ತಮ್ಮ ಮಕ್ಕಳ ಭವಿಷ್ಯದ ಮೇಲೆ ಇರುವ ಬಿಜೆಪಿಯವರ ಕಾಳಜಿ ಬಡವರ ಮಕ್ಕಳ ಮೇಲೇಕಿಲ್ಲ?: ಪ್ರಿಯಾಂಕ್ ಖರ್ಗೆ

2 months ago

ಬೆಂಗಳೂರು: ಬಿಜೆಪಿ ನಾಯಕರಿಗೆ ತಮ್ಮ ಮಕ್ಕಳ ಭವಿಷ್ಯದ ಮೇಲೆ ಇರುವ ಕಾಳಜಿ ಬಡವರ ಮಕ್ಕಳ ಮೇಲೇಕಿಲ್ಲ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

​ಇತ್ತೀಚೆಗೆ ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್‌ಪೋರ್ಟ್ ಪಡೆಯಲು ಹಳೆ ಗಲಾಟೆ ಕೇಸ್‌ಗಳು ಅಡ್ಡಿಯಾಗುತ್ತಿವೆ ಎಂದು ಅನಂತಕುಮಾರ್ ಹೆಗಡೆ ಕೋರ್ಟ್ ನಲ್ಲಿ ಮುಕ್ತಿ ನೀಡುವಂತೆ ಮನವಿ ಮಾಡಿದ್ದರು. ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಖರ್ಗೆ, ಬಿಜೆಪಿಯ ‘ದ್ವಿಮುಖ ನೀತಿ’ಯನ್ನು ಕಟುವಾಗಿ ಟೀಕಿಸಿದ್ದಾರೆ.

​​ಪ್ರಚೋದನೆ ಯಾರಿಗೆ?: ಹಿಂದುತ್ವದ ಹೆಸರಲ್ಲಿ ಬಡವರ ಮನೆಯ ಮಕ್ಕಳನ್ನು ಗಲಾಟೆ, ದೊಂಬಿಗೆ ಪ್ರಚೋದಿಸುವ ಬಿಜೆಪಿ ನಾಯಕರು, ಎಂದಾದರೂ ಆ ಯುವಕರ ಭವಿಷ್ಯದ ಬಗ್ಗೆ ಯೋಚಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

​ಕೋರ್ಟ್ ಕಚೇರಿ ಅಲೆದಾಟ: ಗಲಾಟೆಯಲ್ಲಿ ಸಿಲುಕಿ ಮೈತುಂಬಾ ಕೇಸ್ ಹಾಕಿಕೊಂಡಿರುವ ಬಡ ಯುವಕರು ಉದ್ಯೋಗ ಸಿಗದೆ, ಪಾಸ್‌ಪೋರ್ಟ್ ಸಿಗದೆ ಕೋರ್ಟ್ ಅಲೆಯುತ್ತಿದ್ದಾರೆ. ಇವರ ಬಗ್ಗೆ ಬಿಜೆಪಿಗರಿಗೆ ಕನಿಕರವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

​ಅಡ್ಡಿಯಾಗುವ ಭವಿಷ್ಯ: ಬಡವರ ಮನೆಯ ಮಕ್ಕಳು ಉನ್ನತ ವ್ಯಾಸಂಗ ಮಾಡಬಾರದೇ? ಅವರು ಪಾಸ್‌ಪೋರ್ಟ್ ಪಡೆದು ವಿದೇಶಿ ಉದ್ಯೋಗ ಅಥವಾ ವ್ಯವಹಾರ ನಡೆಸಬಾರದೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಮಕ್ಕಳಿಗೆ ವಿದೇಶ ವ್ಯಾಸಂಗವೇಕೆ? ಇಲ್ಲೇ ಧರ್ಮ ರಕ್ಷಿಸುವ, ಗೋವು ರಕ್ಷಿಸುವ ಕೆಲಸಗಳು ಸಾಕಷ್ಟಿವೆಯಲ್ಲ? ತಮ್ಮ ಮಕ್ಕಳನ್ನು ಯಾಕೆ ಆ ಕೆಲಸಕ್ಕೆ ಇಳಿಸುತ್ತಿಲ್ಲ? ಎಂದು ಕೇಳಿದ್ದಾರೆ.

​ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಬಡವರ ಮಕ್ಕಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಸ್ವಂತ ಮಕ್ಕಳಿಗೆ ಸಿಗುವ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯ, ಹೋರಾಟದ ಹೆಸರಲ್ಲಿ ಬೀದಿಗೆ ಬೀಳುವ ಬಡ ಯುವಕರಿಗೆ ಸಿಗದಂತೆ ಮಾಡುವುದು ಬಿಜೆಪಿಯ ಅಸಲಿ ವರಸೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Leave a Reply