ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಬಾಗಿಲುಗಳಿವೆ: ಎಂ ಬಿ ಪಾಟೀಲ್

10 months ago

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಂದು ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರು ತಮ್ಮ ಅಧಿಕಾರವಧಿ ಪೂರ್ಣಗೊಳಿಸಲಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿಗಳು ಕುರ್ಚಿ ಬಿಡುತ್ತಾರೆ ಎಂದು ಸತೀಶ್‌ ಜಾರಕಿಹೊಳಿ ಹೇಳಿರಬಹುದು. ಆದರೆ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಎರಡು ಬಾರಿ ಉಪಾಹಾರಕೂಟ ನಡೆಸಿದ್ದಾರೆ. ಅಲ್ಲಿಗೆ ಎಲ್ಲವೂ ಬಗೆಹರಿದಿದೆ. ಕಾಂಗ್ರೆಸ್‌‍ ಶಾಸಕರು ದೆಹಲಿಗೆ ಭೇಟಿ ನೀಡಿದ್ದು ಸಚಿವ ಸ್ಥಾನ ಕೇಳಲಿಕ್ಕಾಗಿ. ಅದನ್ನು ನಾಯಕತ್ವ ಬದಲಾವಣೆಗಾಗಿ ನಡೆದ ಯಾತ್ರೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಎಲ್ಲಾ ರಾಜಕೀಯ ಗೊಂದಲಗಳು ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು.

ಗೃಹಸಚಿವ ಡಾ.ಜಿ.ಪರಮೇಶ್ವರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಭೆ ನಡೆಸಿರುವುದರಲ್ಲಿ ತಪ್ಪೇನೂ ಇಲ್ಲ. ನಾನು ಮತ್ತು ಸತೀಶ್‌ ಜಾರಕಿಹೊಳಿ ಹಾಗೂ ಪರಮೇಶ್ವರ್‌ ಹಲವಾರು ಬಾರಿ ಸಭೆ ನಡೆಸಿದ್ದೇವೆ ಎಂದರು.

ಮುಖ್ಯಮಂತ್ರಿ ಅವರನ್ನು ನಾನು ಭೇಟಿ ಮಾಡಿದ್ದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ಕೆಲಸ ಇದೆ. ಅವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಅಧಿಕಾರ ಬಿಟ್ಟು ಕೊಡುವ ಬಗ್ಗೆ ಸಿದ್ದರಾಮಯ್ಯ ಮಾತು ಕೊಟ್ಟಿರುವ ಕುರಿತು ತಮಗೆ ಮಾಹಿತಿ ಇಲ್ಲ. ಹೈಕಮಾಂಡ್‌ ನಾಯಕರೇ ಈ ಬಗ್ಗೆ ಹೇಳಿಕೆ ನೀಡಬೇಕು ಎಂದರು.

ಮುಖ್ಯಮಂತ್ರಿ ಹುದ್ದೆಯಂತೂ ಸದ್ಯಕ್ಕೆ ಖಾಲಿ ಇಲ್ಲ. ಜನವರಿ ವೇಳೆಗೆ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಮಾಧ್ಯಮಗಳ ಊಹೆ. ನಮಲ್ಲಿ ಅಂತಹ ಚರ್ಚೆಗಳು ನಡೆದಿಲ್ಲ. ನಮಲ್ಲಿ ಶಾಸಕರು, ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಒಟ್ಟಾಗಿದ್ದೇವೆ. ಮುಖ್ಯಮಂತ್ರಿ ಹುದ್ದೆಗೆ ತಾವು ಆಕಾಂಕ್ಷಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದರು.

ಉಪಾಹಾರ ಕೂಟದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನಮ್ಮ ಮನೆಗೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಊಟಕ್ಕೆ ಕರೆಯುತ್ತೇನೆ. ಅದರಲ್ಲಿ ತಪ್ಪೇನಿದೆ ಎಂದರು.

ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಕಾಂಗ್ರೆಸ್‌‍ ಪಕ್ಷಕ್ಕೆ ಹಾನಿಯಾಗಲಿದೆ ಎಂಬುದು ಊಹಾತ್ಮಕವಾದ ಚರ್ಚೆ. ಎಲ್ಲದಕ್ಕೂ ರಾಜಕೀಯ ತಳುಕು ಹಾಕಲಾಗುತ್ತಿದೆ. ದೆಹಲಿಯಲ್ಲಿ ಚಳಿಗಾಲದ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸಭೆ ನಡೆಸಿದ್ದಾರೆ. ಅದಕ್ಕೂ ಕರ್ನಾಟಕ ರಾಜಕಾರಣವನ್ನು ಜೋಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಮನೆ ಎಂದ ಮೇಲೆ ಸಣ್ಣ ಗೊಂದಲಗಳು ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಬಿಜೆಪಿಯಲ್ಲಿ ವಿಜಯೇಂದ್ರ, ಆರ್‌.ಅಶೋಕ್‌, ವಿ.ಸೋಮಣ್ಣ, ರಮೇಶ್‌ ಜಾರಕಿಹೊಳಿ, ಡಾ.ಸಿ.ಎನ್‌ ಅಶ್ವಥ್ ನಾರಾಯಣ, ಪ್ರಹ್ಲಾದ್‌ ಜೋಷಿ ಸೇರಿದಂತೆ 20ಕ್ಕೂ ಹೆಚ್ಚು ಬಾಗಿಲುಗಳಿವೆ. ಒಮೆ ಅದನ್ನು ನೋಡಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Leave a Reply