ಇದು ಕಾಂಗ್ರೆಸ್ ಪಕ್ಷದ ಕಥೆಯಾಗಿರದೆ ಈ ದೇಶದ ಬಹುತೇಕ ಎಲ್ಲಾ ಪಕ್ಷಗಳು ಇದೇ ಏಕತಾನತೆಯಲ್ಲಿ ಬಳಲುತ್ತಿವೆ.
ವಿಧಾನಪರಿಷತ್ ಗೆ ಎಂ.ಆರ್. ಸೀತಾರಾಮ್, ಉಮಾಶ್ರೀ ಮತ್ತು ಮಾಜಿ ಅಧಿಕಾರಿ ಸುಧಾಮ ದಾಸ್ ಎಂಬುವರನ್ನು ನಾಮಕರಣ ಮಾಡಲಾಗಿದೆ.
ಸೀತಾರಾಮ್ ಮತ್ತು ಉಮಾಶ್ರೀ ಈಗಾಗಲೇ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಹಿಂದುಳಿದ ವರ್ಗದಿಂದ ಆಯ್ಕೆಯಾಗಿರುವ ಸುಧಾಮದಾಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಇವರ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಒಂದೆರೆಡು ದಶಕದಿಂದ ನಿಷ್ಠೆಯಿಂದ ದುಡಿದ ಕಾರ್ಯಕರ್ತರನ್ನು ಆಯ್ಕೆ ಮಾಡಬಹುದಿತ್ತು. ಮಹಿಳೆಯರ ವಿಭಾಗದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ವಿರುದ್ಧ ಹೋರಾಟ ನಡೆಸಿ ಅಲ್ಪ ಮತಗಳ ಅಂತರದಿಂದ ಸೋತ ಹೆಚ್.ಕುಸುಮಾ ಎಂಬ ಹೆಣ್ಣುಮಗಳನ್ನು ಆಯ್ಕೆ ಮಾಡಬಹುದಿತ್ತು.
ಅದೇ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೀತಾರಾಮ್ ಬದಲಾಗಿ ರಾಜ್ಯದ ಇತರೆ ಭಾಗದಿಂದ ಶಿಕ್ಷಣ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಯನ್ನು ಹಾಗೂ ದಲಿತರ ಕೋಟಾದಲ್ಲಿ ಸುಧಾಮ್ ದಾಸ್ ಬದಲಾಗಿ ನಿಷ್ಠಾವಂತ ದಲಿತ ಕಾರ್ಯಕರ್ತನಿಗೆ ಸ್ಥಾನ ನೀಡಬಹುದಿತ್ತು. ನಾಲ್ವರು ಹಿರಿಯ ಸಚಿವರ ಆಕ್ಷೇಪಣೆಯ ನಡುವೆಯೂ ಸುಧಾಮ್ ದಾಸ್ ಅವರನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ.
1969 ರ ಜುಲೈ ತಿಂಗಳಲ್ಲಿ ಬೆಂಗಳೂರು ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಇಂದಿರಾ ಕಾಂಗ್ರೆಸ್ ಸೃಷ್ಟಿಯಾದ ನಂತರ ಆ ಪಕ್ಷದ ಶಬ್ದಕೋಶದಲ್ಲಿ ವಿವೇಚನೆ, ಸಮಾಲೋಚನೆ ಎಂಬ ಶಬ್ದಗಳು ಅಳಿಸಿಹೋದವು. ಈಗ ಏನಿದ್ದರೂ ಸಲ್ಯೂಟ್ ಅಥವಾ ಸಲಾಂ ಗೆ ಹೆಚ್ಚು ಆದ್ಯತೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




