ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಮನೋಹರ್ ರಾಜೀನಾಮೆ

3 years ago

ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಮನೋಹರ್ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಅವರು, ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಟಿಕೇಟು ನೀಡಲು ಪಕ್ಷ ಹಿಂದುಮುಂದು ನೋಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಪಕ್ಷ ವಿರೋಧಿ ಹೇಳಿಕೆ ನೀಡಿರುವ ವ್ಯಕ್ತಿಗಳನ್ನು ಮತ್ತೇ ಪಕ್ಷಕ್ಕೆ ಸೇರಿಸಿಕೊಳ್ಳುವುದು ಎಷ್ಟು ಸರಿ? ಬಿಜೆಪಿ ಪಕ್ಷದಿಂದ ಬಂದ ವ್ಯಕ್ತಿಗೆ ಅವಕಾಶ ನೀಡುತ್ತಿರುವುದು ಏಕೆ? ಬಿಜೆಪಿ ಪಕ್ಷ ಮತ್ತು ಆರ್.ಎಸ್.ಎಸ್.ವಿರುದ್ದ ನಿರಂತರ ಹೋರಾಟ ಮತ್ತು ಸಾವಿರಾರು ಪ್ರತಿಭಟನೆಗಳು ಮತ್ತು 35ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ ನಮಗೆ ಗೌರವವಿಲ್ಲ ಎಂದಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಸ್. ಮನೋಹರ್ ಆದ ನಾನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ಸಾಮಾನ್ಯ ಕಾರ್ಯಕರ್ತರನ್ನ ಗೌರವಿಸುವ ಕಾರ್ಯವನ್ನು ದಯಮಾಡಿ ಪ್ರಾರಂಭಿಸಬೇಕು ಹಾಗೂ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹಾಗೂ ಪಕ್ಷದ ಪರ ಅತಿ ಹೆಚ್ಚು ಹೋರಾಟ, ಸಂಘಟನೆ ಮಾಡಿದವರನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ಈ ರಾಜೀನಾಮೆಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದ ನಾನು ಸುಮಾರು 35 ವರ್ಷಗಳಿಂದ ಬ್ಲಾಕ್‌ ಕಾಂಗ್ರೆಸ್ ಸಮಿತಿ ಮಟ್ಟದಿಂದ ಪ್ರದೇಶ ಕಾಂಗ್ರೆಸ್ ಸಮಿತಿವರೆಗೂ ಪದಾಧಿಕಾರಿಯಾಗಿ ಹಾಗೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ನನ್ನನ್ನು ಹಾಗೂ ನನ್ನ ಜೊತೆಯಲ್ಲಿರುವ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರು ಹಾಗೂ ಹೋರಾಟಗಾರರನ್ನು ಜೊತೆಗೂಡಿಸಿಕೊಂಡು ಹೋರಾಟ ಮಾಡಿರೋ ವಿಷಯ ತಮಗೂ ತಿಳಿದಿದೆ ಎಂದು ನಾನು ನಂಬಿರುತ್ತೇನೆ ಎಂದಿದ್ದಾರೆ.

