘಟನೆಗೆ ಒತ್ತುಕೊಟ್ಟವರು ವಿರಳ.
ಸಮಾಜದ ಎಲ್ಲ ವರ್ಗದ ಜನರನ್ನು ಪ್ರೀತಿಸುತ್ತಿದ್ದ ಇವರು ವಿಶೇಷವಾಗಿ ದಲಿತರು ಮತ್ತು ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಇವರ ಪಾಲಿಗೆ ಬಂಧುವಾಗಿದ್ದರು.
– ಕೆ ಎಸ್ ನಾಗರಾಜ್, ಬೆಂಗಳೂರು