ಪಕ್ಷದ ಪ್ರಾಮಾಣಿಕ ಕಾರ್ಯಕರ್ತರ ಪರ ಚುನಾವಣೆ ಸಂದರ್ಭದಲ್ಲಿ ಅವರಿಗೆ ಅವಕಾಶ ಕೊಡಲು ಪಕ್ಷದ ನಾಯಕರಲ್ಲಿ ಒಲವು ಇಲ್ಲದೆ ಇರುವುದು ಅಂಥವರನ್ನ ಗುರುತಿಸುವ ಸಾಧ್ಯತೆಯೂ ಸಹ ಕಡಿಮೆಯಾಗುತ್ತಿರುವುದು ತೀವ್ರ ನೋವಿನ ಸಂಗತಿ ಹಾಗೂ ಅಂತಹ ಬೆಳವಣಿಗೆ ಇತ್ತೀಚೆಗೆ ಪಕ್ಷದ ನಾಯಕರಲ್ಲಿ ಎತ್ತಿ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಪಕ್ಷ ಚುನಾವಣೆ ಸಂದರ್ಭದಲ್ಲಿ 25/30 ವರ್ಷಗಳಿಂದ ಪಕ್ಷದಲ್ಲಿ ದುಡಿದವರಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಅನೇಕ ಬಾರಿ ಪಕ್ಷದ ನಾಯಕರಲ್ಲಿ ಮನವಿ ಮಾಡಿದರು ಸಹ ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಅಧಿಕಾರಕ್ಕೋಸ್ಕರ ಅನ್ಯ ಪಕ್ಷದಿಂದ ಬರುವವರಿಗೆ ಮೊದಲ ಅದ್ಯತೆ ನೀಡುತ್ತಿರುವುದು ಯಾವ ಪಕ್ಷದ ವಿರುದ್ಧ ಸದಾಂತಿಕವಾಗಿ ಹೋರಾಟ ನಡೆಸಿದ್ದೆವೋ, ಅವರನ್ನ ಕರೆತರುವ ಪ್ರಯತ್ನ ಅತಿ ಹೆಚ್ಚಾಗಿದೆ. ಪಕ್ಷದ ನಿಷ್ಠೆ, ಸೇವೆ, ಹೋರಾಟ, ಸಂಘಟನೆ ಅದೆಲ್ಲ ನಗಣ್ಯವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆ ನೀಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂಬುವ ಹೇಳಿಕೆ ನೀಡಿದ ಕೆಜಿಎಫ್ ಬಾಬು ಎಂಬುವ ವ್ಯಕ್ತಿಯನ್ನೇ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿರುವುದನ್ನು ನೋಡಿದರೆ ಅತ್ಯಂತ ತಳಮಟ್ಟದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದಲ್ಲಿ ಇರಲು ಸಾಧ್ಯವೇ? ಎಂದು ಹೇಳಿದ್ದಾರೆ.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಬಿಜೆಪಿಯು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಕಾಂಗ್ರೆಸ್‌ ಪಕ್ಷದ ಮಹಾನ್ ನಾಯಕರಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಸ್ತುತ ಅಧ್ಯಕ್ಷರು ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿ ಅವರು ಮಾಡಿರುವ ಟೀಕೆ ಆರೋಪ ಅತ್ಯಂತ ಕೆಳಮಟ್ಟದ ಪದಗಳನ್ನು ಬಳಸಿರುವುದರ ವಿರುದ್ಧ ಹೋರಾಟ ನಡೆಸಿದ ಕಾರ್ಯಕರ್ತರ ಬಗ್ಗೆ ಕಾಳಜಿ ತೋರದ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರಾದೃಷ್ಟಕರ ಎಂದಿದ್ದಾರೆ.

ನಿತ್ಯ ಹೋರಾಟ ನಡೆಸಿ ಪೊಲೀಸ್ ಠಾಣೆ, ಜೈಲು, ನ್ಯಾಯಾಲಯಕ್ಕೆ ಅಲೆದಾಡುವವರನ್ನು ಉದ್ದೇಶಪೂರ್ವಕವಾಗಿ ಪಕ್ಷದಲ್ಲೇ ಮೂಲೆ ಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಕಾರ್ಯಕರ್ತರನ್ನ

ಅಧಿಕಾರಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ನಾಯಕರ ಮನೆ ಸುತ್ತುವವರಿಗೆ ಮೊದಲ ಆದ್ಯತೆ ನೀಡಿ ಪಕ್ಷಕ್ಕಾಗಿ ಜೀವ ಕೊಟ್ಟು, ಪಕ್ಷವೇ ನಮ್ಮ ಶಕ್ತಿ, ಪಕ್ಷವೇ ನಮಗೆ ದೇವರು ಎಂದು ನಂಬಿದವರನ್ನು ಕಡೆಗಣಿಸಿರುವುದು ನಮ್ಮ ಕಣ್ಣು ಮುಂದೆಯೇ ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿರವರು ಭ್ರಷ್ಟಾಚಾರದ ವಿರುದ್ಧ ಆರ್‌ಎಸ್ಎಸ್, ಬಿಜೆಪಿ ವಿರುದ್ಧ ಯಾರು ಹೆಚ್ಚು ಹೋರಾಟ ನಡೆಸುತ್ತಾರೋ ಅವರಿಗೆ ಮೊದಲ ಆದ್ಯತೆಯೆಂದು ಕರೆ ನೀಡಿದ್ದಾರೆ. ಆದರೆ ಅವರ ಹೇಳಿಕೆ ವಿರುದ್ಧ ಇಂದು ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ. ಪಕ್ಷ ಹಾಗೂ ಕಾರ್ಯಕರ್ತರ ಉಳಿವಿಗೆ ರಾಹುಲ್ ಗಾಂಧಿರವರನ್ನು ಮುಂದಿನ ದಿನಗಳಲ್ಲಿ ಭೇಟಿ ಮಾಡಿ ಕಾರ್ಯಕರ್ತರ ನೋವು, ಅಳಲು ಹಾಗೂ ನಿಷ್ಠಾವಂತರಿಗೆ ಆಗಿರುವ ಅನ್ಯಾಯದ ಬಗ್ಗೆ ಅವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತೇವೆ. ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ, ಕಾಂಗ್ರೆಸ್ ಪಕ್ಷದ ಹಾಗೂ ಕಾರ್ಯಕರ್ತರ ಉಳಿವಿಗೆ ತಾವು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿದ್ದಾರೆ.

 

Leave a Reply